ಸಂಪುಟ ಪ್ರಮಾಣ: ಖಾತೆಯೂ ಬದಲಿಲ್ಲ

7

ಸಂಪುಟ ಪ್ರಮಾಣ: ಖಾತೆಯೂ ಬದಲಿಲ್ಲ

Published:
Updated:
ಸಂಪುಟ ಪ್ರಮಾಣ: ಖಾತೆಯೂ ಬದಲಿಲ್ಲ

ಬೆಂಗಳೂರು: ಸಚಿವ ಸಂಪುಟ ರಚನೆ ಸಂಬಂಧ ಐದು ದಿನಗಳಿಂದ ನಡೆದ ಪ್ರಯತ್ನ ಕೊನೆಗೂ ಫಲಿಸಿದೆ. ಡಾ.ವಿ.ಎಸ್.ಆಚಾರ್ಯ, ಜಗದೀಶ ಶೆಟ್ಟರ್, ಆರ್.ಅಶೋಕ, ಶೋಭಾ ಕರಂದ್ಲಾಜೆ, ಸುರೇಶ್‌ಕುಮಾರ್ ಸೇರಿದಂತೆ ಮೊದಲ ಹಂತದಲ್ಲಿ ಒಟ್ಟು 21 ಜನ ಸಂಪುಟ ದರ್ಜೆ ಸಚಿವರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.ಲೋಕಾಯುಕ್ತ ವರದಿಯಲ್ಲಿ ಹೆಸರು ಪ್ರಸ್ತಾಪವಾಗಿರುವ ಜಿ.ಕರುಣಾಕರ ರೆಡ್ಡಿ, ಜಿ.ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಅವರನ್ನು ಸಂಪುಟಕ್ಕೆ ತೆಗೆದುಕೊಂಡಿಲ್ಲ. ಆದರೆ ಮುಂದೆ ನಡೆಯುವ ವಿಸ್ತರಣೆ ಸಂದರ್ಭದಲ್ಲಿ ರೆಡ್ಡಿಗಳು ಹೇಳುವ ಮೂವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ.ಲೋಕಾಯುಕ್ತ ವರದಿಯಲ್ಲಿ ಹೆಸರಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರು ಸಂಪುಟ ಸೇರ್ಪಡೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಯಡಿಯೂರಪ್ಪ ಸಂಪುಟದಲ್ಲಿದ್ದ ಡಾ.ಮುಮ್ತಾಜ್ ಅಲಿಖಾನ್, ಸಿ.ಎಚ್.ವಿಜಯಶಂಕರ್ ಅವರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ.ರಾಜಭವನದ ಗಾಜಿನ ಮನೆಯಲ್ಲಿ ಸಂಜೆ 5.30ಕ್ಕೆ ದಿಢೀರನೇ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಹಿಂದೆ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿದ್ದ ಬಹುತೇಕ ಮಂದಿ ಡಿ.ವಿ.ಸದಾನಂದ ಗೌಡ ಸಂಪುಟದಲ್ಲೂ ಸ್ಥಾನ ಪಡೆದಿದ್ದಾರೆ. ಅಲ್ಲದೆ ಖಾತೆಗಳ ಹಂಚಿಕೆಯ್ಲ್ಲಲಿ ಬದಲಾವಣೆ ಆಗಿಲ್ಲ.ಆಚಾರ್ಯಗೆ ಉನ್ನತ ಶಿಕ್ಷಣ, ಜಗದೀಶ ಶೆಟ್ಟರ್‌ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಅಶೋಕ ಅವರಿಗೆ ಗೃಹ ಮತ್ತು ಸಾರಿಗೆ, ಶೋಭಾ ಕರಂದ್ಲಾಜೆಗೆ ಇಂಧನ, ಆಹಾರ ಮತ್ತು ನಾಗರಿಕ ಸರಬರಾಜು, ಸುರೇಶ್‌ಕುಮಾರ್‌ಗೆ ನಗರಾಭಿವೃದ್ಧಿ, ಬಸವರಾಜ ಬೊಮ್ಮಾಯಿಗೆ ಜಲಸಂಪನ್ಮೂಲ, ಮುರುಗೇಶ ನಿರಾಣಿ ಅವರಿಗೆ ಮಧ್ಯಮ ಮತ್ತು ಬೃಹತ್ ಕೈಗಾರಿಕೆ, ಉಮೇಶ ಕತ್ತಿ ಅವರಿಗೆ ಕೃಷಿ ಖಾತೆಗಳನ್ನು ನೀಡಲಾಗಿದೆ.ಹಣಕಾಸು ಸೇರಿದಂತೆ ಹಂಚಿಕೆಯಾಗದ ಖಾತೆಗಳನ್ನು ಸದಾನಂದ ಗೌಡ ಅವರೇ ನೋಡಿಕೊಳ್ಳಲಿದ್ದಾರೆ. ಪೂರ್ಣ ಪ್ರಮಾಣದ ಸಂಪುಟ ರಚನೆಯಾದ ನಂತರ ಖಾತೆಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡುವ ಸಂಭವವಿದೆ. ಸದ್ಯಕ್ಕೆ ಹಿಂದೆ ಇದ್ದ ಖಾತೆಗಳನ್ನೇ ನೀಡಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆ ಅಷ್ಟೇ ಎಂದು ಮೂಲಗಳು ತಿಳಿಸಿವೆ.

ಮುಖಭಂಗ: ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸಿ ವಿಫಲರಾಗಿದ್ದ ಜಗದೀಶ ಶೆಟ್ಟರ್ ಈಗ ಉಪ ಮುಖ್ಯಮಂತ್ರಿ ಸ್ಥಾನವನ್ನೂ ಪಡೆಯುವಲ್ಲಿ ವಿಫಲರಾಗುವ ಮೂಲಕ ಮತ್ತೊಮ್ಮೆ ಮುಖಭಂಗಕ್ಕೆ ಒಳಗಾಗಿದ್ದಾರೆ. ಎರಡು ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಕೇಳಿದ್ದ ಶೆಟ್ಟರ್ ಬಣಕ್ಕೆ, ಒಂದು ಉಪ ಮುಖ್ಯಮಂತ್ರಿ ಸ್ಥಾನವೂ ದೊರಕದೆ ಇರುವುದರಿಂದ ತೀವ್ರ ಹಿನ್ನಡೆಯಾಗಿದೆ.ಸಂಪುಟ ರಚನೆ ಬಗ್ಗೆ ಉಭಯ ಬಣಗಳ ನಡುವೆ ಒಮ್ಮತ ಮೂಡದ ಕಾರಣ ಮಧ್ಯಾಹ್ನದವರೆಗೂ ಯಾವಾಗ ಸಂಪುಟ ರಚನೆಯಾಗಲಿದೆ ಎಂಬ ಬಗ್ಗೆ ಗೊಂದಲವಿತ್ತು. ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಪಕ್ಷದ ವರಿಷ್ಠರು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಸೋಮವಾರ ಮಧ್ಯಾಹ್ನ ಪಕ್ಷದ ಕಚೇರಿಯಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಅಲ್ಲದೆ ಏನೇ ಆದರೂ ಸಂಜೆಯೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ಏರ್ಪಡಿಸಬೇಕು ಎಂದು ತೀರ್ಮಾನಿಸಿದರು.ಯಡಿಯೂರಪ್ಪ ಬಣದ ಬಿಗಿ ನಿಲುವಿನಿಂದಾಗಿ ಶೆಟ್ಟರ್ ಬಣ ಗೊಂದಲಕ್ಕೆ ಒಳಗಾಯಿತಾದರೂ, ಒಲ್ಲದ ಮನಸ್ಸಿನಿಂದಲೇ ಸಂಪುಟ ಸೇರಲು ಜಗದೀಶ ಶೆಟ್ಟರ್ ಸೇರಿದಂತೆ ಅವರ ಕಡೆಯವರು ಸಮ್ಮತಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ನೂತನ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಯಿತು.ರಾಜ್ಯಪಾಲರು ಸಂಜೆಯೇ ಸಮಾರಂಭ ಏರ್ಪಡಿಸಲು ಒಪ್ಪಿಗೆ ಸೂಚಿಸುತ್ತಿದ್ದಂತೆಯೇ ತರಾತುರಿಯಲ್ಲಿ ಸಮಾರಂಭಕ್ಕೆ ವ್ಯವಸ್ಥೆ ಮಾಡಲಾಯಿತು. ಯಡಿಯೂರಪ್ಪ ಮತ್ತು ಶೆಟ್ಟರ್ ಬಣಗಳಿಗೆ ಸಮಾನವಾಗಿ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಯಡಿಯೂರಪ್ಪ ಬಣದಿಂದ 12 ಜನ ಹಾಗೂ ಶೆಟ್ಟರ್ ಬಣದಿಂದ 9 ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.ಮೂಲಗಳ ಪ್ರಕಾರ ಶೆಟ್ಟರ್ ಬಣಕ್ಕೆ ಒಟ್ಟು 18 ಹಾಗೂ ಯಡಿಯೂರಪ್ಪ ಬಣಕ್ಕೆ 16 ಸ್ಥಾನಗಳನ್ನು ನೀಡಲಾಗುತ್ತದೆ. ಸದ್ಯ  ಶೆಟ್ಟರ್ ಬಣದಿಂದ 9 ಮಂದಿ ಸೇರ್ಪಡೆಯಾಗಿದ್ದು, ವಾರದಲ್ಲಿ ನಡೆಯುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮತ್ತೆ 9 ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ.ಎಲ್ಲಿಲ್ಲದ ಉತ್ಸಾಹ: ಸಂಜೆ 5.30ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿಗದಿಯಾಗಿತ್ತು. ಯಡಿಯೂರಪ್ಪ ಸೇರಿದಂತೆ ಅವರ ಬಣದವರೆಲ್ಲ 5 ಗಂಟೆ ಸುಮಾರಿಗೆ ಒಟ್ಟಿಗೆ ಬಂದರು. ಪರಸ್ಪರ ಹಸ್ತಲಾಘವ ನೀಡಿ ಖುಷಿಯಿಂದ ಸಂತಸ ಹಂಚಿಕೊಳ್ಳುತ್ತಿದ್ದರು. ಆದರೆ ಶೆಟ್ಟರ್ ಬಣದವರ ಮುಖದಲ್ಲಿ ಉತ್ಸಾಹ ಇರಲಿಲ್ಲ. ಕಾರ್ಯಕ್ರಮ ಆರಂಭವಾಗುವ ಕೆಲವೇ ನಿಮಿಷಗಳ ಮುನ್ನ ಅವರು ಒಬ್ಬೊಬ್ಬರಾಗಿ ಬಂದರು.ರಾಮದಾಸ್, ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್ ಮೊದಲಾದವರು ಕುಟುಂಬದ ಸದಸ್ಯರು, ಸಂಬಂಧಿಕರನ್ನು ಕರೆತಂದಿದ್ದರು. ಪ್ರಮಾಣ ವಚನ ಸ್ವೀಕರಿಸಲು ವೇದಿಕೆಗೆ ತೆರಳುವ ಮುನ್ನ ರಾಮದಾಸ್ ಅವರು ತಾಯಿಯ ಆಶೀರ್ವಾದ ಪಡೆದರು. ಶೋಭಾ ಅವರ ತಾಯಿ, ರೇಣುಕಾಚಾರ್ಯ ಅವರ ಪತ್ನಿ ಸೇರಿದಂತೆ ಸಂಬಂಧಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಗೈರು ಹಾಜರಿ:
ಮಾಜಿ ಸಚಿವರಾದ ಬಾಲಚಂದ್ರ ಜಾರಕಿಹೊಳಿ, ಆನಂದ ಆಸ್ನೋಟಿಕರ್ ಸೇರಿದಂತೆ ಅವರೊಂದಿಗೆ ಗುರುತಿಸಿಕೊಂಡಿದ್ದ ಶಾಸಕರು ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಅಲ್ಲದೆ ಶೆಟ್ಟರ್ ಬಣದ ಶಾಸಕರ ಹಾಜರಿ ಪ್ರಮಾಣ ತುಂಬ ಕಡಿಮೆ ಇತ್ತು. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಎಸ್.ಕೆ.ಬೆಳ್ಳುಬ್ಬಿ, ಎಚ್.ಎಸ್.ಶಂಕರಲಿಂಗೇಗೌಡ ಅವರೂ ಕಾಣಿಸಿಕೊಳ್ಳಲಿಲ್ಲ. ರೆಡ್ಡಿ ಸಹೋದರರಾದ ಜಿ.ಕರುಣಾಕರ ರೆಡ್ಡಿ, ಜಿ. ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು, ಬಳ್ಳಾರಿ ಜಿಲ್ಲೆಯ ಶಾಸಕರೂ ಭಾಗವಹಿಸಿರಲಿಲ್ಲ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಂಸದ ಆಯನೂರು ಮಂಜುನಾಥ್, ನವದೆಹಲಿಯಲ್ಲಿನ ರಾಜ್ಯದ ವಿಶೇಷ ಪ್ರತಿನಿಧಿ ವಿ.ಧನಂಜಯ ಕುಮಾರ್, ವಿಧಾನ ಪರಿಷತ್ತಿನ ಉಪ ಸಭಾಪತಿ ವಿಮಲಾಗೌಡ, ಮಾಜಿ ಸಚಿವರಾದ ಸಿ.ಎಚ್. ವಿಜಯಶಂಕರ್, ಮುಮ್ತಾಜ್ ಅಲಿಖಾನ್, ಅರವಿಂದ ಲಿಂಬಾವಳಿ, ಶಾಸಕರಾದ ಸಿ.ಟಿ.ರವಿ ಮೊದಲಾದವರು ಭಾಗವಹಿಸಿದ್ದರು.ಯಡಿಯೂರಪ್ಪ ಹೆಸರಲ್ಲಿ ಪ್ರಮಾಣ...: ಬಹುತೇಕ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅಬಕಾರಿ ಸಚಿವ ರೇಣುಕಾಚಾರ್ಯ, ಬಿ.ಎಸ್. ಯಡಿಯೂರಪ್ಪ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಯಡಿಯೂರಪ್ಪಗೆ ಮೇಲುಗೈ

ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸಿ, ನಂತರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ರಹಸ್ಯ ಮತದಾನದಲ್ಲಿ ಶೆಟ್ಟರ್ ಪರಾಜಯಗೊಂಡರು. ಆ ಸಂದರ್ಭದಲ್ಲಿ ಯಡಿಯೂರಪ್ಪ ಬೆಂಬಲಿತ ಸದಾನಂದಗೌಡರು ಗೆದ್ದು ಆ.4ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರ ನಂತರ ಶೆಟ್ಟರ್ ಮತ್ತು ಆರ್.ಅಶೋಕ ಇಬ್ಬರೂ ತಮ್ಮ ಬೆಂಬಲಿಗ 55 ಶಾಸಕರನ್ನು ಅಶೋಕ ಹೋಟೆಲ್‌ಗೆ ಕರೆದೊಯ್ದು ಎರಡು ಉಪ ಮುಖ್ಯಮಂತ್ರಿ ಸ್ಥಾನ ಮತ್ತು 20ಕ್ಕೂ ಹೆಚ್ಚು ಸಚಿವ ಸ್ಥಾನಗಳಿಗಾಗಿ ಪಟ್ಟುಹಿಡಿದು, ಒತ್ತಡದ ತಂತ್ರ ಅನುಸರಿಸಿದರು. ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭಕ್ಕೂ ಗೈರುಹಾಜರಾಗುವ ಮೂಲಕ ಈ ಸಲ ತಮ್ಮ ಹೋರಾಟ ಗಂಭೀರ ಎಂಬುದನ್ನು ಶೆಟ್ಟರ್ ತೋರ್ಪಡಿಸಿದರು. ಸೋಮವಾರ ಸಂಜೆಯವರೆಗೂ ಚರ್ಚೆ ಮಾಡಿದ್ದು ಕೇವಲ ಉಪ ಮುಖ್ಯಮಂತ್ರಿ ಸ್ಥಾನ ಪಡೆಯುವುದರ ಬಗ್ಗೆಯೇ. ಬೇಡಿಕೆಗಳ ಪಟ್ಟಿಯಲ್ಲಿ ಅದೇ ಮೊದಲಿದ್ದ ಕಾರಣ ಆ ಕುರಿತ ಚರ್ಚೆ ನಂತರವೇ ಇತರ ವಿಷಯಗಳು ಎಂದೂ ಪಟ್ಟುಹಿಡಿದಿದ್ದರು.ಕೊನೆಗೆ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಶೆಟ್ಟರ್ ಅವರನ್ನು ಮನವೊಲಿಸುವ ಕಸರತ್ತು ನಡೆಸಿತು. ಭಾನುವಾರದ ಸಭೆ ವಿಫಲವಾದ ನಂತರ ಬೆಳಿಗ್ಗೆ ಈಶ್ವರಪ್ಪ ಅವರು ಬಿಜೆಪಿ ಕಚೇರಿಯಲ್ಲಿ ಸಭೆ ಕರೆದು ಮತ್ತೆ ಚರ್ಚೆ ನಡೆಸಿದರು. ಸಂತೋಷ್ ಸೇರಿದಂತೆ ಸತೀಶ್ ಕೂಡ ಈ ಸಭೆಯಲ್ಲಿ ಹಾಜರಿದ್ದರು.ಉಪ ಮುಖ್ಯಮಂತ್ರಿ ಸ್ಥಾನ ಕೊಡಲು ಯಡಿಯೂರಪ್ಪ ಒಪ್ಪುತ್ತಿಲ್ಲ. ಇದೇ ಅಂತಿಮ ಎಂದು ಈ ಸಭೆಯಲ್ಲಿ ಹೇಳಿದ ನಂತರ ವಿಧಿ ಇಲ್ಲದೆ, ಶೆಟ್ಟರ್ ಸಚಿವ ಸ್ಥಾನಕ್ಕೆ ಒಪ್ಪಿಕೊಳ್ಳಬೇಕಾಯಿತು. ಇಲ್ಲೂ ಯಡಿಯೂರಪ್ಪ ತಮ್ಮ ಹಟ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ತಮ್ಮನ್ನು ನಂಬಿ ಬಂದವರ ಕೈಬಿಡಲಿಲ್ಲ. ಆದರೆ, ತಮ್ಮ ಬಣಕ್ಕೆ 20 ಸಚಿವ ಸ್ಥಾನ ಬೇಕು; ಅದು ಈಡೇರುವವರೆಗೂ ಸಂಪುಟಕ್ಕೆ ಸೇರುವುದಿಲ್ಲ ಎಂದು ಹೇಳುತ್ತಿದ್ದವರು ಸದ್ದಿಲ್ಲದೆ, ಸಂಪುಟ ಸೇರಿದರು. ಇದು ಶೆಟ್ಟರ್ ಬಣದಲ್ಲಿ ಅಸಮಾಧಾನ ಹೆಚ್ಚಾಗಲು ಕಾರಣವಾಯಿತು ಎನ್ನಲಾಗಿದೆ.ಅಸಮಾಧಾನ: ಈ ಹಿಂದೆ ಯಡಿಯೂರಪ್ಪ ಸಂಪುಟದಲ್ಲಿದ್ದ ಎಲ್ಲ ಸಚಿವರೂ ಸಂಪುಟ ಸೇರುತ್ತಾರೆ ಎನ್ನುವ ಸುದ್ದಿ ಸಂಜೆ ವೇಳೆಗೆ ಗೊತ್ತಾದ ನಂತರ ಶೆಟ್ಟರ್ ಪರ ಇದ್ದ ಅನರ್ಹತೆ ರದ್ದಾದ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅವರ ಬೆಂಬಲಿಗ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.`ನಮ್ಮ ಕಡೆಯ ಕನಿಷ್ಠ 20 ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದ ನಂತರವೇ ಸಂಪುಟ ಸೇರುವುದಾಗಿ ಹೇಳುತ್ತಿದ್ದವರು ದಿಢೀರ್ ಏಕೆ ಬದಲಾಗಿದ್ದು? ಬರಲಿ ಮನೆಗೆ~ ಎಂದು ಶೆಟ್ಟರ್ ಬರುವಿಕೆಗಾಗಿ ಅವರ ಮನೆ ಮುಂದೆಯೇ ಜಾರಕಿಹೊಳಿ ಕಾದು ಕುಳಿತರು. ಈ ವಿಷಯ ತಿಳಿದ ಶೆಟ್ಟರ್ ಅವರು `ಅನುಗ್ರಹ~ದಿಂದ ಎದ್ದು ಬರಲಿಲ್ಲ. ಬದಲಿಗೆ ಅಲ್ಲಿಗೇ ಜಾರಕಿಹೊಳಿ ಅವರನ್ನು ಕರೆಸಿಕೊಂಡು ಮಾತನಾಡಿದರು. ಒಂದು ವಾರದಲ್ಲಿ ಮತ್ತೊಮ್ಮೆ ಸಂಪುಟ ವಿಸ್ತರಣೆ ಆಗಲಿದ್ದು, ಅಲ್ಲಿ ನಿಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ. ಈಗ ಗದ್ದಲ ಬೇಡ ಎಂದು ಶೆಟ್ಟರ್ ಮನವಿ ಮಾಡಿದರು. ಇದನ್ನು ನಂಬುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಕೊನೆಗೆ ಸದಾನಂದ ಗೌಡರೇ ಜಾರಕಿಹೊಳಿ ಅವರನ್ನು ಕರೆಸಿ, ಸಚಿವ ಸ್ಥಾನದ ಭರವಸೆ ಕೊಟ್ಟರು. ಆ ನಂತರ ಅವರು ಸುಮ್ಮನಾದರು. ಇಲ್ಲದಿದ್ದರೆ, ಶೆಟ್ಟರ್ ಅವರನ್ನು ರಾಜಭವನಕ್ಕೆ ತೆರಳದಂತೆ ತಡೆಯಲು ಅವರ ಬೆಂಬಲಿಗ ಶಾಸಕರು ಸಿದ್ಧತೆ ನಡೆಸಿದ್ದರು ಎಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry