ಮಂಗಳವಾರ, ಮೇ 17, 2022
24 °C

ಸಂಪೂರ್ಣ ಸಮಾನತೆ ಕಷ್ಟ

ಮಾಲತಿ ಭಟ್ Updated:

ಅಕ್ಷರ ಗಾತ್ರ : | |

ಮೈಸೂರು ಮೂಲದ ಸದ್ಗುರು ಜಗ್ಗಿ ವಾಸುದೇವ `ನ್ಯೂಏಜ್~ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರು. ಇಶಾ ಪ್ರತಿಷ್ಠಾನದ ಮೂಲಕ ಯೋಗ, ಧ್ಯಾನ ಹೇಳಿಕೊಡುತ್ತಿರುವ ಸದ್ಗುರು ಜಗತ್ತಿನೆಲ್ಲೆಡೆ ಶಿಷ್ಯರನ್ನು ಹೊಂದಿದ್ದಾರೆ. ಕೊಯಮತ್ತೂರು ಬಳಿ ಇಶಾ ಯೋಗ ಕೇಂದ್ರ ಸ್ಥಾಪಿಸಿದ್ದಾರೆ. `ಇನ್ನರ್ ಎಂಜಿನಿಯರಿಂಗ್~ ಕೋರ್ಸ್ ಮೂಲಕ ಆಧ್ಯಾತ್ಮಿಕ ಪಥದಲ್ಲಿ ನಡೆಯಬಯಸುವವರಿಗೆ ಮಾರ್ಗದರ್ಶನ ನೀಡುತ್ತಾರೆ. ಅಧ್ಯಾತ್ಮಿಕ ಅರಿವು ಮೂಡಿಸುವ ಹಲವು ಪುಸ್ತಕಗಳನ್ನು ಬರೆದಿದ್ದಾರೆ.ಸದ್ಗುರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಾಗ `ಮೆಟ್ರೊ~ದೊಂದಿಗೆ ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ.ವಿದೇಶಿ ಬ್ಯಾಂಕ್‌ಗಳಲ್ಲಿ ಕೊಳೆಯುತ್ತಿರುವ ಕಪ್ಪುಹಣ ವಾಪಸು ತರುವಂತೆ ಅಣ್ಣಾ ಹಜಾರೆ ಮಾದರಿಯಲ್ಲಿ ಬಾಬಾ ರಾಮದೇವ್ ಹೋರಾಟ ಮಾಡಿದ್ದು ಗಿಮಿಕ್ ಅಲ್ಲವೇ?ಅದನ್ನು ಗಿಮಿಕ್ ಎಂದು ಏಕೆ ಕರೆಯಬೇಕು. ಅದರ ಹಿಂದಿನ ಉದ್ದೇಶ ಉದಾತ್ತವಾಗಿತ್ತು. ಆದರೆ, ರಾಜಕೀಯ ಅನುಭವದ ಕೊರತೆಯಿಂದ ರಾಮದೇವ್ ಚಳವಳಿ ವಿಫಲವಾಯಿತು.ರಾಮದೇವ್ ದೇಶದ ಪ್ರತಿ ಜಿಲ್ಲೆಯಲ್ಲೂ ತಿರುಗಾಡಿದ್ದಾರೆ. ಅಲ್ಲಿನ ಸಮಸ್ಯೆಗಳನ್ನು ನೋಡಿದ್ದಾರೆ. ಬರೀ ಯೋಗ ಶಿಬಿರ, ಧ್ಯಾನ ಶಿಬಿರ ಮಾಡಿಕೊಂಡು ಇದ್ದರೆ ಈ ಕಾಲಕ್ಕೆ ಪ್ರಸ್ತುತವಾಗುವುದಿಲ್ಲ.ಸನ್ಯಾಸಿಗಳು, ಯೋಗ ಗುರುಗಳು ಎಲ್ಲರೂ ಈ ದೇಶದ ಪ್ರಜೆಗಳಲ್ಲವೇ? ದೇಶದ ಸಮಸ್ಯೆ ಅವರನ್ನು ಬಾಧಿಸುವುದಿಲ್ಲವೇ? ಹೋರಾಟ ಮಾಡಿದಲ್ಲಿ ತಪ್ಪೇನು? ಬಾಬಾ ಹೇಳುವಂತೆ ದೇಶದ ಅರ್ಧಹಣ ವಿದೇಶಿ ಬ್ಯಾಂಕ್‌ಗಳಲ್ಲಿ ಅಡಗಿದೆ.ಆ ಹಣ ವಾಪಸು ತಂದರೆ ಬಡತನ, ಅನಕ್ಷರತೆ ಸೇರಿದಂತೆ ಇಲ್ಲಿನ ಎಷ್ಟೋ ಸಮಸ್ಯೆ ಹೋಗಲಾಡಿಸಲು ಅದನ್ನು ಬಳಸಬಹುದಲ್ಲ?ಅಣ್ಣಾ ಹಜಾರೆ ಚಳವಳಿಯನ್ನು ಅತ್ಯುತ್ತಮವಾಗಿ ನಿರ್ವಹಿಸಲಾಯಿತು. ಅವರ ಬೆನ್ನಿಗೆ ನಿಂತ ಜನ ಸರ್ಕಾರವನ್ನು ನಿಭಾಯಿಸಿದರು. ಕಾರ್ಪೋರೇಟ್ ವಲಯವನ್ನು ನಿಭಾಯಿಸಿದರು,ಜನರನ್ನು, ಹಣವನ್ನು ಎಲ್ಲವನ್ನೂ ನಿಭಾಯಿಸಿದರು.ರಾಮದೇವ್‌ಗೆ ಸರಿಯಾಗಿ ಸಲಹೆ ನೀಡುವವರು ಇರಲಿಲ್ಲ.ರಾಮದೇವ್ ಚಳವಳಿಯನ್ನು ಖಂಡಿಸುವವರು, ಆ ಚಳವಳಿಯನ್ನು ದೆಹಲಿ ಪೊಲೀಸರು ಹತ್ತಿಕ್ಕಿದ ಪರಿಯನ್ನು ಖಂಡಿಸುತ್ತಿಲ್ಲ. ಮಧ್ಯರಾತ್ರಿ ರಾಮಲೀಲಾ ಮೈದಾನಕ್ಕೆ ನುಗ್ಗಿ ಮಹಿಳೆಯರು, ಮಕ್ಕಳು ಮಲಗಿದ್ದಾಗ ಪೊಲೀಸರು ದೌರ್ಜನ್ಯ ನಡೆಸಿದರು.

 

ಮುಚ್ಚಿದ ಆವರಣದೊಳಗೆ ಅಶ್ರುವಾಯು ಸಿಡಿಸುವಂತಿಲ್ಲ ಎಂಬ ನಿಯಮಾವಳಿಯನ್ನು ಉಲ್ಲಂಘಿಸಿದರು.ನಿತ್ಯಾನಂದ ಅವರಂತಹ ಸನ್ಯಾಸಿಗಳ ಬಗ್ಗೆ ಏನು ಹೇಳುವಿರಿ?

ಅಂತವಹರು `ಸನ್ಯಾಸ~ವನ್ನು ಅಸಹ್ಯ ಗೊಳಿಸುತ್ತಿದ್ದಾರೆ. ಆ ಬಗ್ಗೆ ಮಾತನಾಡುವುದಿಲ್ಲ.ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯಲು ಸನ್ಯಾಸ ಅಗತ್ಯವೇ?

ಅಧ್ಯಾತ್ಮ ಒಳಗಿನ ಜಗತ್ತಿಗೆ ಸಂಬಂಧಿಸಿದ್ದು. ಸನ್ಯಾಸ, ಸಂಸಾರ ಇವೆಲ್ಲ ಹೊರಗಿನ ಜಗತ್ತಿಗೆ ಸಂಬಂಧಿಸಿದ್ದು.ನೀವು ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕನಾಮಿಕ್ ಫೋರಂ) ಸಭೆಗಳಲ್ಲಿ ಭಾಗವಹಿಸಿದ್ದೀರಿ. ಇಲ್ಲಿ ಒಂದೆಡೆ ಅತಿ ಬಡತನ ಇದೆ. ಉದಾರೀಕರಣದಿಂದ ಒಂದು ವರ್ಗ ಕಣ್ಣುಕುಕ್ಕುವಷ್ಟು ಸಿರಿವಂತಿಕೆ ಪಡೆದಿದೆ. ನಿಮ್ಮ ಅಭಿಪ್ರಾಯ?ಉದಾರೀಕರಣದ ಗೇಟು ತೆರೆದಾಗ ಸಾಮರ್ಥ್ಯ ಇದ್ದವರು ಮುಂದೆ ನುಗ್ಗಿದರು. ಬಹಳಷ್ಟು ಮಂದಿ ಹಿಂದೆ ಉಳಿದಿದ್ದಾರೆ. ಯಾವಾಗಲೂ ಹೀಗೆಯೇ ಆಗುವುದು. ಸಾಮರ್ಥ್ಯ ಇದ್ದವನು ಬೇಗ ಮೇಲಕ್ಕೆ ಏರುತ್ತಾನೆ. ಅದನ್ನು ತಡೆಯಲು ಆಗದು.ಸಂಪೂರ್ಣ ಸಮಾನತೆ ಸಾಧಿಸಲು ಸಾಧ್ಯವಿಲ್ಲ. ಆದರೆ, ನಾವು ಸರ್ವರಿಗೂ ಸಮಾನ ಅವಕಾಶ ಕಲ್ಪಿಸಬೇಕು. ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ಎಲ್ಲರಿಗೂ ಒಂದೇ ರೀತಿಯ ಅನುಕೂಲ ಕಲ್ಪಿಸಬೇಕು. ಭಾರತದಲ್ಲಿ ಅದು ಆಗಿಲ್ಲ. ಬೆಂಗಳೂರಿನಲ್ಲಿ ನಿಮಗೆ ಯಾವುದೋ ಕೆಲಸ ಆಗಬೇಕು ಅಂದಿದ್ದಾಗ ಶಾಸಕ ಗೊತ್ತಿರಬೇಕು, ಇಲ್ಲವೇ ಶಾಸಕನ ಸಂಬಂಧಿಯ ಪರಿಚಯ ಇರಬೇಕು. ಹೀಗಾದಾಗ ಸಮಾನ ಅವಕಾಶ ಎಲ್ಲಿರುತ್ತದೆ?ಜಾತಿ ಪದ್ಧತಿಯ ಭೂತ ಸಹ ಭಾರತವನ್ನು ಕಾಡುತ್ತಿದೆಯಲ್ಲವೇ? ಈ ಭೂತ ಓಡಿಸುವುದು ಹೇಗೆ?

ಸಾವಿರ ವರ್ಷಗಳ  ಹಿಂದೆ ಜಾತಿ ಎಂಬುದು ಜ್ಞಾನವನ್ನು ಕಲಿಸುವ, ವರ್ಗಾಯಿಸುವ ಅತ್ಯುತ್ತಮ ವ್ಯವಸ್ಥೆಯಾಗಿತ್ತು. ನಿಮ್ಮ ಅಮ್ಮನೋ, ಅಪ್ಪನೋ ಬಡಗಿಯಾಗಿದ್ದರೆ, ಕಮ್ಮಾರನಾಗಿದ್ದರೆ, ಕ್ಷೌರಿಕನಾಗಿದ್ದರೆ ಆ ವೃತ್ತಿಯ ಜ್ಞಾನ ನಿಮಗೆ ವರ್ಗಾವಣೆಯಾಗುತ್ತಿತ್ತು. 

ವಿದ್ಯೆ, ಜ್ಞಾನವನ್ನು ಗಟ್ಟಿಗೊಳಿಸಲು ಅದೇ ವೃತ್ತಿಯವರನ್ನು ಮದುವೆಯಾಗುವ ವ್ಯವಸ್ಥೆಯೂ ಇತ್ತು. ನಾಗರಿಕತೆಯ ಯಾವುದೋ ಹಂತದಲ್ಲಿ ನಿನಗಿಂತ ನಾನು ಮೇಲೆ ಎಂಬ ಭಾವ ಮೊಳೆಯುತ್ತ ಬಂತು. ಗಟ್ಟಿಯಾಗುತ್ತ ಬಂತು.

 

ಇದು ಭಯಾನಕ ಭೇದಭಾವಕ್ಕೆ ನಾಂದಿಯಾಯಿತು.ಈಗ ವೈದ್ಯರ ಮಗ ಎಂಜಿನಿಯರ್ ಆಗಬಹುದು. ಶಿಕ್ಷಕನ ಮಗ ವೈದ್ಯನಾಗಬಹುದು.

 

ಆಧುನಿಕ ಶಿಕ್ಷಣ ವ್ಯವಸ್ಥೆ ಬಂದ ಮೇಲೆ ಇದೆಲ್ಲ ಅಳಿಯಬೇಕಿತ್ತು. ಸಮಾಜದ ಒಂದು ವ್ಯವಸ್ಥೆ (ಶಿಕ್ಷಣ) ಬದಲಾದ ಮೇಲೆ ಇನ್ನೊಂದು ವ್ಯವಸ್ಥೆ (ಜಾತಿ) ಬದಲಾಗಬೇಕಿತ್ತು. ಒಂದೆರಡು ಪೀಳಿಗೆಯ ನಂತರ ಇದು ಬದಲಾಗಬಹುದು.ಇತ್ತೀಚೆಗೆ ಪುನರ್ಜನ್ಮ ಚಿಕಿತ್ಸೆ ನೀಡುವವರ ಹಾವಳಿ ಹೆಚ್ಚುತ್ತಿದೆಯಲ್ಲ?

ನಾನು ವರ್ತಮಾನ ಮತ್ತು ಭವಿಷ್ಯದ ಕುರಿತು ಮಾತ್ರ ಮಾತನಾಡುತ್ತೇನೆ. ಅವರು ಮಾಡುತ್ತಿರುವುದು ಸೈಕೊ ಅನಾಲಿಸಿಸ್. ಸಮ್ಮೊಹನದ ಮೂಲಕ ನಿಮ್ಮ ಮನಸ್ಸಿನಲ್ಲಿ ಏನನ್ನಾದರೂ ಬಿತ್ತಬಹುದು.ಕರ್ಮ ಸಿದ್ಧಾಂತದ ಬಗ್ಗೆ ನಿಮ್ಮ ಅಭಿಮತ?

ಇದು ಜಗತ್ತಿನ ಅತ್ಯುತ್ತಮ ಫಿಲಾಸಫಿ. ಕರ್ಮ ಅಂದರೆ ಕ್ರಿಯೆ. ನಿನ್ನ ಕ್ರಿಯೆಯ ಮೂಲಕ ನಿನ್ನನ್ನು ನೀನು ರೂಪಿಸಿಕೊಳ್ಳುವೆ ಎಂದು ಈ ಸಿದ್ಧಾಂತ ಹೇಳುತ್ತದೆ.ಅಂದರೆ, ಈಗ ನೀವು ತಪ್ಪಿದ್ದರೂ ಕ್ರಿಯೆಯ ಮೂಲಕ ಮುಂದೆ ಅದನ್ನು ಸರಿಪಡಿಸಿಕೊಳ್ಳಬಹುದು. ಜಗತ್ತಿನ ಉಳಿದೆಲ್ಲ ಫಿಲಾಸಫಿಗಳು ದೇವರು ನಿನ್ನನ್ನು ಸೃಷ್ಟಿಸಿದ್ದಾನೆ ಎನ್ನುತ್ತವೆ. ದೇವರ ಸೃಷ್ಟಿಯಲ್ಲಿ ನಿನಗೇನು ಕೆಲಸ..?ಇಶಾದ `ಶೂನ್ಯ~, `ಭಾವ ಸ್ಪಂದನ~ ಮತ್ತು `ಸಮ್ಯಮ್~ ಧ್ಯಾನದ ಬಗ್ಗೆ ಹೇಳಿ.

ಶೂನ್ಯ ಅಂದರೆ ನಿರ್ವಾತ. ಏನೂ ಇಲ್ಲದಿರುವುದು. ಅದು ಸೃಷ್ಟಿಯ ಮೂಲ.

 

ಶೂನ್ಯ ಧ್ಯಾನದ ಮೂಲಕ ನಿಮ್ಮ ಸೃಷ್ಟಿಮೂಲವನ್ನು ಮುಟ್ಟಬಹುದು. ಅದರ ಅರಿವಾದಾಗ ನಿಮ್ಮ ಬುದ್ಧಿ, ಪ್ರಜ್ಞೆ ಮಾಂತ್ರಿಕ ರೀತಿಯಲ್ಲಿ ವಿಕಸಿಸುತ್ತದೆ.ಬುದ್ಧಿ, ದೇಹ, ಭಾವನೆ ಮತ್ತು ಶಕ್ತಿಯ ಸಂಗಮ ನೀವಾಗಿದ್ದೀರಿ. ಯಾರೋ ದುಃಖಿತರಾಗಿದ್ದಾರೆ ಅಂದಾಗ ಅವರಲ್ಲಿ ಋಣಾತ್ಮಕ ಭಾವನೆ ಹೆಪ್ಪುಗಟ್ಟಿರುತ್ತದೆ.`ಭಾವ ಸ್ಪಂದನ~ ಧ್ಯಾನದ ಮೂಲಕ ಈ ಋಣಾತ್ಮಕ ಭಾವನೆ ಹೋಗಲಾಡಿಸಿ ಧನಾತ್ಮಕ ಭಾವನೆ ನಿಮ್ಮಲ್ಲಿ ಚಿಮ್ಮಿಸಲಾಗುವುದು. ದುಃಖದಿಂದ ಅಳುವ ಬದಲು ನೀವು ಖುಷಿ, ಸಂತಸದಿಂದ ಆನಂದಭಾಷ್ಪ ಸುರಿಸುತ್ತೀರಿ.`ಸಮ್ಯಮ್~ ಮೂಲಕ ನಿಮ್ಮ ಆಳ, ಅತಿ ಆಳ, ನಿಮ್ಮದೇ ಆಯಾಮಗಳು ನಿಮಗೆ ತಿಳಿಯುವಂತೆ ಅರಿವು ಮೂಡಿಸಬಹುದು. 

 

ಅಧ್ಯಾತ್ಮಿಕವಾಗಿ ಒಂದು ಹಂತ ತಲುಪಿದ ವ್ಯಕ್ತಿಗಳಿಗೆ ಮಾತ್ರ `ಭಾವ ಸ್ಪಂದನ~ ಮತ್ತು `ಸಮ್ಯಮ್~ ಧ್ಯಾನ ಹೇಳಿಕೊಡಲಾಗುವುದು.ಇಶಾದ ಆರಂಭಿಕ ಹಂತದ ಧ್ಯಾನ ತರಗತಿಗಳಿಗೆ ಮಾತ್ರ ಶುಲ್ಕವಿದೆ. ಶುಲ್ಕ ಇಡದಿದ್ದಲ್ಲಿ ಜನ ಧ್ಯಾನವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಶೂನ್ಯ ಧ್ಯಾನದ ಮೂಲಕ ನೀವು ನಿರ್ವಾತದಿಂದ ಬ್ರಹ್ಮಾಂಡ (ಯುನಿವರ್ಸ್)ಸೃಷ್ಟಿಯಾಗಿದೆ ಎಂಬ ಭೌತಶಾಸ್ತ್ರದ ಸಿದ್ಧಾಂತ ಹೇಳಿದಂತಾಗಲಿಲ್ಲವೇ?

ಆಧುನಿಕ ಭೌತಶಾಸ್ತ್ರ ಭೌತವಲ್ಲದ್ದನ್ನು ಭೌತದ ಮೂಲಕ ತಿಳಿಯಲು ಯತ್ನಿಸುತ್ತಿದೆ. ಅದು ಭೌತಶಾಸ್ತ್ರದ ಅರಿವಿಗೆ ನಿಲುಕದ್ದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.