ಶನಿವಾರ, ಜನವರಿ 18, 2020
26 °C

ಸಂಭ್ರಮದ ಷಷ್ಠಿ ಪೂಜಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಪಟ್ಟಣದಲ್ಲಿನ ಸುಬ್ರಹ್ಮಣ್ಯಸ್ವಾಮಿ ದೇವರ 53ನೇ ಷಷ್ಠಿ ಪೂಜಾ ಮಹೋತ್ಸವವು ಭಾನುವಾರ ಜರುಗಿತು.

ಮುಂಜಾನೆ 4 ಗಂಟೆಯಿಂದಲೇ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಭಕ್ತರಿಗಾಗಿ ದೇವಸ್ಥಾನದಲ್ಲಿ ದೇವರಿಗೆ ಅಭಿಷೇಕ ಹಾಗೂ ಮಹಾಮಂಗಳಾರತಿ ನಡೆಯಿತು. ದೇವಸ್ಥಾನದ ಬಳಿ ಇರುವ ಹುತ್ತಕ್ಕೆ ಭಕ್ತರು ಹಾಲಿನ ತನಿ ಎರೆದು, ಪೂಜೆ ಸಲ್ಲಿಸಿ ತಮ್ಮ ಭಕ್ತಿಯನ್ನು ಪ್ರದರ್ಶಿಸಿದರು.ದೇವಸ್ಥಾನದ ಪೂಜೆ ಪುನಸ್ಕಾರದ ಜತೆಗೆ ಸುಬ್ರಹ್ಮಣ್ಯಸ್ವಾಮಿ ದೇವರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾವಾಡಿಗಳ ಮೂಲಕ ಮೆರವಣಿಗೆ ಮಾಡಲಾಯಿತು. ಮುಂಜಾನೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಸುಬ್ರಹ್ಮಣ್ಯಸ್ವಾಮಿ ದೇವರಿಗೆ ಭಕ್ತರು ಪೂಜೆ ಸಲ್ಲಿಸಿದರು.ಪಟ್ಟಣದ ಮೈಸೂರು ಮುಖ್ಯರಸ್ತೆಯಲ್ಲಿರುವ ಹುತ್ತಕ್ಕೆ ಭಕ್ತರಾದ ಸೋಮಣ್ಣ ವಿವಿಧ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಿ ಪೂಜೆ ಸಲ್ಲಿಸಿದರು. ತಾಲ್ಲೂಕಿನ ಡಿಂಕಾ–ಮಲ್ಲಿಗೆರೆ ಮತ್ತು ಚಿನಕುರಳಿ ಗ್ರಾಮದ ಹುಣಸೆಕಟ್ಟೆ ಮೈದಾನದಲ್ಲಿ ನಿರ್ಮಿಸಲಾಗಿರುವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿಯೂ ಷಷ್ಠಿ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆದವು.  ಅಲ್ಲಲ್ಲಿ ಹುತ್ತಕ್ಕೆ ಮಹಿಳೆಯರು ಹಾಲೆರೆದು ಪೂಜೆ  ಸಲ್ಲಿಸುವುದು ಸಾಮಾನ್ಯವಾಗಿತ್ತು.ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ

ಮದ್ದೂರು: ತಾಲ್ಲೂಕಿನ ರಾಂಪುರ ಗ್ರಾಮದ ಅದಿಷ್ಟ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಭಾನುವಾರ ವಿಶೇಷ ಪೂಜೆಗಳು ನಡೆದವು. ಷಷ್ಠಿ ಅಂಗವಾಗಿ ಗಣಪತಿ ಪೂಜೆ, ಪ್ರಧಾನ ಕಳಸಾರ್ಚನೆ, ಪ್ರಧಾನ ಸುಬ್ರಹ್ಮಣ್ಯ ಹೋಮ, ಮಹಾ ಪೂರ್ಣಾಹುತಿ, ಕುಂಭದ್ವಾಹನ, ಕುಂಭಾಷೇಕ, ಮಹಾಮಂಗಳರಾತಿಯೊಂದಿಗೆ ಭಕ್ತರಿಗೆ ಸುಬ್ರಹ್ಮಣ್ಯ ಸ್ವಾಮಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಷಷ್ಠಿ ಅಂಗವಾಗಿ ಮಹಿಳೆಯರು ದೇಗುಲ ಆವರಣದಲ್ಲಿರುವ ಹುತ್ತಕ್ಕೆ ಹಾಲೆರೆದು ಹರಕೆ ಸಲ್ಲಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.ಆರು ಲಕ್ಷ ಸಂಗ್ರಹ

ಕಿಕ್ಕೇರಿ: ಸಾಸಲು ಕ್ಷೇತ್ರದ ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯಗಳ ಹುಂಡಿ ಎಣಿಕೆ ಕಾರ್ಯವು ತಹಶೀಲ್ದಾರ್ ಅಹೋಬಲಯ್ಯ ಅವರ ಮಾರ್ಗದರ್ಶನದಲ್ಲಿ ಶನಿವಾರ ನಡೆಯಿತು.ಹುಂಡಿಯಲ್ಲಿ ರೂ ೬. ೯೨ಲಕ್ಷ ನಗದು, ಸಣ್ಣಪುಟ್ಟ ಬೆಳ್ಳಿಯ ನಾಗರ, ಚಿನ್ನದ ನಾಗರ ಸೆಡೆ ಹುಂಡಿಯಲ್ಲಿ ಸಂಗ್ರಹವಾಗಿದೆ.ಹಣವನ್ನು ವಿಜಯಾ ಬ್ಯಾಂಕಿಗೆ ಜಮಾ ಮಾಡಲಾಯಿತು. ಮುಜರಾಯಿ ಗುಮಾಸ್ತ ಮಂಜುನಾಥ್, ಆರ್‌ಐ ಸಿರಿಯಪ್ಪ, ಪ್ರಸನ್ನಕುಮಾರ್, ಮಾಯಣ್ಣ, ಕಾಳೇಗೌಡ, ಎಎಸ್‌ಐ ಸೋಮಣ್ಣ ಇದ್ದರು.ಮತ್ತಿತಾಳೇಶ್ವರಸ್ವಾಮಿ ರಥೋತ್ಸವ

ಮಳವಳ್ಳಿ: ತಾಲ್ಲೂಕಿನ ಕಂದೇಗಾಲ-–ಕಲ್ಲುವೀರನ ಹಳ್ಳಿ ಸಮೀಪವಿರುವ ಮತ್ತಿತಾಳೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ 13ನೇ ವರ್ಷದ ಷಷ್ಠಿ ರಥೋತ್ಸವ ಅದ್ದೂರಿಯಾಗಿ ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿತು. ಬೆಳಿಗ್ಗೆಯಿಂದಲೇ ಆಗಮಿಸಿದ ಭಕ್ತರು ಮೊದಲಿಗೆ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು, ದೇವಾಲಯದ ಆವರಣದಲ್ಲಿರುವ ಹುತ್ತ ಹಾಗೂ ನಾಗರ ಪ್ರತಿಮೆಗೆ ತನಿ ಎರೆದರು.ನಂತರ ಮಧ್ಯಾಹ್ನದ ವೇಳೆಗೆ ಹೂವಿನಿಂದ ಅಲಂಕೃತಗೊಳಿಸಿದ್ದ ರಥಕ್ಕೆ ಆಗಮಿಕರು, ಅರ್ಚಕರು ಸೇರಿ ಸಂಪ್ರದಾಯದಂತೆ ಪೂಜಾ ನಡೆಸಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ನೆರೆದಿದ್ದ ಸಾವಿರಾರು ಭಕ್ತರು ತಾಮುಂದು ನಾಮುಂದು ಎಂದು ರಥ ಎಳೆಯತೊಡಗಿದರು. ನೆರೆದಿದ್ದ ಭಕ್ತರು ಹಣ್ಣು ದವನಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ಹೊನ್ನನಾಯಕನಹಳ್ಳಿ ಮಂಟೇಸ್ವಾಮಿ ಬಸವನ ಉತ್ಸವವು ನಡೆಯಿತು.

ಪ್ರತಿಕ್ರಿಯಿಸಿ (+)