ಶುಕ್ರವಾರ, ನವೆಂಬರ್ 15, 2019
26 °C

ಸಂಭ್ರಮದ ವೀರಭದ್ರೇಶ್ವರ ರಥೋತ್ಸವ

Published:
Updated:

ರಟ್ಟೀಹಳ್ಳಿ: ಒಂದು ಕಿಮಿಗಿಂತಲೂ ಹೆಚ್ಚು ದೂರ ಚಲಿಸುವ ರಾಜ್ಯದ ಏಕೈಕ ಬೃಹತ್ ರಥೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ  ವೀರಭದ್ರೇಶ್ವರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.ಬೆಳಿಗ್ಗೆ 6.30 ಕ್ಕೆ ರಥೋತ್ಸವ ಆರಂಭವಾಯಿತು. ಹಳೆ ಬಸ್ ನಿಲ್ದಾಣದ ಮೂಲಕ ಹೊಸಪೇಟೆ ಪ್ರವೇಶಿಸಿ 8.30 ಕ್ಕೆ ತನ್ನ ಗಡಿ ತಲುಪಿತು. ಒಂದು ಗಂಟೆ ಇಲ್ಲಿ ವಿಶ್ರಮಿಸಿದ ವೀರಭದ್ರೇಶ್ವರ ಮತ್ತೆ 10 ಗಂಟೆಗೆ ತನ್ನ ಮರು ಪ್ರಯಾಣ ಪ್ರಾರಂಭಿಸಿ ಮಧ್ಯಾಹ್ನ 1.30ಕ್ಕೆ ದೇವಸ್ಥಾನ ತಲುಪುವುದರೊಂದಿಗೆ ರಥೋತ್ಸವ ಸಾಂಗವಾಗಿ ಸಂಪನ್ನಗೊಂಡಿತು. ಒಟ್ಟಾರೆಯಾಗಿ ಒಂದು ಕಿ.ಮೀ. ಹೆಚ್ಚಿನ ದೂರ ರಥವನ್ನು ಎಳೆಯಲಾಗುತ್ತದೆ. ಹೀಗಾಗಿ ರಾಜ್ಯದಲ್ಲಿಯೆ ಬಹು ದೂರ ಚಲಿಸುವ ಏಕೈಕ ರಥೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ಸಂದರ್ಭದಲ್ಲಿ 16 ಜೊತೆ ಶರಭಿ ಗುಗ್ಗುಳ, ವೀರಭದ್ರ ದೇವರ ಅವತಾರಿ ಪುರುವಂತರು, ಸಮಾಳ, ಡೊಳ್ಳು, ಬಾಜಾ ಬಜಂತ್ರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಿಸಿಲಿನ ಬೇಗೆ ಹೆಚ್ಚಾಗಿದ್ದರೂ 40 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದರು. ವಿವಿಧ ಸಂಘ  ಸಂಸ್ಥೆಗಳ ಕಾರ್ಯಕರ್ತರು ಪಾನೀಯ ಸೇವೆಯನ್ನು ಭಕ್ತರಿಗೆ ಒದಗಿಸಿದರು. ಸಮುದಾಯ ಭವನದಲ್ಲಿ ಅನ್ನ ಪ್ರಸಾದ ವಿತರಣೆ ನಡೆಯಿತು.ರಥೋತ್ಸವ ವಿಶೇಷತೆ 

ಮಧ್ಯಾಹ್ನ 2 ಗಂಟೆಗೆ ವೀರಭದ್ರ ದೇವರ ಪಲ್ಲಕ್ಕಿ ಉತ್ಸವ ಮತ್ತೆ ಪಟ್ಟಣದಾದ್ಯಂತ ನಡೆಯಿತು. ಈ ಪಲ್ಲಕ್ಕಿ ಸೇವೆಯ ಹಿಂದೆ ಒಂದು ವಿಚಿತ್ರ ಘಟನೆ ತಳುಕು ಹಾಕಿಕೊಂಡಿದೆ. ರಥೋತ್ಸವ ನಡೆಯುವ ಸಂದರ್ಭದಲ್ಲಿ ವೀರಭದ್ರ ದೇವರು ತನ್ನ ಬೆರಳಿನ ಉಂಗುರವನ್ನು ಕಳೆದುಕೊಂಡಿರುತ್ತಾನೆ. ಅದನ್ನು ಹುಡುಕುತ್ತ ಮತ್ತೆ ತನ್ನ ಪಯಣ ಆರಂಭಿಸುತ್ತಾನೆ ಎಂಬ ಪ್ರತೀತಿ ಇದೆ. ಅದನ್ನು ಪ್ರತಿ ರಥೋತ್ಸವದಲ್ಲಿಯೂ ಅನೂಚಾನವಾಗಿ ನಡೆಸಿಕೊಂಡು ಬರಲಾಗುತ್ತದೆ. ನಂತರ ಪಲ್ಲಕ್ಕಿ ಸೇವೆ ದೇವಸ್ಥಾನ ತಲುಪುತ್ತದೆ.

ಪ್ರತಿಕ್ರಿಯಿಸಿ (+)