ಮಂಗಳವಾರ, ನವೆಂಬರ್ 19, 2019
28 °C

ಸಂಧಾನ ವಿಫಲ: ಅಖಾಡದಲ್ಲಿ ಅಶೋಕ್ ಜಯರಾಂ

Published:
Updated:

ಮಂಡ್ಯ: ಜೆಡಿಎಸ್ ಬಂಡಾಯ ಅಭ್ಯರ್ಥಿ ಅಶೋಕ್ ಜಯರಾಂ ಅವರು ನಾಮಪತ್ರ ವಾಪಸ್ ಪಡೆಯುವಂತೆ ಪಕ್ಷದ ಮುಖಂಡರು ನಡೆಸಿದ ಸಂಧಾನ ಸಭೆ ಫಲಪದ್ರವಾದರೂ, ಕಾರ್ಯಕರ್ತರ ಒತ್ತಡಕ್ಕೆ ಮಣಿದ ಅವರು ಉಮೇದುವಾರಿಕೆ ಹಿಂದಕ್ಕೆ ಪಡೆಯದೆ ಕಣದಲ್ಲಿಯೇ ಉಳಿಯುವ ನಿರ್ಧಾರ ಕೈಗೊಂಡರು.ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಮನೆಯಲ್ಲಿ ಶಾಸಕ ರಾದ ಸಿ.ಎಸ್.ಪುಟ್ಟರಾಜು, ಎಂ.ಶ್ರೀನಿವಾಸ್, ಮಾಜಿ ಶಾಸಕ ಎಚ್.ಬಿ.ರಾಮು ಅವರು, ಅಶೋಕ್ ಜಯರಾಂ ಜೊತೆಗೆ ಶನಿವಾರ ಎರಡು ಗಂಟೆಗೂ ಹೆಚ್ಚು ಕಾಲ ನಡೆಸಿದ `ಸಂಧಾನ ಸಭೆ' ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು.ಕಣ್ಣೀರಟ್ಟು, ದುಃಖಿಸುತ್ತಲೇ ನಾಮಪತ್ರವನ್ನು ಹಿಂದಕ್ಕೆ ಪಡೆಯಲು ಹೋಗುತ್ತಿದ್ದ ಅಶೋಕ್ ಜಯರಾಂ ಅವರನ್ನು ಅಭಿಮಾನಿಗಳು ಮತ್ತು ಕಾರ್ಯಕರ್ತರು ಸುತ್ತುವರಿದರು. ನೀವು ಹೋಗುವುದೇ ಆದರೇ ನಮ್ಮ ಹೆಣದ ಮೇಲೆ ಹೋಗಿ ಎಂದು ಭಾವನಾತ್ಮಕವಾಗಿ ಕಟ್ಟಿ ಹಾಕಿದರು.ಇದರಿಂದ ವಿಚಲಿತರಾದ ಅಶೋಕ್ ಕಾರಿನಿಂದ ಇಳಿದು, ಕಾರ್ಯಕರ್ತರನ್ನು ಕೂಡಿಕೊಂಡರು. ಆ ವೇಳೆಗಾಗಲೇ ಸಮಯವೂ ಮುಗಿದಿತ್ತು.ಇದಕ್ಕೂ ಮುನ್ನ ನಾಮಪತ್ರವನ್ನು ಹಿಂದಕ್ಕೆ ಪಡೆದು ಪಕ್ಷ ಸೂಚಿಸಿರುವ ಅಭ್ಯರ್ಥಿಯ ಬೆಂಬಲಕ್ಕೆ ನಿಲ್ಲಬೇಕು ಎಂದು ಅಶೋಕ್ ಅವರ ಮನವೊಲಿಸುವ ಪ್ರಯತ್ನ ನಡೆಸಿದ ಮುಖಂಡರು, `ನಿನಗಿನ್ನೂ ವಯಸ್ಸಿದೆ. ರಾಜಕೀಯವಾಗಿ ಉಜ್ವಲ ಭವಿಷ್ಯವಿದೆ. ಇದೊಂದು ಬಾರಿ ನಾಮಪತ್ರವನ್ನು ವಾಪಸ್ ಪಡೆದು ಎಂ.ಶ್ರೀನಿವಾಸ್ ಅವರನ್ನು ಬೆಂಬಲಿಸು. ಪಕ್ಷ ನಿನ್ನೊಂದಿಗೆ ಇರುತ್ತದೆ' ಎಂದು ಕೇಳಿಕೊಂಡರು.`ಎಸ್.ಡಿ.ಜಯರಾಂ ಅಭಿಮಾನಿಗಳು-ಕಾರ್ಯಕರ್ತರು ನನ್ನ ಬೆಂಬಲಕ್ಕಿದ್ದಾರೆ. ಎರಡೂವರೆ ವರ್ಷಗಳಿಂದ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದೇನೆ. ಬೇರೆಯವರು ಈಗ ಅದರ ಫಲ ಅನುಭವಿಸುವುದಕ್ಕೆ ಅವಕಾಶ ನೀಡುವುದು ಎಷ್ಟು ಸರಿ. ಶ್ರೀನಿವಾಸ್ ಅವರನ್ನೇ ಕಣದಿಂದ ಹಿಂದೆ ಸರಿಯುವಂತೆ ಹೇಳುವಂತೆ' ಅಶೋಕ್ ಮುಖಂಡರಿಗೆ ಹೇಳಿದರು.ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಬೆಂಬಲಿಸುವುದು ನಮ್ಮ ಕರ್ತವ್ಯ. ಚುನಾವಣೆ ಸಮಯದಲ್ಲಿ ಕಿತ್ತಾಟ, ದ್ವೇಷ, ವೈಮನಸ್ಸು ಒಳ್ಳೆಯದಲ್ಲ. ಒಗ್ಗಟ್ಟಿನಿಂದ ಶ್ರಮಿಸಿದರೆ, ಗೆಲುವು ಸಿಗುತ್ತದೆ. ಇದಕ್ಕೆ ನಿಮ್ಮ ಸಹಕಾರವೂ ಅಗತ್ಯ ಎಂದು ಮುಖಂಡರು ಹೇಳಿದರು.

ಸುಮಾರು ಒಂದೂವರೆ ಗಂಟೆಗಳ ಕಾಲ ಸಂಧಾನ ಸಭೆ ಮುಂದುವರಿದೇ ಇತ್ತು.ಕೊನೆಗೆ ಕೊಠಡಿಯಿಂದ ಶಾಸಕ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಎಚ್.ಬಿ.ರಾಮು ಹೊರಬಂದು ಮಾಜಿ ಶಾಸಕಿ ಪ್ರಭಾವತಿ ಜಯರಾಂ, ಅಳಿಯ ಡಾ.ಪರಮೇಶ್, ಮಗಳು ಅನು, ಮಗ ಅಶೋಕ್ ಜಯರಾಂ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂ.ಶ್ರೀನಿವಾಸ್ ಜೊತೆ ಮಾತುಕತೆ ನಡೆಸಲು ಅನುವು ಮಾಡಿಕೊಟ್ಟರು.ಅಶೋಕ್ ಜಯರಾಂ ಸಹೋದರಿ ಅನು “ಯಾವ ಕಾರಣಕ್ಕೂ ಅಶೋಕ್‌ನನ್ನು ನಾಮಪತ್ರ ಹಿಂತೆಗೆಯಲು ಬಿಡುವುದಿಲ್ಲ. ಅವನು ಪಕ್ಷಕ್ಕಾಗಿ ಶ್ರಮಪಟ್ಟಿದ್ದಾನೆ. ನೀವೇ ಕಣದಿಂದ ಹಿಂದಕ್ಕೆ ಸರಿಯಿರಿ' ಎಂದು ಜೋರಾಗಿ ಕಿರುಚಾಡಲಾರಂಭಿಸಿದರು. ಆಗ, ಸಿ.ಎಸ್.ಪುಟ್ಟರಾಜು, ಜಿ.ಬಿ.ಶಿವಕುಮಾರ್, ಎಚ್.ಬಿ.ರಾಮು ಅವರು ಮತ್ತೆ ಕೊಠಡಿಯೊಳಗೆ ತೆರಳಿ ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಮತ್ತೆ ಅರ್ಧಗಂಟೆಗಳ ಕಾಲ ಮಾತುಕತೆ ಮುಂದುವರೆಯಿತು. ಅಂತಿಮವಾಗಿ ಎಲ್ಲರ ಒತ್ತಡಕ್ಕೆ ಮಣಿದು ಮಾಜಿ ಶಾಸಕಿ ಪ್ರಭಾವತಿ ಜಯರಾಂ ಅವರು ಅಶೋಕ್‌ರವರನ್ನು ನಾಮಪತ್ರ ವಾಪಸ್ ಪಡೆಯುವುದಕ್ಕೆ ಒಪ್ಪಿಸಿದರು.ನಾಮಪತ್ರ ವಾಪಸ್ ಪಡೆಯಲು ಕೊನೆಯ 10 ನಿಮಿಷವಿದ್ದಾಗ ಅಶೋಕ್ ಅವರನ್ನು ತಾಲ್ಲೂಕು ಕಚೇರಿಯತ್ತ ತರಾತುರಿಯಲ್ಲಿ ಕರೆದೊಯ್ಯುವ ಪ್ರಯತ್ನಕ್ಕೆ ಶಾಸಕ ಪುಟ್ಟರಾಜು, ಎಚ್.ಬಿ.ರಾಮು, ಜಿ.ಬಿ.ಶಿವಕುಮಾರ್ ಮುಂದಾದರು. ಕಾರಿನಲ್ಲಿ ಕೂರಿಸಿಕೊಂಡು ಹೋಗಲು ಮುಂದಾಗುತ್ತಿದ್ದಂತೆ ಅಶೋಕ್ ಬೆಂಬಲಿಗರು ಹಾಗೂ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿದರು. ಭಾವೋದ್ವೇಗಕ್ಕೆ ಒಳಗಾದ ಎಸ್.ಡಿ.ಜಯರಾಂ ಪುತ್ರಿ ಅನು ಅಳುತ್ತಾ ಕೂಗಾಡಿದರು. ಕಾರ್ಯಕರ್ತರು ನಾಮಪತ್ರ ವಾಪಸ್ ಪಡೆಯದಂತೆ ಒತ್ತಡ ಹೇರಿದಾಗ ಅಶೋಕ್ ಕಾರಿನಿಂದ ಇಳಿದು ವಾಪಸಾದರು.

ಪ್ರತಿಕ್ರಿಯಿಸಿ (+)