ಸಂಧಾನದ ಯಶಸ್ಸು

7

ಸಂಧಾನದ ಯಶಸ್ಸು

Published:
Updated:

ಒಡಿಶಾದ ಮಾಲ್ಕನ್‌ಗಿರಿ ಜಿಲ್ಲಾಧಿಕಾರಿ ಆರ್.ವಿ.ಕೃಷ್ಣ ಅವರ ಅಪಹರಣ ಪ್ರಕರಣ ಸುಖಾಂತ್ಯ ಕಂಡಿರುವುದು ಸಮಾಧಾನಕರಬೆಳವಣಿಗೆ. ಮುಳುಗಡೆ ರೈತರಿಗೆ ಪರಿಹಾರ, ಜೈಲುಗಳಲ್ಲಿರುವ ಮಾವೋವಾದಿಗಳು ಹಾಗೂ ಆದಿವಾಸಿಗಳ ವಿರುದ್ಧ ಹೂಡಲಾಗಿದ್ದ ಮೊಕದ್ದಮೆ ವಾಪಸಾತಿ ಮತ್ತು ಮಾವೋವಾದಿಗಳ ಪ್ರದೇಶಗಳಲ್ಲಿ ಭದ್ರತಾಪಡೆಗಳ ಕಾರ್ಯಾಚರಣೆಗೆ ನಿಲುಗಡೆ ಸೇರಿದಂತೆ 14 ಬೇಡಿಕೆಗಳಿಗೆ ಒಡಿಶಾ ಸರ್ಕಾರ ಸಮ್ಮತಿಸಿದ್ದು ಜಿಲ್ಲಾಧಿಕಾರಿ ಮತ್ತು ಅವರೊಂದಿಗೆ ಅಪಹರಣಕ್ಕೆಒಳಗಾಗಿದ್ದ ಕಿರಿಯ ಎಂಜಿನಿಯರ್ ಪವಿತ್ರ ಮಝಿ ಅವರ  ಸುರಕ್ಷಿತ ಬಿಡುಗಡೆ ಸಾಧ್ಯವಾಗಿದೆ. ಮಾವೋವಾದಿಗಳು ಮತ್ತು ಸರ್ಕಾರದ ಮಧ್ಯೆ ಏರ್ಪಟ್ಟ ಸಂಧಾನದ ಪರಿಣಾಮವಾಗಿ ಆದಿವಾಸಿಗಳ ವಿರುದ್ಧ ಹೂಡಲಾಗಿದ್ದ ಒಂಬತ್ತು ಸಾವಿರಕ್ಕೂ ಹೆಚ್ಚಿನ ಮೊಕದ್ದಮೆಗಳನ್ನು ಮರು ಪರಿಶೀಲನೆಯ ನಂತರ ಸರ್ಕಾರ ಕೈಬಿಡಲಿದೆ. ತಮ್ಮದು ನಿರ್ದಾಕ್ಷಿಣ್ಯವಾದ ಹಿಂಸಾಮಾರ್ಗ ಎಂಬುದನ್ನು ಪ್ರದರ್ಶಿಸದೆ ಇದ್ದಿದ್ದರೆ ಜಿಲ್ಲಾಧಿಕಾರಿಯನ್ನು ಅಪಹರಿಸಿದ ಮಾವೋವಾದಿಗಳ ಬೇಡಿಕೆಗೆ ಒಡಿಶಾ ಸರ್ಕಾರ ಮಣಿಯುತ್ತಿರಲಿಲ್ಲ ಎಂಬುದು ಸ್ಪಷ್ಟ.ಆದಿವಾಸಿಗಳ ಬದುಕುವ ಹಕ್ಕಿನ ಜೊತೆ ಚೆಲ್ಲಾಟವಾಡುವ ರಾಜ್ಯಾಡಳಿತದ ಅಮಾನವೀಯ ನಡವಳಿಕೆಯನ್ನು ಎದುರಿಸುವುದಕ್ಕೆ ಪ್ರಬಲವಾದ ಸಂಘಟನೆ ಅನಿವಾರ್ಯ ಎಂಬ ಸಂದೇಶಕ್ಕೆ ಈ ಪ್ರಕರಣ ನಿದರ್ಶನವಾಗಿದೆ. ಇಂಥ ಸಂದರ್ಭ ಸೃಷ್ಟಿಯಾಗುವುದಕ್ಕೆ ಇದುವರೆಗೆ ಆಡಳಿತ ನಡೆಸಿದ ಎಲ್ಲ ಸರ್ಕಾರಗಳ ಪಾತ್ರವೂ ಇರುವುದನ್ನು ಅಲ್ಲಗಳೆಯುವಂತಿಲ್ಲ.ಮಾವೋವಾದಿಗಳದು ಸಾಮಾಜಿಕ ಸಮಸ್ಯೆಗಿಂತಲೂ ಕಾನೂನು ಸಮಸ್ಯೆ ಎಂದು ಸರ್ಕಾರಗಳು ಭಾವಿಸಿವೆ. ಸಾಮಾಜಿಕ ಅಸಮಾನತೆ ವಿರುದ್ಧದ ತಮ್ಮ ಹೋರಾಟದ ಬದ್ಧತೆಯ ಕಾರಣ ಉತ್ತರದ ನೇಪಾಳದಿಂದ ದಕ್ಷಿಣದ ಆಂಧ್ರಪ್ರದೇಶದವರೆಗೆ ತಮ್ಮ ಪ್ರಭಾವವನ್ನು ಮಾವೋವಾದಿಗಳು ವಿಸ್ತರಿಸಿಕೊಂಡಿದ್ದಾರೆ. ಆದಿವಾಸಿ, ಭೂರಹಿತ, ಶ್ರಮಿಕ ವರ್ಗಗಳಲ್ಲಿ ವಿಶ್ವಾಸ ಗಳಿಸಿರುವ ಮಾವೋವಾದಿಗಳನ್ನು ಬಂದೂಕಿನಿಂದ ನಿಗ್ರಹಿಸುವುದು ಸಾಧ್ಯವಿಲ್ಲ ಎಂಬುದು ಕೇಂದ್ರ ಸರ್ಕಾರಕ್ಕೂ, ಅವರ ಪ್ರಭಾವ ಇರುವ ರಾಜ್ಯ ಸರ್ಕಾರಗಳಿಗೂ ಈಗಾಗಲೇ ಮನವರಿಕೆಯಾಗಿದೆ. ಜನರ ನೈಜ ಸಮಸ್ಯೆ ಅರ್ಥ ಮಾಡಿಕೊಳ್ಳದೆ, ಅವರ ಬದುಕಿನ ಹಕ್ಕಿನ ಜೊತೆಗೆ ಚೆಲ್ಲಾಟವಾಡುವ ಯಾವುದೇ ಆಡಳಿತ ಜನತೆಯ ಪ್ರತಿರೋಧ ಎದುರಿಸಬೇಕಾಗುತ್ತದೆ. ಸ್ವಾರ್ಥ ರಾಜಕಾರಣಿಗಳು, ಭ್ರಷ್ಟ ನೌಕರಶಾಹಿ, ಹಣ ಮಾಡುವುದೇ ದಂಧೆಯಾದ ದುಷ್ಟ ಗುತ್ತಿಗೆದಾರರ ಮಧ್ಯೆ ಅಪವಿತ್ರ ಮೈತ್ರಿ ಏರ್ಪಟ್ಟರೆ ಜನ ಕಲ್ಯಾಣದ ಯೋಜನೆಗಳು ಎಷ್ಟು ವರ್ಷಗಳಾದರೂ ಉದ್ದೇಶಿತ ಗುರಿ ಮುಟ್ಟಲಾರವು. ಈ ಸ್ಥಿತಿಯನ್ನು ಬದಲಿಸುವುದಕ್ಕೆ ಪ್ರಜಾಸತ್ತೆಯಲ್ಲಿ ಸಶಸ್ತ್ರ ಹೋರಾಟ ಪರಿಹಾರವಲ್ಲ ಎಂಬುದನ್ನು ಮಾವೋವಾದಿಗಳು ಅರ್ಥ ಮಾಡಿಕೊಳ್ಳಬೇಕು. ಜಿಲ್ಲಾಧಿಕಾರಿ ಅಪಹರಣದ ಈ ಪ್ರಕರಣದಲ್ಲಿ ಹಿಂಸೆಯ ಬೆದರಿಕೆಯ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಂಡ ಮಾವೋವಾದಿಗಳು, ಇನ್ನು ಮುಂದೆಯೂ ಇದೇ ಮಾರ್ಗ ಹಿಡಿಯುವ ಸಾಧ್ಯತೆ ಇದೆ. ಅಂಥ ಸ್ಥಿತಿ ಬರದಂತೆ ಸರ್ಕಾರ ಎಚ್ಚರ ವಹಿಸಬೇಕು. ಮಾವೋವಾದಿಗಳು ಎತ್ತಿರುವ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದೇ ಈ ಸವಾಲನ್ನು ಎದುರಿಸುವ ಮಾರ್ಗ. ಪರಿಹಾರ ಕ್ರಮಗಳಿಗೆ ಮುಂದಾಗದೆ ಮಾವೋವಾದಿಗಳನ್ನು ನಿಗ್ರಹಿಸಲು ಆದ್ಯತೆ ನೀಡಿದರೆ, ಸಮಸ್ಯೆಗಳು ಇನ್ನಷ್ಟು ಜಟಿಲವಾಗಿ ಸುತ್ತಿಕೊಳ್ಳುತ್ತವೆ ಎಂಬುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮರೆಯಬಾರದು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry