ಶುಕ್ರವಾರ, ಮೇ 27, 2022
23 °C

ಸಂಪುಟ ವಿಸ್ತರಣೆ: ಅಪ್ಪಚ್ಚುರಂಜನ್ ತಂಡದಿಂದ ಗಡ್ಕರಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬೇಡಿಕೆಯನ್ನು ಮುಂದಿಟ್ಟು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒಂದು ಬಣ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಮೇಲೆ ಒತ್ತಡ ಹೇರುತ್ತಿದೆ. ಮತ್ತೊಂದು ಕಡೆ ಸಚಿವ ಸಂಪುಟವನ್ನು ಕೂಡಲೇ ವಿಸ್ತರಿಸಬೇಕು ಎಂದು ಹಲವು ಶಾಸಕರು ಪದೇ ಪದೇ ಆಗ್ರಹಿಸತೊಡಗಿದ್ದಾರೆ.ಸಮಾನಮನಸ್ಕರು ಎಂದು ಹೇಳಿಕೊಳ್ಳುವ ಶಾಸಕ ಸಿ.ಟಿ.ರವಿ, ಅಪ್ಪಚ್ಚು ರಂಜನ್ ಸೇರಿದಂತೆ ಇತರರು ಬುಧವಾರ ನಾಗಪುರಕ್ಕೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.ಈ ಕುರಿತು ಗುರುವಾರ ಸುದ್ದಿಗಾರರಿಗೆ ವಿವರ ನೀಡಿದ ಅಪ್ಪಚ್ಚು ರಂಜನ್, `20 ಪ್ರಮುಖ ಖಾತೆಗಳು ಮುಖ್ಯಮಂತ್ರಿಗಳ ಬಳಿ ಇವೆ. ಸಂಪುಟ ವಿಸ್ತರಣೆ ಪ್ರಯತ್ನಗಳು ಕೈಗೂಡುತ್ತಿಲ್ಲ. ಇದರಿಂದ ಅರ್ಹ ಶಾಸಕರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. 15 ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯವೇ ಇಲ್ಲ.ಈ ಎಲ್ಲ ಕಾರಣಗಳಿಂದ ಸಂಪುಟ ವಿಸ್ತರಣೆ ತುರ್ತಾಗಿ ಆಗಬೇಕಾಗಿದೆ ಎಂದು ಮನದಟ್ಟು ಮಾಡಿದ್ದೇವೆ~ ಎಂದರು. ಸಂಪುಟ ವಿಸ್ತರಣೆಗೆ ಒಪ್ಪಿಗೆ ಸೂಚಿಸಿರುವ 76 ಮಂದಿ ಶಾಸಕರ ಸಹಿ ಇರುವ ಪತ್ರವನ್ನೂ ಈ ಸಂದರ್ಭದಲ್ಲಿ ನೀಡಲಾಗಿದೆ. ಗಡ್ಕರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಗನ ಮದುವೆ ತಯಾರಿಯಲ್ಲಿ ಇದ್ದರೂ ತಮ್ಮ ಜತೆ 45 ನಿಮಿಷ ಮಾತನಾಡಿ, ರಾಜ್ಯ ರಾಜಕಾರಣದ ಬಗ್ಗೆ  ಮಾಹಿತಿ ಪಡೆದರು ಎಂದು ಹೇಳಿದರು.ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಶಾಸಕರು ಒತ್ತಾಯಿಸುತ್ತಿರುವುದರಲ್ಲಿ ತಪ್ಪೇನೂ ಇಲ್ಲ. ಆ ಬಗ್ಗೆ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಆದರೆ ಮೂರು ದಿನಕ್ಕೊಮ್ಮೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗದು ಎಂದು ಸಿ.ಟಿ.ರವಿ ಹೇಳಿದರು.ನಾಯಕತ್ವ ಬದಲಾವಣೆ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇರುವುದು ಪಕ್ಷದ ಸಂಸದೀಯ ಮಂಡಳಿಗೆ. ಮಂಡಳಿ ಈ ಸಂಬಂಧ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು. ನಾಯಕತ್ವದಲ್ಲಿ ವಿಶ್ವಾಸ ಇಲ್ಲದವರು `ಅಧಿಕಾರ~ ಅನುಭವಿಸುವುದು ಎಷ್ಟರಮಟ್ಟಿಗೆ ಸರಿ ಎಂದೂ ಪ್ರಶ್ನಿಸಿದರು. ಶಾಸಕರಾದ ಎಸ್.ಕೆ.ಬೆಳ್ಳುಬ್ಬಿ, ಸೊಗಡು ಶಿವಣ್ಣ ಕೂಡ ಗಡ್ಕರಿ ಭೇಟಿಗಾಗಿ ನಾಗಪುರಕ್ಕೆ ತೆರಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.