ಮಂಗಳವಾರ, ಮೇ 11, 2021
20 °C

ಸಂಬಂಧಿಕರಿಂದಲೇ ವ್ಯಕ್ತಿ ಕೈಕಾಲಿಗೆ ಸರಪಳಿ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನೆಂಬ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ಮೂರೂವರೆ ವರ್ಷ ಕೈಕಾಲಿಗೆ ಸರಪಳಿ ಬಿಗಿದು, ದನದ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ ಅಮಾನವೀಯ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.ಹನಮಂತಪ್ಪ ಭೀಮಪ್ಪ ಕ್ಯಾತಪ್ಪನವರ (50) ಎಂಬುವವರೇ ಗೃಹ ಬಂಧನದಲ್ಲಿದ್ದವರು. ಅವರ ಅಕ್ಕನ ಪತಿ ನಾಗಪ್ಪ ದೊಡ್ಡಮನಿ ಹಾಗೂ ಅವರ ಮನೆಯವರು ಸೇರಿ ಸರಪಳಿಯಿಂದ ಬಿಗಿದು, ಕೊಟ್ಟಿಗೆಯಲ್ಲಿ ಇಟ್ಟಿದ್ದರು. ಅಲ್ಲಿಯೇ ಆತನಿಗೆ ಊಟ ಕೊಡುತ್ತಿದರು. ನಿತ್ಯಕರ್ಮಕ್ಕೂ ಹೊರಗೆ ಬಿಡುತ್ತಿರಲಿಲ್ಲ. ಮಲಗಲು ಹಾಸಿಗೆಯನ್ನೂ ಕೊಟ್ಟಿರಲಿಲ್ಲ. ನೆಲದ ಮೇಲೇ ಮಲಗಬೇಕಿತ್ತು ಎಂದು ಹೇಳಲಾಗುತ್ತಿದೆ.ಅವರನ್ನು ಏಕೆ ಗೃಹಬಂಧನದಲ್ಲಿರಿಸಲಾಗಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಈ ಕುರಿತು ಮನೆಯವರು ನೀಡುವ ಮಾಹಿತಿ ಸಂಶಯಾಸ್ಪದವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಶುಕ್ರವಾರ ಮಾಹಿತಿ ದೊರೆತ ಮೇರೆಗೆ ಮಾಧ್ಯಮ ಪ್ರತಿನಿಧಿಗಳು ಸುದ್ದಿ ಮಾಡಲು ಗ್ರಾಮಕ್ಕೆ ಬರುತ್ತಾರೆ ಎಂಬ ಸುದ್ದಿ ತಿಳಿದು, ಆತನಿಗೆ ಕಟ್ಟಿದ್ದ ಸರಪಳಿ ಬಿಚ್ಚಿ, ಸ್ನಾನ ಮಾಡಿಸಿ ಗೃಹಬಂಧನದಿಂದ ಮುಕ್ತಗೊಳಿಸಿದ್ದರು ಎನ್ನಲಾಗಿದೆ.ಆತನ ಬಗ್ಗೆ ಮಾಧ್ಯಮದ ಪ್ರತಿನಿಧಿಗಳು ಮಾಹಿತಿ ಕೇಳಿದಾಗ, `ಮಾನಸಿಕ ಅಸ್ವಸ್ಥನಾಗಿದ್ದ ಹನುಮಂತಪ್ಪ ಗ್ರಾಮದಲ್ಲಿನ ಮಹಿಳೆಯರಿಗೆ ಕಿರುಕುಳ ನೀಡುವುದರ ಜತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಬೇಸತ್ತು ಈತನನ್ನು ಕೊಟ್ಟಿಗೆಯಲ್ಲಿ ಕೂಡಿಹಾಕಿದ್ದೆವು. ಅಲ್ಲಿಯೇ ಊಟ ನೀಡುತ್ತಿದ್ದೆವು. ಆದರೆ, ಯಾವುದೇ ಹಿಂಸೆ ನೀಡಿಲ್ಲ' ಎಂದು ನಾಗಪ್ಪ ದೊಡ್ಡಮನಿ ತಿಳಿಸಿದರು.ಮಾತನಾಡದಷ್ಟು ನಿತ್ರಾಣ:  ಮೂರೂವರೆ ವರ್ಷಗಳಿಂದ ಗೃಹಬಂಧನದಲ್ಲಿದ್ದ ಹನಮಂತಪ್ಪನನ್ನು ಕುಟುಂಬದವರು ಮುಕ್ತಗೊಳಿಸಿದ್ದರೂ ಆತ ಮಾತನಾಡದಷ್ಟು ನಿತ್ರಾಣಗೊಂಡಿದ್ದರು. ಮಾತನಾಡಲು ಉತ್ಸಾಹ ತೋರಿದರೂ ಏನೂ ಹೇಳಲು ಆಗುತ್ತಿರಲಿಲ್ಲ. ಸ್ಥಳಕ್ಕೆ ಬಂದ ಇನ್‌ಸ್ಪೆಕ್ಟರ್ ನಾಗರಾಜ ಅವರ ಪ್ರಯತ್ನವೂ ಸಫಲವಾಗಲಿಲ್ಲ. ಕೂಡಲೇ ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಕುಟುಂಬ ವರ್ಗದವರಿಗೆ ಅವರು ಸೂಚಿಸಿದರು.ಆಸ್ತಿಗಾಗಿ ಸಂಚು ಆರೋಪ: ಆಸ್ತಿ ಲಪಟಾಯಿಸುವ ಹುನ್ನಾರ ಈ ಪ್ರಕರಣದ ಹಿಂದೆ ಇದೆ ಎಂಬ ಆರೋಪ ಕೇಳಿಬಂದಿದೆ. ಹನಮಂತಪ್ಪ ಅವರ ಪಾಲಿಗೆ ಬರುವ 12 ಎಕರೆ ಭೂಮಿಯನ್ನು ಲಪಟಾಯಿಸಲು ಸಂಬಂಧಿಕರು ಈ ಶಿಕ್ಷೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಪ್ಪತ್ತೈದು ವರ್ಷಗಳಿಂದ ಸ್ವಲ್ಪ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಅವರನ್ನು ಇದೇ ನೆಪದಲ್ಲಿ ಕೂಡಿ ಹಾಕಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರೊಬ್ಬರು ತಿಳಿಸಿದರು.ಹತ್ತು ವರ್ಷಗಳ ಹಿಂದೆ ಅವರನ್ನು ಚಿಕಿತ್ಸೆಗೆ ಧಾರವಾಡದ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದ ಚೀಟಿಯನ್ನೇ ಈಗಲೂ ಇಟ್ಟುಕೊಂಡು ಅದನ್ನೇ ತೋರಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.`ನಾಗಪ್ಪನಾಗಿದ್ದರಿಂದ ಅವನನ್ನು ಇಷ್ಟು ವರ್ಷ ಸಾಕಿದ್ದಾನೆ. ಬೇರೆಯವರಾಗಿದ್ದರೆ ಊರುಬಿಟ್ಟು ಓಡಿಸುತ್ತಿದ್ದರು' ಎಂದು ಗ್ರಾಮದ ನಿಂಗಪ್ಪ ಸಣ್ಣಕರಿಯಪ್ಪರ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.