ಗುರುವಾರ , ನವೆಂಬರ್ 21, 2019
27 °C
ಲಯ- ಲಾಸ್ಯ

ಸಂಭ್ರಮಿಸಿದ ಯುವ ಕಲಾವಿದರು

Published:
Updated:

ಮಲ್ಲೇಶ್ವರದ ಸೇವಾ ಸದನ ಸಭಾಂಗಣದಲ್ಲಿ ನಾಲ್ಕು ದಿನಗಳ ಯುವ ಸಂಭ್ರಮ ಯುವ ಕಲಾವಿದರ ಸಂಗೀತ ನೃತ್ಯೋತ್ಸವವು ಯಶಸ್ವಿಯಾಗಿ ನಡೆದು ಶನಿವಾರದಂದು ಮುಗಿಯಿತು. ಉತ್ಸವದ ರೂವಾರಿ ಯುವ ನರ್ತಕಿ-ಗಾಯಕಿ ಹಾಗೂ ಖ್ಯಾತ ಹಿರಿಯ ಗಾಯಕಿ ಪುಸ್ತಕಂ ರಮಾ ಅವರ ಪುತ್ರಿ ದೀಪ್ತಿ ಶ್ರೀನಾಥ್ ಅವರೂ ಸಹ ತಮ್ಮ ಶ್ರೀಮಂತ ಗಾಯನ ಕಛೇರಿಯಿಂದ ಜನಮನ ಗೆದ್ದರು.ಶುಕ್ರವಾರ ನಡೆದ ಯುವ ಪ್ರತಿಭಾನ್ವಿತ ಪಿಟೀಲು ವಾದಕಿ ಎಚ್.ಎಂ. ಸ್ಮಿತಾ ಮತ್ತು ಅವರ ಸೋದರಿ ಸಿಂಧು ಸುಚೇತನಾ ಅವರ ಯುಗಳ ಪಿಟೀಲು ವಾದನ ಅತ್ಯಂತ ಪ್ರೌಢವಾಗಿತ್ತು. ಕಛೇರಿಯ ಚಲನಶೀಲ ಗತಿಯನ್ನು ಸೊಗಸಾಗಿ ಪೋಷಿಸಿಕೊಂಡು ತಮ್ಮ ಕಲಾ ಔನ್ನತ್ಯವನ್ನು ಸ್ಮಿತಾ ಮೆರೆದರು.ಸಿಂಧು ಸಹ ಸರಿಸಾಟಿಯಾಗಿ ಸ್ಪಂದಿಸಿ ಒಟ್ಟಾರೆ ಅದೊಂದು ಸಾರ್ಥಕ ನಾದಾನುಭವವಾಗುವಂತೆ ಮಾಡಿದರು. ಮಂದಾರಿ ವರ್ಣ (ವನಜಾಕ್ಷ)ದ ಪ್ರಸ್ತಾವನೆಯ ನಂತರ ತ್ಯಾಗರಾಜರ  `ನಾದತನುಮನಿಶಂ' ಹುಲುಸಾದ ವಿವರಗಳೊಂದಿಗೆ ಸರಸ್ವತಿ (ಅನುರಾಗಮುಲೆ ಮತ್ತು ಮೋಹನ (ಭವನುತ) ರಾಗಗಳ ಚಿತ್ತಾರವನ್ನೇ ಈ ಸೋದರಿಯರು ಬಿಡಿಸಿದರು. ಅವರ ಬೆರಳು ಮತ್ತು ಕಮಾನುಗಾರಿಕೆಯಲ್ಲಿ ಅಸಾಮಾನ್ಯವಾದ ಏಕರೂಪತೆ ಮತ್ತು ಪರಿಣಾಮಶೀಲತೆ ರೋಚಕವೆನಿಸಿತು. ರಾಗಾಲಾಪನೆ, ಸಾಹಿತ್ಯ ಮತ್ತು ಸ್ವರ ಪ್ರಸ್ತಾರಗಳಲ್ಲಿ ಹರಡಿಕೊಂಡಿದ್ದ ಅವರ ಅತ್ಯುತ್ತಮ ಹೊಂದಾಣಿಕೆ ಕೇಳುಗರನ್ನು ಬೆರಗುಗೊಳಿಸಿತು. ಕಲಾವಿದೆಯರು ಜಿಂಗ್ಲಾ ರಾಗದ ಅನಾಥುಡನುಗಾನಿ ರಚನೆಯನ್ನು ಚುರುಕಾಗಿ ನುಡಿಸಿ ಕಛೇರಿಯ ಪ್ರಭಾವವನ್ನು ಹೆಚ್ಚಿಸಿದರು. ದೇಶ್ ರಾಗದಲ್ಲಿ ಹೇರಾಮ್ ಭಜನ್‌ನ ಭಾವಪೂರ್ಣ ಪ್ರಸ್ತುತಿಯಿಂದ ಮುಕ್ತಾಯಗೊಂಡ ಕಛೇರಿಯಲ್ಲಿ ಬಿ.ಎಸ್. ಪ್ರಶಾಂತ್ (ಮೃದಂಗ) ಮತ್ತು ಕಾರ್ತಿಕ್ (ಖಂಜರಿ) ಸಕ್ರಿಯವಾಗಿ ಪಾಲುಗೊಂಡಿದ್ದರು.ಬೀಬೀ ನಾಚಿಯಾರ್ ಕಥೆಗೆ ಸಫಲ ಅಭಿನಯ

ವೈಷ್ಣವೀ ನಾಟ್ಯಶಾಲೆಯ ಗುರು ಮಿಥುನ್ ಶಾಂ ಅವರ ನೇತೃತ್ವ ಮತ್ತು ನಿರ್ದೇಶನದಲ್ಲಿ ವಿಶಿಷ್ಟಾದ್ವೈತ ಸಂಪ್ರದಾಯದ ಅತಿ ಮಹತ್ವದ ಬೀಬೀ ನಾಚಿಯಾರ್ ಕಥಾ ಪ್ರಸಂಗದ ಸಹಜ ಚಿತ್ರಣ ಮತ್ತು ಅನುಪಮ ವರ್ಣನೆಯ ನೃತ್ಯ ನಾಟಕ ಅರಳಿ ತೆರೆದುಕೊಂಡಿತು.ಈ ಕಥಾವಸ್ತುವನ್ನು ಎಂಟು ದೃಶ್ಯಗಳಲ್ಲಿ ಹರಡಿ ಭರತನಾಟ್ಯವೇ ಪ್ರಧಾನವಾಗಿದ್ದ ಮಾಧ್ಯಮದಲ್ಲಿ ಕಥಕ್ ಮತ್ತು ಮೋಹಿನಿಯಾಟ್ಟಂ ನೃತ್ಯಗಳಿಗೂ ಪ್ರಾತಿನಿಧ್ಯವನ್ನು ಕೊಡಲಾಗಿತ್ತು. ಪಾತ್ರಗಳನ್ನು ಜೀವಂತಗೊಳಿಸಿದ ಅಭಿನಯ, ಸಾಂಪ್ರದಾಯಿಕ ಉಡುಗೆ-ತೊಡುಗೆಗಳು, ಭಾವ ಪ್ರಚೋದಕ ಶ್ರೀಮಂತ ಸಂಗೀತ ಇತ್ಯಾದಿಗಳಿಂದ ಕಥಾನಕದ ಪುನರನುಭವವಾಯಿತು.ಮಿಥುನ್ ಶಾಂ ಅವರಂತೂ ಶ್ರೀ ರಾಮಾನುಜಾಚಾರ್ಯರಾಗಿ ಆ ಪಾತ್ರದ ಭೌತಿಕ ಹಾಗೂ ಆಂತರಿಕ ಜೀವನಕ್ಕೆ ತಮ್ಮ ಅಭಿನಯವನ್ನು ಅನ್ವಯಿಸಿ ಆ ಪಾತ್ರವನ್ನು ಮೂರ್ತಗೊಳಿಸಿದರು. ಬೀಬೀ ನಾಚಿಯಾರ್ ಆಗಿ ಮೃದುಲಾ ಭಾಸ್ಕರ್, ತಿರುನಾರಾಯಣಸ್ವಾಮಿಗಳಾಗಿ ಸಂಜನಾರೆಡ್ಡಿ ಮತ್ತು ಚೆಲ್ವಪಿಳ್ಳೆಯಾಗಿ ಸೌಮ್ಯನಾರಾಯಣ್ ಮುಂತಾದವರ ಪಾತ್ರ ನಿರ್ವಹಣೆ ಮೆಚ್ಚುವಂತಿತ್ತು.ಅನುರೂಪದ ಗಾಯನ

ಬೆಂಗಳೂರು ಸೋದರರೆಂದೇ ಪರಿಚಿತರಾಗಿರುವ ಎಂ.ಬಿ. ಹರಿಹರನ್ ಮತ್ತು ಎಸ್.ಅಶೋಕ್ ಗಾಯಕ ಜೋಡಿ ಮತ್ತೊಮ್ಮೆ ತಮ್ಮ ಸಾಧನೆಗಳನ್ನು ಪ್ರಕಟಗೊಳಿಸಿ ಯುವ ಸಂಭ್ರಮಕ್ಕೆ ಚಾಲನೆಯನ್ನು ನೀಡಿದರು. ಅನುರೂಪದ ಗಾಯನ ಕೌಶಲ್ಯ, ನಾಜೂಕು, ನುಣುಪು, ಚಾತುರ್ಯ, ಅವುಗಳ ಪ್ರಶಂಸಾರ್ಹ ಹದದಿಂದ ರಾಗ ಮತ್ತು ಕೃತಿಗಳ ಬೆಲೆ ಕಾಣ್ಕೆಯ ಅವರ ಕಾರ್ಯ ಭೇಷ್ ಅನಿಸಿಕೊಂಡಿತು. ದ್ವಂದ್ವ ಗಾಯನದ ಸೊಬಗನ್ನು ತೋರಿ ರಾಗ ಮತ್ತು ಭಾವಗಳ ಧ್ಯಾನ ಚಿತ್ರಗಳನ್ನು ಚಿತ್ರಿಸುವಲ್ಲಿ ಅವರು ಯಶ ಕಂಡರು. ಲಂಬೋದರ (ನಾಟ)ನ ವಂದನೆಗೈದು ಪೂರ್ವಿಕಲ್ಯಾಣಿ ರಾಗದ ಬೆಡಗನ್ನು ಆಲಾಪನೆ, ನೆರವಲ್ ಮತ್ತು ಸ್ವರಗಳ ಮೂಲಕ ವಿಶಾಲವಾಗಿ ಹಬ್ಬಿಸಲಾಯಿತು. ಕ್ರಮಪ್ರಕಾರ, ಸುಸಂಬದ್ಧವಾಗಿ ತೋಡಿ ರಾಗ (ಶ್ರೀಕೃಷ್ಣಂ ಭಜ ಮಾನಸ)ದ ಜೊತೆಗೆ ಒಂದೇ ವಿಧವಾಗಿ ಐಕ್ಯವಾಗಿ ಚಿಂತಿಸಿ, ಅನುಭವಿಸಿ ಹಾಡಲಾಯಿತು. ಕಬೀರ್ ಭಜನ್ ಭಜನ ಬಿನಾ (ದೇಶ್ ರಾಗ) ಭಾವೋದ್ರೇಕಗೊಳಿಸಿತು. ಮತ್ತೂರು ಶ್ರೀನಿಧಿ(ಪಿಟೀಲು), ಫಣೀಂದ್ರಭಾಸ್ಕರ್(ಮೃದಂಗ) ಮತ್ತು ರಘುನಂದನ್(ಘಟ)ಅವರ ಪಕ್ಕವಾದ್ಯಗಳು ಗಾಯನಕ್ಕೆ ಕಳೆ ಕಟ್ಟಿದವು.ಹಿತೈಷಿಯ ನೃತ್ಯೋಲ್ಲಾಸ

ಈ ಬಾರಿಯ ಅನನ್ಯ ನೃತ್ಯೋಲ್ಲಾಸದಲ್ಲಿ (ಸೇವಾಸದನ) ಕೂಚಿಪುಡಿ ನಾಟ್ಯದ ಬೆಡಗನ್ನು ಸೆರೆಹಿಡಿಯಲಾಯಿತು. ಯುವ ನರ್ತಕಿ ಹಿತೈಷಿ ತಮ್ಮ ಖಚಿತವಾಗಿದ್ದ ಲಯ ಮತ್ತು ಔಚಿತ್ಯಪೂರ್ಣ ಅಭಿನಯ ಕೌಶಲ್ಯವನ್ನು ಪ್ರದರ್ಶಿಸಿದರು.ಗಜವದನನ (ಹಂಸಧ್ವನಿ)ನ್ನು ಬೇಡಿಕೊಂಡ ನಂತರ ಜನಪ್ರಿಯ `ಮರಕತಮಣಿಮಯ' (ಆರಬಿ) ಕೃತಿಯನ್ನು ಅವಲಂಬಿಸಿ ಕೃಷ್ಣನ ಗುಣ, ರೂಪ ಹಾಗೂ ಗೋಪಿಕೆಯರೊಡನೆ ಆಡುವ ರಾಸಲೀಲೆಯನ್ನು ತಮ್ಮ ಸಂವಹನಾಶೀಲ ಅಭಿನಯದಲ್ಲಿ ತೋರಿದರು. ಕನಕಮಣಿಮಯನೂಪುರಚರಣಕ್ಕೆ ಅವರು ಒದಗಿಸಿದ ಸಂಚಾರಿಗಳು ಆಕರ್ಷಕವಾಗಿದ್ದವು. ಗುರುರಾಜ್ ಅವರ ಕೂಚಿಪುಡಿ ನಾಟ್ಯದಲ್ಲಿ ಪುರುಷ ಸಹಜ ತಾಂಡವ ಚಲನೆಗಳು, ಕರಣಗಳು ಮತ್ತು ಚಾರಿಗಳನ್ನು ನೋಡಿ ಆನಂದಿಸಬಹುದಾಗಿತ್ತು. ಅವರ ಪೂರ್ವರಂಗವಿಧಿ (ರೇವತಿ) ಸಾಂಪ್ರದಾಯಿಕವಾಗಿದ್ದರೂ ಅದಕ್ಕಾಗಿ ಬಳಸಲಾಗಿದ್ದ ವಸ್ತು ಮತ್ತು ಅವರು ಮಾಡಿದ ಕೆಲವು ಕ್ರಿಯೆಗಳ ಬಗೆಗೆ ಪುನರಾವಲೋಕನದ ಅನಿವಾರ್ಯತೆ ಸ್ಪಷ್ಟವಾಗಿ ಕಾಣಿಸಿತು. ಸಂತ ರಾಮದಾಸರ ಮರಾಠಿ ರಚನೆ ತಾಂಡವ ನೃತ್ಯ ಕರೆ ಅವರ ಸಬಲ ಚಲನೆಗಳು ಅಭಿನಂದಿಸಲ್ಪಟ್ಟವು. ಅಠಾಣ ಸ್ವರಜತಿಯಲ್ಲಿ ಅವರ ನೃತ್ತದ ಬಿಗುವು ಸುಂದರವಾಗಿತ್ತು. ಸಂಧ್ಯಾ ತಾಂಡವ (ರಾಗ ಮತ್ತು ತಾಳಮಾಲಿಕೆ) ಮತ್ತು ರಾಮಾಯಣ ಶಬ್ದ (ಮೋಹನ)ಗಳ ನಂತರ ಮಂಡಿಸಲಾದ ಕೃಷ್ಣ ಕೌತುವಂ ನೃತ್ಯ ಪ್ರೇಮಿಗಳ ಹುಬ್ಬೇರಿಸಿತು.ಗಮನಾರ್ಹ ನೃತ್ಯ ನಿಷ್ಠೆ

ಅಂದಿನ ಕೊನೆಯ ಕಾರ್ಯಕ್ರಮವಾಗಿ ಮೂಡಿ ಬಂದ ಶಮಾ ಕೃಷ್ಣ ಅವರ ಪ್ರತಿಪಾದನೆಗಳು ಎಲ್ಲ ರೀತಿಯಲ್ಲೂ ಸಮಗ್ರವಾಗಿದ್ದವು. ಓಜ-ತೇಜಗಳ ಅವರ ಚಲನೆಗಳು, ರುಚಿಕರವಾದ ಆಹಾರ್ಯ, ಚುರುಕಿನ ಚಿಂತನಾಶೀಲತೆ ಮತ್ತು ನೃತ್ಯ-ನಿಷ್ಠೆ ಗಮನಾರ್ಹವಾಗಿದ್ದವು. ಅವರ ನೃತ್ತ, ನೃತ್ಯ ಮತ್ತು ನಾಟ್ಯದಲ್ಲಿ ಕೂಚಿಪುಡಿ ನಾಟ್ಯದ ಎಲ್ಲ ಅಂಶಗಳೂ ತುಂಬಿ ಬಂದವು. ತಲೆಯ ಮೇಲೆ ನೀರು ತುಂಬಿದ ಚೆಂಬನ್ನು ಇಟ್ಟುಕೊಂಡು ಹಿತ್ತಾಳೆ ತಟ್ಟೆಯ ಮೇಲೆ ಅಗಣಿತ ಲಯ ಮಾದರಿಗಳನ್ನು ಅವರು ಕಡೆದ ಪರಿ ಅವರ ವಿಶೇಷ ನೈಪುಣ್ಯಕ್ಕೆ ಸಾಕ್ಷಿಯಾಯಿತು. ಕಾಲಿನ ಹೆಬ್ಬೆರಳುಗಳನ್ನು ಸೇರಿಸಿಕೊಂಡು ಅವರು ಹೆಣೆದ ಪಾದಚಲನೆಗಳು ರೋಮಾಂಚಕವಾಗಿದ್ದವು.ಕಾರ್ಯಕ್ರಮದ ಕೊನೆಯ ಸಂಧ್ಯಾ ತಾಂಡವದಲ್ಲಿ ಆರು ಕರಣಗಳ ಅಡಕ, ವಾಚಿಕಾಭಿನಯದ ಸಾರ್ವತ್ರಿಕತೆ ಮತ್ತು ಕಾಮ, ಕ್ರೋಧಾದಿಗಳ ಸಂಕ್ಷಿಪ್ತ ಆದರೆ ಸಾರ್ಥಕ ನಿರೂಪಣೆ ಶಮಾ ಅವರ ನೃತ್ಯ ಸಿದ್ಧಿಯನ್ನು ಪ್ರಮಾಣೀಕರಿಸಿತು.

ಪ್ರತಿಕ್ರಿಯಿಸಿ (+)