ಗುರುವಾರ , ಮೇ 13, 2021
36 °C

ಸಂಭ್ರಮದ ಮಹಾವೀರ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಭಗವಾನ ಮಹಾವೀರ ಜಯಂತಿ ಅಂಗವಾಗಿ ಬುಧವಾರ ನಗರದಲ್ಲಿ ಜೈನ ಸಮುದಾಯದ ಜನರು ಭವ್ಯ ಮೆರವಣಿಗೆ ನಡೆಸಿದರು.ಶ್ರೀ ಆದಿನಾಥ ದಿಗಂಬರ ಜೈನ ಮಂದಿರ ಟ್ರಸ್ಟ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮಹಾವೀರರ ಭಾವಚಿತ್ರವನ್ನು ವಾಹನದಲ್ಲಿ ಇಟ್ಟು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.ಬೆಳಿಗ್ಗೆ 9 ಗಂಟೆಗೆ ಪ್ರಕಾಶ್ ಚಿತ್ರಮಂದಿರದ ಬಳಿಯಿರುವ ಮಾಯಾಮಂದಿರದಿಂದ ಮೆರವಣಿಗೆಯು ಆರಂಭವಾಯಿತು. ಜೈನ ಸಮುದಾಯದ ನೂರಾರು ಜನರು ಪಾಲ್ಗೊಂಡರು. ಸೂಪರ್ ಮಾರ್ಕೆಟ್‌ನ ಕಿರಾಣಾ ಬಜಾರ್, ಮುಖ್ಯ ವೃತ್ತ, ಚೌಕ ಸ್ಥಳಕ್ಕೆ ಮಹಾವೀರ ಭಾವಚಿತ್ರದ ಮೆರವಣಿಗೆಯು ಬಂದಾಗ, ಸಮುದಾಯದ ಜನರು ಭಕ್ತಿ-ಭಾವದಿಂದ ಮಹಾಆರತಿ ಬೆಳಗಿದರು.ನಂತರ ಭಾಂಡಿ ಬಜಾರ್, ಸೂಪರ್ ಮಾರ್ಕೆಟ್ ಮಾರ್ಗವಾಗಿ ಗಾಜಿಪುರ ಬಡಾವಣೆಯ ಜೈನಮಂದಿರಕ್ಕೆ ಮೆರವಣಿಗೆ ತಲುಪಿತು. ಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಪೂಜೆ, ಚಡಾವ್ ಹಾಗೂ ಮಹಾವೀರರ ತೊಟ್ಟಿಲು ಕಾರ್ಯಕ್ರಮಗಳು ವೈಭವದಿಂದ ಜರುಗಿದವು. ವಿವಿಧ ಬಡಾವಣೆಗಳಿಂದ ಜನರು ಪಾಲ್ಗೊಂಡಿದ್ದರು.ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಅಹಿಂಸಾ ತತ್ವ ಬೋಧಿಸಿದ ಮಹಾವೀರರ ಸಂದೇಶ ಪಾಲನೆ ಹಿಂದೆಂದಿಗಿಂತಲೂ ಈಗ ಅಗತ್ಯವಾಗಿದೆ ಎಂದು ಸಮುದಾಯದ ಮುಖಂಡರು ಹೇಳಿದರು. ಅಶಾಂತಿಯಿಂದ ಬಳಲುತ್ತಿರುವ ಜಗತ್ತಿನ ಬಹುತೇಕ ದೇಶಗಳಿಗೆ ಮಹಾವೀರರ ಸಂದೇಶ ಸಮರ್ಥವಾಗಿ ಪರಿಹಾರ ನೀಡಬಲ್ಲವು ಎಂದೂ ಅವರು ಅಭಿಪ್ರಾಯಪಟ್ಟರು.ದಿ. ಆಶಾಲತಾ ಘೊಂಗಡಿ ಅವರ ಸ್ಮರಣಾರ್ಥ ವಿಮಲಾ ಕಸ್ತೂರಚಂದ್ ಟೊಂಗೆ ಹಾಗೂ ಪರಿವಾರವು ಮಹಾಪ್ರಸಾದ ವ್ಯವಸ್ಥೆ ಮಾಡಿತ್ತು. ಜೈನ್ ಸೋಶಿಯಲ್ ಗ್ರೂಪ್ ಅಧ್ಯಕ್ಷ ಕೇತನ್ ದೋಷಿ, ಕಾರ್ಯದರ್ಶಿ ಶ್ರೇಯಾನ್ ಸೇಠಿಯಾ, ಮಹಾವೀರ ಸಾಂಸ್ಕೃತಿಕ ಲೋಕ ಕಲ್ಯಾಣ ಸಂಸ್ಥಾ ಅಧ್ಯಕ್ಷ ಚಂದ್ರಮೋಹನ ಶಹಾ, ಕಾರ್ಯದರ್ಶಿ ಅಂಕುಶ ಶಹಾ, ಆದಿನಾಥ ದಿಗಂಬರ ಜೈನ ಮಂದಿರ ಟ್ರಸ್ಟ್ ಕಾರ್ಯದರ್ಶಿ ವಜ್ರಕುಮಾರ ನಾ. ಪಾಟೀಲ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.