ಗುರುವಾರ , ನವೆಂಬರ್ 14, 2019
19 °C

ಸಂಭ್ರಮದ ಹೊನ್ನಾರು ಉತ್ಸವ

Published:
Updated:
ಸಂಭ್ರಮದ ಹೊನ್ನಾರು ಉತ್ಸವ

ಕುಶಾಲನಗರ: ಸಮೀಪದ ತೊರೆನೂರು, ನಲ್ಲೂರು, ಶಿರಂಗಾಲ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಮೊದಲ ಉಳುಮೆ ಎಂದೇ ಹೇಳುವ ಹೊನ್ನಾರು ಉತ್ಸವವನ್ನು ಗುರುವಾರ ಸಡಗರದಿಂದ ರೈತರು ಆಚರಿಸಿದರು.ಯುಗಾದಿ ಹಬ್ಬದ ಅಂಗವಾಗಿ ರೈತರು ತಮ್ಮ ದನಕರುಗಳನ್ನು ತೊಳೆದು ಅವುಗಳಿಗೆ ಗವುಸು ಹಾಗೂ ಕೊಂಬಿಗೆ ಹಣಸು ಹಾಕಿ ವಸ್ತ್ರಾಂಲಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ವ್ಯವಸಾಯ  ಉಪಕರಣಗಳಾದ ನೇಗಿಲು, ನೊಗ, ಕುಂಟೆ, ಎತ್ತಿನಗಾಡಿ ಇತ್ಯಾದಿಗಳನ್ನು ಒಪ್ಪವಾಗಿ ಜೋಡಿಸಿ ಪೂಜೆ ಸಲ್ಲಿಸಿದರು. ನಂತರ ಉತ್ಸವದ ಅಂಗವಾಗಿ ತಯಾರಿಸಿದ್ದ ಹೋಳಿಗೆ, ಪಾಯಿಸ ಮತ್ತಿತರ ತಿನಿಸುಗಳನ್ನು ತಮ್ಮ ಜಾನುವಾರುಗಳಿಗೆ ತಿನ್ನಿಸಿದರು.ಶಾಸ್ತ್ರಬದ್ಧವಾಗಿ ನಲ್ಲೂರು ಗ್ರಾಮದಲ್ಲಿ ಎನ್.ಬಿ. ಪಾರ್ಥಪ್ಪ, ತೊರೆನೂರಿನಲ್ಲಿ ಟಿ.ಕೆ. ಚಂದ್ರಶೇಖರ್ ಅವರು ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ, ಹೊನ್ನಾರು (ಚಿನ್ನದ ಉಳುಮೆ) ಹೂಡಿ ವರ್ಷಧಾರೆ ಉಳುಮೆಗೆ ಚಾಲನೆ ನೀಡಿದರು. ಇವರೊಂದಿಗೆ ಇತರ ರೈತರು ಸೇರಿ ಭೂಮಿಯನ್ನು ಹದಗೊಳಿಸಿದರು.ಇದಕ್ಕೂ ಮುನ್ನ ರೈತರು ಊರಿನ ಮುಖ್ಯ ಬೀದಿಯಲ್ಲಿ ತಮ್ಮ ಜಾನುವಾರುಗಳೊಂದಿಗೆ ಮೆರವಣಿಗೆ ನಡೆಸಿ ಊರಿನ ದೇವಸ್ಥಾನಕ್ಕೆ ತೆರಳಿದರು.

ಸಂಪ್ರದಾಯವಾಗಿ ಪ್ರಮುಖರು ಹೊನ್ನಾರು ಮುಗಿಸಿದ ನಂತರ ಪ್ರತಿ ರೈತನೂ ತಮ್ಮ ತಮ್ಮ ಜಮೀನಿನಲ್ಲಿ ನೇಗಿಲ ಹೂಡಿ ಉಳುಮೆ ಆರಂಭಿಸಿದರು. ಅಲ್ಲದೇ ಈ ವರ್ಷ ಉತ್ತಮ ಮಳೆ- ಬೆಳೆಯಾಗಲಿ ಎಂದು ಪ್ರಕೃತಿಯನ್ನು ಪೂಜಿಸಿದರು.ತೊರೆನೂರು ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಪಿ. ವೀರಭದ್ರಪ್ಪ, ಕಾರ್ಯದರ್ಶಿ ಟಿ.ಡಿ. ವಿದ್ಯಾಸಾಗರ್, ಉಪಾಧ್ಯಕ್ಷ ಟಿ.ಬಿ. ಮಂಜುನಾಥ್,  ಸದಸ್ಯರಾದ ಟಿ.ಬಿ. ಜಗದೀಶ್, ಟಿ.ಟಿ. ಗೋವಿಂದ, ಟಿ.ಕೆ. ಪಾಂಡುರಂಗ, ಟಿ.ಜಿ. ಶಿವಣ್ಣ, ಟಿ.ಎಸ್. ರಾಜಶೇಖರ್, ಟಿ.ಶಿವಣ್ಣ, ಟಿ.ಬಿ. ಗಣೇಶ್,

ನಲ್ಲೂರು ಸಮಿತಿ ಅಧ್ಯಕ್ಷ ಎನ್.ಬಿ. ಪಾರ್ಥಪ್ಪ, ಕಾರ್ಯದರ್ಶಿ ಎನ್.ಎ. ಜವರೇಗೌಡ, ಖಜಾಂಜಿ ಎನ್.ಸಿ. ಶ್ರೀಧರ್, ಯುವಕ ಸಂಘದ ಅಧ್ಯಕ್ಷ ಎನ್.ಆರ್.ರಘು, ಕಾರ್ಯದರ್ಶಿ ಪ್ರದೀಪ್ ಎನ್.ಎಂ. ಚನ್ನರಾಜಪ್ಪ, ಎನ್.ಎನ್. ಚೇತನ್ ಮತ್ತಿತರರು ಹಾಜರಿದ್ದರು.ಯುಗಾದಿ: ವಿವಿಧೆಡೆ ವಿಶೇಷ ಪೂಜೆ

ಶನಿವಾರಸಂತೆ: ಪಟ್ಟಣದಲ್ಲಿ ಗುರುವಾರ ವಿಜಯನಾಮ ಸಂವತ್ಸರದ ಯುಗಾದಿ ಹಬ್ಬವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು.

ಹೊಸ ವಸ್ತ್ರಾಭರಣಗಳನ್ನು ಧರಿಸಿ, ನೂತನ ವರ್ಷವನ್ನು ಸ್ವಾಗತಿಸಲಾಯಿತು. ಬೆಳಿಗ್ಗೆಯಿಂದಲೇ ದೇವಾಲಯಗಳಿಗೆ ತೆರಳಿದ ಜನ ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸಿದರು. ಅಭ್ಯಂಜನದ ಬಳಿಕ ದೇವರಿಗೆ, ಹಿರಿಯರಿಗೆ ನಮಸ್ಕರಿಸಿ, ಬೇವು-ಬೆಲ್ಲ ತಿಂದು, ಶುಭಾಶಯ ವಿನಿಮಯ ಮಾಡಿಕೊಂಡರು.ಮಧ್ಯಾಹ್ನ ಹೋಳಿಗೆ, ಪಾಯಸ ಇತ್ಯಾದಿ ವಿಶೇಷ ಭಕ್ಷ್ಯಗಳನ್ನು ಸವಿದು ಸಂಭ್ರಮಿಸಿದರು. ಸಂಜೆ ದೇವಾಲಯಗಳಿಗೆ ಹೋಗಿ ಪಂಚಾಂಗ ಶ್ರವಣ ಮಾಡಿದ ಭಕ್ತರು, ವಿಶೇಷ ಪೂಜೆಗಳನ್ನು ಸಲ್ಲಿಸಿದರು.ಪಟ್ಟಣದ ಶ್ರೀರಾಮ ಮಂದಿರದಲ್ಲಿ ಶ್ರೀರಾಮ, ಸೀತಾ, ಲಕ್ಷ್ಮಣ, ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅರ್ಚಕರಾದ ನಾಗೇಶ್ ಭಟ್ಟರು ಪಂಚಾಂಗ ಓದಿ ಪೂಜಾವಿಧಿಗಳನ್ನು ನೆರವೇರಿಸಿದರು.ಚಂದ್ರಮೌಳೇಶ್ವರ, ಪಾರ್ವತಿ, ಗಣಪತಿ ದೇವಾಲಯದಲ್ಲೂ ಯುಗಾದಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಪಂಚಾಂಗ ಓದುವಿಕೆ ಹಮ್ಮಿಕೊಳ್ಳಲಾಗಿತ್ತು. ಅರ್ಚಕರಾದ ಮಾಲತೇಶ್ ಭಟ್ಟರು ಪಂಚಾಂಗ ಓದಿ, ಪೂಜಾವಿಧಿಗಳನ್ನು ನೆರವೇರಿಸಿದರು.ಸಮೀಪದ ಬಾಗೇರಿಯ ಶ್ರೀರಾಮೇಶ್ವರ ಪ್ರಸನ್ನ ದೇವಾಲಯದಲ್ಲಿ ಅರ್ಚಕರಾದ ಶಂಕರನಾರಾಯಣ ಭಟ್ಟರು ಹಾಗೂ ಗೋಪಾಲಪುರದ ಶ್ರೀ ಬನಶಂಕರಿ ದೇವಾಲಯದಲ್ಲಿ ಅರ್ಚಕರಾದ ನಾಗೇಶ್ ಭಟ್ಟರು ವಿಶೇಷ ಪೂಜೆ ಸಲ್ಲಿಸಿ, ಪಂಚಾಂಗ ಓದಿದರು.

ಪ್ರತಿಕ್ರಿಯಿಸಿ (+)