ಬುಧವಾರ, ನವೆಂಬರ್ 20, 2019
20 °C

ಸಂಪ್‌ಗೆ ಬಿದ್ದು ಬಾಲಕ ಸಾವು

Published:
Updated:

ಬೆಂಗಳೂರು: ಸಂಪ್‌ಗೆ ಬಿದ್ದು ಏಳು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮೈಕೊ ಲೇಔಟ್‌ನ ಬಿಸ್ಮಿಲ್ಲಾ ನಗರದಲ್ಲಿ ಭಾನುವಾರ ನಡೆದಿದೆ.ಸಿದ್ದಾಪುರ ನಿವಾಸಿ ಮುಸಾಬಿರ್ ಎಂಬುವರ ಮಗ ಸಾಬಿರ್ ಮೃತ ಬಾಲಕ. ಆಟವಾಡಲು ಹೊರ ಹೋಗಿದ್ದ ಸಾಬಿರ್ ಸಂಜೆಯಾದರೂ ಬಾರದಿದ್ದರಿಂದ ಕುಟುಂಬ ಸದಸ್ಯರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಸಾಬಿರ್‌ನ ಶವ ಸಮೀಪದ ನಿರ್ಮಾಣ ಹಂತದ ಕಟ್ಟಡ ಸಂಪ್‌ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಂಪ್‌ನ ಮೇಲ್ಭಾಗ ಮುಚ್ಚಿರಲಿಲ್ಲ. ಬಾಲಕ ಅದರಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಕಟ್ಟಡದ ಮಾಲೀಕ ಷರೀಫ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೈಕೊ ಲೇಔಟ್ ಪೊಲೀಸರು ಹೇಳಿದ್ದಾರೆ.ಅನುಮಾನಾಸ್ಪದ ಸಾವು

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಆಟೋ ಚಾಲಕ ರಂಗಸ್ವಾಮಿ (35) ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಶವ ಆಟೊದಲ್ಲಿ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.ಆಟೊದಲ್ಲಿ ದೊರೆತ ದಾಖಲೆಗಳಿಂದ ಅದು ಚಾಲಕ ರಂಗಸ್ವಾಮಿ ಶವ ಎಂದು ಗೊತ್ತಾಯಿತು. ಪ್ರಯಾಣಿಕರ ಸೀಟಿನ ಮೇಲ್ಭಾಗದಲ್ಲಿರುವ ಕಬ್ಬಿಣದ ಕಂಬಿಗೆ ಟವೆಲ್ ಕಟ್ಟಿಕೊಂಡು ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಶವವಿತ್ತು' ಎಂದು ಪೊಲೀಸರು ಹೇಳಿದ್ದಾರೆ.ರಂಗಸ್ವಾಮಿ, ಮೂಲತಃ ಹಾಸನ ಜಿಲ್ಲೆಯ ಶಾಂತಿಗ್ರಾಮದವರು. ಹತ್ತು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಅವರು, ಸ್ನೇಹಿತರಿಂದ ಸಾಕಷ್ಟು ಸಾಲ ಮಾಡಿದ್ದರು. ಸಾಲ ತೀರಿಸುವ ಸಲುವಾಗಿ ಒಂದೂವರೆ ತಿಂಗಳಿನಿಂದ ರಾತ್ರಿ ವೇಳೆಯಲ್ಲೂ ಆಟೊ ಓಡಿಸುತ್ತಿದ್ದರು.`ಪತಿ ಮದ್ಯವ್ಯಸನಿಯಾಗಿದ್ದು, ಸಾಕಷ್ಟು ಸಾಲ ಮಾಡಿದ್ದರು' ಎಂದು ಮೃತರ ಪತ್ನಿ ಹೇಳಿಕೆ ಕೊಟ್ಟಿದ್ದಾರೆ. ಇದೇ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಜತೆಗೆ ದುಷ್ಕರ್ಮಿಗಳು ಕೊಲೆ ಮಾಡಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಶೀಘ್ರ ಸ್ಪಷ್ಟ ಚಿತ್ರಣ ಸಿಗಲಿದೆ' ಎಂದು ಪೀಣ್ಯ ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)