ಭಾನುವಾರ, ಏಪ್ರಿಲ್ 11, 2021
28 °C

ಸಂಪುಟದಲ್ಲಿ ಕೆಲವರಿಗೆ ಕೊಕ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡೇ ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ನಿರ್ಧಾರ ಕೈಗೊಂಡಿರುವ ಬಿಜೆಪಿ ವರಿಷ್ಠರು, ಹೊಸ ಸಚಿವ ಸಂಪುಟ ರಚನೆ ವಿಷಯದಲ್ಲೂ ಎಚ್ಚರಿಕೆಯ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಸಂಪುಟದಲ್ಲಿದ್ದ ಕೆಲವರನ್ನು ಕೈಬಿಡುವ ಬಗ್ಗೆಯೂ ಯೋಚಿಸಿದ್ದಾರೆ.ಮುಖ್ಯಮಂತ್ರಿಯ ಹೊರತಾಗಿ 33 ಸಚಿವ ಸ್ಥಾನಗಳನ್ನು ತುಂಬಬೇಕಾಗುತ್ತದೆ. ಎಲ್ಲ ಜಿಲ್ಲೆಗಳಿಗೆ ಮತ್ತು ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಸೂತ್ರವನ್ನು ಆಧರಿಸಿ ಸಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಒಲವು ತೋರಿದೆ. ಚುನಾವಣಾ ಸಿದ್ಧತೆ ವರ್ಷವಾಗಿರುವುದರಿಂದ ಎಲ್ಲ ಸ್ಥಾನಗಳನ್ನೂ ಒಮ್ಮೆಗೆ ಭರ್ತಿ ಮಾಡುವ ತೀರ್ಮಾನಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬಿಜೆಪಿ ವರಿಷ್ಠರಾದ ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಸೋಮವಾರ ಸಂಜೆ ನಗರಕ್ಕೆ ಬರುವರು. ತಕ್ಷಣವೇ ಪಕ್ಷದ ಪ್ರಮುಖ ನಾಯಕರ ಜೊತೆ ಸಮಾಲೋಚನೆ ನಡೆಸುವರು. ಮಂಗಳವಾರ ಶಾಸಕಾಂಗ ಪಕ್ಷದ ನಾಯಕರ ಸಭೆಯ ನಂತರ ಮತ್ತೊಂದು ಸುತ್ತಿನ ಚರ್ಚೆ ನಡೆಸುವರು. ಬಳಿಕ ವರಿಷ್ಠರೇ ಸಂಪುಟದಲ್ಲಿ ಸ್ಥಾನ ಪಡೆಯುವ ಶಾಸಕರ ಹೆಸರುಗಳನ್ನು ಅಂತಿಮಗೊಳಿಸುವರು ಎನ್ನಲಾಗಿದೆ.ಉಪ ಮುಖ್ಯಮಂತ್ರಿ ಯಾರು?:

ನಾಯಕತ್ವ ಬದಲಾವಣೆಯಿಂದ ಉದ್ಭವಿಸಬಹುದಾದ ಗೊಂದಲಗಳನ್ನು ತಡೆಯಲು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಪ್ರಸ್ತಾವ ಹಲವು ದಿನಗಳಿಂದ ಬಿಜೆಪಿ ಹೈಕಮಾಂಡ್ ಮುಂದಿದೆ. ಆದರೆ, ಈವರೆಗೂ ಆ ಕುರಿತು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಗೃಹ ಸಚಿವ ಆರ್.ಅಶೋಕ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಹೆಸರುಗಳು ಈ ಹುದ್ದೆಗೆ ಬಲವಾಗಿ ಕೇಳಿಬಂದಿವೆ.ಹೈಕಮಾಂಡ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದೆ. ಶಾಸಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಈ ವಿಷಯದಲ್ಲಿ ತೀರ್ಮಾನಕ್ಕೆ ಹೈಕಮಾಂಡ್ ನಿರ್ಧರಿಸಿದೆ ಎಂದು ಗೊತ್ತಾಗಿದೆ.ಅಧಿಕಾರ ತ್ಯಾಗಕ್ಕೆ ಪರ್ಯಾಯವಾಗಿ ತಮಗೆ ಯಾವುದೇ ಹುದ್ದೆ ಬೇಡ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಪಕ್ಷದ ವರಿಷ್ಠರಿಗೆ ತಿಳಿಸಿದ್ದರು.ಆದರೆ, ಈಗ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಡುವಂತೆ ಅವರ ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಸಂಜೆ ಮುಖ್ಯಮಂತ್ರಿಯವರ ಅಧಿಕೃತ ನಿವಾಸ `ಅನುಗ್ರಹ~ದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಪಡೆಯಲೇಬೇಕು ಎಂದು ಹಲವು ಸಚಿವರು, ಶಾಸಕರು ಸದಾನಂದ ಗೌಡರನ್ನು ಒತ್ತಾಯಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.ಸಚಿವರಾದ ಬಾಲಚಂದ್ರ ಜಾರಕಿಹೊಳಿ, ಗೋವಿಂದ ಕಾರಜೋಳ, ಬಿ.ಎನ್.ಬಚ್ಚೇಗೌಡ, ಸಿ.ಪಿ.ಯೋಗೇಶ್ವರ್, ಶಾಸಕರಾದ ಡಾ.ಸಿ.ಎನ್,ಅಶ್ವತ್ಥನಾರಾಯಣ, ಎಂ.ಶ್ರೀನಿವಾಸ್, ಎಸ್.ಮುನಿರಾಜು, ಎಲ್.ಎ.ರವಿಸುಬ್ರಹ್ಮಣ್ಯ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು. `ಸದಾನಂದ ಗೌಡರಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಬೇಕು. ಈಶ್ವರಪ್ಪ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ನೇಮಿಸಬೇಕು~ ಎಂಬ ಸಲಹೆ ಗೌಡರ ಬೆಂಬಲಿಗರಿಂದ ಬಂದಿದೆ. ನಾಯಕತ್ವ ಬದಲಾವಣೆ ಕುರಿತ ಗೊಂದಲ ಸೃಷ್ಟಿಯಾದ ಸಂದರ್ಭದಲ್ಲಿ ತಟಸ್ಥವಾಗಿ ಉಳಿದಿದ್ದ ಸಚಿವ ಅಶೋಕ ಅವರಿಗೆ ತಿರುಗೇಟು ನೀಡುವ ಉದ್ದೇಶವೂ ಈ ಬಣಕ್ಕಿದೆ ಎನ್ನಲಾಗಿದೆ.ಕೆಲವರಿಗೆ `ಕೊಕ್~:

ಚುನಾವಣಾ ಸಿದ್ಧತೆಗೆ ಕೆಲವೇ ತಿಂಗಳು ಬಾಕಿ ಇರುವಾಗಿ ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ ಬರುತ್ತಿದೆ. ಇಂತಹ ಸಮಯದಲ್ಲಿ ಎಲ್ಲ ಜಿಲ್ಲೆಗಳು ಮತ್ತು ಜಾತಿಗಳಿಗೆ ಸಂಪುಟದಲ್ಲಿ ಪ್ರಾತನಿಧ್ಯ ನೀಡುವ ಯೋಜನೆ ಬಿಜೆಪಿ ನಾಯಕರಲ್ಲಿದೆ.ಈ ಕಾರಣಕ್ಕಾಗಿ ಸದಾನಂದ ಗೌಡರ ಸಂಪುಟದಲ್ಲಿರುವ ಕೆಲವರನ್ನು ಕೈಬಿಡಲು ಬಿಜೆಪಿ ಹೈಕಮಾಂಡ್ ಒಲವು ತೋರಿದೆ. ಕೈ ಬಿಡುವವರ ಸ್ಥಾನಗಳಿಗೆ ಅದೇ ಸಮುದಾಯದ ಶಾಸಕರನ್ನು ಸೇರಿಸಿಕೊಂಡು ಸರಿದೂಗಿಸುವ ಯೋಚನೆಯೂ ಇದೆ ಎಂದು ಬಿಜೆಪಿಯ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಬಿ.ಎಸ್.ಯಡಿಯೂರಪ್ಪ ಮತ್ತು ಸದಾನಂದ ಗೌಡರ ಅಧಿಕಾರದ ಅವಧಿಯಲ್ಲಿ ಕೆಲವು ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರತೇ ಇಲ್ಲ. ಅಂತಹ ಜಿಲ್ಲೆಗಳ ತಲಾ ಒಬ್ಬರು ಶಾಸಕರಿಗಾದರೂ ಸಚಿವ ಸ್ಥಾನ ನೀಡಲೇಬೇಕು ಎಂಬ ಅಭಿಪ್ರಾಯ ಪಕ್ಷದ ವರಿಷ್ಠರಲ್ಲೇ ಇದೆ.ಮುಂದಿನ ಚುನಾವಣೆಯನ್ನು ಗುರಿಯಾಗಿ ಇರಿಸಿಕೊಂಡು ಎಲ್ಲ ಸಮುದಾಯಗಳಿಗೂ ಸಂಪುಟದಲ್ಲಿ ಪ್ರಾತನಿಧ್ಯ ನೀಡುವ ತಂತ್ರಗಾರಿಕೆಯೂ ರೂಪುಗೊಳ್ಳುತ್ತಿದೆ. ಇದಕ್ಕಾಗಿ ಈಗ ಸಂಪುಟದಲ್ಲಿರುವ ಕೆಲವರನ್ನು ಹೊರಗಿಡುವುದು ಅನಿವಾರ್ಯ ಆಗಬಹುದು ಎಂದು ಮೂಲಗಳು ಹೇಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.