ಶುಕ್ರವಾರ, ಮೇ 27, 2022
30 °C

ಸಂಭ್ರಮದ ಮತ್ತಿತಾಳೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ತಾಲ್ಲೂಕಿನ ಕಲ್ಲುವೀರನಹಳ್ಳಿ, ಕಂದೇಗಾಲ, ಅಮೃತೇಶ್ವರನಹಳ್ಳಿ ಹಾಗೂ ಮೋಳೆದೊಡ್ಡಿ ಗ್ರಾಮಗಳ ಮಧ್ಯೆ ಇರುವ ಮತ್ತಿತಾಳೇಶ್ವರ ಸ್ವಾಮಿ ದಿವ್ಯ ರಥೋತ್ಸವ ಅದ್ದೂರಿಯಾಗಿ ಗುರುವಾರ ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿತು. ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸಿ ಸರದಿಯಲ್ಲಿ ನಿಂತು ಪೂಜೆ ಸಲ್ಲಿಸಿದರು. ಮಧ್ಯಾಹ್ನ 12-30 ರಿಂದ ನಡೆಯಬೇಕಾಗಿದ್ದ ರಥೋತ್ಸವ ಹೊನ್ನಾಯಕನಹಳ್ಳಿ ಗ್ರಾಮದಿಂದ ಬರುವ ಮಂಟೇಸ್ವಾಮಿ ಬಸವ ತಡವಾಗಿ ಬಂದ ಕಾರಣ ಒಂದು ಗಂಟೆ ತಡವಾಗಿ ಪ್ರಾರಂಭವಾಯಿತು.ನೂತನವಾಗಿ 8 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ರಥವನ್ನು ಹೂಗಳಿಂದ ವಿಶೇಷವಾಗಿ ಅಲಂಕೃತಗೊಳಿಸಿದ್ದುದು ಭಕ್ತರ ಗಮನ ಸೆಳೆಯಿತು. ಮೊದಲಿಗೆ ಆಗಮಿಕರಾದ ಮಲ್ಲಾರಾಧ್ಯ ದೇವಾಲಯದ ಅರ್ಚಕರು ರಥಕ್ಕೆ ಪೂಜೆ ಸಲ್ಲಿಸಿ ನಂತರ ಕಳಸವನ್ನು ಪೂಜೆ ಮಾಡಿ ರಥಕ್ಕೆ ಅಳವಡಿಸಲಾಯಿತು. ನಂತರ ಮತ್ತಿತಾಳೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.ಸಂಪ್ರದಾಯದಂತೆ ಪ್ರದಕ್ಷಿಣೆ ಹಾಕಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ನೆರೆದಿದ್ದ ಸಾವಿರಾರು ಜನರು ರಥವನ್ನು ಎಳೆಯಲು ಪ್ರಾರಂಭಿಸುತ್ತಿದ್ದಂತೆ ಭಕ್ತರು ಹಣ್ಣುದವನ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾ ಪಂಚಾಯಿತಿ ಸದಸ್ಯ ಚೊಟ್ಟನಹಳ್ಳಿ ಸತೀಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ಶಿವಮಾದೇಗೌಡ, ತಹಶೀಲ್ದಾರ್ ಬಿ.ವಾಣಿ ಸೇರಿದಂತೆ ಇನ್ನೂ ಹಲವು ಮುಖಂಡರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.