ಭಾನುವಾರ, ಮೇ 9, 2021
26 °C

ಸಂಪುಟ ವಿಸ್ತರಣೆ ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ರಾಜ್ಯ ಸಚಿವ ಸಂಪುಟ ವಿಸ್ತರಣೆ ಅನಿವಾರ್ಯ. ಒಂದೊಮ್ಮೆ ಸಂಪುಟ ವಿಸ್ತರಣೆ ವಿಳಂಬವಾದರೆ ಮತ್ತು ವರಿಷ್ಠರು ಬಯಸಿದರೆ ಖಾತೆಗಳನ್ನು ಮರು ಹಂಚಿಕೆ ಮಾಡಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.ಬರ ಪರಿಹಾರ ಕಾಮಗಾರಿಗಳ ಪರಿಶೀಲನೆಗಾಗಿ ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದ್ದ ಅವರು, ಇಂಡಿ ತಾಲ್ಲೂಕು ಇಂಚಗೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.`ಸೋಮವಾರ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತೀನ್ ಗಡ್ಕರಿ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಯ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ಒಂದೆರಡು ದಿನಗಳಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ವರಿಷ್ಠರ ಸೂಚನೆಯ ನಂತರ ಸಂಪುಟ ವಿಸ್ತರಣೆ ನಡೆಯಲಿದೆ~ ಎಂದರು.`ರಾಜಕೀಯ ಪಕ್ಷಗಳಲ್ಲಿ ಗೊಂದಲಗಳಿರುವುದು ಸಹಜ. ಗೊಂದಲಗಳಿವೆ ಎಂಬ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆಯನ್ನು ಮುಂದೂಡುವುದಿಲ್ಲ. ಸುಸೂತ್ರ ಆಡಳಿತಕ್ಕೆ ಸಂಪುಟ ವಿಸ್ತರಣೆ ಅನಿವಾರ್ಯ. ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಭ್ರಷ್ಟಾಚಾರವನ್ನು ಸಂಪೂರ್ಣ ನಿರ್ಮೂಲನೆ ಮಾಡದಿದ್ದರೂ ಕಡಿವೆು ಮಾಡಲು ಶ್ರಮಿಸುತ್ತಿದ್ದೇನೆ~ ಎಂದು ಹೇಳಿದರು.`ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಕೇಂದ್ರ ಸ್ಥಾಪನೆಗೆ ನಮ್ಮ ಸಹಮತ ಇಲ್ಲ. ಮೇ 5ರಂದು ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳೆಲ್ಲ ಸಭೆ ಸೇರುತ್ತಿದ್ದೇವೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೇಂದ್ರ ಸರ್ಕಾರದ ಯತ್ನವನ್ನು ನಾವು ಒಟ್ಟಾಗಿ ವಿರೋಧಿಸುತ್ತೇವೆ~ ಎಂದರು.`ಕೊಯ್ನಾ ಜಲಾಶಯದಿಂದ ಕರ್ನಾಟಕಕ್ಕೆ ನೀರು ಬಿಡುವ ವಿಷಯದಲ್ಲಿ ಶಿವಸೇನೆಯ ಮುಖಂಡ ಭಾಳ್ ಠಾಕ್ರೆ ಅವರು ನೀಡಿರುವ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದನ್ನು ನಾನು ವಿವಾದವನ್ನಾಗಿಸಲೂ ಬಯಸುವುದಿಲ್ಲ. ಮಹಾರಾಷ್ಟ್ರ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ನಮಗೆ ನೀರು ಬಿಡಲು ಒಪ್ಪಿದೆ. ನಾವೂ ಹಣ ನೀಡುತ್ತಿದ್ದೇವೆ. ಇನ್ನು 2-3 ದಿನಗಳಲ್ಲಿ ನೀರು ಬಿಡುಗಡೆಯಾಗಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.`ನಾವು ನೀರಿನ ಕೊರತೆ ಎದುರಿಸುತ್ತಿದ್ದೇವೆ. ಆಂಧ್ರ ಪ್ರದೇಶಕ್ಕೆ ಎಷ್ಟು ನೀರು ಬಿಡಬೇಕಿತ್ತೋ ಅಷ್ಟೆಲ್ಲವನ್ನೂ ಬಿಟ್ಟು ಆಗಿದೆ. ನಾರಾಯಣಪೂರ ಜಲಾಶಯದಿಂದ 5 ಟಿಎಂಸಿ ಅಡಿ ನೀರು ಬಿಡಬೇಕು ಎಂಬ ಆಂಧ್ರದ ಬೇಡಿಕೆಯನ್ನು ಮಾನ್ಯ ಮಾಡುವುದಿಲ್ಲ~ ಎಂದು ಮುಖ್ಯಮಂತ್ರಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.