ಶನಿವಾರ, ಫೆಬ್ರವರಿ 27, 2021
21 °C

ಸಂಬಂಧ ಕಡಿದುಕೊಳ್ಳಲೂ ವೆಬ್‌ಸೈಟ್..!

ಜೋಮನ್‌ ವರ್ಗೀಸ್ Updated:

ಅಕ್ಷರ ಗಾತ್ರ : | |

ಸಂಬಂಧ ಕಡಿದುಕೊಳ್ಳಲೂ ವೆಬ್‌ಸೈಟ್..!

ಪ್ರೀತಿ ಮಾಡುವುದು ಹೇಗೆ? ಮುದ್ದುಗರೆಯುವುದು ಹೇಗೆ? ಡಯಟಿಂಗ್‌ ನಡೆಸುವುದು ಹೇಗೆ? ಮದುವೆಯಾಗವುದು ಹೇಗೆ ಎನ್ನುವುದಕ್ಕೆಲ್ಲಾ ಮಾರ್ಗದರ್ಶನ ಮಾಡಲು ನೂರಾರು ವೆಬ್‌ಸೈಟ್‌ಗಳು, ಅಪ್ಲಿಕೇಷನ್ಸ್‌ಗಳು ಬಂದಿವೆ. ಆದರೆ, ಯಾವ ಜಗಳವೂ ಇಲ್ಲದೆ, ಶಾಂತವಾಗಿ, ಮನಸ್ಸಿಗೆ ಸ್ವಲ್ಪವೂ ನೋವಾಗದಂತೆ,  ಬೆಣ್ಣೆಯಿಂದ ಕೂದಲು ತೆಗೆದಷ್ಟೇ ನಯವಾಗಿ ಸಂಬಂಧ ಮುರಿದುಕೊಳ್ಳುವುದು ಹೇಗೆ ಎನ್ನುವುದನ್ನೂ ಕಲಿಸಲು ಯಾವ ವ್ಯವಸ್ಥೆಯೂ ಇರಲಿಲ್ಲ. ಈಗ ಈ ಕೊರತೆ ನೀಗಿಸಲು ಹೊಸದೊಂದು ವೆಬ್‌ತಾಣ ಆರಂಭವಾಗಿದೆ.ಒಂದೇ ಹಾಸಿಗೆಯ ಮೇಲೆ ನಾನೊಂದು ತೀರ, ನೀನೊಂದು ತೀರ ಎಂದು ವಿರುದ್ಧ ದಿಕ್ಕುಗಳತ್ತ ತಿರುಗಿ ಮಲಗುವ ದಂಪತಿಗೆ, ಅರ್ಥಾತ್‌ ಸಂಬಂಧ ಹಳಸಿರುವ ದಂಪತಿಗೆ ಅದನ್ನು ಇನ್ನಷ್ಟು ಹದಗೆಡದಂತೆ ತಡೆದು, ಇದ್ದಷ್ಟು ದಿನ ಮೃದುವಾಗಿ ನಿರ್ವಹಣೆ ಮಾಡಲು ಮತ್ತು  ಮುಂದುವರಿಸಲು ಆಗದೇ ಇದ್ದವರಿಗೆ ಸೌಮ್ಯವಾಗಿ ಸಂಬಂಧ ಮುರಿದುಕೊಳ್ಳಲು ಈ ವೆಬ್‌ ತಾಣ ಅಗತ್ಯ

ಮಾರ್ಗದರ್ಶನ ನೀಡುತ್ತದೆ.‘ಬ್ರೇಕ್‌ಅಪ್‌ ಶಾಪ್‌’ (http://breakupshop.com/)  ಎನ್ನುವುದು ಈ ವೆಬ್‌ಸೈಟ್‌ ಹೆಸರು. ‘ಸಂಬಂಧ ಕೊನೆಗೊಳಿಸಲು ಸಂಗಾತಿಗೆ  ಹೇಗೆ ಪತ್ರ ಬರೆಯಬೇಕು? ಇ–ಮೇಲ್‌ ಆದರೆ ಹೇಗೆ ಕಳುಹಿಸಬೇಕು,  ವಾಟ್ಸ್‌ಆ್ಯುಪ್‌ನಲ್ಲಾದರೆ ಯಾವ ರೀತಿಯ ಸಂದೇಶ ಸಿದ್ಧಪಡಿಸಬೇಕು? ಯಾವ ರೀತಿಯ ಬ್ರೇಕ್‌ಅಪ್‌ ಉಡುಗೊರೆ ಕೊಡಬೇಕು ಎಂಬಿತ್ಯಾದಿ ಸಕಲ ಮಾಹಿತಿಯೂ ಇದರಲ್ಲಿದೆ. ‘ಸಂಬಂಧ ಕೊನೆಗೊಳಿಸಲು  ನಾವು ನಿಮಗೆ ಸಹಾಯ ಮಾಡುತ್ತೇವೆ’ ಎನ್ನುವುದು ಈ ತಾಣದ ಘೋಷವಾಕ್ಯ.‘ಪ್ರಿಯತಮೆ ಹೊಸ ವರ್ಷ ಬಂದಿದೆ. ನಿನಗೆ ವಿದಾಯ ಹೇಳುವ ಸಮಯವೂ ಹತ್ತಿರ ಬಂದಿದೆ. ಇದು ಅನಿವಾರ್ಯ. ಕಾಲ ಎಲ್ಲವನ್ನೂ ಮರೆಸುತ್ತದೆ. ನಿನ್ನೊಂದಿಗೆ ಕಳೆದ ಹಲವು ರಸನಿಮಿಷಗಳು ನೆನಪಿನ ಬುತ್ತಿಯಲ್ಲಿವೆ.   ಆದರೂ, ಇಂದಿನಿಂದ ನಮ್ಮಿಬ್ಬರ ದಾರಿಗಳು ಬೇರೆ ಬೇರೆ.  ನಿನಗಿದೋ ಸಂತೋಷದ ಜೀವನ ಹಾರೈಸುವೆ’ ಈ ರೀತಿಯ ಹಲವು ಬ್ರೇಕ್‌ಅಪ್‌ ಪತ್ರಗಳು ಈ ತಾಣದಲ್ಲಿ ಲಭ್ಯವಿದೆ. 20 ಡಾಲರ್‌ ತೆತ್ತರೆ ನಿಮಗಿಷ್ಟದ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು, ಅಗತ್ಯ ತಿದ್ದುಪಡಿ ಜತೆಗೆ ಪ್ರಿಯತಮೆಗೆ ಇ–ಮೇಲ್‌ ಮಾಡಬಹುದು.  ಯಾವ ಕಿರಿಕಿರಿಯೂ ಇಲ್ಲದೆ ಸಂಬಂಧ ಕಡಿದುಕೊಳ್ಳಬಹುದು.ಈ ನಿರ್ಧಾರದಿಂದ ಪ್ರಿಯತಮನ ಹೃದಯಕ್ಕೆ ಘಾಸಿಯಾಗಿದೆ ಎಂದೆನಿಸುತ್ತಿದೆಯಾ? ಹಾಗಾದರೆ ಆತನಿಗೆ ನಾಲ್ಕು ವೈನ್‌ ಗ್ಲಾಸ್‌ಗಳನ್ನೋ,  ನೈಟ್‌ ಪಾರ್ಟಿ ಟಿಕೆಟನ್ನೋ, ಶಾಂಪೈನ್‌ ಬಾಟಲ್‌, ನೋಟ್‌ಬುಕ್‌ ಅನ್ನೋ ಉಡುಗೊರೆಯಾಗಿ ಕೂಡ ನೀಡಬಹುದು, ಪ್ರಿಯತಮೆಗಾದರೆ  ಹೂವಿನ ಗೊಂಚಲನ್ನೋ, ಕ್ಯಾಡ್‌ಬರಿ ಕುಕಿಯನ್ನೋ, ಡಿವಿಡಿಯನ್ನೋ ಉಡುಗೊರೆ ನೀಡಬಹುದು. ಇವೆಲ್ಲವೂ ಈ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು ಹಣಕ್ಕೆ ತಕ್ಕಂತೆ (₹500 ರಿಂದ ₹3 ಸಾವಿರದವರೆಗೆ) ಸೇವೆಯೂ ಲಭ್ಯವಿದೆ. ಗ್ರಾಹಕರಿಗಾಗಿ 24X7ಮಾದರಿಯ ಸಹಾಯವಾಣಿಯೂ ಇದ್ದು, ನಿಮ್ಮ ಸಮಸ್ಯೆ ಹೇಳಿದ ತಕ್ಷಣವೇ  ನೆರವಿಗೆ ಧಾವಿಸುವ ಸಿಬ್ಬಂದಿಯೂ ಇದ್ದಾರೆ ಎಂದು ವೆಬ್‌ಸೈಟ್‌ ಪ್ರಕಟಣೆ ಹೇಳುತ್ತದೆ.ಸಂಬಂಧ ಕಡಿದುಕೊಳ್ಳಲು ಇರುವ ಜಾಣತನದ ಆಯ್ಕೆ ಇದು ಎಂದು ‘ಸನ್‌’ ಪತ್ರಿಕೆ ಈ ವೆಬ್‌ಸೈಟ್‌ ಕುರಿತು ವರದಿ ಮಾಡಿದೆ. ‘ಎಷ್ಟೇ ಪ್ರಯತ್ನಿಸಿದರೂ ಕೆಲವು ಸಂಬಂಧಗಳನ್ನು ಕಡಿದುಕೊಳ್ಳಲು ಕಷ್ಟ. ಅಂತಹ ಪ್ರಕರಣಗಳಲ್ಲಿ ದೂರವಾಣಿ ಕರೆ ಮಾಡಿ ಮಾತನಾಡಿ, ಮನವೊಲಿಕೆ ಮಾಡುತ್ತೇವೆ. ಸಮಸ್ಯೆ ಏನಿದ್ದರೂ ನಮಗೆ ಬಿಟ್ಟುಬಿಡಿ, ನಾವು ನೋಡಿಕೊಳ್ಳುತ್ತೇವೆ’ ಎಂದು ವೆಬ್‌ಸೈಟ್‌ ಹೇಳಿದೆ.ದೂರವಾಣಿ ಕರೆ ಮಾಡಿ ಸಂಬಂಧ ಕಡಿದುಕೊಳ್ಳಲು ನೆರವಾಗುವ ಆಪ್ತ ಸಲಹಾ ಸೇವೆಗೆ ವೆಬ್‌ಸೈಟ್‌ ಗರಿಷ್ಠ ಅಂದರೆ ₹2500 ಶುಲ್ಕವನ್ನು ವಿಧಿಸುತ್ತದೆ.  ಇಷ್ಟೆಲ್ಲಾ ಓದಿದ ಮೇಲೆಯೂ ಸಂಬಂಧ ಮುರಿದುಕೊಳ್ಳಬೇಕು ಎನಿಸುತ್ತಿದೆಯಾ? ಹಾಗಾದರೆ ಈ ವೆಬ್‌ಸೈಟ್‌ಗೊಮ್ಮೆ ಭೇಟಿ ನೀಡಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.