ಸೋಮವಾರ, ಜೂನ್ 21, 2021
20 °C

ಸಂಬಳ ನಿಗದಿಗೆ ಕಾರ್ಯಕರ್ತೆಯರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅಕ್ಷರ ದಾಸೋಹ ಬಿಸಿಯೂಟ ಯೋಜನೆಯಡಿಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರಿಗೆ ತಿಂಗಳಿಗೆ ರೂ. 10 ಸಾವಿರ ವೇತನ ನಿಗದಿಪಡಿಸಬೇಕು ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಮಹಾದೇವಮ್ಮ ಸರ್ಕಾರವನ್ನು ಒತ್ತಾಯಿಸಿದರು.

ನಗರದ ನೆಹರೂ ರಸ್ತೆಯ ಗಾಂಧಿಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ತಾಲ್ಲೂಕು ಮಟ್ಟದ ಪ್ರಥಮ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾರ್ಯಕರ್ತೆಯರಿಗೆ ಕೆಲಸಕ್ಕೆ ತಕ್ಕ ವೇತನ ಸಿಗುತ್ತಿಲ್ಲ. ತಾರತಮ್ಯ ಧೋರಣೆಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ. ಈ ಮಧ್ಯೆ ಬಿಸಿಯೂಟ ಯೋಜನೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ತಮಿಳುನಾಡಿನಲ್ಲಿ ಬಿಸಿಯೂಟ ಯೋಜನೆ ಕಾರ್ಯಕರ್ತೆಯರಿಗೆ ದಿನಕ್ಕೆ ರೂ. 150 - 200 ವೇತನ ನೀಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ತಿಂಗಳಿಗೆ ರೂ. 1,000  ನೀಡಲಾಗುತ್ತಿದೆ ಎಂದು ಹೋಲಿಕೆ ಮಾಡಿದರು.

ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದು ಹಲವು ವರ್ಷಗಳಾದರೂ, ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್ ಮಾತನಾಡಿ, ಬಿಜೆಪಿ ಸರ್ಕಾರ ಜನವಿರೋಧಿ ಧೋರಣೆ ಅನುಸರಿಸುತ್ತಿದೆ. ರಾಜ್ಯದ ಜನತೆ ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಸಮಾರಂಭದಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷೆ ಅಕ್ಕಮ್ಮ, ಪ್ರಧಾನ ಕಾರ್ಯದರ್ಶಿ ಹನುಮಮ್ಮ, ಸಂಘಟನಾ ಕಾರ್ಯದರ್ಶಿ ಗೋದಾವರಿ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ತುಳಸಿ ಪ್ರಭಾ, ಕಾರ್ಮಿಕ ಮುಖಂಡ ಮಾಯಣ್ಣ  ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.