ಶನಿವಾರ, ಆಗಸ್ಟ್ 24, 2019
28 °C

ಸಂಭ್ರಮದ `ಅಜ್ಜಿಹಬ್ಬ' ಆಚರಣೆ

Published:
Updated:

ಭರಮಸಾಗರ: ಗ್ರಾಮದಲ್ಲಿ ಶುಕ್ರವಾರ ಸಂಭ್ರಮದಿಂದ `ಅಜ್ಜಿಹಬ್ಬ' ಆಚರಿಸಲಾಯಿತು.

ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರತಿ ವರ್ಷ ಆಷಾಢ ತಿಂಗಳಲ್ಲಿ ಈ ವಿಶಿಷ್ಟ ಆಚರಣೆ ಜರುಗುತ್ತದೆ. ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಿರಲಿ ಎಂದು `ಅಜ್ಜಿಹಬ್ಬ' ಆಚರಿಸಲಾಗುತ್ತದೆ ಎನ್ನುವುದು ನಂಬಿಕೆ.ಹಿಂದಿನ ಕಾಲದಲ್ಲಿ ಆಷಾಢದಲ್ಲಿ ಯಾವುದೇ ಶುಭಕಾರ್ಯಗಳು, ಹಬ್ಬ, ಹರಿದಿನಗಳು ನಡೆಯುತ್ತಿರಲಿಲ್ಲ. ಉತ್ತಮ ಮಳೆಯಾಗಿ ಹೊಲಗಳಲ್ಲಿ ಬೆಳೆ ಸಮೃದ್ಧಿಯಾಗಿರುತ್ತಿತ್ತು. ಮಾವಿನ ಹಣ್ಣಿನ ಸುಗ್ಗಿ ಮುಗಿಯುವ ಕಾಲವಾದ್ದರಿಂದ ಹಬ್ಬದ ನೆಪದಲ್ಲಿ ಹೋಳಿಗೆ ಊಟ ಮಾಡಲು ಈ ರೀತಿ ಆಚರಣೆ ಜಾರಿಗೆ ಬಂದಿದೆ ಎನ್ನುತ್ತಾರೆ ರೈತರಾದ ಶಂಭಣ್ಣ, ರುದ್ರೇಶ್, ಮಂಜುನಾಥ್.ಗ್ರಾಮ ದೇವತೆ ದುರ್ಗಾಂಬಿಕಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ವಿಶೇಷ ಪೂಜೆಗಳು ಜರುಗಿದವು. ಸಂಜೆ ಅಲಂಕೃತ ದುರ್ಗಾಂಬಿಕಾ, ಮಾರಿಕಾಂಬ ದೇವಿಯ ಉತ್ಸವಮೂರ್ತಿಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಊರಿನ ಗಡಿಯಲ್ಲಿನ ಬೇವಿನ ಮರದ ಬಳಿ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು.ಗ್ರಾಮಸ್ಥರು ಹೋಳಿಗೆ, ಅನ್ನ, ಬೇವಿನಸೊಪ್ಪು, ಕಾಯಿ, ಬಾಳೆಹಣ್ಣು, ಹೂವು, ಎಲೆ-ಅಡಿಕೆ ಇರುವ ಮರದ ಪುಟ್ಟಿಗಳನ್ನು ಬೇವಿನ ಮರದ ಕೆಳಗೆ ಇಟ್ಟು ಪೂಜೆ ಸಲ್ಲಿಸಿ ದೇವರಿಗೆ ಎಡೆ ಅರ್ಪಿಸಿ ಹಿಂದಿರುಗಿ ನೋಡದೆ ಗ್ರಾಮಕ್ಕೆ ಮರಳಿದರು. ನಂತರ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಕರೆತಂದು ಗುಡಿ ತುಂಬಿಸಲಾಯಿತು.

Post Comments (+)