ಸಂಬಳ ಪಡೆಯುವ ಕನಸು ನನಸಾಗಲಿಲ್ಲ!

7

ಸಂಬಳ ಪಡೆಯುವ ಕನಸು ನನಸಾಗಲಿಲ್ಲ!

Published:
Updated:

ಮೈಸೂರು:  ಆ ಹೆಣ್ಣು ಮಕ್ಕಳಿಗೆ ಶನಿವಾರ ಶುಭವಾಗಲಿಲ್ಲ. ಸಂಬಳ ಪಡೆಯುವ ಕನಸು ಹೊತ್ತು ಬೆಳ್ಳಂಬೆಳಗ್ಗೆ ಕಾದು ನಿಂತಿದ್ದವರು ಬಲು ದೂರ ಸಾಗಿಬಿಟ್ಟರು.ತುತ್ತಿನ ಚೀಲ ತುಂಬಿಸಿಕೊಳ್ಳುವ ಸಲುವಾಗಿ, ಕುಟುಂಬದವರ ಕಷ್ಟಕ್ಕೆ ನೆರವಾಗಲು ಗಾರ್ಮೆಂಟ್ಸ್ ಕಾರ್ಖಾನೆಗೆ ತೆರಳುತ್ತಿದ್ದ ಹಳ್ಳಿಗಾಡಿನ ಯುವತಿಯರಿಗೆ ಶನಿವಾರ ಸಂಬಳದ ದಿನ. ಕಾರ್ಖಾನೆಗೆ ತೆರಳಲು ವಾಹನಕ್ಕಾಗಿ ಕಾದು ಕುಳಿತ್ತಿದ್ದ ಯುವತಿಯರ ಮೇಲೆ ಆಲ್ಟೊ ಕಾರು ಜವರಾಯನಂತೆ ಎರಗಿ ಜೀವಗಳನ್ನು ಬಲಿ ತೆಗೆದುಕೊಂಡಿತು.ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳದ ಕೈಗಾರಿಕಾ ಪ್ರದೇಶದಲ್ಲಿರುವ ಗೋಕುಲ್ ದಾಸ್ ಗಾರ್ಮೆಂಟ್ ಕಾರ್ಖಾನೆಗೆ ಎಚ್.ಡಿ.ಕೋಟೆ ತಾಲ್ಲೂಕಿನ ಹೈರಿಗೆ, ಕೃಷ್ಣಾಪುರ, ಅಂತರಸಂತೆ ಸುತ್ತಲ ಗ್ರಾಮಗಳಿಂದ ನಿತ್ಯ 25ಕ್ಕೂ ಹೆಚ್ಚು ಮಂದಿ ಕೆಲಸಕ್ಕೆ ಹೋಗುತ್ತಿದ್ದರು. ಯುವತಿಯರ ಅನುಕೂಲಕ್ಕಾಗಿ ಕಾರ್ಖಾನೆಯ ಆಡಳಿತ ಮಂಡಳಿ ಮ್ಯಾಕ್ಸಿಕ್ಯಾಬ್ ವ್ಯವಸ್ಥೆ ಸಹ ಮಾಡಿತ್ತು. ಮುಂಜಾನೆಯೇ ವಾಹನ ಬರುತ್ತಿದ್ದರಿಂದ ಕಾರ್ಮಿಕರು ಬೇಗನೆ ಎದ್ದು, ಸಿದ್ಧರಾಗಿ ಹೊಟ್ಟೆ ತುಂಬಿಸಿಕೊಳ್ಳಲು ಬುತ್ತಿಯನ್ನು ಸಹ ಕೊಂಡೊಯ್ಯುತ್ತಿದ್ದರು.ಐದು ನಿಮಿಷ ತಡ: ಹೈರಿಗೆ ಗ್ರಾಮಕ್ಕೆ ನಿತ್ಯ ಕಾರ್ಖಾನೆ ಕಳುಹಿಸುತ್ತಿದ್ದ ವಾಹನ ಸರಿಯಾಗಿ 4 ಗಂಟೆಗೆ ಬರುತ್ತಿತ್ತು. ಮುಂಜಾನೆ 3.45ಕ್ಕೆ ಚಳಿಯನ್ನು ಲೆಕ್ಕಿಸದೆ ಕಾರ್ಮಿಕರು ವಾಹನಕ್ಕಾಗಿ ರಸ್ತೆ ಬದಿಯಲ್ಲಿ ನಿತ್ಯ ಕಾಯುತ್ತಿದ್ದರು. 4 ಗಂಟೆಗೆ ಬರಬೇಕಿದ್ದ ವಾಹನ ಶನಿವಾರ ಸಮಯಕ್ಕೆ ಸರಿಯಾಗಿ ಬರಲೇ ಇಲ್ಲ. ಅಷ್ಟರಲ್ಲಿ  ಚಾಲಕನ ನಿಯಂತ್ರಣ ತಪ್ಪಿದ್ದ ಮಾರುತಿ ಆಲ್ಟೊ ಕಾರು ನೋಡನೋಡುತ್ತಿದ್ದಂತೆ ರಸ್ತೆಬದಿ ಕುಳಿತ್ತಿದ್ದವರ ಮೇಲೆ ಹರಿದು ಬಲಿ ತೆಗೆದುಕೊಂಡಿತು. ಸ್ಥಳದಲ್ಲೇ ನಾಲ್ಕು ಹೆಣಗಳು ಉರುಳಿಬಿದ್ದವು. ಮಗಳನ್ನು ಕೆಲಸಕ್ಕೆ ಕಳುಹಿಸಲು ಬಂದ ತಾಯಿ ರಾಜಮ್ಮ ಸಹ ಮಗಳೊಂದಿಗೆ ತಾನೂ ಹೆಣವಾದಳು. ವಾಹನ ಬರುವುದು ತಡವಾಗಿದ್ದರಿಂದ ನಿಸರ್ಗ ಕರೆಗೆ ಓಗೊಡಲು ತೆರಳಿದ್ದ ಕೆಲ ಯುವತಿಯರ ಜೀವ ಉಳಿಯಿತು.ನಿತ್ಯ ಸರಿಯಾದ ಸಮಯಕ್ಕೆ ಬರುತ್ತಿದ್ದ ವಾಹನ ಐದು ನಿಮಿಷ ತಡವಾಗಿ ಬಂತು. ಅಷ್ಟರಲ್ಲಿ ದುರಂತ ನಡೆದು ಹೋಗಿತ್ತು. ಸರಿಯಾದ ಸಮಯಕ್ಕೆ ವಾಹನ ಬಂದಿದ್ದರೆ ಐದು ಜೀವಗಳು ಉಳಿಯುತ್ತಿದ್ದವು ಎಂದು ಮೃತರ ಸಂಬಂಧಿಕರು ಮರುಗುತ್ತಿದ್ದರು.ಸ್ಮಶಾನವಾದ ರಸ್ತೆ: ಸೂರ್ಯನ ಕಿರಣ ಭುವಿಗೆ ಮುತ್ತಿಡುವ ಮುನ್ನವೆ ಹೈರಿಗೆ ಗ್ರಾಮದ ಮುಖ್ಯರಸ್ತೆ ಸ್ಮಶಾನವಾಗಿ ರೂಪುಗೊಂಡಿತು.ಗಾರ್ಮೆಂಟ್ಸ್‌ಗೆ ತೆರಳುವ ಯುವತಿಯರು ವಾಹನ ಡಿಕ್ಕಿಯಾಗಿ ಜೀವ ಕಳೆದುಕೊಂಡ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಬೆಳಗಾಗುವ ಮುನ್ನವೆ ಮೃತರ ಸಂಬಂಧಿಕರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಘಟನಾ ಸ್ಥಳದಲ್ಲಿ ಜಮಾಯಿಸಿದರು. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತು. ಹೆಣದ ಮೇಲೆ ಹೊರಳಾಡಿ ಗೋಳಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಕಣ್ಣೀರು ಬಸಿದು ಕೆಲವರು ಸುಸ್ತಾಗಿ ರಸ್ತೆ ಬದಿಯಲ್ಲೇ ಮಲಗಿದರು. ಹೆತ್ತವರ ಗೋಳಾಟ ನೋಡುತ್ತಿದ್ದ ಹೆಂಗೆಳೆಯರ ಕರುಳು ಹಿಂಡಿದಂತಾಯಿತು. ಎಲ್ಲರ ಕಣ್ಣಾಲಿಗಳು ಒದ್ದೆಯಾಗಿದ್ದವು. ದುರಂತಕ್ಕೆ ಕಾರಣನಾದ ಕಾರಿನ ಚಾಲಕನಿಗೆ ಹಿಡಿಶಾಪ ಹಾಕಿದರು.ಮೃತಪಟ್ಟವರ ಪೈಕಿ ನಾಲ್ವರು ಯುವತಿಯರು 20 ವರ್ಷದೊಳಗಿನವರು. ತಮ್ಮ ಕಷ್ಟ-ಸುಖಗಳನ್ನು ಬದಿಗೊತ್ತಿ ಮುಂಜಾನೆಯೇ ಕೆಲಸಕ್ಕೆ ಹೋಗುತ್ತಿದ್ದರು. ಮನೆಯವರಿಗೆ ನೆರವಾಗಿ ದುಡಿದ ಹಣದಲ್ಲಿ ಒಂದು ಭಾಗವನ್ನು ಭವಿಷ್ಯಕ್ಕೆ ಕೂಡಿಡುತ್ತಿದ್ದರು. ಒಂದೆರಡು ವರ್ಷಗಳಲ್ಲಿ ಹಸೆಮಣೆ ಏರಿ ಹೊಸ ಜೀವನ ಆರಂಭಿಸುವ ಕನಸು ಹೊತ್ತಿದ್ದರು. ಇವರ ಕನಸು ಚಿಗುರೊಡೆಯುವ ಮುನ್ನವೇ ಕಮರಿ ಹೋಯಿತು.

ಚಾಲಕನ ಮದ್ಯ ಸೇವನೆ ಕಾರಣ
ಬೆಂಗಳೂರಿನಿಂದ ಎಚ್.ಡಿ.ಕೋಟೆಗೆ ಮರಳುತ್ತಿದ್ದ ಚಾಲಕ ಸಿದ್ದನಾಯಕ ಮದ್ಯ ಸೇವಿಸಿ ಅತಿ ವೇಗದಿಂದ ಕಾರು ಚಾಲನೆ ಮಾಡಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.ಇದಕ್ಕೆ ಪುಷ್ಟಿ ನೀಡುವಂತೆ  ಕಾರಿನಲ್ಲಿ ಮದ್ಯದ ಬಾಟಲಿ ದೊರೆತಿದೆ. ಘಟನೆಯ ಬಳಿಕ ಚಾಲಕ ತಲೆಮರೆಸಿಕೊಂಡಿದ್ದು ಕಾರಿನಲ್ಲಿ ವಾಹನ ಚಾಲನಾ ಪರವಾನಗಿ (ಡಿಎಲ್) ಸಿಕ್ಕಿದ್ದರಿಂದ ಇದು ಸಿದ್ದನಾಯಕನದ್ದೇ ಕಾರು ಎಂದು ತಿಳಿದುಬಂದಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆಯಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ತನಿಖಾ ತಂಡ ರಚನೆ: ತಲೆಮರೆಸಿಕೊಂಡಿರುವ ಕಾರಿನ ಚಾಲಕ ಸಿದ್ದನಾಯಕನ ಪತ್ತೆಗಾಗಿ ಜಿಲ್ಲಾ ಎಸ್ಪಿ ಆರ್.ದಿಲೀಪ್ ಅವರು ತನಿಖಾ ತಂಡ  ರಚಿಸಿದ್ದಾರೆ. ಸರಗೂರು ಪೊಲೀಸ್ ಠಾಣೆಯ ಎಸ್‌ಐ ನವೀನ್ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದ್ದು, ಆರೋಪಿ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಕಾರಿನಲ್ಲಿ ವೈದ್ಯರೊಬ್ಬರು ಇದ್ದರೆಂದೂ ಹೇಳಲಾಗುತ್ತಿದೆ. ಆದರೆ, ಚಾಲಕನಿಗೂ ಇವರಿಗೂ ಏನು ಸಂಬಂಧ ಎಂಬುದು ತಿಳಿದುಬಂದಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry