ಶುಕ್ರವಾರ, ಅಕ್ಟೋಬರ್ 18, 2019
28 °C

ಸಂಭ್ರಮದ ಗೀತ ನೃತ್ಯ ಸಮಾಗಮ

Published:
Updated:

ಲಯ ಲಾಸ್ಯ

ಪರಿಣತ ಗಾಯಕಿ ಪಿ.ರಮಾ ಅವರ ಏಳು ದಿನಗಳ ಸಂಗೀತ ಸಂಭ್ರಮ ಸಂಗೀತ ಮತ್ತು ನೃತ್ಯ ಪ್ರೇಮಿಗಳಿಗೆ ನಿರಂತರವಾಗಿ ಸಂತಸವನ್ನುಂಟು ಮಾಡುತ್ತಿದೆ.ಮೊದಲ ನಾಲ್ಕು ದಿನಗಳ ಕಾರ್ಯಕ್ರಮಗಳು ಜನವರಿ ಏಳರವರೆಗೆ ಸೇವಾ ಸದನದಲ್ಲಿ ನಡೆದವು. ಎರಡನೆಯ ದಿನ ಹಾಡಿದ ರಮಾ ಅವರ ಗಾಯನ ಕೌಶಲ್ಯವು ವಿಶಿಷ್ಟವಾದ ಫ್ಯೂಷನ್ ಸಂಗೀತದ ರೂಪದಲ್ಲಿತ್ತು. ಅವರ ಗಾಯನವು ಕೊಳಲು (ರಘುನಂದನ್), ತಬಲ (ವಿಶ್ವನಾಥ ನಾಕೋಡ್), ಮೃದಂಗ (ಹರ್ಷಸಾಮಗ) ಪಕ್ಕವಾದ್ಯಗಳ ಸಹಿತ ಕೀಬೋರ್ಡ್ (ವರುಣ್), ಡ್ರಮ್ಸ (ಕಾರ್ತಿಕ್‌ಮಣಿ), ಬೇಸ್‌ಗಿಟಾರ್ (ಕ್ಯಾಲೆಬ್) ಮತ್ತು ಪಾಶ್ಚಾತ್ಯ ಪಿಟೀಲು (ಮನೋಜ್ ಸಿ.ಜಾರ್ಜ್) ವಾದ್ಯಗಳೊಂದಿಗೆ ಗಮನ ಸೆಳೆಯಿತು.

 

ಪಾಶ್ಚಾತ್ಯವಾದ್ಯಗಳನ್ನು ಬಳಸಿಕೊಂಡ ಬೆಸುಗೆ ಸಂಗೀತವು ಮಿಶ್ರ ಪ್ರತಿಕ್ರಿಯೆಯನ್ನುಂಟು ಮಾಡಿತು. ಈ ವಾದ್ಯಗಳ ಸಂಖ್ಯೆ ಕಡಿಮೆಯಾಗಿರಬಹುದಿತ್ತೇನೋ? ಆದರೂ ಕಲ್ಪನಾಸಂಗೀತದ ಭಾಗಗಳಲ್ಲಿ ಮಾತ್ರ ವಾದ್ಯಗಳು ಕ್ರಿಯಾಶೀಲವಾಗಿ ಮೂಡಿಬಂದು, ಹೆಚ್ಚಿನ ಧ್ವನಿಗದ್ದಲಕ್ಕೆ ಆಸ್ಪದ ನೀಡದೇಹೋದದ್ದು ಸ್ವಾಗತಾರ್ಹ.ಕಛೇರಿ ಆರಂಭವಾದದ್ದು `ಮಹಾಗಣಪತಿಂ~ (ನಾಟ) ಮೂಲಕ. `ಎಂದರೋಮಹಾನುಭಾವುಲು~ ಮತ್ತಷ್ಟು ಭಾವಪೂರ್ಣವಾಗಿರಬಹುದಾಗಿತ್ತು. ಹರಿಕಾಂಭೋಜಿ ಆಧಾರಿತ ವಾದ್ಯರಚನೆ ರಮಾ ಅವರ ಪಲುಕುಪ್ರಧಾನ ಗಾಯನದಿಂದ ರಂಜಿಸಿತು. ವಾಗಧೀಶ್ವರಿ ರಾಗ, ತಾನ ಮತ್ತು ಪಲ್ಲವಿ ರಮಾ ಅವರ ಸಫಲತೆಗೆ ಸಾಕ್ಷಿ. ಅದೇ ಅವರ ಕಛೇರಿಯ ಪ್ರಧಾನ ಹಾಗೂ ಪರಿಣಾಮಕಾರಿ ಪ್ರಸ್ತುತಿಯಾಯಿತು.ರಘುನಂದನ ಅವರ ಜೊತೆಗೆ ರಾಗ, ತಾನ ಮತ್ತು ಪಲ್ಲವಿ ಹಾಗೂ ಸ್ವರಪ್ರಸ್ತಾರಗಳನ್ನು ಸಾಂಪ್ರದಾಯಿಕ ಮತ್ತು ಕಲಾತ್ಮಕವಾಗಿ ರಮಾ ಅವರು ಹಂಚಿಕೊಂಡು ತಮ್ಮ ವಿದ್ವತ್ತನ್ನು ಮೆರೆದರು. ಇತರೆ ವಾದ್ಯಗಳೊಂದಿಗೆ ಸ್ಪಂದಿಸಿ ತಮ್ಮ ಜಾಣ್ಮೆಯನ್ನು ಪ್ರದರ್ಶಿಸಿದರು. ಭಾವಪೂರ್ಣ  `ತಂಬೂರಿಮೀಟಿದವ~  (ಸಿಂಧುಭೈರವಿ) ರಚನೆಯೊಂದಿಗೆ ಅವರ ಕಾರ್ಯಕ್ರಮ ಮುಗಿಯಿತು.ಪ್ರಬುದ್ಧ ಕೂಚಿಪುಡಿನಾಟ್ಯ


ವೈಜಯಂತಿಕಾಶಿ ಅವರ ಕೂಚಿಪುಡಿನಾಟ್ಯ ಆ ಪ್ರಕಾರದ ಓಘ, ಓಜಸ್ಸು, ಅಭಿನಯ ಸೂಕ್ಷ್ಮತೆ, ಸಾತ್ವಿಕಾಭಿನಯದ ಉತ್ಕೃಷ್ಟತೆ, ಸರ್ವವ್ಯಾಪಿ ವಾಚಿಕಾಭಿನಯ ಮುಂತಾದ ಎಲ್ಲ ಅತ್ಯವಶ್ಯಕ ಗುಣವಿಶೇಷಗಳಿಂದ ಹೊಳೆಯಿತು. ಶುದ್ಧ ನೃತ್ತ ಮತ್ತು ಲಯದ ಮೇಲಿನ ಅವರ ಪ್ರಭುತ್ವ ಮೈಮನಗಳನ್ನು ಮುದಗೊಳಿಸಿತು. ಅರ್ಧನಾರೀಶ್ವರನ ಸ್ವರೂಪ ಮತ್ತು ಲಕ್ಷಣಗಳು ಕೂಚಿಪುಡಿನಾಟ್ಯದ ಲಾಸ್ಯ ಮತ್ತು ತಾಂಡವ ಚಲನವಲನಗಳ ಅಳವಡಿಕೆಯೊಂದಿಗೆ ಸಮಗ್ರವಾಗಿ ಚಿತ್ರಿತಗೊಂಡವು.ಕಾಲ ಮತ್ತು ನಡೆ ಭೇದಗಳ ಲಯವಿವಿಧ್ಯ ರೋಚಕವೆನಿಸಿದವು. ಶೃಂಗಾರರಸನಿಷ್ಠ ಸತ್ಯಭಾಮಾ ಪಾತ್ರದ ಗುಣಗಾನದ ದರುವಿನ ಮಂಡನೆಯಲ್ಲಿ ಭಾವ-ಲಾವಣ್ಯಗಳ ಸ್ವಚ್ಛಂದ ವಿಹಾರ, ಭಾವಕ್ಕೆ ತಕ್ಕಂತೆ ಬಳುಕುವ ಚಲನೆಗಳು, ಬೇಕೆಂದಾಗ ಹಿಗ್ಗಿದ ನೃತ್ತ ಮತ್ತು ಸಹಜ ಚಿತ್ರಣ ಅನುಪಮ. ತೆರೆಯ ಮರೆಯಲ್ಲಿ ಪ್ರವೇಶಿಸಿ ಭಾಮಾ ಪಾತ್ರಕ್ಕೆ ಅವರು ಮೂರ್ತಿತ್ವವನ್ನು ನೀಡಿದರು.ಆಳವಾದ ಆಲೋಚನೆ, ನವುರಾದ ಕಲ್ಪನೆ, ಕಲಾತ್ಮಕವಾಗಿ ಮಿಡಿದ ಹೃದಯ ಮತ್ತು ಸ್ತ್ರೀಚೇತನದ ಸಾರ್ವತ್ರಿಕ ಸಂವೇದನೆಗಳಿಗೆ ಧ್ವನಿ ನೀಡಿದ ಗಾಂಧಾರಿ ಪಾತ್ರ ವಿಶ್ಲೇಷಣೆಯನ್ನು ಕನ್ನಡ ಕತಿ (ಕುಡಿ ಅರಳಿ ಚಿಗುರೊಡೆದು) ಯಂತೆ ಮಾಡಲಾಯಿತು. ಶ್ರೀಕೃಷ್ಣನ ಪ್ರಶಂಸೆಯನ್ನು ತರಂಗಂನ (`ಪಾಹಿ ಪಾಹಿ ಕೃಷ್ಣ~, ಅಮೃತವರ್ಷಿಣಿ) ಮೂಲಕ ಮಾಡಲಾಯಿತು. ಸಂಪ್ರದಾಯದಂತೆ ಹಿತ್ತಾಳೆ ತಟ್ಟೆಯಂಚಿನ ಮೇಲೆ ನಿಂತು ಕ್ಲಿಷ್ಟ ಲಯಮಾದರಿಗಳನ್ನು ನಿರಾಯಾಸವಾಗಿ ಪ್ರತಿಪಾದಿಸಿದ ವೈಜಯಂತಿ ತಮ್ಮ ಕಲಾ ಪ್ರೌಢಿಮೆ ಮತ್ತು ರಂಗಪ್ರಜ್ಞೆಯನ್ನು ಪ್ರದರ್ಶಿಸಿದರು.ಅವರ ಹಿತ್ತಾಳೆ ತಟ್ಟೆಯು ವಿಂಗ್ಸ್‌ನ ಹಿಂದೆ ಎಲ್ಲೋ ಕಾಣಸಿಗದೆ ಹೋದಾಗ ಕಿಂಚಿತ್ತೂ ವಿಚಲಿತರಾಗಲಿಲ್ಲ. ಅಲ್ಲೇ ಇದ್ದ ಪುಟ್ಟ ಸ್ಟೀಲ್‌ತಟ್ಟೆಯನ್ನೇ ಎತ್ತಿಕೊಂಡು ಅದರ ಮೇಲೇ ನೃತ್ತವನ್ನು ಪ್ರದರ್ಶಿಸಿದ ವೈಜಯಂತಿ ಅಭಿನಂದನೆಗೆ ಪಾತ್ರರಾದರು. ವೇದಿಕೆಯ ಮೇಲಿದ್ದ ಕೃಷ್ಣನ ಮೂರ್ತಿಗೆ ವಂದನೆ ಸಲ್ಲಿಸುತ್ತಿದ್ದಾಗ ಅವರ ಕೈಗೆ ಅಕಸ್ಮಾತ್ ಸೇರಿದ ಕೊಳಲನ್ನು ತೆಗೆದಿಟ್ಟ ಪರಿಯೂ ಖುಷಿಕೊಟ್ಟಿತು.ರಸಮಯ ಭರತನಾಟ್ಯ

ಸಫಲ ನಿರ್ದೇಶಕಿಯಾಗಿ ಸುಪ್ರಸಿದ್ಧ ಭರತನಾಟ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಅವರ ಪ್ರತಿಭೆ ಶನಿವಾರ ರಾರಾಜಿಸಿತು. ಅವರ ಪ್ರಸಿದ್ಧ ಡಾನ್ಸ್ ರೆಪರ್ಟರಿಯ ಸದಸ್ಯರಾದ ನುರಿತ ಪ್ರತಿಭಾವಂತ ನರ್ತಕ ಗುರು ಸತ್ಯನಾರಾಯಣರಾಜು, ಸೋಮಶೇಖರ್, ರಾಧಿಕಾ ರಾಮಾನುಜಂ ಮತ್ತು ಸೌಮ್ಯ ಸೋಮಶೇಖರ್ ಭರತನಾಟ್ಯದ ನೃತ್ತ ವೈಶಿಷ್ಟ್ಯವನ್ನು ರಸಮಯವಾಗಿ ತೋರಿದರು. ವೈವಿಧ್ಯ ಹಸ್ತ, ಪಾದ, ಶಿರ ಮತ್ತು ನಯನ ಭೇದಗಳಿಂದ ಬೆಳೆಯುತ್ತಾ ಹೋದ, ಕಾಲಪ್ರಮಾಣದಲ್ಲಿ ನಡೆ ಭೇದಗಳಲ್ಲಿ ಚಾಚಿಕೊಂಡ ಗಟ್ಟಿಯಾದ ಲಯವು ಮಲ್ಲಾರಿಯನ್ನು ಸುಸಜ್ಜಿತಗೊಳಿಸಿ ನೋಡುಗರಿಗೆ ನೃತ್ಯದೌತಣ ವನ್ನುಣಿಸಿತು.ವೇದಿಕೆಯನ್ನು ತುಂಬಿದ ವಿವಿಧ ಜಾಮಿತಿಗಳು, ಗುಂಪು ವಿಂಗಡನೆ ಮತ್ತು ಸಮೀಕರಣ ರೋಮಾಂಚಕವಾಗಿತ್ತು. ಶಂಕರಾಚಾರ್ಯರ ಸುಪರಿಚಿತ `ನಾಗೇಂದ್ರಹಾರಾಯ~ (ಶಿವಪಂಚಾಕ್ಷರಿ) ಸ್ತೋತ್ರವನ್ನು ವಿಸ್ತರಿಸುತ್ತಾಹೋದ ಶಿವನ ಗುಣಲಕ್ಷಣಗಳ ಅಭಿನಯ ಸಾರ್ಥಕ. ಉತ್ಸಾಹಪೂರ್ಣ ಕೀರವಾಣಿ ಸರಿಗಮ್(ತಿಲ್ಲಾನದಂತೆ)ನೊಂದಿಗೆ ಶ್ರವಣ-ದೃಶ್ಯ ವೈಭವದ ಕಾರ್ಯಕ್ರಮ ಸಮಾಪ್ತವಾಯಿತು.

ಸಾಮರಸ್ಯದ ಯುಗಳ ಗಾಯನಜನಪ್ರಿಯ ಗಾಯಕ ಜೋಡಿ ಮಲ್ಲಾಡಿ ಸೋದರರು ತಮ್ಮ ಎಂದಿನ ವಿದ್ವತ್ತು ಮತ್ತು ಕಲಾವಂತಿಕೆಯ ಯುಗಳ ಗಾಯನದಿಂದ ರಸಿಕರ ಮನ ಗೆದ್ದರು. ಭಯಂಕರ ದುಡಿಮೆ, ವೇಳೆ, ಗೆಲ್ಲುವ ಅಭೀಪ್ಸೆ ಹಾಗೂ ಕ್ರಮಬದ್ಧವಾದ ಅಭ್ಯಾಸದಿಂದ ಅವರ ಸೃಜನಕ್ರಿಯೆ ಶ್ರೀಮಂತವಾಗಿತ್ತು. ಸಮಬಗೆಯ ಸಾಮರಸ್ಯದಿಂದ ಅವರ ನಾದ ನಿರ್ಮಿತಿಯು ಎಲ್ಲ ಸ್ಥಾಯಿಗಳಲ್ಲೂ ಚಲ್ಲವರಿದು ಚಿತ್ರಣ ಪೂರ್ಣವಾಯಿತು.ಜನರಂಜಿನಿ ರಾಗದ ಅಪರೂಪದ ತ್ಯಾಗರಾಜರ ಕೃತಿ ಸ್ಮರಣೆ ಸುಖಮು ಸುಭಗ ಲಯದಲ್ಲಿ ರೂಪುಗೊಂಡು ರಾಮನಾಮ ಎಂಬಲ್ಲಿ ಅವರು ಹಾಕಿದ ಸ್ವರಗಳು ಇಷ್ಟವಾದವು. ನಾಟಕಪ್ರಿಯರಾಗದ ಸವಿಸ್ತಾರ ಆಲಾಪನೆಯೊಂದಿಗೆ `ಇದಿಸಮಯಮು ಬ್ರೋವರಾದ~ ಕೀರ್ತನೆಯನ್ನು ಹಾಡಿ ಪರಮಪುರುಷ ಎಂಬಲ್ಲಿ ನೆರೆವಲ್ ಮಾಡಿ ರಾಗಭಾವವನ್ನು ವಿಶಾಲವಾಗಿ ಪಸರಿಸಿದರು.ನರಸಿಂಹ ಆಗಚ್ಛ (ಮೋಹನ) ಆತ್ಮೀಯವಾಗಿತ್ತು. ಕಾಂಭೋಜಿಯ ವಿಶಾಲ ಹರಹಿನಲ್ಲಿ ತ್ಯಾಗರಾಜರ ಲಾಲ್ಗುಡಿ ಪಂಚರತ್ನ ಕೃತಿಗಳಲ್ಲಿ ಒಂದಾದ ಮಹಿತಪ್ರವದ್ಧಶ್ರೀಮತಿ ಸಾಹಿತ್ಯ ಮತ್ತು ಸ್ವರವಿನ್ಯಾಸ ಸಹಿತ ಆನಂದವನ್ನು ಸಂವರ್ಧಿಸುವಂತಹ ನಿಚ್ಚಳ ಅಭಿವ್ಯಕ್ತಿಯನ್ನು ಹೊಂದಿತ್ತು. ಧರ್ಮಶ್ರವಣ (ಶುದ್ಧಸಾವೇರಿ) ಮತ್ತು ಜಯಜಯರಾಮ (ಮಣಿರಂಗು) ಮೇಲ್ತರಗತಿಯ ಆಸ್ವಾದಕತೆಯನ್ನು ಒದಗಿಸಿತು.

 

ಚಾರುಲತಾ ರಾಮಾನುಜಂ (ಪಿಟೀಲು), ಎ.ಕುಮಾರ್ (ಮೃದಂಗ) ಮತ್ತು ಓಂಕಾರ್ (ಘಟಂ) ಅವರು ಕಲಾಮಯೀ ಒಡನಾಡಿಗಳಾಗಿ ಕಛೇರಿಯ ಮೆರುಗನ್ನು ಹೆಚ್ಚಿಸಿದರು.

-

Post Comments (+)