ಸಂಭ್ರಮದ ಆಯುಧಪೂಜೆ, ವಿಜಯ ದಶಮಿ

7

ಸಂಭ್ರಮದ ಆಯುಧಪೂಜೆ, ವಿಜಯ ದಶಮಿ

Published:
Updated:

ವಿಜಯಪುರ: ತಾಲ್ಲೂಕಿನೆಲ್ಲೆಡೆ ಅಂಗಡಿ-ಮುಂಗಟ್ಟುಗಳು, ಕಚೇರಿಗಳಲ್ಲಿ ವಿಶೇಷ ಅಲಂಕಾರ, ಪೂಜೆ ಹಾಗೂ ಸಿಹಿ ವಿತರಣೆ ಮಾಡುವ ಮೂಲಕ ಸಂಭ್ರಮದಿಂದ ಆಯುಧಪೂಜೆಯನ್ನು ಆಚರಿಸಲಾಯಿತು.ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಶರವನ್ನವರಾತ್ರಿ ಪ್ರಯುಕ್ತ ಪವಿತ್ರ ಒಂಭತ್ತು ದಿನಗಳೂ ವಿಶೇಷ ಅಲಂಕಾರ, ಪೂಜೆ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು. ನಗರೇಶ್ವರಸ್ವಾಮಿ , ಆದಿನಾರಾಯಣಸ್ವಾಮಿ ,  ಚಾಮುಂಡೇಶ್ವರಿ ದೇವಿ ಹಾಗೂ ಪರಿವಾರ ದೇವರುಗಳನ್ನು ಪಟ್ಟಕ್ಕೆ ಕೂರಿಸಲಾಗಿತ್ತು. ಲಲಿತ ಸಹಸ್ರನಾಮ ಪಾರಾಯಣ, ಸಹಸ್ರ ಕುಂಕುಮಾರ್ಚನೆ, ಅಷ್ಟೋತ್ತರ, ಮಹಾಮಂಗಳಾರತಿ ನಡೆಯಿತು.

 

ದುರ್ಗಾಷ್ಟಮಿ ಪ್ರಯುಕ್ತ ಚಾಮುಂಡೇಶ್ವರಿ ದೇವಿಯವರಿಗೆ ಚಂಡಿಹೋಮ, ವಿಜಯದಶಮಿಯಂದು  ನಗರೇಶ್ವರಸ್ವಾಮಿ ,  ಆದಿನಾರಾಯಣಸ್ವಾಮಿ , ಚಾಮುಂಡೇಶ್ವರಿ ದೇವಿ ಹಾಗೂ ಪರಿವಾರ ದೇವರುಗಳ ರಾಜಬೀದಿ ಉತ್ಸವ ನಡೆಯಿತು. ಪಟ್ಟಣದ ಇನ್ನಿತರೆ ಎಲ್ಲಾ ದೇವಾಲಯಗಳಲ್ಲಿ ದೇವರ ಉತ್ಸವಮೂರ್ತಿಗಳನ್ನು ಪಟ್ಟಕ್ಕೆ ಕೂರಿಸಿದ್ದುದಲ್ಲದೇ ವಿಶೇಷ ಅಲಂಕಾರ, ಪೂಜೆ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.ಈ ಪ್ರಯುಕ್ತ ಅನ್ನಪೂರ್ಣೇಶ್ವರಿ ವಿಗ್ರಹಕ್ಕೆ ಅನ್ನಪೂರ್ಣೇಶ್ವರಿ ಅಲಂಕಾರ, ಕೊಬ್ಬರಿ ಅಲಂಕಾರ, ನಾಗಕನ್ನಿಕೆ, ಶಾಖಾಂಬರಿ,  ರಾಜರಾಜೇಶ್ವರಿ ಅಲಂಕಾರ, ಬೆಣ್ಣೆ ಅಲಂಕಾರ, ದ್ರಾಕ್ಷಿ, ಗೋಡಂಬಿ ಅಲಂಕಾರ, ಶ್ರೀ ವೀರಭದ್ರನ ಅಲಂಕಾರ, ವೀಳ್ಯದೆಲೆ ಅಲಂಕಾರ, ಕುಂದನ್‌ಮಣಿ ಅಲಂಕಾರಗಳನ್ನು ವ್ಯವಸ್ಥೆ ಮಾಡಲಾಗಿತ್ತು.ಇಲ್ಲಿನ ಪುರಸಭಾ ಆವರಣದಲ್ಲಿ ಟ್ರಾಕ್ಟರ್ ಹಾಗೂ ಮತ್ತಿತರ ವಾಹನಗಳನ್ನು ಸಾಮೂಹಿಕವಾಗಿ ಹೂವುಗಳಿಂದ ಅಲಂಕರಿಸಿ ಪೂಜಿಸಲಾಯಿತಲ್ಲದೇ ಕಚೇರಿಯಲ್ಲಿ ಗಣೇಶ, ಸರಸ್ವತಿ, ಲಕ್ಷ್ಮಿ ಮತ್ತು ದುರ್ಗೆಯರ ಭಾವಚಿತ್ರಗಳಿಗೆ ಪೂಜೆ ಅರ್ಪಿಸಿ ಸಿಹಿ ವಿತರಿಸಲಾಯಿತು. ಬಹುತೇಕ ಅಂಗಡಿಗಳು, ಕೆ.ಪಿ.ಟಿ.ಸಿ.ಎಲ್ ಮತ್ತು ಬೆಸ್ಕಾಂ ಕಚೇರಿಗಳು ವಿದ್ಯುದ್ದೀಪಗಳಿಂದ ಜಗಮಗಿಸುತ್ತಿದ್ದವಲ್ಲದೇ ಬಾಳೆ ಕಂದು, ಹೂಗಳಿಂದ ಅಲಂಕೃತಗೊಂಡಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry