ಸಂಪುಟದಿಂದ ಲಾಡ್‌ ವಜಾಕ್ಕೆ ಬಿಜೆಪಿ ಆಗ್ರಹ

7
ಅಕ್ರಮ ಗಣಿಗಾರಿಕೆ ಆರೋಪ

ಸಂಪುಟದಿಂದ ಲಾಡ್‌ ವಜಾಕ್ಕೆ ಬಿಜೆಪಿ ಆಗ್ರಹ

Published:
Updated:

ಬೆಂಗಳೂರು: ವಾರ್ತಾ ಸಚಿವ ಸಂತೋಷ್ ಲಾಡ್‌ ಪಾಲುದಾರರಾಗಿರುವ ಸಂಸ್ಥೆಯ ಹೆಸರು ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಇರುವ ಕಾರಣ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯ ಬಿಜೆಪಿ ಒತ್ತಾಯಿಸಿದೆ.ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ನಿಜವಾದ ಬಣ್ಣ ಈಗ ಬಯಲಾಗಿದ್ದು, ತಕ್ಷಣ ಸಂತೋಷ್‌ ಅವರನ್ನು ಸಂಪುಟದಿಂದ ಕೈಬಿಡಬೇಕು. ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಜಗದೀಶ ಶೆಟ್ಟರ್‌ ಮತ್ತು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆ­ಸುವ ಕುರಿತು ಚರ್ಚಿಸಲು ಕರೆದಿದ್ದ ಪ್ರಮುಖರ ಸಭೆ (ಕೋರ್ ಕಮಿಟಿ) ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.ರಾಜ್ಯಪಾಲರಿಗೆ ದೂರು: ಸಂತೋಷ್‌ ಲಾಡ್‌ ಅವರನ್ನು ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿಯವರಿಗೆ ಸೂಚಿಸು­ವಂತೆ ರಾಜ್ಯಪಾಲರನ್ನು ಶುಕ್ರವಾರ ಕೋರಲಾಗುವುದು. ಸಚ್ಚಾರಿತ್ರರು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ತಡ ಮಾಡದೆ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಆರೋಪ ಕೇಳಿಬಂದ ತಕ್ಷಣ ಅವರನ್ನು ಸಂಪುಟದಿಂದ ಕೈಬಿಡಬೇಕಿತ್ತು. ಅದು ಬಿಟ್ಟು ಲಾಡ್‌ ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ? ಈ ವಿಷಯದಲ್ಲಿ ಮುಖ್ಯಮಂತ್ರಿಯವರ ವರ್ತನೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು.ಅಕ್ರಮ ಎಸಗಿರುವ ಸಂಸ್ಥೆಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಸಂತೋಷ್‌ ಸುಳ್ಳು ಹೇಳುತ್ತಿದ್ದಾರೆ. ಎಲ್ಲವನ್ನೂ ದಾಖಲೆಗಳು ಹೇಳುತ್ತಿದ್ದು, ಆ ಪ್ರಕಾರ ಕ್ರಮ ಜರುಗಿಸಬೇಕು ಎಂದರು.‘ಸಂತೋಷ್‌ ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಆರೋಪ ಮಾಡಿದವರು ಪ್ರತಿಪಕ್ಷಗಳ ಮುಖಂಡರಲ್ಲ. ಬದಲಿಗೆ, ಕಾಂಗ್ರೆಸ್‌ ಶಾಸಕರಾದ ಅನಿಲ್‌ ಲಾಡ್‌ ಅವರೇ ಆರೋಪ ಮಾಡಿದ್ದು, ಇದರಲ್ಲಿ ಸತ್ಯಾಂಶ ಇದೆ’ ಎಂದು ಆರ್‌.ಅಶೋಕ ಹೇಳಿದರು.ಸಮಸ್ಯೆ ಎಲ್ಲಿ?: ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿ­ಕೊಳ್ಳುವುದಕ್ಕೆ ಯಾವ ಸಮಸ್ಯೆಯೂ ಇಲ್ಲ. ಆದರೆ, ಅವರ ಹಿಂಬಾಲಕರಿಗೆ ಅವರ ಅಪೇಕ್ಷೆ ಪ್ರಕಾರ ಒಳ್ಳೆಯ ಹುದ್ದೆ­ಗಳು ಸಿಗುತ್ತವೆಯೇ ಎನ್ನುವ ಅನುಮಾನ ಕಾಡುತ್ತಿದೆ. ಈ ಕಾರಣಕ್ಕೆ ಕೆಜೆಪಿಯಲ್ಲಿನ ಎರಡನೇ ಹಂತದ ನಾಯಕರು ವಿಲೀನಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕೆಜೆಪಿ ಕಾರ್ಯಾಧ್ಯಕ್ಷೆ ಶೋಭಾ ಕರಂದ್ಲಾಜೆ, ಮುಖಂಡರಾದ ವಿ.ಧನಂಜಯಕುಮಾರ್‌, ಎಂ.ಡಿ.­ಲಕ್ಷ್ಮೀನಾರಾಯಣ ಮತ್ತಿತರರು ಬಿಜೆಪಿಯಲ್ಲಿ ವಿಲೀನವಾದ ನಂತರ ಪ್ರಮುಖ ಸ್ಥಾನಮಾನಗಳ ನಿರೀಕ್ಷೆಯಲ್ಲಿದ್ದಾರೆ. ಬಿಜೆ­ಪಿ­ಯಲ್ಲಿ ಈ ಮುಖಂಡರ ಬಗ್ಗೆ ಹೆಚ್ಚಿನ ಒಲವು ವ್ಯಕ್­ತವಾಗುತ್ತಿಲ್ಲ. ಅಲ್ಲಿ ಕೇವಲ ಯಡಿಯೂರಪ್ಪ ಅವರ ಬಗ್ಗೆ ಮಾತ್ರ ಚರ್ಚೆ ಆಗುತ್ತಿದ್ದು, ಅವರ ಹಿಂಬಾಲಕರ ಬಗ್ಗೆ ಯಾವ ಚರ್ಚೆಯೂ ಆಗಿಲ್ಲ. ಈ ಕಾರಣಕ್ಕೆ ಯಡಿಯೂರಪ್ಪ ಕೂಡ ಇಕ್ಕಟ್ಟಿಗೆ ಸಿಲುಕಿದ್ದಾರೆ ಎನ್ನಲಾಗಿದೆ.‘ಬಿಎಸ್‌ವೈಗೆ ಯಾರ ವಿರೋಧವೂ ಇಲ್ಲ’

ಬೆಂಗಳೂರು:
ಕೆಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸ್ಸಾಗುವುದಕ್ಕೆ ಯಾರ ವಿರೋಧವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಗುರುವಾರ ಇಲ್ಲಿ ಹೇಳಿದರು.‘ಯಡಿಯೂರಪ್ಪ ವಿಷಯದಲ್ಲಿ ಏನು ಹೇಳಬೇಕೋ ಅದನ್ನು ದೆಹಲಿ ವರಿಷ್ಠರಿಗೆ ಹೇಳಲಾಗಿದೆ. ಅವರನ್ನು ಕರೆದುಕೊಳ್ಳುವುದು ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಎಲ್ಲವೂ ಪಕ್ಷದ ಸಂಸದೀಯ ಮಂಡಳಿಯ ತೀರ್ಮಾನದ ಮೇಲೆ ನಿಂತಿದೆ. ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲ ಬದ್ಧ’ ಎಂದು ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.ಕಳಂಕಿತರಲ್ಲವೇನು?

ಕಳಂಕಿತರು ಎಂದು ಹೇಳಿ ಶಾಸಕರಾದ ಡಿ.ಕೆ.­ಶಿವಕುಮಾರ್‌, ರಮೇಶಕುಮಾರ್‌, ಅನಿಲ್‌ ಲಾಡ್‌ ಮತ್ತಿತ­ರರನ್ನು ಸಚಿವರಾಗಲು ಬಿಡಲಿಲ್ಲ. ಆದರೆ, ಗಣಿ ಅಕ್ರಮ ನಡೆಸಿದ ಆರೋಪ ಹೊತ್ತ ಸಂತೋಷ್‌ ಲಾಡ್‌ ಅವರನ್ನು  ಸಂಪುಟಕ್ಕೆ ತೆಗೆದುಕೊಂಡಿದ್ದು ಏಕೆ?

-ಜಗದೀಶ ಶೆಟ್ಟರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry