ಮಂಗಳವಾರ, ಏಪ್ರಿಲ್ 20, 2021
32 °C

ಸಂಪೂರ್ಣ ನಿಷೇಧಕ್ಕೆ ಸುಪ್ರೀಂಕೋರ್ಟ್‌ಗೆ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಂಕಾರು(ಉಪ್ಪಿನಂಗಡಿ): ಮಹಾಮಾರಿ ಎಂಡೋಸಲ್ಫಾನ್ ನಿಷೇಧ ಆದರೆ ಸಾಲದು. ಅದರ ತಯಾರಿಕೆ ನಿಲ್ಲಬೇಕು. ದೇಶದೆಲ್ಲೆಡೆ ಒಂದು ತಿಂಗಳ ಅವಧಿಯಲ್ಲಿ ಅದನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು. ಇಲ್ಲದಿದ್ದರೆ  ಸುಪ್ರಿಂಕೋರ್ಟ್ ಮೊರೆ ಹೋಗಲಾಗು ವುದು ಎಂದು ಉಡುಪಿ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್ ಹೇಳಿದರು.ಆಲಂಕಾರಿನಲ್ಲಿ ಎಂಡೋಸಲ್ಫಾನ್ ದುಷ್ಪರಿಣಾ ಮದಿಂದಾಗಿ ನಾನಾ ಕಾಯಿಲೆಗೆ ಒಳಗಾಗಿರುವ ಸಂತ್ರಸ್ತರನ್ನು ಮತ್ತು ಅವರ ಕುಟುಂಬದವರನ್ನು ಭೇಟಿ ಮಾಡಿದ ಬಳಿಕ ಹೋರಾಟ ಸಮಿತಿ ಭಾನುವಾರ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.ಎಂಡೋಸಲ್ಫಾನ್ ಸಿಂಪರಣೆ ಆಗಿರುವ ಪ್ರತಿಯೊಂದು ಗ್ರಾಮಗಳಲ್ಲಿ ಸರ್ಕಾರದ ವತಿಯಿಂದ ಸಮಗ್ರ ಸಮೀಕ್ಷೆ ನಡೆಯಬೇಕು. ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕು ಮತ್ತು ಸಂತ್ರಸ್ತರ ಮನೆ ಬಾಗಿಲಿಗೆ ಅಂಬುಲೆನ್ಸ್ ಸೌಲಭ್ಯ ಕಲ್ಪಿಸಿ, ಆರೋಗ್ಯ ತಪಾಸಣೆ, ಔಷಧಿ ಕೊಡಿಸುವ ವ್ಯವಸ್ಥೆ ಆಗಬೇಕು ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಇದರ ಸಲುವಾಗಿ ಹೋರಾಟವನ್ನು ತೀವ್ರಗೊಳಿಸಬೇಕು ಎಂದರು. ಈಗಾಗಲೇ ಸಂತ್ರಸ್ತರಾದವರ ಮನೆಗಳಲ್ಲಿ ರೋಗಿಯನ್ನು ನೋಡಿಕೊಳ್ಳಲು ಆಗದ ಪರಿಸ್ಥಿತಿ ಇದೆ. ಮುಂದೆ ಸಮಸ್ಯೆ ಇನ್ನಷ್ಟು ಜಟಿಲ ಆಗಲಿದೆ. ಆದ ಕಾರಣ ಸರ್ಕಾರದ ವತಿಯಿಂದ ಪ್ರತಿ ಕುಟುಂಬದ ಸದಸ್ಯರ ವಂಶವಾಹಿ ತಪಾಸಣೆ ಮಾಡಬೇಕು ಈ ಮೂಲಕ ಇದು ಮುಂದಿನ ಪೀಳಿಗೆಗೆ ಪುನರಾರ್ವತನೆ ಆಗದಿರುವಂತೆಯೂ ಅಗತ್ಯ ಕ್ರಮ ಅನುಸರಿಸು ವಂತಾಗಬೇಕು ಎಂದು ಅವರು ಆಗ್ರಹಿಸಿದರು.ಆಲಂಕಾರು ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ಕೊಕ್ಕಡ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ, ಪುತ್ತೂರು ಬಳಕೆದಾರರ ವೇದಿಕೆ ಕಾರ್ಯಕರ್ತ ಸಂಜೀವ ಗೌಡ, ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಗೌಡ, ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಾರತ್ನ ವಸಂತ, ಆಲಂಕಾರು ಹೋರಾಟ ಸಮಿತಿ ಕಾರ್ಯದರ್ಶಿ ಜಯಕರ ಪೂಜಾರಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.