ಭಾನುವಾರ, ನವೆಂಬರ್ 17, 2019
21 °C
ಬಿವಿಬಿ ಎಂಜಿನಿಯರಿಂಗ್ ಕಾಲೇಜು: `ಪ್ಲಿಡಿಯಾಸ್' ತಾಂತ್ರಿಕ ಉತ್ಸವ ಆರಂಭ

`ಸಂಪರ್ಕ ಕ್ರಾಂತಿಗೆ ತಾಂತ್ರಿಕತೆ ಕಾರಣ'

Published:
Updated:

ಹುಬ್ಬಳ್ಳಿ: `ಜಗತ್ತಿನಾದ್ಯಂತ 2025ರ ವೇಳೆಗೆ ಶೆ 75ರಷ್ಟು ಯುವಕರು ಎಂಜಿನಿಯರುಗಳಿರುತ್ತಾರೆ' ಎಂದು ಬೆಂಗಳೂರಿನ ಟಿಸಿಎಸ್ ಕಂಪೆನಿಯ ಇ.ಎಸ್. ಚಕ್ರವರ್ತಿ ಹೇಳಿದರು. ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ `ಪ್ಲಿಡಿಯಾಸ್' ಎಂಬ ತಾಂತ್ರಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಎಂಜಿನಿಯರಿಂಗ್ ಶಿಕ್ಷಣ ವ್ಯರ್ಥ ಹಾಗೂ ನೀರಸ ವಿಷಯಗಳಿವೆ ಮತ್ತು ನೀರಸವಾಗಿ ಕಲಿಸುತ್ತಾರೆ ಎಂಬ ಮಾತು ಸಾಮಾನ್ಯವಾಗಿ ಎಂಜಿನಿಯರಿಂಗ್ ಕಲಿಯುವ ವಿದ್ಯಾರ್ಥಿಗಳಲ್ಲಿರುತ್ತದೆ. ಆದರೆ ಎಂಜಿನಿಯರಿಂಗ್ ಶಿಕ್ಷಣ ಪೂರೈಸಿದ ಕೂಡಲೇ ಉದ್ಯೋಗಾವಕಾಶಗಳು ಸಿಗುತ್ತಿವೆ. ಇದಕ್ಕಾಗಿ ಕಲಿಯುವಾಗಲೇ ಲ್ಯಾಬ್ ಮತ್ತು ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ' ಎಂದು ಅವರು ಸಲಹೆ ನೀಡಿದರು.`ಯಾವುದೇ ವಹಿವಾಟಿಗೂ ತಾಂತ್ರಿಕತೆ ಅಗತ್ಯ. 2012-13ರಲ್ಲಿ ದೇಶದಲ್ಲಿ ನಡೆದ ಮೊಬೈಲ್ ಬ್ಯಾಂಕಿಂಗ್ ವಹಿವಾಟು ರೂ 150 ಕೋಟಿ ಆಗಿದೆ. ಹೀಗೆ ತಾಂತ್ರಿಕತೆಯ ಆಧುನೀಕತೆಯಿಂದಾಗಿ ಸಂವಹನ ಸಂಪರ್ಕದಲ್ಲಿ ಕ್ರಾಂತಿಯಾಗಿದೆ. ಜೊತೆಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದವರ ನಿರಂತರ ಶ್ರಮದಿಂದ ಆಟೊಮೊಬೈಲ್ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ತಿರುಪತಿಗೆ ಕಾರಿನಲ್ಲಿ ಹೊರಟಾಗ 150 ಕಿ. ಮೀ. ದೂರ ಪ್ರಯಾಣಿಸಿದ ಮೇಲೆ ಕಾಫಿ ಬ್ರೇಕ್ ಎಂಬ ಸಂದೇಶವನ್ನು ಕಾರು ನೀಡಿತು. ಹೀಗೆ ಎಂಜಿನಿಯರಿಂಗ್ ಕ್ಷೇತ್ರದ ಪ್ರತಿ ವಿಭಾಗಗಳಲ್ಲೂ ಆವಿಷ್ಕಾರಗಳು ನಿರಂತರವಾಗಿರುತ್ತವೆ' ಎಂದು ಅವರು ಅಭಿಪ್ರಾಯಪಟ್ಟರು.`ಸಣ್ಣ ಸಣ್ಣ ಗುರಿಗಳನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸಿ. ಅದರಲ್ಲೂ ಗುರಿಗಳ ಸಂಖ್ಯೆ ಹಾಗೂ ವೇಳೆ ಗಮನದಲ್ಲಿರಲಿ. ನಕ್ಷತ್ರಗಳ ಪುಂಜದ ಹೆಸರು ಹೊತ್ತಿರುವ `ಪ್ಲಿಡಿಯಾಸ್' ಎಂಬ ತಾಂತ್ರಿಕ ಉತ್ಸವದಿಂದ ಗುಂಪು ಚರ್ಚೆ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆಯಿಂದಾಗಿ ಸಾರ್ವಜನಿಕರೊಂದಿಗೆ ಬೆರೆಯುವ ಕೌಶಲ ದೊರೆಯುತ್ತದೆ. ಜೊತೆಗೆ ಮೌಲ್ಯಗಳಿಗೆ ಹಾಗೂ ಮಾನವೀಯ ಸಂಬಂಧಗಳಿಗೆ ಬೆಲೆ ಕೊಡಿ' ಎಂದು ಅವರು ಕಿವಿಮಾತು ಹೇಳಿದರು.

ಗ್ರಾಮಗಳ ಕುರಿತ ಉತ್ಸವ: `ಟಿ.ವಿ. ಹಾಗೂ ಮೊಬೈಲ್ ಕ್ಷೇತ್ರಗಳಲ್ಲಿ ತಾಂತ್ರಿಕತೆಯಿಂದಾಗಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಆದರೆ ಮನರಂಜನೆಗೇ ತಾಂತ್ರಿಕತೆ ಹೆಚ್ಚು ಬಳಸಲಾಗಿದೆ. ಇದಕ್ಕಾಗಿ ಆಹಾರೋತ್ಪನ್ನಗಳಿಗೂ ತಾಂತ್ರಿಕತೆಯನ್ನು ಬಳಸಬೇಕು ಎನ್ನುವ ನಿಟ್ಟಿನಲ್ಲಿ ಈ ಬಾರಿ ಉತ್ಸವದಲ್ಲಿ ಗ್ರಾಮಗಳ ಕುರಿತೇ ವಿಷಯವನ್ನು ಆಯ್ದುಕೊಳ್ಳಲಾಗಿದೆ' ಎಂದು ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಶೆಟ್ಟರ ತಿಳಿಸಿದರು.`1947ರಲ್ಲಿ ಈ ದೇಶಕ್ಕೆ 60 ದಶಲಕ್ಷ ಟನ್ ಆಹಾರೋತ್ಪನ್ನ ಸಾಕಿತ್ತು. ಈಗ ಅದು 240 ದಶಲಕ್ಷ ಟನ್ ಆಗಿದೆ. 30 ವರ್ಷಗಳ ನಂತರ 540 ದಶಲಕ್ಷ ಟನ್ ಆಹಾರೋತ್ಪನ್ನಗಳ ಅಗತ್ಯ ಇರುತ್ತದೆ. ಆದರೆ ಗ್ರಾಮಗಳಲ್ಲಿ ಶೇ 70ರಷ್ಟು ಕಳಪೆ ತಾಂತ್ರಿಕತೆಯಿದೆ. ಇದರಿಂದ ನೀರು ಪೋಲಾಗುತ್ತಿದೆ. ಹೀಗಾಗಿ ಯುವ ಎಂಜಿನಿಯರುಗಳು ಗ್ರಾಮಗಳತ್ತ ಲಕ್ಷ್ಯ ವಹಿಸಿ' ಎಂದು ಅವರು ಹೇಳಿದರು.ಮುಗ್ಧಾ ಭಟ್ಟ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಶಶಾಂಕ ಶೆಟ್ಟರ ಸ್ವಾಗತಿಸಿದರು. ಲಕ್ಷ್ಮಿ ಬಸನಗೌಡರ ವಂದಿಸಿದರು.

ಯುದ್ಧಾಸ್ತ್ರ, ಹಸ್ತಕಲಾ, ಕಲಾಕಾರ್ಸ್‌

ಹುಬ್ಬಳ್ಳಿ: ಗುಲೇಲು (ಕ್ಯಾಟರ್ ಬಿಲ್) ಆಧುನಿಕತೆಯ ರೂಪ ಮೆಕ್ಯಾನಿಕಲ್ ವಸ್ತುಗಳಿಂದ ಮಾಡಿದ ಯುದ್ಧಾಸ್ತ್ರ.3ರಿಂದ 8 ಮೀಟರ್‌ವರೆಗೆ 5 ಸೆಂ.ಮೀ. ಪೈಪು ಬಳಸಿ ಮಾಡಿದ ವಸ್ತುವಿನಿಂದ ನಿಗದಿಗೊಳಿಸಿದ ಅಂತರದಲ್ಲಿ ಪುಟ್ಟ ಪೈಪೊಂದನ್ನು ದೂರ ಎಸೆಯುವವರಿಗೆ ಬಹುಮಾನ. ಈ ಸ್ಪರ್ಧೆಯಲ್ಲಿ ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಬಳ್ಳಾರಿ, ಮಣಿಪಾಲ ಮೊದಲಾದ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕೈಯಿಂದ ಪೇಂಟ್ ಮಾಡುವ `ಹಸ್ತಕಲಾ' ಸ್ಪರ್ಧೆಯಲ್ಲಿ ಸುಮಾರು 77 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅವರಿಗೆ ನೀಡಿದ ವಿಷಯ ಬುಡುಕಟ್ಟು ಜನಾಂಗ. ಇದರ ನಂತರ ರೋಡೀಸ್ ಸ್ಪರ್ಧೆ ನಡೆಯಿತು. ವಿವಿಧ ಕಾಲೇಜಿನ 16 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಟೈರೊಂದನ್ನು ಕೈಯಿಂದ ಉರುಳಿಸುತ್ತ ಗುರಿ ತಲುಪುವುದು ಈ ಸ್ಪರ್ಧೆಯ ನಿಯಮ. ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳು ಗ್ರಾಮ ಪರಿಸರಕ್ಕಾಗಿ ಬಂಡಿ, ಲಾಟೀನು ಕಟ್ಟಿದ್ದರು. ಇದರೊಂದಿಗೆ ಬಿವಿಬಿ ಕಾಲೇಜಿನ ಮುಖ್ಯ ಕಟ್ಟಡ ಹಾಗೂ ಕಾಲೇಜಿನ ಶಿಲ್ಪಿ ಭೂಮರೆಡ್ಡಿ ಅವರ ಪ್ರತಿಮೆಯನ್ನು ರೇಖಾಚಿತ್ರದಲ್ಲಿ ಅರಳಿಸಿದವರು ವಿದ್ಯಾರ್ಥಿಗಳಾದ ವಿನಾಯಕ ಗೋಟೂರ ಹಾಗೂ ಅಭಿಷೇಕ ಡೋಂಗ್ರೇಕರ.ಬಿವಿಬಿ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ಸುಮಾರು 130 ವಿದ್ಯಾರ್ಥಿಗಳು ತಮ್ಮ ಛಾಯಾಚಿತ್ರ, ಚಿತ್ರಕಲೆಗಳ ಪ್ರದರ್ಶನವನ್ನು `ಕಲಾಕಾರ್ಸ್‌' ಎನ್ನುವ ಶೀರ್ಷಿಕೆಯಡಿ ಏರ್ಪಡಿಸಿದ್ದರು. ಆಟೊಮೊಬಯಲ್ ವಿಭಾ ಗದ ವಿದ್ಯಾರ್ಥಿಗಳು ಆಯೋಜಿಸಿದ `ವೀಲ್ಸ್ ಆನ್ ಫೈಯರ್' ಎಂಬ ಪುಟ್ಟ ಗಾಲಿಗಳ ಸಂಚಾರ ಸಂಚಲನ ಮೂಡಿಸಿತು.

 

ಪ್ರತಿಕ್ರಿಯಿಸಿ (+)