ಗುರುವಾರ , ಜನವರಿ 23, 2020
26 °C

ಸಂಪುಟ ವಿಸ್ತರಣೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಖಾಲಿ ಉಳಿದಿರುವ ಸಚಿವ ಸ್ಥಾನ­ಗಳನ್ನು ಭರ್ತಿ ಮಾಡಿಕೊಳ್ಳಲು ಅನು­ಮತಿ ನೀಡುವಂತೆ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಶುಕ್ರವಾರ ಮನವಿ ಮಾಡಿದ್ದಾರೆ.ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಸೇರಿದ್ದ ಉನ್ನತ ಸಚಿ­ವರ ಸಮಿತಿ ಸಭೆಯಲ್ಲಿ ಭಾಗವಹಿ­ ಸಿ­ದ ಬಳಿಕ ಸಿದ್ದರಾಮಯ್ಯ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತ­ರಣೆ ಬಗ್ಗೆ ಚರ್ಚಿಸಿದರು.ಮುಖ್ಯಮಂತ್ರಿ ಮಾತುಗಳನ್ನು ಕೇಳಿಸಿ­ಕೊಂಡ ಕಾಂಗ್ರೆಸ್‌ ಉಪಾಧ್ಯಕ್ಷರು ಹಿರಿಯ ನಾಯಕರ ಜತೆ ವಿಸ್ತೃತವಾಗಿ ಚರ್ಚಿಸಿದ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಮಾಡು­ವು­ದಾಗಿ ಹೇಳಿ­ದ­ರೆಂದು ಉನ್ನತ ಮೂಲಗಳು ತಿಳಿಸಿವೆ.ಸಂತೋಷ್‌ ಲಾಡ್‌ ಅವರ ರಾಜೀ­ನಾಮೆ­ಯಿಂದ ತೆರವಾದ ಸ್ಥಾನವೂ ಸೇರಿದಂತೆ ರಾಜ್ಯದಲ್ಲಿ ಐದು ಸಚಿವರ ಸ್ಥಾನ­­ಗಳು ಖಾಲಿ ಉಳಿದಿವೆ. ಸಿದ್ದ­ರಾಮಯ್ಯನವರ ಸಂಪುಟ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನಾಲ್ಕು ಸಚಿವರ ಸ್ಥಾನಗಳನ್ನು ತುಂಬದೆ ಖಾಲಿ ಇಟ್ಟುಕೊಳ್ಳಲಾಗಿದೆ.ವಿವಿಧ ನಿಗಮ, ಮಂಡಳಿಗಳ ಅಧ್ಯ­ಕ್ಷರು, ಸದಸ್ಯರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ ಎನ್ನುವ ಸಂಗತಿಯನ್ನು ರಾಹುಲ್‌ ಗಮ­­­ನಕ್ಕೆ ಮುಖ್ಯಮಂತ್ರಿ ತಂದರೆಂದು ಮೂಲಗಳು ಹೇಳಿವೆ.ರಾಹುಲ್‌ ಗಾಂಧಿ ಅವರ ಜತೆ ಮಾತುಕತೆ ನಡೆಸಿದ ಸಮಯದಲ್ಲಿ ಮುಖ್ಯಮಂತ್ರಿ ಲೋಕಸಭೆ ಚುನಾವಣೆ ಕುರಿತು ಪ್ರಸ್ತಾಪಿಸಿದರು.

ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಂಬಂಧ ಡಿ.15 ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಹಿರಿಯ ನಾಯಕರು ಬೆಂಗಳೂರಿಗೆ ತೆರಳುವರು.ಹಾಲಿ ಲೋಕಸಭಾ ಸದಸ್ಯರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತ­ವಾಗಿದ್ದು, ಉಳಿದ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರನ್ನು ಅಂತಿಮ­ಗೊಳಿಸ­ಬೇಕಾಗಿದೆ. ಈಗಾಗಲೇ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ.ಮುಖ್ಯಮಂತ್ರಿ ನ.18ಕ್ಕೆ ರಾಹುಲ್‌ ಗಾಂಧಿ ಅವರ ಜತೆ ಸಂಪುಟ ವಿಸ್ತರಣೆ ಕುರಿತು ಸಮಾಲೋಚಿಸಿ­ದ್ದರು. ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ  ಡಾ.ಜಿ. ಪರಮೇಶ್ವರ್‌, ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಸೇರಿದಂತೆ ಅನೇಕರು ಸಂಪುಟ ಸೇರಲು ಉತ್ಸುಕರಾಗಿದ್ದಾರೆ.ರಾಜಕೀಯ ದುರುದ್ದೇಶದ ನಡವಳಿಕೆ: ರಾಜ್ಯದಲ್ಲಿ ತಮ್ಮ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ‘ಶಾದಿ  ಭಾಗ್ಯ’ ಕಾರ್ಯಕ್ರಮದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್‌.­ಯಡಿ­ಯೂರಪ್ಪ ನಡೆಸಿದ ಪ್ರತಿಭಟನೆ ರಾಜ­ಕೀಯ ದುರುದ್ದೇಶದಿಂದ ಕೂಡಿದ್ದು ಎಂದು ಮುಖ್ಯಮಂತ್ರಿ ಕಿಡಿ ಕಾರಿದರು.ಶಾದಿ ಭಾಗ್ಯ ಕೇವಲ ಮುಸ್ಲಿಂ ಅಲ್ಪ­ಸಂಖ್ಯಾತರಿಗೆ ಮಾತ್ರ ಎಂದು ಯಡಿ­ಯೂರಪ್ಪ ಅಪಪ್ರಚಾರ ಮಾಡಿದ್ದಾರೆ.  ಅಲ್ಪಸಂಖ್ಯಾತರು ಎಂದರೆ ಬರೀ ಮುಸ್ಲಿ­ಮರೇ? ಜೈನರು, ಬೌದ್ಧರು, ಪಾರ್ಸಿ­ಗಳು ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಇಲ್ಲವೆ ಎಂದು ಮುಖ್ಯಮಂತ್ರಿ ಪತ್ರಿಕಾ­ಗೋಷ್ಠಿಯಲ್ಲಿ ಪ್ರಶ್ನಿಸಿದರು.ಶಾದಿ ಭಾಗ್ಯ ಕಾರ್ಯಕ್ರಮ ಬಜೆಟ್‌­ನಲ್ಲೇ ಪ್ರಕಟಿಸಿದ್ದೆ. ಎಲ್ಲ ಅಲ್ಪಸಂಖ್ಯಾತ ಸಮುದಾಯಗಳ ಕಡು ಬಡತನದ ಹೆಣ್ಣುಮಕ್ಕಳ ಮದುವೆಗೆ ನೆರವು ನೀಡು­ವು­ದಾಗಿ ಹೇಳಿದ್ದೆ. ಆಗ ಯಡಿ­ಯೂರಪ್ಪ ಏಕೆ ಮೌನವಾಗಿದ್ದರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ಬಜೆಟ್‌ ಮಂಡನೆ ಮಾಡಿದ ಸಮಯದಲ್ಲೇ ರಾಜ್ಯದ ಹಣಕಾಸು ಪರಿಸ್ಥಿತಿ ನೋಡಿಕೊಂಡು ಬೇರೆ ಜಾತಿ ಮತ್ತು ಸಮುದಾಯಕ್ಕೂ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದ್ದೆ ಎಂದು ಸಿದ್ದರಾಮಯ್ಯ ವಿಧಾನಸಭೆ­ಯಲ್ಲಿ ಮಾಡಿರುವ ಬಜೆಟ್‌ ಭಾಷಣ­ವನ್ನು ನೆನಪು ಮಾಡಿದರು.ಶಾಲಾ ಮಕ್ಕಳ ಪ್ರವಾಸ ವಿಷಯ­ವನ್ನು ವಿವಾದ ಮಾಡಲಾಯಿತು. ಪರಿ­ಶಿಷ್ಟ ಜಾತಿ ಮತ್ತು ಪಂಗಡದ ಶಾಲಾ ಮಕ್ಕಳ ಪ್ರವಾಸಕ್ಕೆ ಕೇಂದ್ರ ಸರ್ಕಾರ ಹಣ ಕೊಡುತ್ತದೆ. ಈ ಯೋಜನೆ­ಯನ್ನು ಅವಕಾಶ ವಂಚಿತ ಹಿಂದುಳಿದ ಅಲ್ಪಸಂಖ್ಯಾತ ಮಕ್ಕಳಿಗೆ ವಿಸ್ತರಿಸ­ಲಾಗಿತ್ತು. ಅದನ್ನೇ ದೊಡ್ಡದು ಮಾಡ­ಲಾ­ಯಿತು ಎಂದು ಸಿದ್ದರಾಮಯ್ಯ ವಿಷಾದಿಸಿದರು.ಯಡಿಯೂರಪ್ಪ ಮತ್ತು ಬಿಜೆಪಿ ಬಡವರು, ದುರ್ಬ ಲರು, ಹಿಂದುಳಿದ­ವರು ಅಲ್ಪಸಂಖ್ಯಾತ ಸಮುದಾಯಗಳ ವಿರೋಧಿ. ಇಂಥವ ರಿಂದ ಸಾಮಾಜಿಕ ನ್ಯಾಯ ನಿರೀಕ್ಷಿಸಲು ಸಾಧ್ಯವೇ ಎಂದು ಸಿದ್ದರಾಮಯ್ಯ ಕೇಳಿದರು.

ಪ್ರತಿಕ್ರಿಯಿಸಿ (+)