ಶನಿವಾರ, ಮೇ 8, 2021
24 °C

ಸಂಯಮ ಸೂತ್ರ- ತಿಂಗಳು ಸವೆಸಿದ ಸದಾನಂದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಇದೀಗ ಒಂದು ತಿಂಗಳ ಅಧಿಕಾರದ ಹಾದಿಯನ್ನು ಸವೆಸಿದ್ದಾರೆ. ಆರಂಭದಿಂದಲೇ ಭಿನ್ನಮತದ ಕೆಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡು ಅಧಿಕಾರ ಚಲಾಯಿಸುತ್ತಿರುವ ಅವರ ಸಂಯಮವೇ ಗುರುತಿಸಬಹುದಾದ ಪ್ರಮುಖ ಅಂಶ.ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಇದ್ದ ಅಧಿಕಾರಿಗಳು, ಅದೇ ವ್ಯವಸ್ಥೆಯನ್ನು ನೆಚ್ಚಿಕೊಂಡು ಸದಾನಂದ ಗೌಡರು ಮುಂದುವರಿದಿದ್ದಾರೆ. ಆದರೆ, ಯಡಿಯೂರಪ್ಪ ಅವರ ಕೈಗೊಂಬೆ ಎಂಬ ಸಾರ್ವತ್ರಿಕ ಟೀಕೆಯ ಪೊರೆಯಿಂದ ಕಳಚಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಹೆಜ್ಜೆಗಳನ್ನು ಸದ್ದಿಲ್ಲದೆ ಇಟ್ಟಿದ್ದಾರೆ.`ಯಡಿಯೂರಪ್ಪ ಅವರು ನಮ್ಮ ನಾಯಕ. ಅವರ ಸಲಹೆಗಳನ್ನು ಕೇಳುತ್ತೇನೆ. ಅವರನ್ನು ಭೇಟಿ ಮಾಡುತ್ತೇನೆ. ಆದರೆ ಅಧಿಕಾರ ಚಲಾಯಿಸುವಲ್ಲಿ ಅವರ ಕೈಗೊಂಬೆ ಆಗಲಾರೆ. ನಾನೇನಿದ್ದರೂ ರಾಜ್ಯದ 6 ಕೋಟಿ ಜನರ ಕೈಗೊಂಬೆ~ ಎಂಬ ಸಮರ್ಥನೆಯನ್ನು ನೀಡುತ್ತಲೇ ಬಂದಿದ್ದಾರೆ. ಪ್ರತಿಪಕ್ಷಗಳ ಟೀಕೆಗೆ ಉತ್ತರಿಸುವ ಗೋಜಿಗೆ ಹೋಗದೆ ತಮ್ಮ ಪಾಡಿಗೆ ತಾವು ನಗುಮೊಗದ ಆಡಳಿತ ನಡೆಸುವತ್ತ ಗಮನ ಹರಿಸಿದ್ದಾರೆ. ಸಂಪುಟ ಸಹೋದ್ಯೋಗಿಗಳಿಗೂ ಇದೇ ಪಾಠವನ್ನು ಹೇಳಿಕೊಟ್ಟಿದ್ದಾರೆ.ಯಡಿಯೂರಪ್ಪ ಅವರ ಪಾಳೆಯದಿಂದ ಆಯ್ಕೆ ಆಗಿ ಬಂದರೂ ನಂತರದ ದಿನಗಳಲ್ಲಿ ಪಕ್ಷದ ಉಭಯ ಬಣಗಳ ಜೊತೆಗೆ ಸಮಾನ ಅಂತರವನ್ನು ಕಾಯ್ದುಕೊಂಡಿದ್ದಾರೆ. ಕೊಪ್ಪಳ ಉಪಚುನಾವಣೆ ಸಂಬಂಧ ಭಾನುವಾರ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಮತ್ತು ಪಕ್ಷದ ಕಚೇರಿಯಲ್ಲಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಸಭೆಗಳಿಗೆ ಹೋಗದೆ ಅಧಿಕೃತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದೇ ಇದಕ್ಕೆ ನಿದರ್ಶನ. ಆಡಳಿತದಲ್ಲಿ ಪಾರದರ್ಶಕತೆ ಮೂಡಿಸುವ ನಿಟ್ಟಿನಲ್ಲೂ ಗೌಡರು ಕೆಲವೊಂದು ಕ್ರಮಗಳನ್ನು ಅನುಸರಿಸಿದ್ದಾರೆ. ಅಕ್ರಮ ಗಣಿಗಾರಿಕೆಯ ಉರುಳಿಗೆ ಸಿಲುಕಿ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡಿದ್ದನ್ನು ನೆನಪಿನಲ್ಲಿ ಇಟ್ಟುಕೊಂಡು ಗಣಿ ತಂಟೆಗೆ ಹೋಗದೆ ಸುಮ್ಮನಿದ್ದಾರೆ.ವರ್ಷವಿಡೀ ವರ್ಗಾವಣೆ ಮಾಡಿಸಿಕೊಳ್ಳುವ ಶಾಸಕ, ಸಚಿವರ ಸಲಹೆಗಳನ್ನೂ ನಯವಾಗಿಯೇ ತಿರಸ್ಕರಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಸಂಪುಟ ಸದಸ್ಯರೇ ಸಮಾಧಾನ ವ್ಯಕ್ತಪಡಿಸಿದ್ದಾರೆ.ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಇದ್ದ `ಅಬ್ಬರ~ ಈಗ ಕಾಣುತ್ತಿಲ್ಲ. ಆದರೆ, `ಪಂಚಸೂತ್ರ~ದ ಕಟ್ಟುಪಾಡುಗಳೊಂದಿಗೆ ಕೆಲವೊಂದು ಉತ್ತಮ ಹೆಜ್ಜೆಗಳನ್ನು ಸದಾನಂದ ಗೌಡರು ಇಟ್ಟಿದ್ದಾರೆ ಎಂಬುದು ಗಮನಾರ್ಹ. ಸಂಘ ಪರಿವಾರದ ಹಿರಿಯರ ಉಪದೇಶಗಳನ್ನೂ ಅವರು ಪಡೆಯುತ್ತಿದ್ದಾರೆ. ಎರಡು ಹಂತದ ಸಂಪುಟ ವಿಸ್ತರಣೆಯನ್ನು ಹೇಗೋ ನಿಭಾಯಿಸಿರುವ ಅವರು ಮೂರನೇ ಹಂತದ ವಿಸ್ತರಣೆ ಮುಂದೂಡುತ್ತಲೇ ಬಂದಿದ್ದಾರೆ.ಸಂಪುಟ ಸೇರಲು ರೆಡ್ಡಿ ಸಹೋದರರು ಒಡ್ಡಿರುವ ಒತ್ತಡಗಳಿಗೆ ಪ್ರತಿಯಾಗಿ ಅವರ ಬೇಡಿಕೆಯನ್ನು ಪಕ್ಷದ ಹೈಕಮಾಂಡ್ ಅಂಗಳಕ್ಕೆ ಹಾಕಿ ಸುಮ್ಮನಿದ್ದಾರೆ. ಸಂಪುಟ ವಿಸ್ತರಣೆ ಕಸರತ್ತು `ಜೇನುಗೂಡಿಗೆ ಕೈ ಹಾಕಿದಂತೆ~ ಎಂಬುದನ್ನು ಅರ್ಥ ಮಾಡಿಕೊಂಡಿರುವ ಮುಖ್ಯಮಂತ್ರಿ ಈ ನಿಟ್ಟಿನಲ್ಲಿ ವಿಳಂಬ ನೀತಿಯನ್ನೇ ತಾಳಿದ್ದಾರೆ. ಇದು ರೆಡ್ಡಿ ಸಹೋದರರನ್ನು ಕೆರಳಿಸಿದೆ. ಅವರೀಗ ಬಿ.ಶ್ರೀರಾಮುಲು ಅವರನ್ನು ಮುಂದಿಟ್ಟುಕೊಂಡು ಹೊಸ ಪಕ್ಷ ಕಟ್ಟುವ ಸನ್ನಾಹದಲ್ಲಿದ್ದಾರೆ.ಲೋಕಾಯುಕ್ತ ವರದಿ, ಪ್ರವಾಹ ಪರಿಸ್ಥಿತಿಯಂತಹ ಗಂಭೀರ ವಿಷಯಗಳ ಬಗ್ಗೆ ಚರ್ಚಿಸಲು ವಿಧಾನ ಮಂಡಲದ ಅಧಿವೇಶನ ಕರೆಯಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನೂ ಸದಾನಂದ ಗೌಡರು ತಳ್ಳಿಹಾಕಿದ್ದಾರೆ. ಈಗ ಕೊಪ್ಪಳ ಉಪ ಚುನಾವಣೆಯ ಸರದಿ. ಮುಖ್ಯಮಂತ್ರಿ ಆದ ಬಳಿಕ ಅವರಿಗೆ ಇದು ಮೊದಲ ಸತ್ವ ಪರೀಕ್ಷೆ. ಈ ಚುನಾವಣೆಯನ್ನು ಯಾರ ನೇತೃತ್ವದಲ್ಲಿ ಎದುರಿಸಬೇಕು ಎಂಬ ಪೈಪೋಟಿ ಈಗ ಪಕ್ಷದಲ್ಲಿ. ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲವಂತೂ ಮೂಡಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.