ಸಂಭ್ರಮದ ಬನಶಂಕರಿ ರಥೋತ್ಸವ

7

ಸಂಭ್ರಮದ ಬನಶಂಕರಿ ರಥೋತ್ಸವ

Published:
Updated:

ಕೆರೂರ: ಇಲ್ಲಿನ ದೇವಾಂಗಪೇಟೆ ಬನಶಂಕರಿಗುಡಿ ಆವರಣ ಸೋಮವಾರ ಸಂಜೆ ಗಿಜಿಗುಟ್ಟುವ ಗದ್ದಲ. ದೇವಾಂಗ ಬಾಂಧವರ ಅಧಿದೇವತೆ ಬನಶಂಕರಿ ದೇವಿ ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಸೇರಿದ್ದ ಸಹಸ್ರಾರು ಭಕ್ತ ಸಮೂಹದಿಂದ ಒಮ್ಮೆಲೆ ‘ಬದಾಮಿ ಬನಶಂಕರಿ ನಿನ್ನ ಪಾದುಕೆ ಶಂಭುಕೋ...ಶಂಭುಕೋ’ ಎಂಬ ಒಕ್ಕೊರಲಿನ ಹರ್ಷೋದ್ಘಾರ ಮುಗಿಲು ಮುಟ್ಟಿ, ಭಕ್ತಾದಿಗಳು ರಥ ಎಳೆದು ಸಂಭ್ರಮಪಟ್ಟರು.ದೇಗುಲ ಪಕ್ಕದಿಂದ ರಥ ಮುಂದೆ ಸಾಗುತ್ತಿದ್ದಂತೆ ಭಕ್ತಿಯ ನಿನಾದ ಹೊರಹೊಮ್ಮಿ ಸುತ್ತಲಿಂದ ಭಕ್ತಸಮೂಹ ಉತ್ತತ್ತಿ, ಬಾಳೆಹಣ್ಣು ಎಸೆದು ಪುನೀತರಾದರು. ಈ ಬಾರಿ ದೇವಸ್ಥಾನ ಸಮಿತಿ ಹಾಗು ಅರ್ಚಕರು ರಥವನ್ನು ಮಲ್ಲಿಗೆ ಹೂಮಾಲೆ, ವಿವಿಧ ರೀತಿಯಲ್ಲಿ ಶೃಂಗರಿಸಲಾಗಿತ್ತು. ಸರಿಯಾಗಿ ಸಂಜೆ 5.50ಕ್ಕೆ ಆರಂಭಗೊಂಡ ರಥೋತ್ಸವ ನಿಗದಿತ ಅವಧಿಗೆ ಸ್ವಸ್ಥಳಕ್ಕೆ ಬಂದು ತಲುಪಿತು. ರಥೋತ್ಸವದ ಬಳಿಕ ತಾಯಿ ಬನಶಂಕರಿ ದೇವಿ ದರ್ಶನಕ್ಕೆ ತೀವ್ರ ನೂಕು ನುಗ್ಗಲು ಉಂಟಾಯಿತು. ವೃದ್ಧರು, ಮಹಿಳೆಯರು ಪ್ರಯಾಸದಿಂದ ದೇವಿಯ ದರ್ಶನ ಪಡೆಯುವಂತಾಯಿತು. ಜಾತ್ರೆಗಾಗಿ ವಿಶೇಷವಾಗಿ ಶೃಂಗರಿಸಿದ್ದ ದೇವಿ ಭಕ್ತಾದಿಗಳ ಕಣ್ಮನ ಸೆಳೆದಳು.ಸರ್ಕಲ್ ಇನ್ಸ್‌ಪೆಕ್ಟರ್ ಆರ್.ಎಸ್.ಪಾಟೀಲ, ಪಿ.ಎಸ್.ಐ ಡಿ.ಬಿ.ಪಾಟೀಲ ಹಾಗು ಸಿಬ್ಬಂದಿ ರಥೋತ್ಸವಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಈ ಜಾತ್ರೆಗಾಗಿಯೇ ಗಂಡನ ಮನೆಯಿಂದ ತವರಿಗೆ ಬಂದಿದ್ದ ಹೆಣ್ಣುಮಕ್ಕಳು ಬಗೆಬಗೆಯ ಬಟ್ಟೆ, ದಿರಿಸುಗಳೊಂದಿಗೆ ಜಾತ್ರ್ಯೋತ್ಸವದಲ್ಲಿ ಸಂತಸದಿಂದ ಪಾಲ್ಗೊಂಡಿದ್ದರು. ಮಧ್ಯಾಹ್ನ ‘ಗೋಧಿ ಹುಗ್ಗಿ’ಯ ಭೋಜನ ಬೀಗರು, ಅತಿಥಿಗಳ ಮನ ತಣಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry