ಸಂಭ್ರಮದ ಗೀತೋತ್ಸವ ಮೆರವಣಿಗೆ

7

ಸಂಭ್ರಮದ ಗೀತೋತ್ಸವ ಮೆರವಣಿಗೆ

Published:
Updated:

ದಾವಣಗೆರೆ: ಕರ್ನಾಟಕ ಸುಗಮ ಸಂಗೀತ ಪರಿಷತ್ ಮತ್ತು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾದ 9ನೇ ಸುಗಮ ಸಂಗೀತ ಸಮ್ಮೇಳನ `ಗೀತೋತ್ಸವ-2012~ದ ಅಧ್ಯಕ್ಷರು ಮತ್ತು ಕಲಾವಿದರ ಮೆರವಣಿಗೆ ಭಾನುವಾರ ಬೆಳಿಗ್ಗೆ ನಗರದಲ್ಲಿ ವೈಭವದಿಂದ ಸಾಗಿತು.ಸಮ್ಮೇಳನಾಧ್ಯಕ್ಷೆ, ಉಭಯಗಾನ ವಿದುಷಿ ಡಾ.ಶ್ಯಾಮಲಾ ಜಿ. ಭಾವೆ, ಇತರ ಕಲಾವಿದರು ಮತ್ತು ಸಾಹಿತಿಗಳನ್ನು ಅಲಂಕೃತ ರಥಗಳಲ್ಲಿ ಬಾಪೂಜಿ ಸಭಾಂಗಣದತ್ತ ಕರೆದೊಯ್ಯಲಾಯಿತು. ಜಯದೇವ ವೃತ್ತದಲ್ಲಿ ಮೇಯರ್ ಎಚ್.ಎನ್. ಗುರುನಾಥ್ ಮೆರವಣಿಗೆಗೆ ಚಾಲನೆ ನೀಡಿದರು.ಮೆರವಣಿಗೆ ವಿಶೇಷ: ಮೂರು ಅಲಂಕೃತ ರಥಗಳ ಪೈಕಿ ಮೊದಲ ರಥದಲ್ಲಿ ಭುವನೇಶ್ವರಿ, ಅದರ ಹಿಂದೆ ಸಮ್ಮೇಳನಾಧ್ಯಕ್ಷೆ, ಕೊನೆಯ ರಥದಲ್ಲಿ ನಾಡಿನ ಖ್ಯಾತ ಸುಗಮ ಸಂಗೀತ ಕಲಾವಿದರು ಮತ್ತು ಸಾಹಿತಿಗಳನ್ನು ಕುಳ್ಳಿರಿಸಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಸೇರಿದ ಜನರು ಕಲಾವಿದರನ್ನು ಕಂಡು ಕೈ ಬೀಸಿದರು. ಮೂರೂ ರಥಗಳ ಮುಂಭಾಗದಲ್ಲಿ ಡೊಳ್ಳುಕುಣಿತ, ಯಕ್ಷಗಾನ, ಬಯಲಾಟ, ಕೋಲಾಟ, ಸೀರೆಯುಟ್ಟ ಮಹಿಳೆಯರು, ಕೀಲುಕುದುರೆ, ನಂದಿಕೋಲು, ವೀರಗಾಸೆ, ಸ್ಯಾಕ್ಸೋಫೋನ್ ಮೇಳ ಇದ್ದವು. ಎರಡು ಬೃಹತ್ ಕನ್ನಡ ಧ್ವಜ, ಅದರ ಹಿಂಭಾಗ ಕುರ್ತಾ ಧರಿಸಿದ್ದ ಯುವಕರು ಕನ್ನಡ ಧ್ವಜಗಳನ್ನು ಹಿಡಿದು ಸಾಗಿದರು.ಜಿಲ್ಲಾ ಉತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಗೀತೋತ್ಸವಕ್ಕೆ ಮೆರವಣಿಗೆ ವಿಶೇಷ ರಂಗು ತಂದಿತು. ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ತಹಶೀಲ್ದಾರ್ ಡಾ.ಬಿ.ಆರ್. ಹರೀಶ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ, ಸುಗಮ ಸಂಗೀತ ಪರಿಷತ್‌ನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ ಇತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry