ಮಂಗಳವಾರ, ಜೂನ್ 22, 2021
26 °C

ಸಂಪಿಗೆಕಟ್ಟೆ ದಲಿತರಿಂದ ಮತದಾನ ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: `ನಾವೂ ಕಳಸ ಪಂಚಾಯಿತಿಗೇ ಸೇರಿದವರು ಎಂದು ಅವರಿಗೆ ಮರೆತು ಹೋಗಿದೆಯೋ ಏನೋ? ನಮ್ಮನ್ನು ಕೇಳುವವರೇ ಇಲ್ಲದಂತೆ ಆಗಿದೆ. ನಮಗೆ ಯಾರೂ ಗತಿಯಿಲ್ಲ...~ ಬಾಳೆಹೊಳೆ ಸಮೀಪವೇ ಇದ್ದರೂ ಕಳಸ ಗ್ರಾಮ ಪಂಚಾಯಿತಿಗೆ ಒಳಪಡುವ ಸಂಪಿಗೆಕಟ್ಟೆ ಹರಿಜನ ಕಾಲೊನಿಯ ಸುಬ್ಬಯ್ಯ ಹತಾಶೆಯಿಂದ ಆಡುತ್ತಿದ್ದ ಮಾತಿಗೆ ಮುನ್ನವೇ ಕೇರಿಯ ಮಂದಿ ವಿವಿಧ ಆರೋಪ ಮಾಡಲಾರಂಭಿಸಿದರು.ಆಡಳಿತ ವ್ಯವಸ್ಥೆ ಮತ್ತು ಚುನಾವಣೆ ಬಗ್ಗೆ ಭ್ರಮನಿರಸನಗೊಂಡಿರುವ ಸಂಪಿಗೆಕಟ್ಟೆ ದಲಿತರು ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆ ಯಲ್ಲಿ ಮತ ಚಲಾಯಿಸದೆ ಇರುವ ತೀರ್ಮಾನಕ್ಕೂ ಬಂದಿದ್ದಾರೆ.

ಇಲ್ಲಿನ ಹರಿಜನ ಕಾಲೊನಿಯ 9 ಮನೆಗಳ ಪೈಕಿ ಯಾವುದೂ ಪಕ್ಕಾ ಮನೆಗಳಲ್ಲ.ಹೆಚ್ಚಿನ ಮನೆಗಳಿಗೆ ಗೋಡೆಯೇ ಇಲ್ಲ. ಕೆಲವು ಮನೆಗಳ ಛಾವಣಿಗೆ ಅಡಿಕೆ ಸೋಗೆ ಬಳಸಲಾಗಿದೆ. ಕಿಟಿಕಿ-ಬಾಗಿಲುಗಳ ಪರಿಸ್ಥಿತಿ ಅಧೋಗತಿ. ಇಂತಹ ಮನೆಗಳ ದುರಸ್ತಿಗೆ ಇದುವರೆಗೂ ಗ್ರಾಮ ಪಂಚಾಯಿತಿ ಅಥವಾ ಯಾವುದೇ ಮೂಲದಿಂದ ಅನುದಾನ ಸಿಕ್ಕಿಲ್ಲ ಎಂಬುದು ದಲಿತರ ಸಿಟ್ಟಿಗೆ ಕಾರಣ.`35 ವರ್ಷದಿಂದ ಇಲ್ಲೇ ಇದ್ದೇವೆ. ಒಂದು ಮನೆ ದುರಸ್ತಿ ಅಥವಾ ಹೊಸ ಮನೆ ನಿರ್ಮಾಣಕ್ಕೆ ಒಂದು ರೂಪಾಯಿ ಕೊಟ್ಟಿಲ್ಲ. ನಮ್ಮ ಮನೆ ಈ ವರ್ಷ ಮಳೆಗಾಲದಲ್ಲಿ ಮೈಮೇಲೆ ಬಿದ್ದು ನಾವು ಸಾಯೋದೆ...~ ಎಂದು ಕಾಲೊನಿಯ ವೆಂಕಟೇಶ್ ಶಿಥಿಲಗೊಂಡ ಮನೆ ತೋರಿಸುತ್ತಾ ಹೇಳಿದರು.ಕಾಲೊನಿಯ ಪ್ರಮುಖ ಸಮಸ್ಯೆ ಕುಡಿಯುವ ನೀರಿನದ್ದು. ಜತೆಗೆ ಹಲಸಿನಕಟ್ಟೆಯೂ ಸೇರಿದಂತೆ ಒಟ್ಟು ಮೂರು ಟ್ಯಾಂಕ್‌ಗಳನ್ನು ತುಂಬಿಸಲು ಒಂದು ಮೋಟರ್ ಇದೆ.  ಆ ಹಳೆಯ ಮೋಟರನ್ನು ಅರ್ಧ ಗಂಟೆಗಿಂತ ಹೆಚ್ಚು ಕಾಲ ಚಲಾಯಿಸುವಂತೆಯೂ ಇಲ್ಲ.  ಹಳೆಯ ಮೋಟರ್ ಕೆಟ್ಟುನಿಂತಾಗ ದಲಿತರೇ ತಲಾ ರೂ.50 ದೇಣಿಗೆ ಸಂಗ್ರಹಿಸಿ ದುರಸ್ತಿ ಮಾಡಿಸಿದ್ದಾರೆ. `ಇಲ್ಲಿಗೆ ಬೇರೆಯೇ ಬೋರ್‌ವೆಲ್ ಕೊರೆಸಿದರೆ ನಮಗೆಲ್ಲ ನೀರಿನ ಸಮಸ್ಯೆ ಇರುವುದಿಲ್ಲ~ ಎಂದು ಅಲ್ಲಿನ ಗೃಹಿಣಿ ಲಕ್ಷ್ಮಿ ಹೇಳಿದರು.ಕಾಲೊನಿಯಲ್ಲಿ ಸಂಧ್ಯಾ ಸುರಕ್ಷಾ ಮತ್ತು ವಿಧವಾ ವೇತನಕ್ಕೆ ಅರ್ಹರಾಗಿರುವವರು ಇದ್ದರೂ ಅವರಿಗೆ ಆ ಯೋಜನೆಗಳ ಬಗ್ಗೆ ಮಾಹಿತಿಯೇ ಇಲ್ಲ. ಅಲ್ಲಿನ ಮನೆಗಳ ಮೇಲೆಯೇ ಮೆಸ್ಕಾಂನ ವಿದ್ಯುತ್ ತಂತಿ ಅಪಾಯಕಾರಿಯಾಗಿ ಹಾದುಹೋಗಿದೆ. ಅದನ್ನು ತೆಗೆಯುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ ಎಂದು ನಿವಾಸಿಗಳು ದೂರಿದರು.ಮನೆ ಮುಂಭಾಗದಲ್ಲಿ ರಸ್ತೆ ನಿರ್ಮಿಸಬೇಕು ಎಂಬ ಬೇಡಿಕೆಗೂ ಸ್ಪಂದನೆ ಇಲ್ಲ. ಕೂಲಿ ಕಾರ್ಮಿಕರಾಗಿರುವ ಈ ಜನರ ಮನೆಗಳಿಗೆ ಹಕ್ಕುಪತ್ರವೂ ಸಿಕ್ಕಿಲ್ಲ. ನಾವು ಎಲ್ಲದಕ್ಕೂ ಬಾಯಿ ಬಿಟ್ಟುಕೊಂಡು ಕುಳಿತುಕೊಂಡರೆ ಆಗುವುದಿಲ್ಲ. ಇನ್ನು ಮುಂದೆ ಹೋರಾಟ-ಧರಣಿ ಮಾಡುತ್ತೇವೆ ಎಂದು ಕಾಲೊನಿಗೆ ವಿದ್ಯುತ್ ಸಂಪರ್ಕ ಸಿಗಲು ಶ್ರಮಿಸಿದ ಯುವಕ ಬಾಲಚಂದ್ರ ಅವರ ಹೋರಾಟದ ಚಿತ್ರಣ ನೀಡಿದರು.`ಈಗ ಚುನಾವಣೆ ಬಂತು ಎಂದು ನಮ್ಮ ಬಳಿ ಬರುತ್ತಾರೆ. ಆಮೆಲೆ ನಮ್ಮ ಕಡೆ ತಿರುಗಿಯೂ ನೋಡುವುದಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸುವ ಕಾಲೊನಿಯ ಹಿರಿಯರು `ಈ ಬಾರಿ ನಾವು ಮತ ಹಾಕುವುದೇ ಇಲ್ಲ~ ಎಂದು ದೃಢ ನಿರ್ಧಾರ ಮಾಡಿದ್ದಾರೆ.ಶಾಸಕ ಕುಮಾರಸ್ವಾಮಿ ಹಿಂದೊಮ್ಮೆ ಕಾಲೊನಿಗೆ ಬಂದು `ನೀವು ಈ ರೀತಿಯಲ್ಲಿ ಬಾಳ್ವೆ ಮಾಡುತ್ತಿರುವುದು ನೋಡಿ ಬೇಸರ ಆಯಿತು~ ಎಂದು ಮರುಗಿ ಹೋದವರು ಬಳಿಕ ಅಲ್ಲಿಗೆ ಬಂದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.