ಸಂಭ್ರಮದ ಈದ್-ಮಿಲಾದ್ ಆಚರಣೆ

7

ಸಂಭ್ರಮದ ಈದ್-ಮಿಲಾದ್ ಆಚರಣೆ

Published:
Updated:

ದಾವಣಗೆರೆ: ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮದಿನ ಈದ್ ಮಿಲಾದ್ ಹಿನ್ನೆಲೆಯಲ್ಲಿ ನಗರದಲ್ಲಿ ಮುಸ್ಲಿಂ ಬಾಂಧವರ ಸಂಭ್ರಮ, ಭಾವೈಕ್ಯ, ಸಮುದಾಯದ ಜನಶಕ್ತಿ ಪ್ರದರ್ಶನ ಭಾನುವಾರ ಅನಾವರಣಗೊಂಡಿತು.ನಗರದ ವಿವಿಧ ಮೂಲೆಗಳಿಂದ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡು ಹಬ್ಬದ ಸಂಭ್ರಮ ಆಚರಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಎಚ್‌ಕೆಆರ್ ವೃತ್ತ, ಕೆಟಿಜೆ ನಗರ, ಭಗತ್‌ಸಿಂಗ್ ನಗರ, ಶಿವಪ್ಪಯ್ಯ ವೃತ್ತ, ವಿನೋಬನಗರ, ಪಿಬಿ ರಸ್ತೆ, ಆಜಾದ್‌ನಗರ, ಬೇತೂರು ರಸ್ತೆಯಲ್ಲಿ ಹಸಿರು ಬಾವುಟಗಳು, ಹಸಿರು ಬಿಳಿ ಪತಾಕೆಗಳು, ತೋರಣ ರಾರಾಜಿಸಿದವು. ಪ್ರವಾದಿ ಮಹಮದ್ ಪೈಗಂಬರರ ಸಂದೇಶವುಳ್ಳ ಉರ್ದು ಬರಹಗಳು, ಮೆಕ್ಕಾ ಸಹಿತ ವಿವಿಧ ಮಸೀದಿಯ ಚಿತ್ರಗಳು ಫಲಕದಲ್ಲಿದ್ದವು.ಮಧ್ಯಾಹ್ನ 2.30ರ ವೇಳೆಗೆ ಆಜಾದ್‌ನಗರದಿಂದ ಮೆರವಣಿಗೆ ಆರಂಭವಾಯಿತು. ಅದೇ ವೇಳೆಗೆ ನಗರದ ಇತರ ಭಾಗಗಳಿಂದಲೂ ಮೆರವಣಿಗೆ ಹೊರಟಿತು. ಆಟೋರಿಕ್ಷಾ, ಟ್ರ್ಯಾಕ್ಟರ್, ತಳ್ಳುಗಾಡಿಗಳಲ್ಲಿಯೂ ವಿವಿಧ ಮಸೀದಿಗಳ ಸ್ತಬ್ಧಚಿತ್ರಗಳು ಚಲಿಸಿದವು. ಇಸ್ಲಾಂ ಧಾರ್ಮಿಕ ಹಾಡುಗಳಿಗೆ ಯುವಕರು ಹೆಜ್ಜೆ ಹಾಕಿದರು. ಬೃಹತ್ ಬಾವುಟಗಳನ್ನು ಹಾರಿಸಿದರು.ಗಾಂಧಿ ವೃತ್ತದಲ್ಲಿ ಎಲ್ಲ ದಿಕ್ಕುಗಳಿಂದ ಬಂದ ಮೆರವಣಿಗೆಗಳ ಸಮಾಗಮವಾಯಿತು. ಅಕ್ಷರಶಃ ಜನಸಾಗರವೇ ಸೇರಿತ್ತು. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಬಿಳಿ ಜುಬ್ಬಾ, ಕುರ್ತಾ, ಪೈಜಾಮ, ಬಿಳಿ ಟೋಪಿ ಧರಿಸಿದ ಮುಸ್ಲಿಂ ಬಾಂಧವರು ಕಂಡುಬಂದರು.

 

ಅಲ್ಲಲ್ಲಿ ಗುಲಾಬಿ ಹಾಗೂ ಹಸಿರು ಬಣ್ಣದ ಪೇಟಾ ಧರಿಸಿದ ಯುವಕರೂ ಗಮನ ಸೆಳೆದರು. ಗಾಂಧಿ ವೃತ್ತದಲ್ಲಿ ಗುಂಪು ಸೇರಿ ಕುಣಿದು ಕುಪ್ಪಳಿಸಿದರು. ಇದೇ ವೇಳೆ ಕವ್ವಾಲಿ ಪ್ರದರ್ಶನವೂ ನಡೆಯಿತು. ಪರಸ್ಪರ ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.ಧರ್ಮಗುರು ಮೌಲಾನಾ ಇಬ್ರಾಹಿಂ ಸಖಾಫಿ ಮೆರವಣಿಗೆಯಲ್ಲಿ ಮಾತನಾಡಿ, ಪ್ರವಾದಿ ಮಹಮದ್ ಪೈಗಂಬರ್ ಅವರು ಸಾಗಿಸಿದ ಆದರ್ಶಮಯ ಬದುಕನ್ನು ಮಾದರಿಯಾಗಿಸಿಕೊಳ್ಳಬೇಕು. ಅವರು ಸಾರಿದ ವಿಶ್ವಶಾಂತಿಯ ಸಂದೇಶವನ್ನು ಪಸರಿಸಬೇಕು. ಶಾಂತಿ, ಸಹಬಾಳ್ವೆ ನಮ್ಮದಾಗಬೇಕು ಎಂದು ಆಶಿಸಿದರು.ಸಂಚಾರ ಬಂದ್: ಮೆರವಣಿಗೆ ಹಿನ್ನೆಲೆಯಲ್ಲಿ ಮಧ್ಯಾಹ್ನ  3ರಿಂದ  ಸಂಜೆ 5.30ರವರೆಗೆ ಇಡೀ ನಗರ ಅಕ್ಷರಶಃ ಬಂದ್ ಸ್ವರೂಪ ಪಡೆದಿತ್ತು. ಎಲ್ಲ ಸಂಚಾರ ಸ್ಥಗಿತಗೊಂಡಿತ್ತು. ನಗರ ಸಾರಿಗೆ ಹಾಗೂ ಗ್ರಾಮಾಂತರ ಸಾರಿಗೆಯ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ನಗರದ ಹೈಸ್ಕೂಲ್ ಮೈದಾನ ಹಾಗೂ ಹೊರವಲಯ ದಲ್ಲಿಯೇ  ಸ್ಥಗಿತಗೊಂಡಿದ್ದವು. ಪಿಬಿ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರಲಿಲ್ಲ. ಎಲ್ಲ ಪ್ರದೇಶಗಳಲ್ಲಿಯೂ ಪೊಲೀಸ್ ಬಂದೋಬಸ್ತ್ ಇತ್ತು.ಪಿಬಿ ರಸ್ತೆಯ ರಸ್ತೆ ವಿಭಜಕ ಮತ್ತು ಪಾಲಿಕೆಯ ಮಹಡಿಯಲ್ಲಿ ನಿಂತು ಮಹಿಳೆಯರೂ ಮೆರವಣಿಗೆ ವೀಕ್ಷಿಸಿದರು.

ಈದ್ ಮಿಲಾದ್ ಸಮಿತಿಯ ಗೌರವಾಧ್ಯಕ್ಷ ಸೈಯದ್ ಸೈಫುಲ್ಲಾ, ಕೆ. ಅತಾವುಲ್ಲಾ ರಜ್ವಿ, ಕೆ.ಎಂ. ಹಮೀದ್ ಖಾನ್ ಇತರರು ಪಾಲ್ಗೊಂಡಿದ್ದರು. ನಗರದ ಮಿಲ್ಲತ್ ಕಾಲೇಜು ಆವರಣದಲ್ಲಿ ಮೆರವಣಿಗೆ ಅಂತ್ಯಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry