ಬುಧವಾರ, ಜನವರಿ 29, 2020
26 °C

ಸಂಪ್ರದಾಯದ ಸಾರ ಇಲ್ಲಿದೆ

–ಉಮಾ ಅನಂತ್‌ Updated:

ಅಕ್ಷರ ಗಾತ್ರ : | |

ಸಾಂಪ್ರದಾಯಿಕ ಹಾಡುಗಳು, ಹಾಡುಗಾರರು ಅಳಿವಿನಂಚಿಗೆ ಸಾಗುತ್ತಿದ್ದಾರೆ  ಎಂಬ ಆತಂಕದ ಮಧ್ಯೆ, ಈ ಮಾತನ್ನು ಸುಳ್ಳಾಗಿಸಿ ಸಾಂಪ್ರದಾಯಿಕ ಹಾಡುಗಳನ್ನು ಜತನವಾಗಿ ಉಳಿಸಿಕೊಂಡು ಬಂದಿರುವ ಹಾಡುಗಾರ್ತಿ ಮಂಜುಳಾ ಶಿವಾನಂದ.ಮದುವೆಗೊಂದು ಹಾಡು, ಎಣ್ಣೆ ಹಾಕುವ ಶಾಸ್ತ್ರಕ್ಕೆ ಒಂದು ಹಾಡು, ಮಾಂಗಲ್ಯಧಾರಣೆ, ದಿಬ್ಬಣಕ್ಕೆ ಒಂದು ಹಾಡು, ಹಸೆ ಮಣೆ ಏರುವಾಗ, ಆರತಿ ಎತ್ತುವಾಗ, ಹೆಣ್ಣನ್ನು ಕಳಿಸಿಕೊಡುವಾಗ... ಹೀಗೆ ಹಿಂದೆಲ್ಲ ಆಯಾ ಸಂದರ್ಭಕ್ಕೆ ತಕ್ಕಂತೆ ಹಾಡುತ್ತಿದ್ದ ಹಾಡುಗಳು ಸಂಪ್ರದಾಯದ ಸಾರವನ್ನು ಸಾರುತ್ತಿದ್ದವು. ಈ ಎಲ್ಲ ಹಾಡುಗಳು ಮುಂದಿನ ಪೀಳಿಗೆಗೂ ಉಳಿಯಬೇಕು ಎಂಬ ಸದುದ್ದೇಶದಿಂದ ಇದರ ಸಂಗ್ರಹರೂಪವಾದ ಸಿ.ಡಿ.ಯನ್ನು ಮಂಜುಳಾ ಇದೀಗ ಹೊರತಂದಿದ್ದಾರೆ.ಹಿಂದೆಲ್ಲ ಗರತಿಯ ಹಾಡುಗಳನ್ನು ಸಂಪ್ರದಾಯಸ್ಥ ಮಹಿಳೆಯರು ಒಂದು ರೀತಿಯ ಜನಪದ ಶೈಲಿಯಲ್ಲಿ ಹಾಡುತ್ತಿದ್ದರು. ಆದರೆ ಮದುವೆಯ ಸಾಂಪ್ರದಾಯಿಕ ಹಾಡುಗಳನ್ನು ತಾಳ, ರಾಗ ಸಹಿತ ಕ್ರಮಬದ್ಧವಾಗಿ, ಕೊಂಚ ಶಾಸ್ತ್ರೀಯತೆಯ ಚೌಕಟ್ಟಿನೊಳಗೆ ಹಾಡಿರುವುದು ಈ ಸಿ.ಡಿ.ಯ ವಿಶೇಷ. ಕರ್ನಾಟಕ ಸಂಗೀತ ಶೈಲಿಯಲ್ಲಿರುವ ಈ ರಸವತ್ತಾದ ಹಾಡುಗಳಿಗೆ ನೀಡಿರುವ ಕೀಬೋರ್ಡ್, ಪಿಟೀಲು, ಮೃದಂಗ ಮತ್ತು ರಿದಂ ಪಕ್ಕವಾದ್ಯಗಳು ಮದುವೆ ಹಾಡುಗಳ ಸಾಂಪ್ರದಾಯಿಕ ಸೊಗಡನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿವೆ.ಪ್ರೇರಣೆ ಏನು?

`ಸುಮಾರು 20 ವರ್ಷಗಳಷ್ಟು ಹಿಂದಿನ ಮಾತು. ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ಜಯಶ್ರೀ ಮಹಿಳಾ ಮಂಡಳಿಯ ಮಹಿಳೆಯರು ಸೇರಿ ಆಕಾಶವಾಣಿ, ದೂರದರ್ಶನ, ದೇವಸ್ಥಾನಗಳು, ಮದುವೆ ಸಮಾರಂಭಗಳಲ್ಲಿ ಸಾಂಪ್ರದಾಯಿಕ  ಹಾಡುಗಳನ್ನು ಹಾಡುತ್ತಿದ್ದೆವು. ದೂರದರ್ಶನಕ್ಕಾಗಿ ಒಂದಷ್ಟು ಸಾಂಪ್ರದಾಯಿಕ ಹಾಡುಗಳನ್ನು ಕಲೆ ಹಾಕಿದೆವು.ಇದರಲ್ಲಿ ಜನಪದ ಸಾಹಿತ್ಯದಿಂದ ಸಂಗ್ರಹ ಮಾಡಿದ್ದ ಹಾಡುಗಳು, ವಾಗೀಶ್ವರಿ ಶಾಸ್ತ್ರಿ, ಕೇಶವ ಭಟ್, ತುರುವೇಕೆರೆ ಬ್ಯಾಟರಾಯ ದೀಕ್ಷಿತರು ಮುಂತಾದವರು ಬರೆದ ಹಾಡುಗಳನ್ನೂ ಸಂಗ್ರಹಿಸಿದೆವು. ಇದನ್ನೇ ಒಂದು ಸಿ.ಡಿ. ರೂಪದಲ್ಲಿ ತಂದರೆ ಇದೊಂದು ಅಪೂರ್ವ ದಾಖಲೆಯಾಗುತ್ತದೆ ಎಂದು ಭಾವಿಸಿ ಒಟ್ಟು 24 ಹಾಡುಗಳನ್ನು ಸೇರಿಸಿ ‘ಮದುವೆ ಸಂಪ್ರದಾಯದ ಹಾಡುಗಳು’ ಎಂಬ ಸಿ.ಡಿ.ಯನ್ನು ಹೊರತಂದೆವು' ಎಂದು ಅವರು  ವಿವರ ನೀಡುತ್ತಾರೆ. ಈ ಸಿ.ಡಿ.ಗೆ ಸಂಗೀತ ನಿರ್ದೇಶನ, ಸಾಹಿತ್ಯ ನಿರೂಪಣೆ ಮಾಡುವುದರ ಜತೆಗೆ ಮಂಜುಳಾ ಹಾಡನ್ನೂ ಹಾಡಿದ್ದಾರೆ.ಇಲ್ಲಿರುವ ಎಲ್ಲ ಹಾಡುಗಳೂ ವಿದುಷಿ ಜಯಲಕ್ಷ್ಮಿ ಶ್ರೀನಿವಾಸನ್ ಮತ್ತು ಬಿ.ಕೆ. ನಾಗರತ್ನ ಅವರ ಮಾರ್ಗದರ್ಶನದಂತೆ ಜನಪದ ಶೈಲಿ, ಸಾಂಪ್ರದಾಯಿಕ ಶೈಲಿ ಮತ್ತು ಶಾಸ್ತ್ರೀಯ ಶೈಲಿಗಳಲ್ಲಿ ಇವೆ. ಶೀಲಾ ಮೋಹನ್, ಜಯಲಕ್ಷ್ಮಿ ಎಂ., ಸತ್ಯವತಿ ವಿ.ಆರ್., ಜಯಂತಿ ಪುರುಷೋತ್ತಮ್, ಎಚ್.ಇ.ವೆಂಕಟೇಶ್ವರಿ ಅವರ ಹಾಡುಗಳೂ ಇವೆ.  ರಾಧಾಕೃಷ್ಣ ಕೀಬೋರ್ಡ್‌ನಲ್ಲಿ, ಮಾಧವ ಐತಾಳ್ ವಯೊಲಿನ್‌ನಲ್ಲಿ, ರಮೇಶ್‌ ಜಿ.ಎಲ್. ಮೃದಂಗ, ಕರ್ಣ ರಿದಂನಲ್ಲಿ ಸಹಕರಿಸಿದ್ದಾರೆ.ಈ ಸಿ.ಡಿ. ಉಚಿತವಾಗಿ ಲಭ್ಯ. ಆದರೆ, ಅಂಚೆ ಮೂಲಕ ಕಳುಹಿಸಬೇಕಾದಲ್ಲಿ  ನಿಗದಿತ ದರ ಪಡೆಯಲಾಗುತ್ತದೆ. ಹಳೆಯ ಸಂಪ್ರದಾಯದ ಹಾಡುಗಳು ಇಂದು ಅಲಭ್ಯವಾಗಿರುವ ಈ ದಿನಗಳಲ್ಲಿ, ಇಂತಹ ದಾಖಲಾರ್ಹ ಸಿ.ಡಿ. ಪ್ರತಿಗಳು ಬೇಕಿದ್ದವರು ಸಂಪರ್ಕಿಸಿ: ಮಂಜುಳಾ ಶಿವಾನಂದ– 94805 11714 ಅಥವಾ ಬಿ.ಕೆ ನಾಗರತ್ನ– 080 23376081.

 

ಪ್ರತಿಕ್ರಿಯಿಸಿ (+)