ಸಂದೇಶಕ್ಕಾಗಿ ಸಿನಿಮಾ!

7

ಸಂದೇಶಕ್ಕಾಗಿ ಸಿನಿಮಾ!

Published:
Updated:

ಸಿನಿಮಾ ಮನರಂಜನೆ ನೀಡಿದರೆ ಸಾಕು, ಅದರಲ್ಲಿ ಸಂದೇಶ ಯಾಕಿರಬೇಕು ಎಂದು ಕೇಳುವವರು ಹೆಚ್ಚಾಗಿರುವ ಸಂದರ್ಭದಲ್ಲಿ, ಸಂದೇಶ ನೀಡಲಿಕ್ಕಾಗಿಯೇ ನಾಗೇಂದ್ರ ರಾವ್ ಎನ್ನುವ ನಿರ್ಮಾಪಕರು ಸಿನಿಮಾ ಮಾಡಿದ್ದಾರೆ.ನಾಗೇಂದ್ರ ರಾವ್ ಮೂಲತಃ ಆಂಧ್ರಪ್ರದೇಶದವರು. ಶಾಲೆ ನಡೆಸುವ ಅವರಿಗೆ, ಸಿನಿಮಾ ಮಾಡಿದರೆ ಹೆಚ್ಚು ಜನರನ್ನು ತಲುಪಬಹುದು ಅನ್ನಿಸಿದೆ. ಆ ಕಾರಣಕ್ಕಾಗಿ `ಸೀ..ಯು~ ಎನ್ನುವ ಸಿನಿಮಾ ಮಾಡಿದ್ದಾರೆ.ಹನ್ನೆರಡು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ ಅವರಿಗೆ ಕನ್ನಡ ಸಿನಿಮಾ ನಿರ್ಮಿಸಬೇಕೆಂಬ ಆಸೆಯಾಯಿತಂತೆ. ಆದರೆ, ಅದು ಮನರಂಜನೆ ನೀಡುವ ಸಿನಿಮಾ ಅಷ್ಟೇ ಆಗಿರಬಾರದು ಎಂದೂ ಅನ್ನಿಸಿದೆ.ಈ ಸಂದರ್ಭದಲ್ಲಿ ನಿರ್ದೇಶಕ ದುರ್ಗಾಪ್ರಸಾದ್ ಅವರು ಹೇಳಿದ ಕಥೆ ನಿರ್ಮಾಪಕರಿಗೆ ಇಷ್ಟವಾಗಿದೆ. ಅವರು ಹೇಳಿದ ಪ್ರೇಮಕಥೆಯಲ್ಲಿ `ನೇತ್ರದಾನ~ದ ಸಂದೇಶ ಸೇರಿಸಿ ಒಳ್ಳೆಯ ಸಿನಿಮಾ ಆಗಬಹುದೆಂದು ನಿರ್ಮಾಪಕರಿಗೆ ಅನ್ನಿಸಿದೆ. ಅವರ ಸೂಚನೆಯಂತೆ ನಿರ್ದೇಶಕರು ಕಥೆ ತಿದ್ದಿದ್ದಾರೆ.ಇದೀಗ `ಸೀ..ಯು~ ಸಿನಿಮಾ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಹಂತದಲ್ಲಿದೆ. ಏಪ್ರಿಲ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಇರಾದೆ ಚಿತ್ರತಂಡದ್ದು.`ಸಮಾಜಕ್ಕೆ ಸಂದೇಶ ಕೊಡುವ ಉದ್ದೇಶದಿಂದ ಈ ಸಿನಿಮಾ ಮಾಡಿರುವೆ. ಹಣ ಮಾಡುವುದಕ್ಕೆ ಅಲ್ಲ. ಆದರೆ ಜನರಿಗೆ ತಲುಪಲಿ ಎಂಬ ಕಾರಣಕ್ಕೆ ಕಮರ್ಷಿಯಲ್ ಸಿನಿಮಾ ಮಾಡಿರುವೆ. ಕಣ್ಣನ್ನು ನಾಶ ಮಾಡುವ ಬದಲು ದಾನ ಮಾಡಿ ಎಂದು ನನ್ನ ಚಿತ್ರದ ಮೂಲಕ ಹೇಳುತ್ತಿದ್ದೇನೆ. ಬಂಡವಾಳ ವಾಪಸ್ಸು ಬರಲಿ ಎಂಬ ಹಂಬಲವೂ ನನಗಿಲ್ಲ.ಸಿನಿಮಾ ನೋಡಿದ ಒಬ್ಬ ಪ್ರೇಕ್ಷಕ ನೇತ್ರದಾನ ಮಾಡುವ ಮನಸ್ಸು ಮಾಡಿದರೂ ನನ್ನ ಸಿನಿಮಾ ಸಾರ್ಥಕ~ ಎನ್ನುವುದ ನಾಗೇಂದ್ರ ರಾವ್ ಅವರ ವಿನಯದ ಮಾತು.

ಸಿನಿಮಾ ಪ್ರಚಾರಕರ್ತ ರಾಮಕೃಷ್ಣ ಅವರ ಪುತ್ರ ವೈಭವ್ ಚಿತ್ರದ ನಾಯಕ. ಚಿಕ್ಕ ವಯಸ್ಸಿನಿಂದಲೂ ಇದ್ದ ನಟಿಸುವ ಆಸೆಯನ್ನು `ಗೂಳಿ~, `ಯಾರದು?~, `ಕೋಟೆ~ ಸಿನಿಮಾಗಳ ಮೂಲಕ ಈಡೇರಿಸಿಕೊಂಡಿದ್ದ ಅವರು, `ಸೀ..ಯು~ ಮೂಲಕ ನಾಯಕನಾಗಿ ಬಡ್ತಿ ಪಡೆದಿದ್ದಾರೆ.ನಿರ್ದೇಶಕರೊಂದಿಗೆ  ತಮಗಿದ್ದ ಗೆಳೆತನ ಪಾತ್ರ ಸಿಗುವಂತೆ ಮಾಡಿತು ಎಂದ ವೈಭವ್, ಸಮುದ್ರ ತೀರ ಮತ್ತು ಜಲಪಾತದ ಬಳಿ ತುಂಬಾ ಕಠಿಣ ಸನ್ನಿವೇಶಗಳ ಚಿತ್ರೀಕರಣದಲ್ಲಿ ಕಷ್ಟಪಟ್ಟು ನಟಿಸಿದ್ದಾಗಿ ಹೇಳಿಕೊಂಡರು.ನಿರ್ದೇಶಕ ದುರ್ಗಾ ಪ್ರಸಾದ್, ಈ ಮೊದಲು `ಹಡಗು~ ಎನ್ನುವ ಸಿನಿಮಾ ನಿರ್ದೇಶಿಸಿದ ಅನುಭವಿ. ಆ ನಂತರ ಖಾಲಿ ಕುಳಿತಿದ್ದ ಅವರಿಗೆ ನಾಗೇಂದ್ರ ರಾವ್ ಅವರು ಅವಕಾಶ ನೀಡಿದ್ದಾರೆ.`ಮಂಗಳೂರು, ಶೃಂಗೇರಿ, ಬೆಂಗಳೂರಿನಲ್ಲಿ 35 ದಿನಗಳ ಚಿತ್ರೀಕರಣ ಮುಗಿಸಿರುವೆ. ವೈಭವ್ ನನ್ನ ಗೆಳೆಯ ಅನ್ನುವುದಕ್ಕಿಂತ ಅವರು ಪ್ರತಿಭಾವಂತ ಎನ್ನುವ ಕಾರಣಕ್ಕೆ ಪಾತ್ರಕ್ಕೆ ಆಯ್ಕೆ ಮಾಡಿಕೊಂಡೆ. ನಿರ್ದೇಶಕರ ಮಾತು ಕೇಳುತ್ತಾರೆ ಎನ್ನುವ ಭರವಸೆಯಿಂದ ನಾಯಕಿ ಅರ್ಪಣಾ ಪ್ರಭು ಅವರನ್ನು ನಾಯಕಿಯಾಗಿ ಆರಿಸಿಕೊಂಡೆ~ ಎಂದು ನಿರ್ದೇಶಕರು ಹೇಳಿದರು.`ಬಣ್ಣ ಬಣ್ಣದ ಲೋಕ~, `ಲವ್ ಜಂಕ್ಷನ್~ ಸಿನಿಮಾಗಳಲ್ಲಿ ನಟಿಸಿದ್ದ ಅರ್ಪಣಾ ಪ್ರಭು ಅವರ ನಟನೆಯ ನಾಲ್ಕನೇ ಸಿನಿಮಾ `ಸೀ..ಯು~. ಚಿತ್ರದಲ್ಲಿ ತಮ್ಮ ಪ್ರತಿಭೆ ತೋರಿಸಲು ಅವಕಾಶ ಇದೆ. ಚಿತ್ರದ ಕತೆ ಇಂದಿನ ಯುವಜನಾಂಗಕ್ಕೆ ಸಂಪರ್ಕ ಕಲ್ಪಿಸಲಿದೆ ಎಂದ ಅವರು ಚಿತ್ರೀಕರಣ ಸಮಯದಲ್ಲಾದ ಅನುಭವ ಹಂಚಿಕೊಂಡರು.ನಾಯಕನ ತಾಯಿ ಪಾತ್ರದಲ್ಲಿ ನಟಿಸಿರುವ ಹಿರಿಯ ನಟಿ ಜಯಲಕ್ಷ್ಮಿ ಚಿತ್ರತಂಡವನ್ನು ಮೆಚ್ಚಿ ಮಾತನಾಡಿದರು.   

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry