ಭಾನುವಾರ, ಮೇ 9, 2021
19 °C

ಸಂಪುಟ ವಿಸ್ತರಣೆಯ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಸಭಾ ಚುನಾವಣೆಗೆ ಇನ್ನು ಕೇವಲ ಹತ್ತು ತಿಂಗಳು ಇರುವಂತೆಯೇ ಕಾಂಗ್ರೆಸ್ ಬಹುದೊಡ್ಡ ಸವಾಲು ಎದುರಿಸಲು ಸಜ್ಜಾಗುತ್ತಿರುವುದು ಸ್ಪಷ್ಟ ಗೋಚರ. ಎನ್‌ಡಿಎಯಲ್ಲಿ ಬಿರುಕು, ಬಿಜೆಪಿಯಲ್ಲಿ ತಲೆದೋರಿರುವ ಭಿನ್ನಮತದ ಲಾಭ ಪಡೆಯುವ ಹುನ್ನಾರದಲ್ಲಿರುವ ಕಾಂಗ್ರೆಸ್, ಪಕ್ಷವನ್ನೂ, ಸಂಪುಟವನ್ನೂ ಪುನರ್‌ರಚಿಸುವ ಮೂಲಕ ಬದಲಾವಣೆಯ ಗಾಳಿ ಬೀಸುವಂತೆ ಮಾಡುವ ಕಸರತ್ತುಗಳನ್ನು ಆರಂಭಿಸಿದೆ. ಮೂರನೇ ಬಾರಿಯೂ ಯುಪಿಎ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ಮನಮೋಹನ ಸಿಂಗ್ ಭವಿಷ್ಯ ನುಡಿದಿದ್ದಾರೆ. ಎಂಟು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಸಂಪುಟ ಪುನರ್‌ರಚನೆಯನ್ನು ಮಾಡಲಾಗಿದೆ.ಕ್ಯಾಬಿನೆಟ್ ದರ್ಜೆಗೆ ನಾಲ್ವರು, ರಾಜ್ಯ ಸಚಿವರಾಗಿ ನಾಲ್ವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಹುಶಃ ಇದು ಯುಪಿಎ-2 ಸರ್ಕಾರದ ಅತಿ ದೊಡ್ಡ ಪುನರ್‌ರಚನೆ. ಕೊನೆಯದು ಕೂಡ. ಚುನಾವಣೆ ನಡೆಯುವ ರಾಜ್ಯಗಳಿಗೆ ಪ್ರಾತಿನಿಧ್ಯ ನೀಡುವ ಮೂಲಕ ಓಲೈಕೆ ತಂತ್ರದ ಒಳಾರ್ಥಗಳನ್ನು ಒಳಗೊಂಡಿರುವ ಈ ಎಲ್ಲ ನಡೆಯೂ ಚುನಾವಣೆಯ ಮೇಲೆ ಕಣ್ಣಿಟ್ಟಿರುವುದನ್ನು ಗುರುತಿಸಬಹುದು. ರೈಲ್ವೆ ಸಚಿವ ಸಿ.ಪಿ.ಜೋಷಿ ಹಾಗೂ ಅಜಯ್ ಮಾಕನ್ ಅವರ ರಾಜೀನಾಮೆ ಹಾಗೂ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಿರುವುದು ಕೂಡ ರಾಜಕೀಯ ನಡೆ.ರಾಜಸ್ತಾನ ಹಾಗೂ ದೆಹಲಿ ವಿಧಾನಸಭಾ ಚುನಾವಣೆಗೆ ಅವರನ್ನು ನಿಯುಕ್ತಗೊಳಿಸಲಾಗಿದೆ. ದೆಹಲಿ, ರಾಜಸ್ತಾನ, ಛತ್ತೀಸಗಡ ಮತ್ತು ಮಧ್ಯಪ್ರದೇಶಗಳ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಂಡಿದೆ. ಕರ್ನಾಟಕದಿಂದ ಆಸ್ಕರ್ ಫರ್ನಾಂಡಿಸ್ ಅವರಿಗೆ ರಸ್ತೆ ಮತ್ತು ಹೆದ್ದಾರಿ ಖಾತೆ ನೀಡಲಾಗಿದೆ. ನಿರೀಕ್ಷೆಯಂತೆಯೇ ಮಲ್ಲಿಕಾರ್ಜುನ ಖರ್ಗೆ ಅವರ ಖಾತೆ ಬದಲಾಗಿ ಅವರು ರೈಲ್ವೆ ಸಚಿವರಾಗಿದ್ದಾರೆ.ಕರ್ನಾಟಕದಲ್ಲಿ ನಡೆದ ಇತ್ತೀಚಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾಣಿಕೆ ನೀಡಿದ್ದಾರೆ ಎನ್ನಲಾದ ಮಧುಸೂದನ ಮಿಸ್ತ್ರಿ ಅವರನ್ನು ಕಠಿಣ ಸ್ಪರ್ಧೆ ಇದೆ ಎಂದು ಭಾವಿಸಲಾಗಿರುವ ಉತ್ತರಪ್ರದೇಶದ ಉಸ್ತುವಾರಿಗಾಗಿ ಕಳುಹಿಸಲಾಗಿದೆ. ದಿಗ್ವಿಜಯ ಸಿಂಗ್ ಅವರಿಗೆ ಕರ್ನಾಟಕದ ಜೊತೆಗೆ ಆಂಧ್ರ ಪ್ರದೇಶದ ಉಸ್ತುವಾರಿ ನೀಡಲಾಗಿದೆ. ತೆಲಂಗಾಣ ಆಕ್ರೋಶದಿಂದ ಆಗಿರುವ ಹಾನಿ ತುಂಬಲು ದಿಗ್ವಿಜಯ್ ಸಮರ್ಥರಾಗುತ್ತಾರೆಯೇ ನೋಡಬೇಕು.
ಸಂಪುಟ ವಿಸ್ತರಣೆಗೆ ಮುನ್ನ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಪುನರ್‌ರಚಿಸಿರುವುದೂ ಕೂಡ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುವ ಕಾರ್ಯತಂತ್ರವಾಗಿಯೇ ಇದೆ. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುವ ಸಲುವಾಗಿ ಅವರ ನಾಯಕತ್ವಕ್ಕೆ ಪೂರಕವಾಗಿ ಕಾಂಗ್ರೆಸ್ ಸಮಿತಿಯಲ್ಲಿ ಯುವ ಮುಖಗಳಿಗೇ ಆದ್ಯತೆ ನೀಡಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.ಸಂಪುಟದಲ್ಲೂ ರಾಹುಲ್ ಬೆಂಬಲಿಗರಿಗೆ ಅವಕಾಶ ಸಿಕ್ಕಿದೆ. ಹೊಸ ಚಿಗುರು ಹಾಗೂ ಹಳೆ ಬೇರುಗಳ ಸಮ್ಮಿಶ್ರಣವನ್ನು ಈಗ ಪಕ್ಷದಲ್ಲೂ, ಸಂಪುಟದಲ್ಲೂ ಕಾಣಬಹುದು. ಆದರೆ ಚುನಾವಣೆ ಸನಿಹದಲ್ಲಿರುವಾಗ ನಡೆಯುವ ಇಂತಹ ಸಂಪುಟ ವಿಸ್ತರಣೆಯಿಂದ ಸರ್ಕಾರದ ಕಾರ್ಯದಕ್ಷತೆ ಹೆಚ್ಚುತ್ತದೆ ಎಂದು ನಿರೀಕ್ಷಿಸಲಾಗದು. ರಾಜ್ಯಗಳನ್ನು ಪ್ರತಿನಿಧಿಸುವ ಸಚಿವರು ಮತದಾರರ ಮೇಲೆ ಎಷ್ಟು ಪರಿಣಾಮ ಬೀರುತ್ತಾರೆ ಎಂದು ಹೇಳುವುದು ಕಷ್ಟ. ಈ ದೃಷ್ಟಿಯಲ್ಲಿ ವಿಶ್ಲೇಷಿಸಿದರೆ ಯುಪಿಎ-2 ಸರ್ಕಾರದ ಸಂಪುಟ ವಿಸ್ತರಣೆ ಅಷ್ಟೇನೂ ಮಹತ್ವವಿಲ್ಲದ ಒಂದು ಕಸರತ್ತಾಗಿಯೇ ಕಾಣುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.