ಸಂಭ್ರಮ, ಸಡಗರದ ಬಕ್ರೀದ್ ಆಚರಣೆ

7

ಸಂಭ್ರಮ, ಸಡಗರದ ಬಕ್ರೀದ್ ಆಚರಣೆ

Published:
Updated:
ಸಂಭ್ರಮ, ಸಡಗರದ ಬಕ್ರೀದ್ ಆಚರಣೆ

ವಿರಾಜಪೇಟೆ: ಮುಸ್ಲಿಮರ ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಸೋಮವಾರ ಶ್ರದ್ಧಾ, ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು.ಬಕ್ರೀದ್ ಹಬ್ಬದ ಅಂಗವಾಗಿ ವಿರಾಜಪೇಟೆಯ ಎಲ್ಲ ಮಸೀದಿಗಳಲ್ಲಿ ಬೆಳಗಿನಿಂದಲೇ ವಿಶೇಷ ಪ್ರವಚನ ಹಾಗೂ ಈದ್ ಪ್ರಾರ್ಥನೆ ಹಮ್ಮಿಕೊಳ್ಳಲಾಗಿತ್ತು. ಮಸೀದಿಗಳಲ್ಲಿ ಮುಸ್ಲಿಂಮರು ಸಹಸ್ರಾರು ಸಂಖ್ಯೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಎರಡು ಮಸೀದಿಗಳಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಇಲ್ಲಿನ ಮುಖ್ಯ ಬೀದಿಯಲ್ಲಿರುವ ಶಾಫಿ ಜುಮ್ಮಾ ಮಸೀದಿಯಲ್ಲಿ ಬೆಳಿಗ್ಗೆ 9ಗಂಟೆಗೆ ಪ್ರಾರಂಭವಾದ ಈದ್ ಪ್ರವಚನದಲ್ಲಿ ಮೌಲಾನ ಮೂಸಾ ನೇತೃತ್ವ ವಹಿಸಿದ್ದರು. ಖಾಸಗಿ ಬಸ್ಸು ನಿಲ್ದಾಣದ ಬಳಿಯ ಶಾದುಲಿ ಮಸೀದಿಯಲ್ಲಿ ಮೌಲಾನ ಅಬ್ದಲ್ ರಶೀದ್, ಸುಣ್ಣದ ಬೀದಿಯ ಈದ್ಗಾ ಮೈದಾನದಲ್ಲಿ ಮೌಲಾನ ಮುಝಮ್ಮಿಲ್, ಕಲ್ಲುಬಾಣೆಯ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಮೌಲಾನ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್ ಪ್ರವಚನ ನೀಡಿದರು.ಮಲಬಾರ್ ರಸ್ತೆಯಲ್ಲಿ ನೂತವಾಗಿ ನಿರ್ಮಿಸಿರುವ ಸಲಫಿ ಜುಮ್ಮಾ ಮಸೀದಿ ಹಾಗೂ ಬ್ರೈಟ್ ಶಾಲೆಯ ಕ್ಯಾಂಪಸ್‌ನ  ಈದ್ಗಾದಲ್ಲಿ ಈದ್ ಪ್ರಾರ್ಥನೆ ಹಾಗೂ ಪ್ರವಚನ ನಡೆಯಿತು. ಈ ಎರಡು ಮಸೀದಿಗಳಲ್ಲಿ ಪ್ರಾರ್ಥನೆಯಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು, ಬಕ್ರೀದ್‌ಗೆ ವಿಶೇಷ ಮೆರುಗು ನೀಡಿದರು. ಸಲಫಿ ಮಸೀದಿಯಲ್ಲಿ ಮೌಲಾನ ಅಬ್ದುರಶೀದ್ ನಾಜತ್ ಹಾಗೂ ಬ್ರೈಟ್ ಈದ್ಗಾದಲ್ಲಿ ಮೌಲಾನ ಸಾಧಿಕ್ ಪ್ರವಚನ ನೀಡಿದರು.ಪ್ರಾರ್ಥನೆ ಬಳಿಕ ಬಕ್ರೀದ್ ಹಬ್ಬದ ಶುಭಾಶಯ ಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಅನಂತರ ಸಿಹಿ ಹಂಚಿ ಸಂಭ್ರಮಿಸಿದರು. ಹನಫಿ  ಹಾಗೂ ಶಾಫಿ  ಮುಸ್ಲಿಮರಿಗೆ ಬಕ್ರೀದ್ ಒಂದೇ ದಿನ ಬಂದು ದರಿಂದ ಸಮುದಾಯದ ಎರಡು ಪಂಗಡಗಳ ನಡುವೆ ಹಬ್ಬದ ಆಚರಣೆಯ ಉತ್ಸಾಹ ಇಮ್ಮಡಿಯಾಗಿತ್ತು.

ಬಕ್ರೀದ್‌ನ ಪ್ರಯುಕ್ತ ವಿರಾಜಪೇಟೆ ಪಟ್ಟಣ ದಾದ್ಯಂತ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಸಂಭ್ರಮದ ಬಕ್ರೀದ್

ಸೋಮವಾರಪೇಟೆ: 
ನಗರ ವ್ಯಾಪ್ತಿಯಲ್ಲಿ ಬಕ್ರೀದ್ ಹಬ್ಬವನ್ನು ಮುಸ್ಲಿಂಮರು ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಸ್ಥಳೀಯ ಪ್ರಾರ್ಥನಾ ಮಂದಿರಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.ಜಲಾಲಿಯ, ಹನಫಿ ಜಾಮಿಯಾ ಪ್ರಾರ್ಥನಾ ಮಂದಿರ ಸೇರಿದಂತೆ, ತಣ್ಣೀರುಹಳ್ಳ, ಬಜೆಗುಂಡಿ, ಕಲ್ಕಂದೂರು, ಕಾಗಡಿಕಟ್ಟೆಯಲ್ಲಿರುವ ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆಗಳು ಜರುಗಿದವು.

ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಸೋಮವಾರಪೇಟೆ ಪೊಲೀಸ್ ಠಾಣಾ ವತಿಯಿಂದ ಅಗತ್ಯ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry