ಮಂಗಳವಾರ, ಏಪ್ರಿಲ್ 13, 2021
23 °C

ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಅನಾದಿ ಕಾಲದಿಂದಲೂ ಸಂಧಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗುತ್ತಿದ್ದು, ಮಧ್ಯಸ್ಥಿಕೆ ಮೂಲಕವೇ ಇನ್ನೂ ಹೆಚ್ಚಿನ ಪ್ರಕರಣಗಳನ್ನು ಬಗೆಹರಿಸಲು ವಕೀಲರು ಮುಂದಾಗಬೇಕು ಎಂದು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆಗಿರುವ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಶನಿವಾರ ಇಲ್ಲಿ ಕರೆ ನೀಡಿದರು.ಬೆಂಗಳೂರು ಮಧ್ಯಸ್ಥಿಕಾ ಕೇಂದ್ರ, ಜಿಲ್ಲಾ ನ್ಯಾಯಾಲಯ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ವಕೀಲರಿಗೆ ಹಮ್ಮಿಕೊಂಡಿದ್ದ ಮಧ್ಯಸ್ಥಿಕೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.‘ಮಧ್ಯಸ್ಥಿಕೆಯಿಂದ ಸಮಸ್ಯೆಗಳನ್ನು ಪರಿಹರಿಸಿದಲ್ಲಿ ಕಕ್ಷಿದಾರರಲ್ಲಿ ಸ್ನೇಹ, ಬಾಂಧವ್ಯ ವೃದ್ಧಿಗೊಳ್ಳುವುದರ ಜತೆಗೆ, ಹಣ ಉಳಿತಾಯ ಮಾಡಬಹುದು. ಯಾವುದೇ ವ್ಯಕ್ತಿಯ ಮನಸ್ಸಿಗೆ ನೋವಾಗದಂತೆ ಸಂಧಾನದ ಮೂಲಕ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ವಕೀಲರು ಪ್ರಯತ್ನಿಸಬೇಕು’ ಎಂದು ಸಲಹೆ ಮಾಡಿದರು.‘ತೀರ್ಪು ವಿಳಂಬದಿಂದಾಗಿ ನ್ಯಾಯಾಲಯದ ಬಗ್ಗೆ ಜನರಲ್ಲಿ ದಿನದಿಂದ ದಿನಕ್ಕೆ ನಂಬಿಕೆ ಕುಸಿಯತೊಡಗಿದೆ. ಕಾಲಮಿತಿಯೊಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ನ್ಯಾಯಾಲಯಗಳ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಿಸಬಹುದು’ ಎಂದು ಪ್ರತಿಪಾದಿಸಿದರು.ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ಮಾತನಾಡಿ, ಸಣ್ಣ ಸಣ್ಣ ವಿಷಯಗಳಿಗೂ ಕಕ್ಷಿದಾರರು ನ್ಯಾಯಾಲಯಕ್ಕೆ ತೆರಳುವುದು ತಪ್ಪಬೇಕಾದರೆ ಮಧ್ಯಸ್ಥಿಕೆ ಸಲಹಾ ಕೇಂದ್ರ ಅತ್ಯಗತ್ಯ ಎಂದು ಪ್ರತಿಪಾದಿಸಿದರು.ವಕೀಲರು ಕಕ್ಷಿದಾರರಿಗೆ ಸಮಸ್ಯೆಯನ್ನು ವಿವರಿಸಿ ರಾಜಿ ಮೂಲಕ ಇತ್ಯರ್ಥಪಡಿಸಿದಲ್ಲಿ ಸಮಯ ಹಾಗೂ ಹಣ ಉಳಿತಾಯ ಮಾಡಬಹುದು. ಈ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆ ಕೇಂದ್ರದ ಪ್ರಯೋಜನವನ್ನು ಜಿಲ್ಲೆಯ ಸಾರ್ವಜನಿಕರು ಪಡೆಯಲು ಮುಂದಾಗಬೇಕು ಎಂದು ಕೋರಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಕೆ. ಅಣ್ಣಿಗೇರಿ ಮಾತನಾಡಿ, 2010ರಲ್ಲಿ ಸುಮಾರು ಎರಡು ಸಾವಿರದಷ್ಟು ಐಪಿಸಿ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ ಶೇ 10ರಿಂದ 12ರಷ್ಟು ಕೊಲೆ- ದರೋಡೆ ಪ್ರಕರಣಗಳಾದರೆ, ಉಳಿದ ಶೇ 80ರಷ್ಟು ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕವೇ ಪರಿಹರಿಸಿಕೊಳ್ಳಬಹುದಾಗಿದೆ. ಇದರಿಂದ ನ್ಯಾಯಾಲಯ ಮತ್ತು ಪೊಲೀಸ್ ಇಲಾಖೆಗಳ ಹೊರೆಯನ್ನು ತಗ್ಗಿಸಬಹುದಾಗಿದೆ ಎಂದರು.ಮಧ್ಯಸ್ಥಿಕೆ ಕೇಂದ್ರದ ತರಬೇತುದಾರರಾದ ಶೋಭಾ ಪಾಟೀಲ್ ಮಾತನಾಡಿ, ವಕೀಲರು ಮಧ್ಯಸ್ಥಿಕೆ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.ಮಧ್ಯಸ್ಥಿಕೆ ಕೇಂದ್ರದ ಮತ್ತೊಬ್ಬ ತರಬೇತುದಾರರಾದ ಎಸ್. ಸುಶೀಲಾ ಮಾತನಾಡಿ, ವ್ಯಾಜ್ಯಗಳ ತೀರ್ಪು ನೀಡುವಾಗ ನ್ಯಾಯಾಧೀಶರು ವಿವಿಧ ರೀತಿಯ ತೀರ್ಪುಗಳನ್ನು ನೀಡುತ್ತಾರೆ. ಆದರೆ, ಮಧ್ಯಸ್ಥಿಕೆಯಿಂದ ಸ್ನೇಹ ಬಾಂಧವ್ಯ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಂ. ಮೇದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಶೋಕ್ ಜಿ. ನಿಜಗಣ್ಣವರ್, ಶೀಘ್ರ ವಿಲೇವಾರಿ ನ್ಯಾಯಾಧೀಶರಾದ ಕೆ.ಬಿ. ಅಸೋದೆ, ಸಿವಿಲ್ ನ್ಯಾಯಾಧೀಶರಾದ ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು. ನ್ಯಾಯಾಂಗ ಇಲಾಖೆಯ ಜಯಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಬಿ.ಎಂ. ಭೀಮಯ್ಯ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.