ಸಂಪ್ರದಾಯ ಮುರಿದು ಸರಳತೆ ಮೆರೆದರು...

7

ಸಂಪ್ರದಾಯ ಮುರಿದು ಸರಳತೆ ಮೆರೆದರು...

Published:
Updated:
ಸಂಪ್ರದಾಯ ಮುರಿದು ಸರಳತೆ ಮೆರೆದರು...

ಧಾರವಾಡ: ಬಾಗಲಕೋಟೆ ಜಿಲ್ಲೆಗೆ ಸೇರಿದ ಲಕ್ಷ್ಮಣ ಜಡಗನ್ನವರ ಸಾಮಾಜಿಕ ಬದಲಾವಣೆಯನ್ನು ತರಲು ಟೊಂಕಕಟ್ಟಿ, ಬಿಕಾಂ ಓದನ್ನು ಅರ್ಧಕ್ಕೆ ಮೊಟಕುಗೊಳಿಸಿದವರು. ಇವರ ಪತ್ನಿ ವಿ.ದೀಪಾ ದಾವಣಗೆರೆ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಇವರಿಬ್ಬರೊಟ್ಟಿಗೆ ಇನ್ನೊಂದು ಜೋಡಿಯ ಮದುವೆ. ಗಂಗಾಧರ ಬಡಿಗೇರ ಕೊಪ್ಪಳ ಜಿಲ್ಲೆಯ ಯುವಕ. ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದವರು. ಅವರ ಕೈ ಹಿಡಿದ ಬಳ್ಳಾರಿಯ ಎ.ಭುವನೇಶ್ವರಿ ರಾಜ್ಯಶಾಸ್ತ್ರದಲ್ಲಿ ಎಂಎ ಪದವೀಧರೆ.ಈ ಜೋಡಿಗಳು ತೆಗೆದುಕೊಂಡ ದಿಟ್ಟ ನಿಲುವು ಹಳೆಯ ವೈವಾಹಿಕ ಸಂಪ್ರದಾಯಗಳನ್ನು ಮುರಿದು ಹೊಸ ಮನ್ವಂತರಕ್ಕೆ ನಾಂದಿಯಾಯಿತು. ಧಾರವಾಡ ಈ ನಿಟ್ಟಿನಲ್ಲಿ ಮತ್ತೊಮ್ಮೆ ಇತಿಹಾಸದ ಪುಟಕ್ಕೆ ಸೇರಿತು.ನಗರದ ಮಹಿಷಿ ರಸ್ತೆಯ ದೇಶಪಾಂಡೆ ಕಾಂಪೌಂಡ್‌ನಲ್ಲಿ ಭಾನುವಾರ ಈ ಜೋಡಿಗಳ ಮದುವೆ ಅತ್ಯಂತ ಆಪ್ತ ರೀತಿಯಲ್ಲಿ ಜರುಗಿತು. ವಾದ್ಯಗಳ ಅಬ್ಬರವಿಲ್ಲ. ಹಾರ-ತುರಾಯಿಗಳ ಅದ್ದೂರಿತನವಿಲ್ಲ. ಕುಳಿತುಕೊಳ್ಳಲು `ಮಹಾರಾಜ~ ಕುರ್ಚಿಗಳಿಲ್ಲ. ಹಣೆಯಲ್ಲಿ ಬಾಸಿಂಗವಿಲ್ಲ. ವಧುಗಳ ಕೊರಳಲ್ಲಿ ತಾಳಿಯೂ ಇಲ್ಲ! ಇಷ್ಟೆಲ್ಲ ಇಲ್ಲಗಳ ಮಧ್ಯೆಯೂ, ಅಲ್ಲಿ ಪರಸ್ಪರ ಒಪ್ಪಿಗೆಯಿಂದ ಮದುವೆಯಾದ ಸಂತೃಪ್ತಿಯಿತ್ತು.

ಒಂದು ಪೈಸೆಯೂ ವರದಕ್ಷಿಣೆ ಇಲ್ಲದೇ ಮದುವೆಯಾಯಿತಲ್ಲ ಎಂಬ ನಿರಾಳತೆಯಿತ್ತು... ಅತ್ಯಂತ ಪ್ರಜಾತಾಂತ್ರಿಕ ರೀತಿಯಲ್ಲಿ ನಡೆದ ಈ ಮದುವೆಯು ಗಂಡು- ಹೆಣ್ಣು ಮನಸ್ಸು ಮಾಡಿದರೆ ಎಂಥ ಗೊಡ್ಡು ಸಂಪ್ರದಾಯವನ್ನಾದರೂ ಮುರಿಯಬಹುದು ಎಂಬುದಕ್ಕೆ ಸಾಕ್ಷಿಯಾಯಿತು.

 

ಎರಡೂ ಜೋಡಿಗಳದ್ದೂ ಪರಸ್ಪರ ಒಪ್ಪಿಗೆಯಿಂದ ಆದ ಪ್ರೇಮ ವಿವಾಹ. ಪೋಷಕರಿಂದ ಮೊದಲಿಗೆ ವಿರೋಧ ಬಂತಾದರೂ ಅವರಿಗೆ ತಾವು ಮುಂದೆ ತುಳಿಯಲಿರುವ ಹಾದಿಯ ಬಗ್ಗೆ ವಿವರಿಸಿ ಹೇಳಿದಾಗ, ಅವರೂ ಒಪ್ಪಿ ಬಂದರು.ಹಿರಿಯ ಕವಿ ಡಾ.ಚನ್ನವೀರ ಕಣವಿ, ಹಿರಿಯ ರಾಜಕೀಯ ಚಿಂತಕ ಪ್ರೊ.ಕೆ.ರಾಘವೇಂದ್ರರಾವ್, ಹಿರಿಯ ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಅವರ ಪತ್ನಿ, ಕವಯಿತ್ರಿ ಹೇಮಾ ಪಟ್ಟಣಶೆಟ್ಟಿ ಹೀಗೆ ಹಲವಾರು ಸಾಹಿತಿಗಳು ವೇದಿಕೆಗೆ ಬಂದು ಈ ಕ್ರಾಂತಿಕಾರಿ ದಂಪತಿಗಳನ್ನು ಹರಸಿದರು.ಈ ಯುವಕ-ಯುವತಿಯರು ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ `ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್~ ಪಕ್ಷದ ಕೇಂದ್ರ ಸಮಿತಿ ಸದಸ್ಯ ಕೆ.ರಾಧಾಕೃಷ್ಣ, ರಾಜ್ಯ ಸಮಿತಿ ಸದಸ್ಯೆ ಕೆ.ಉಮಾ, ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಎಂ.ಎನ್. ಶ್ರೀರಾಮ್, ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ಸೇರಿದಂತೆ ಬೆಳಗಾವಿ, ಬಾಗಲಕೋಟೆ, ವಿಜಾಪುರ, ರಾಯ ಚೂರು, ಕೊಪ್ಪಳ, ಬೆಂಗಳೂರು, ಮೈಸೂರು, ದಾವಣಗೆರೆಯಿಂದ ಬಂದಿದ್ದ 400ಕ್ಕೂ ಅಧಿಕ ಮಂದಿ ಈ ವಿವಾಹಕ್ಕೆ ಸಾಕ್ಷಿ ಯಾದರು. ವಧು-ವರರನ್ನು ಹರಸಿ ಮಾತನಾಡಿದ ಕವಿ ಚನ್ನವೀರ ಕಣವಿ ವರಕವಿ ಬೇಂದ್ರೆ ಅವರ,ಮಂತ್ರದ ತಂತ್ರದ ಮಂದಿವಾಳದ ಮದುವೆ

ಸಂದಣಿಯಲಿ ಹೇಗೋ ಮೆರೆಯುತಿರೆ

ಅಂತಃಪಟದಾಚೆ ವಿಧಿ ತಂದ ವಧು ನೀನು

ಮಾಲೆಯ ಸಾವರಿಸಿ ನಿಂತಿದ್ದೀಯೆಎಂಬ ಸಖೀಗೀತದ ಸಾಲುಗಳನ್ನು ಉದ್ಧರಿಸಿ, `ಇಂದಿನ ದಿನಗಳಲ್ಲಿ ತಾವು ಗಳಿಸಿದ್ದೆಲ್ಲ ತಮ್ಮ ಮಕ್ಕಳ ಮದುವೆಗೆ ಖರ್ಚು ಮಾಡಬೇಕು ಎಂಬ ಮನೋಭಾವ ಹೊಂದಿರುತ್ತಾರೆ. ಅವರು ಅಚ್ಚು ಹಾಕಿಸುವ ಒಂದು ಲಗ್ನಪತ್ರಿಕೆಯೇ ರೂ 100ಕ್ಕಿಂತ  ಜಾಸ್ತಿ ಇರುತ್ತದೆ. ಆದರೆ ಈ ಮದುವೆ ಅತ್ಯಂತ ಸರಳವಾದದ್ದು. ಮನಸ್ಸು- ಹೃದಯಗಳ ಸಮ್ಮತಿಯಿಂದ ಆಗಿರುವ ಈ ಮದುವೆ ಸುದೀರ್ಘ ಕಾಲ ಬಾಳಲಿ~ ಎಂದು ಹಾರೈಸಿದರು.

 

ಲಕ್ಷ್ಮಣ ಜಡಗನ್ನವರ ಎಐಡಿವೈಓ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ. ಅವರ ಪತ್ನಿ ವಿ.ದೀಪಾ ಎಐಡಿಎಸ್‌ಓ ದಾವಣಗೆರೆ ಜಿಲ್ಲಾ ಉಪಾಧ್ಯಕ್ಷೆ. ಗಂಗಾಧರ ಬಡಿಗೇರ ಎಐಡಿವೈಓ ಯುವಜನ ಸಂಘಟನೆಯ ಧಾರವಾಡ ಜಿಲ್ಲಾ ಅಧ್ಯಕ್ಷ. ಅವರ ಪತ್ನಿ ಎ.ಭುವನೇಶ್ವರಿ ಎಐಎಂಎಸ್‌ಎಸ್ ಮಹಿಳಾ ಸಂಘಟನೆಯ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ. ಶನಿವಾರ  ಉಪನೋಂದಣಾ ಧಿಕಾರಿ ಕಚೇರಿಯಲ್ಲಿ   ವಿವಾಹ ನೋಂದಣಿ ಮಾಡಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry