ಬುಧವಾರ, ಜೂನ್ 23, 2021
22 °C

ಸಂಭ್ರಮದಿಂದ ಜರುಗಿದ ಅಪ್ಪನ ತೇರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕಲ್ಯಾಣ ನಾಡಿನ ಆರಾಧ್ಯದೈವ ಮಹಾದಾಸೋಹಿ ಶರಣಬಸವೇಶ್ವರರ ರಥೋತ್ಸವ ಸೋಮವಾರ ಸಹಸ್ರಾರು ಭಕ್ತ ಸಮೂಹದ ಮಧ್ಯೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರು ದಾಸೋಹ ಮಹಾಮನೆ ಮೂಲಕ ಮೆರವಣಿಗೆಯಲ್ಲಿ ಆಗಮಿಸಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಧ್ಯೆ ನಿಲ್ಲಿಸಿದ ಮಂಟಪದಲ್ಲಿ ಭಕ್ತರನ್ನು ಉದ್ಧೇಶಿಸಿ ಮಾತನಾಡಿದರು.

ಕಾಯಕದಿಂದಲೇ ಕಾರ್ಯಸಿದ್ಧಿ, ಸರ್ವ ವಸ್ತುಗಳಲ್ಲಿ ದಾಸೋಹ ಕಂಡ ಶರಣರ ಸಂದೇಶವನ್ನು ಸಾರಿದರು.

 

ನಂತರ ಶರಣರ ದಾಸೋಹ ಬಟ್ಟಲು (ಪರುಷ ಬಟ್ಟಲು) ಅನ್ನು ನೆರೆದ ಭಕ್ತರಿಗೆ ಪ್ರದರ್ಶಿಸಿದರು. ಶಂಖವನ್ನು ಮೊಳಗಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.  ಭಕ್ತಿ, ಸಂಭ್ರಮದ ಮಧ್ಯೆ ಬೃಹತ್ ರಥವನ್ನು ಸಾವಿರಾರು ಭಕ್ತರು ಎಳೆದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದ ಭಕ್ತಾದಿಗಳು ಆಗಮಿಸಿದ್ದರು.

 

ಬಳೆ, ಬೆಂಡು, ಬತ್ತಾಸು ಮುಂತಾದ ಫಳಾರವನ್ನು ಕೊಂಡುಕೊಳ್ಳುವ ಜನರ ಭರಾಟೆಯಿತ್ತು. ಸುಮಾರು ಒಂದು ತಿಂಗಳು ಕಾಲ ನಡೆಯುವ ಈ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ.ರಥಕ್ಕೆ ಭಕ್ತರು ಕಬ್ಬು, ಉತ್ತತ್ತಿ, ಬಾಳೆಹಣ್ಣು, ತೆಂಗಿನಕಾಯಿ, ಹೂವುಗಳನ್ನು ಎಸೆದು ಕೃತಾರ್ಥರಾದರು. ಬೆಳಿಗ್ಗೆಯಿಂದಲೇ ನಗರದ ಮುಖ್ಯರಸ್ತೆಗಳು ಜನ ನಿಬಿಡವಾಗಿದ್ದವು. ವಿಜಾಪುರದ ಚೆನ್ನಬಸಪ್ಪನ ಚೂಡಾ, ಕಲ್ಬುರ್ಗಿ ಭಜಿ, ಹೈದರಾಬಾದಿನ ಬಳೆ, ಕಬ್ಬಿನ ಹಾಲಿನ ಮಾರಾಟ ಭರ್ಜರಿಯಾಗಿ ನಡೆಯಿತು. ಮನೋರಂಜನೆಗಳಿಗೆ ಜನ ಮುಗಿಬಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.