ಸಂಬಳ ಇಲ್ಲದೇ ಜೀವನ ಹೇಗೆ?

7
ಕುಕನೂರು ಗ್ರಾಮ ಪಂಚಾಯತಿ ಸಿಬ್ಬಂದಿ ಅಳಲು

ಸಂಬಳ ಇಲ್ಲದೇ ಜೀವನ ಹೇಗೆ?

Published:
Updated:
ಸಂಬಳ ಇಲ್ಲದೇ ಜೀವನ ಹೇಗೆ?

ಕುಕನೂರು:  ಇಲ್ಲಿಯ ಗ್ರಾಮ ಪಂಚಾಯತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ದರ್ಜೆಯ ಸಿಬ್ಬಂದಿ ವರ್ಗದವರು ಬಾಕಿ ಇರುವ ಮೂರು ತಿಂಗಳ ವೇತನ ಪಾವತಿಸುವಂತೆ ಬುಧವಾರ ಒತ್ತಾಯಿಸಿದರು.ಕರ ವಸೂಲಿಗಾರರು, ನೀರು ಪೂರೈಸುವವರು, ವಿದ್ಯುತ್ ದೀಪ ಅಳವಡಿಸುವವರು, ರಸ್ತೆ ಹಾಗೂ ಚರಂಡಿ ಸ್ವಚ್ಛತೆಗೊಳಿಸುವವರು ಸೇರಿದಂತೆ 75ಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಹಲವಾರು ವರ್ಷಗಳಿಂದ ಇಲ್ಲಿಯ ಗ್ರಾಮ ಪಂಚಾಯತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲಸದ ಆಧಾರದ ಮೇಲೆ ಕನಿಷ್ಠ ರೂ. 1500 ರಿಂದ 2500 ಗಳ ವರೆಗೆ ಸಂಬಳ ನೀಡಲಾಗುತ್ತಿದೆ. ನೀಡುವ ಕನಿಷ್ಠ ಸಂಬಳವನ್ನು ಪ್ರತಿ ತಿಂಗಳು ನೀಡುತ್ತಿಲ್ಲ ಹೀಗಾದರೆ ನಾವು ಜೀವನ ನಡೆಸುವುದಾದರೂ ಹೇಗೆ? ಎನ್ನುವ ಅಳಲು ಸಿಬ್ಬಂದಿ ವರ್ಗದವರದು.ಜಿಲ್ಲಾ ಪಂಚಾಯಿತಿ ಸದಸ್ಯ ಈರಪ್ಪ ಕುಡಗುಂಟಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಬಾಕಿ ಇರುವ ಸಿಬ್ಬಂದಿ ವರ್ಗದವರ ವೇತನ ಪಾವತಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿ, ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಕುಕನೂರಿನ ಜನತೆಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪಂಚಾಯತಿ ಸಿಬ್ಬಂದಿ ವರ್ಗದವರ ಪಾತ್ರ ಮುಖ್ಯ. ಹೀಗಿರುವಾಗ ಅವರಿಗೆ ಸಂಬಳ ಪಾವತಿಸದೇ ಇರುವುದು ಸರಿಯಲ್ಲ. ಮುಂದೆ ಹೀಗಾಗದಂತೆ ನಿಗಾ ವಹಿಸುವಂತೆಯೂ ಅವರು ಸಲಹೆ ನೀಡಿದರು.`ಕಾರಣಾಂತರಗಳಿಂದ ಕಳೆದ ಮೂರು ತಿಂಗಳಿಂದ ಕರ ವಸೂಲಿ ಆಗದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಮೇಲಾಗಿ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ವರ್ಗದವರನ್ನು ನೇಮಕ ಮಾಡಿಕೊಂಡಿದ್ದರಿಂದ ಮತ್ತಷ್ಟು ಸಮಸ್ಯೆ ಉದ್ಭವಿಸಿದೆ. ತೆರಿಗೆ ರೂಪದಲ್ಲಿ ಪಂಚಾಯತಿಗೆ ಜಮಾ ಆಗುವ ಮೊತ್ತದಲ್ಲಿ ಶೇ 40ರಷ್ಟು ಹಣವನ್ನು ಮಾತ್ರ ಸಿಬ್ಬಂದಿ ನಿರ್ವಹಣೆಗೆ ಬಳಕೆ ಮಾಡಬೇಕಾಗುತ್ತದೆ. ಆದರೆ ತೆರಿಗೆ ರೂಪದಲ್ಲಿ ಕನಿಷ್ಠ ಮೊತ್ತವೂ ಜಮಾ ಆಗುವುದಿಲ್ಲ. ಮುಂಬರುವ ದಿನದಲ್ಲಿ ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಸಾರಂಗಮಠ `ಪ್ರಜಾವಾಣಿ'ಗೆ ತಿಳಿಸಿದರು.ಮುಖಂಡರಾದ ನಾಗಪ್ಪ ಕಲ್ಮನಿ, ನಿಂಗಪ್ಪ ಗೊರ್ಲೆಕೊಪ್ಪ, ನಿಂಗಪ್ಪ ಸಾಲ್ಮನಿ, ಮುದಕಪ್ಪ, ಸಿರಾಜ್ ಕರಮುಡಿ ಹನಮಂತಪ್ಪ ಮುಂಡರಗಿ, ಲಕ್ಷ್ಮಣ ಬಾರಿಗಿಡದ, ರಾಮಣ್ಣ ಯಡ್ಡೋಣಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry