ಸೋಮವಾರ, ಮೇ 10, 2021
25 °C

ಸಂಪುಟಗಳ ಹೂರಣ ಉತ್ತಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಚದುರಿದ ಮೌಲ್ಯಗಳನ್ನು ಒಂದೆಡೆ ಸೇರಿಸುವ ನಿಟ್ಟಿನಲ್ಲಿ ಅಗತ್ಯ ಆಕರಗಳನ್ನು ಬಳಸಿ ಒಂದೇ ಸೂರಿನ ಅಡಿಯಲ್ಲಿ ಒಟ್ಟಾಗಿ ಹೊರ ತಂದಿರುವ ಶರಣ ಸಾಹಿತ್ಯದ ಈ 7 ವಿಮರ್ಶಾ ಸಂಪುಟಗಳಲ್ಲಿ ಪ್ರಯೋಗಶೀಲತೆ ಅಡಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಾಂತಿನಾಥ ದಿಬ್ಬದ ಹೇಳಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಬುಧವಾರ  ಕನ್ನಡ ಭಾಷಾಭಿವೃದ್ಧಿ ಯೋಜನೆ ಅಡಿಯಲ್ಲಿ ಕನ್ನಡ ಭಾಷೆಯ ಸ್ಥಾನಮಾನ ದೊರಕಿದ ಸಂದರ್ಭದಲ್ಲಿ ಸರ್ಕಾರ ನೀಡಿದ ಅನುದಾನದಲ್ಲಿ ಪ್ರಕಟವಾದ ಶರಣ ಸಾಹಿತ್ಯ ವಿಮರ್ಶಾ ಸಂಪುಟಗಳ ಬಿಡುಗಡೆ ಸಮಾರಂಭದಲ್ಲಿ ಸಂಪುಟಗಳ ಕುರಿತು ಮಾತನಾಡಿದ ಅವರು ಈ ಕೃತಿಗಳ ಒಳ ಮತ್ತು ಹೊರ ಹೂರಣ ಚೆನ್ನಾಗಿದೆ ಎಂದು ತಿಳಿಸಿದರು.ಈ ಕೃತಿಯಲ್ಲಿನ ದೋಷ-ಕೊರತೆಗಳನ್ನು ಮುಂದಿನ ಹೆಜ್ಜೆಗಳಲ್ಲಿ ಸರಿಪಡಿಸಬಹುದಾಗಿದ್ದು, ಪ್ರಯೋಗಶೀಲತೆಯೂ ಒಂದು ಬಗೆಯ ಸಂಶೋಧನೆ ಎನ್ನುವುದು ನನ್ನ ಅಭಿಪ್ರಾಯ ಎಂದರು.ಅತಿಥಿಯಾಗಿದ್ದ ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ. ಎಂ. ಮುನಿಯಮ್ಮ ಮಾತನಾಡಿ, ಕರ್ನಾಟಕದುದ್ದಕ್ಕೂ ಆಯಾ ಪ್ರದೇಶದಲ್ಲಿ ಭಿನ್ನವಾಗಿರುವ ಕನ್ನಡ ಭಾಷೆಯ ಬಗ್ಗೆ ಅಧ್ಯಯನ ಮಾಡಿ ಆ ಬಗ್ಗೆಯೂ ಸಂಪುಟಗಳನ್ನು ಹೊರತರುವುದು ಅಗತ್ಯವಾಗಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಪುಟ್ಟಯ್ಯ ಮಾತನಾಡಿ, ಬಯಲಾಟ, ದೊಡ್ಡಾಟ, ಸಣ್ಣಾಟ ಕೇಂದ್ರ ಸ್ಥಾನವಾಗಿರುವ ಗುಲ್ಬರ್ಗದಲ್ಲಿ ರಂಗಾಯಣದ ಉಪಕೇಂದ್ರ ಸ್ಥಾಪಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತರಿಗೆ ಮನವಿ ಮಾಡಿದರು.ಜಾನಪದ ಲೋಕ ಮತ್ತು ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾಗುತ್ತಿರುವ ಅಂಬೇಡ್ಕರ್ ಭವನದಲ್ಲಿ ಮ್ಯೂಸಿಯಂ ಸ್ಥಾಪಿಸುವ ಯೋಜನೆಗೆ ಸರ್ಕಾರದಿಂದ ನೆರವು ಅಗತ್ಯ ಎಂದು ತಿಳಿಸಿದರು.ಸಂಪುಟಗಳ ಪ್ರಧಾನ ಸಂಪಾದಕ ಡಾ. ಎಚ್.ಟಿ. ಪೋತೆ ಸ್ವಾಗತಿಸಿದರು. ಎಂ.ಬಿ. ಕಟ್ಟಿ ನಿರೂಪಿಸಿದರು.

ಬಿಡುಗಡೆಯಾದ ಸಂಪುಟಗಳು: ಅಲ್ಲಮಪ್ರಭು- ಡಾ.ಚಂದ್ರಶೇಖರ ನಂಗಲಿ, ಬಸವಣ್ಣ- ಡಾ. ವಿ.ಜಿ. ಪೂಜಾರ, ಅಕ್ಕಮಹಾದೇವಿ- ಡಾ. ವಿಜಯಶ್ರಿ ಸಬರದ, ಚನ್ನಬಸವಣ್ಣ- ಪ್ರೊ. ಮಲ್ಲೇಪುರಂ ಜಿ. ವೆಂಕಟೆಶ, ಶೂನ್ಯ ಸಂಪಾದನೆ- ಡಾ. ಬಸವರಾಜ ಸಬರದ, ವಚನ ಕಾವ್ಯ ಚಿಂತನೆ- ಡಾ. ಎಸ್.ಎಂ. ಹಿರೇಮಠ, ಜಾಗತಿಕ ಚಿಂತಕರು ಮತ್ತು ಬಸವಣ್ಣ- ಡಾ. ಎಚ್.ಟಿ. ಪೋತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.