ಬುಧವಾರ, ಜನವರಿ 29, 2020
29 °C
ಹನುಮ ಜಯಂತಿ ಪ್ರಯುಕ್ತ ಜಾತ್ರೆ

ಸಂಭ್ರಮ, ಸಡಗರದ ಕಡ್ಲೆಕಾಯಿ ಪರಿಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಭ್ರಮ, ಸಡಗರದ ಕಡ್ಲೆಕಾಯಿ ಪರಿಷೆ

ಚಿಕ್ಕಬಳ್ಳಾಪುರ: ಹನುಮ ಜಯಂತಿ ಪ್ರಯುಕ್ತ ನಗರದ ಹೊರವಲಯ­ದಲ್ಲಿ­ರುವ ಆದಿಚುಂಚನಗಿರಿ ಶಾಖಾ ಮಠದ ಎದುರಿನ ವೀರಾಂಜನೇಯ­ಸ್ವಾಮಿ ದೇವಾಲಯದ ಬಳಿ ಭಾನು­ವಾರ ಸಂಜೆ ಕಡ್ಲೆಕಾಯಿ ಪರಿಷೆ, ಪಾನಕ ಸೇವೆ ಮತ್ತು ವೀರಾಂಜನೇಯಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.ಆದಿಚುಂಚನಗಿರಿ ಮಠ, ಜಡಲ­ತಿಮ್ಮನಹಳ್ಳಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ತರು ಪಾಲ್ಗೊಂಡಿ­ದ್ದರು. ಮಠದ ಪೀಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅವರ ಪೂಜೆ ನೆರವೇರಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು.ಜನರು ಮನದುಂಬಿ ಕಡ್ಲೆಕಾಯಿ­ಗಳನ್ನು ಸವಿದರು. ಸಡಗರದ ಕರಗ ಮಹೋತ್ಸವ ಕೂಡ ನಡೆಯಿತು.ವೀರಾಂಜನೇಯಸ್ವಾಮಿ ದೇವಾ­ಲಯದ ಆವರಣದಲ್ಲಿ ರಥವು ಸುತ್ತು ಹಾಕಿದ ವೇಳೆ ಭಕ್ತರ ಸಂಭ್ರಮ ಮುಗಿಲು ಮುಟ್ಟಿತು. ನಿರ್ಮಲಾನಂದನಾಥ ಸ್ವಾಮೀಜಿ ಕಡ್ಲೆಕಾಯಿಗಳನ್ನು ಬುಟ್ಟಿಯ ಮೂಲಕ ತೂರಿದಾಗ, ಅವುಗಳನ್ನು ಹಿಡಿಯಲು ಮಕ್ಕಳು ಮುಗಿಬಿದ್ದರು.‘ಜಾತ್ರೆ ಆಚರಣೆ ಸಂಸ್ಕೃತಿಯ ಸೊಗಡಾ­ಗಿದ್ದು, ಹಲವಾರು ವರ್ಷಗಳಿಂದ ಪಾಲಿಸಿಕೊಂಡು ಬರ­ಲಾಗು­ತ್ತಿದೆ.  ಕಡ್ಲೆಕಾಯಿ ಪರಿಷೆಗೆ ಪ್ರತಿ ವರ್ಷವೂ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ  ಜಾತ್ರೆ­ಯಲ್ಲಿ ಪಾಲ್ಗೊಂಡವರೆಲ್ಲರಿಗೂ ದೇವರ ಕೃಪೆಯಾಗಲಿ’ ಎಂದು ಸ್ವಾಮೀಜಿ ಹೇಳಿದರು.‘ಹನುಮ ಜಯಂತಿ ಪ್ರಯುಕ್ತ ಪ್ರತಿ ವರ್ಷವೂ ನಾವು ಸಂಭ್ರಮ–ಸಡ­ಗರದಿಂದ ಜಾತ್ರೆ ಆಯೋಜಿಸು­ತ್ತೇವೆ. ತಾಲ್ಲೂಕು ಅಲ್ಲದೇ ಜಿಲ್ಲೆಯ ವಿವಿಧ ಗ್ರಾಮಗಳಿಂದ ಭಕ್ತಾದಿಗಳು ಭಾರಿ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಪಾಲ್ಗೊಳ್ಳು­ತ್ತಾರೆ. ದೇವಾಲಯವನ್ನು ಎರಡು ವರ್ಷಗಳ ಹಿಂದೆಯಷ್ಟೇ ಜೀರ್ಣೋ­ದ್ಧಾರಗೊಳಿಸಿ ಅಭಿವೃದ್ಧಿ­ಪಡಿಸ­ಲಾ­ಯಿತು. ದೇವಾಲಯ ನಿರ್ಮಾಣ­ಗೊಂಡಿ­ರುವುದರಿಂದ ಜಾತ್ರೆಯೂ ವಿಶೇಷ ಕಳೆ ಪಡೆದುಕೊಂಡಿದೆ. ಭಕ್ತಾದಿಗಳು ಬೆಳಿಗ್ಗೆ­ಯಿಂದ ಪೂಜೆ ಸಲ್ಲಿಸುತ್ತಿದ್ದಾರೆ’ ಎಂದು ಗ್ರಾಮಸ್ಥ ಎಂ.ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು.ಇದಕ್ಕೂ ಮುನ್ನ ಮಠದ ಆವರಣ­ದಿಂದ ದೇವಾಲಯದವರೆಗೆ ಮಹಿಳೆ­ಯರು ತಲೆಯ ಮೇಲೆ ಕಳಶಗಳನ್ನು ಇಟ್ಟುಕೊಂಡು ನಡೆದುಕೊಂಡು ಬಂದರು. ಮಠದ ಮಂಗಳನಾಂದನಾಥ ಸ್ವಾಮೀಜಿ, ಸಿದ್ಧೇಶ್ವರನಾಥ ಸ್ವಾಮೀಜಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)