ಭಾನುವಾರ, ಆಗಸ್ಟ್ 25, 2019
28 °C
ಕೃಷ್ಣೆ, ಭೀಮೆ ಹರಿಯುವ ಜಿಲ್ಲೆಯಲ್ಲಿ ಮರೀಚಿಕೆಯಾದ ಕೈಗಾರಿಕೆಗಳ ಅಭಿವೃದ್ಧಿ

ಸಂಪನ್ಮೂಲವಿದ್ದರೂ ತಲೆ ಎತ್ತದ ಉದ್ಯಮ

Published:
Updated:
ಸಂಪನ್ಮೂಲವಿದ್ದರೂ ತಲೆ ಎತ್ತದ ಉದ್ಯಮ

ಯಾದಗಿರಿ: ಕೈಗಾರಿಕೆಗಳ ಸ್ಥಾಪನೆಗೆ ಹೇಳಿ ಮಾಡಿಸಿದಂತಿರುವ ಜಿಲ್ಲೆ ಯಾದಗಿರಿ. ಉದ್ಯಮ ಸ್ಥಾಪನೆಗೆ ಅಗತ್ಯವಾಗಿರುವ ಎಲ್ಲ ಸೌಲಭ್ಯಗಳೂ ಇಲ್ಲಿವೆ. ಆದರೆ ಅವುಗಳ ಬಳಕೆ ಮಾಡಿಕೊಂಡು ಕೈಗಾರಿಕೆಗಳ ಅಭಿವೃದ್ಧಿಗೆ ಇಚ್ಛಾಶಕ್ತಿಯ ಕೊರತೆ ಮಾತ್ರ ಕಾಡುತ್ತಿದೆ.ಕೃಷ್ಣಾ, ಭೀಮಾ ನದಿಗಳಿಂದಾಗಿ ನೀರಾವರಿ ಸೌಲಭ್ಯ ಸಾಕಷ್ಟಿದೆ. ದೇಶದ ನಾನಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರೈಲು ಸೌಲಭ್ಯವೂ ಇಲ್ಲಿದೆ. ಅತ್ಯುತ್ತಮ ರಸ್ತೆ ಸಂಪರ್ಕವೂ ಲಭ್ಯವಾಗಿದೆ. ಸುಮಾರು 180 ಕಿ.ಮೀ ದೂರದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಮಾನವ ಸಂಪನ್ಮೂಲವೂ ಹೇರಳವಾಗಿದೆ. ಆದರೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೈಗಾರಿಕೆಗಳ ಸ್ಥಾಪನೆ ಆಗುತ್ತಿಲ್ಲ.ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಕಂಪೆನಿಗಳು ಸಿದ್ಧವಿದ್ದರೂ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಹಿಂದೇಟು ಹಾಕುತ್ತಿವೆ. 2010 ರ ಜೂನ್‌ನಲ್ಲಿ  ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅನುಮೋದನೆ ನೀಡಲಾಗಿರುವ ಯೋಜನೆಗಳು ಈವರೆಗೂ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ.2010 ರ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾರತ ಫೋರ್ಜ್ ಲಿಮಿಟೆಡ್‌ನ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಹಾಗೂ 10 ಕಂಪೆನಿಗಳಿಂದ ಔಷಧಿ ತಯಾರಿಕೆ ಉದ್ಯಮಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಈ ಕೈಗಾರಿಕೆಗಳ ಸ್ಥಾಪನೆಗೆ ತಾಲ್ಲೂಕಿನ ಕಡೇಚೂರು ಬಳಿ ಸುಮಾರು 3,300 ಎಕರೆ ಜಮೀನನ್ನು ಗುರುತಿಸಲಾಗಿದೆ.ಆದರೆ ಇಲ್ಲಿನ ಸುಮಾರು 1 ಸಾವಿರ ಎಕರೆ ಜಮೀನಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸುವುದಾಗಿ ನೂತನ ಸರ್ಕಾರ ಹೇಳಿದೆ.ರೈಸ್ ಮಿಲ್‌ಗಳೇ ಉದ್ಯಮ: ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ರೈತರು ಭತ್ತ ಹಾಗೂ ತೊಗರಿ ಬೆಳೆಯುತ್ತಿದ್ದಾರೆ. ರೈಸ್ ಮಿಲ್ ಹಾಗೂ ದಾಲ್ ಮಿಲ್‌ಗಳೇ ಜಿಲ್ಲೆಯ ದೊಡ್ಡ ಕೈಗಾರಿಕೆಗಳು ಎನ್ನುವಂತಾಗಿದೆ.ಸದ್ಯಕ್ಕೆ ಜಿಲ್ಲೆಯಲ್ಲಿ ಮೂರು ಕೈಗಾರಿಕೆ ವಸಾಹತುಗಳಿದ್ದು, 2,665 ಸಣ್ಣ ಪ್ರಮಾಣದ ಕೈಗಾರಿಕೆಗಳಿವೆ. ಶಹಾಪುರ ತಾಲ್ಲೂಕಿನ ತುಮಕೂರಿನಲ್ಲಿ ಆರಂಭವಾಗಿರುವ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ಹೊರತುಪಡಿಸಿದರೆ, ರೈಸ್ ಮಿಲ್ ಹಾಗೂ ದಾಲ್ ಮಿಲ್‌ಗಳೇ ಇಲ್ಲಿನ ಜನರಿಗೆ ದೊಡ್ಡ ಕೈಗಾರಿಕೆಗಳಾಗಿವೆ.ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಇರುವುದರಿಂದ ಕೃಷಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಈ ಮೊದಲು ಬತ್ತವನ್ನೇ ಅವಲಂಬಿಸಿದ್ದ ರೈತರು, ಇದೀಗ ಹತ್ತಿ ಬೆಳೆಯಲು ಆರಂಭಿಸಿದ್ದಾರೆ.ಈ ಮೊದಲು ಯಾದಗಿರಿಯಲ್ಲಿ ಹತ್ತಿ ಉದ್ಯಮ ಸಾಕಷ್ಟು ಉತ್ತುಂಗದಲ್ಲಿತ್ತು. 60ಕ್ಕೂ ಹೆಚ್ಚು ಜಿನ್ನಿಂಗ್ ಹಾಗೂ 4 ಪ್ರೆಸ್ಸಿಂಗ್ ಕಾರ್ಖಾನೆಗಳು ಜಿಲ್ಲೆಯಲ್ಲಿದ್ದವು. ನೀರಾವರಿ ಸೌಲಭ್ಯ ದೊರೆತಿದ್ದರಿಂದ ರೈತರು ಭತ್ತ ಬೆಳೆಯಲು ಆರಂಭಿಸಿದ್ದರಿಂದ ಹತ್ತಿ ಉತ್ಪಾದನೆ ಕುಂಠಿತಗೊಂಡಿತು. 1980 ರ ನಂತರ ಈ ಮಿಲ್‌ಗಳು ಬಾಗಿಲು ಮುಚ್ಚತೊಡಗಿದವು. ಕೆಲವು ಫ್ಯಾಕ್ಟರಿಗಳು ಬೇರೆಡೆ ಸ್ಥಳಾಂತರಗೊಂಡವು.ಆದರೆ ಇದೀಗ ಮತ್ತೆ ಹತ್ತಿ ಬೆಳೆಗೆ ರೈತರು ಹೆಚ್ಚಿನ ಒಲವು ತೋರುತ್ತಿದ್ದು, ಹತ್ತಿ ಉದ್ಯಮ ಆರಂಭಕ್ಕೆ ಸೂಕ್ತ ವಾತಾವರಣ ನಿರ್ಮಾಣವಾಗುತ್ತಿದೆ.ಇದರ ಜೊತೆಗೆ ಜಿಲ್ಲೆಯಲ್ಲಿ ತೊಗರಿ, ಶೇಂಗಾ, ಹೆಸರು, ಜೋಳ ಹಾಗೂ ಶಹಾಪುರ ತಾಲ್ಲೂಕಿನ ಕೆಲ ಪ್ರದೇಶದಲ್ಲಿ ಕೆಂಪು ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಇದರಿಂದ ಹತ್ತಿ ಹಾಗೂ ಆಹಾರ ಸಂಸ್ಕರಣೆ ಉದ್ಯಮಗಳಿಗೆ ಹೇರಳವಾದ ಅವಕಾಶಗಳಿವೆ.

ಖನಿಜ ಸಂಪತ್ತಿಗೂ ಇಲ್ಲಿ ಕೊರತೆ ಇಲ್ಲ. ಕ್ವಾಟ್ಜ್, ಮ್ಯಾಂಗನೀಸ್, ಲೈಮ್ ಸ್ಟೋನ್, ಬಾಕ್ಸೈಟ್ ಹಾಗೂ ಕಟ್ಟಡ ನಿರ್ಮಾಣದ ಕಲ್ಲುಗಳು ಜಿಲ್ಲೆಯಲ್ಲಿ ದೊರೆಯುತ್ತವೆ.ಜವಳಿ ಪಾರ್ಕ್: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿದ್ದ ನರಸಿಂಹ ನಾಯಕ (ರಾಜುಗೌಡ), ಸುರಪುರ, ಯಾದಗಿರಿಯಲ್ಲಿ ಜವಳಿ ಉದ್ಯಮ ಆರಂಭಿಸುವ ಚಿಂತನೆ ನಡೆಸಿರುವುದಾಗಿ ಹೇಳಿದ್ದರು.  ಸುಮಾರು 300 ಎಕರೆ ಪ್ರದೇಶದಲ್ಲಿ ಜವಳಿ ಉದ್ಯಮಗಳು ತಲೆ ಎತ್ತಲಿವೆ. ಅಲ್ಲದೇ ಸುರಪುರ ಭಾಗದಲ್ಲಿ ಒಂದೆರಡು ಸಿಮೆಂಟ್ ಕಾರ್ಖಾನೆಗಳು, ಕಡೇಚೂರಿನಲ್ಲಿ ಪೆಟ್ ಬಾಟಲ್ ತಯಾರಿಕೆ ಘಟಕ ಪ್ರಾರಂಭವಾಗುವ ಹಂತದಲ್ಲಿವೆ ಎಂದು ತಿಳಿಸಿದ್ದರು.ಆದರೆ, ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜವಳಿ ಪಾರ್ಕ್‌ನ ಮಂತ್ರ ಪಠಿಸಲಾಗುತ್ತಿದೆ. ಉಣ್ಣೆ ಗಿರಣಿ, ಜವಳಿ ಪಾರ್ಕ್‌ಗಳ ಸ್ಥಾಪನೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ತಿಳಿಸಿದ್ದಾರೆ.`ಹಿಂದಿನ ಬಿಜೆಪಿ ಸರ್ಕಾರವೂ ಇದೇ ರೀತಿ ಹೇಳಿಕೆಗಳನ್ನು ನೀಡುತ್ತ ಐದು ವರ್ಷ ಕಳೆಯಿತು. ಇದೀಗ ಕಾಂಗ್ರೆಸ್ ಸರ್ಕಾರವೂ ಇಂತಹ ಹೇಳಿಕೆಗಳಲ್ಲಿಯೇ ಐದು ವರ್ಷ ಕಳೆಯುವುದು ಬೇಡ' ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ.ಇಚ್ಛಾಶಕ್ತಿ ಇಲ್ಲ: `ಇಡೀ ರಾಜ್ಯದಲ್ಲಿಯೇ ಯಾದಗಿರಿ ಜಿಲ್ಲೆ ಕೈಗಾರಿಕೆಗಳಿಗೆ ಹೇಳಿ ಮಾಡಿಸಿದಂತಿದೆ. ಕೈಗಾರಿಕೆಗಳಿಗೆ ಅಗತ್ಯವಾಗಿರುವ ನೀರು, ರಸ್ತೆ, ರೈಲು ಸಂಪರ್ಕ, ವಿಮಾನ ನಿಲ್ದಾಣ, ಕೆಲಸ ಮಾಡಲು ಜನ ಹೀಗೆ ಹತ್ತು ಹಲವು ಸೌಕರ್ಯಗಳು ಜಿಲ್ಲೆಯಲ್ಲಿವೆ. ಆದರೆ ಇದನ್ನು ಬಳಕೆ ಮಾಡಿಕೊಳ್ಳುವ ಇಚ್ಛಾಶಕ್ತಿ ನಮ್ಮ ಜನಪ್ರತಿನಿಧಿಗಳಿಗೆ ಇಲ್ಲ' ಎನ್ನುತ್ತಾರೆ ಉದ್ಯಮಿ ವಿಶ್ವನಾಥ ಆವಂತಿ.`ಬಿಜೆಪಿ ಸರ್ಕಾರ 2010 ರಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವ ಮೂಲಕ ಜಿಲ್ಲೆಯಲ್ಲಿ ಉದ್ಯಮಗಳ ಸ್ಥಾಪನೆಗೆ ಮುಂದಾಗಿತ್ತು. ಈಗಿನ ಸರ್ಕಾರ ಅದನ್ನು ಮುಂದುವರಿಸಬೇಕು. ಜವಳಿ ಪಾರ್ಕ್ ಹಾಗೂ ಉಣ್ಣೆ ಗಿರಣಿ ಸ್ಥಾಪನೆಗೆ ನಿರ್ಧರಿಸುವುದು ಒಳ್ಳೆಯ ನಿರ್ಧಾರ. ಆದರೆ ಅದಕ್ಕೊಂದು ಕಾಲಮಿತಿ ನಿಗದಿಗೊಳಿಸಬೇಕು. ಜಿಲ್ಲೆಯಲ್ಲಿ ಕೈಗಾರಿಕೆಗಳ ಉದಯಕ್ಕೆ ನಾಂದಿ ಹಾಡಬೇಕು' ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಸಿದ್ಧಾರೆಡ್ಡಿ ಬಲಕಲ್ ಆಗ್ರಹಿಸಿದ್ದಾರೆ.

Post Comments (+)