ಸಂವಹನ ಕ್ಷೇತ್ರ ತೊರೆಯುವೆ - ನೀರಾ ರಾಡಿಯಾ

7

ಸಂವಹನ ಕ್ಷೇತ್ರ ತೊರೆಯುವೆ - ನೀರಾ ರಾಡಿಯಾ

Published:
Updated:

ನವದೆಹಲಿ,(ಪಿಟಿಐ): ಟಾಟಾ ಗ್ರೂಪ್, ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್‌ನಂತಹ (ಆರ್‌ಐಎಲ್) ಪ್ರಮುಖ ಕಂಪೆನಿಗಳ ಸಾರ್ವಜನಿಕ ಸಂಪರ್ಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ವೈಷ್ಣವಿ ಸಮೂಹ ಕಂಪೆನಿಯ ಮುಖ್ಯಸ್ಥೆ ನೀರಾ ರಾಡಿಯಾ ಸಂವಹನ ಸಲಹಾ ಕ್ಷೇತ್ರವನ್ನು ತೊರೆಯುವುದಾಗಿ ಪ್ರಕಟಿಸಿದ್ದಾರೆ.ತಮ್ಮ ಆರೋಗ್ಯ ಮತ್ತು ಕುಟುಂಬದ ಹಿತದೃಷ್ಟಿಯಿಂದ ಇನ್ನು ಮುಂದೆ ಯಾವುದೇ ಕಂಪೆನಿಯ ಜತೆಗಿನ ಸಾರ್ವಜನಿಕ ಸಂಪರ್ಕ ಸೇವಾ ವ್ಯವಹಾರವನ್ನು ನವೀಕರಿಸುವುದಿಲ್ಲ ಎಂದು ಅವರು ತಮ್ಮ ಈ ಅಚ್ಚರಿದಾಯಕ ನಿರ್ಧಾರವನ್ನು ಪ್ರಕಟಿಸಿದ್ದಾರೆ.ಸಾಕಷ್ಟು ಯೋಚಿಸಿ ಮತ್ತು ಸಲಹೆಗಳನ್ನು ಪಡೆದು ಈ ನಿರ್ಧಾರ ತೆಗೆದುಕೊಂಡಿದ್ದರೂ ಇದೊಂದು ನೋವಿನ ಸಂಗತಿ ಎಂದು ಅವರು ಹೇಳಿದ್ದಾರೆ.2ಜಿ ತರಂಗಾಂತರ ಹಗರಣದಲ್ಲಿ ದೂರವಾಣಿ ಧ್ವನಿಮುದ್ರಿಕೆಗಳು ಬಹಿರಂಗವಾದ ನಂತರ ನೀರಾ ಸಾಕಷ್ಟು ಸಮಯ ಸುದ್ದಿಯಲ್ಲಿದ್ದರು. ಆದರೆ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಬದ ಲಿಗೆ ತನಿಖಾ ಅಧಿಕಾರಿಗಳು ಅವರನ್ನು ಸಾಕ್ಷಿದಾರರನ್ನಾಗಿ ಪರಿಗಣಿಸಿದ್ದಾರೆ.ತೊಂದರೆಗೆ ಯತ್ನ: `ಹಲವು ವರ್ಷಗಳಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ಕಂಪೆನಿ ಮತ್ತು ನನಗೆ ತೊಂದರೆ ಕೊಡಲು ಪ್ರಯತ್ನಿಸುತ್ತಲೇ ಇವೆ. ತೀರಾ ಇತ್ತೀಚಿನವರೆಗೂ ಅವುಗಳ ವಿರುದ್ಧ ನಾನು ಹೋರಾಡಿ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದೇನೆ. ಆದರೆ ಈಗ ನಾನು ಆ ಹಿತಾಸಕ್ತಿಗಳೇ ಗೆಲ್ಲಲು  ಅವಕಾಶ ಮಾಡಿಕೊಡುತ್ತಿದ್ದೇನೆ. ಅದರಿಂದ ಅವರೇನಾದರೂ ಉತ್ತಮ ಮಾನವರಾಗಲು ಸಾಧ್ಯ ಆಗುವುದಾದರೆ ಅವರಲ್ಲಿ ಸಕಾರಾತ್ಮಕವಾದ ಬದಲಾವಣೆ ತಂದ ಸಂತೋಷ ನನಗಾಗುತ್ತದೆ~ ಎಂದು ನೀರಾ, ಕಂಪೆನಿ ನೌಕರರಿಗೆ ಬರೆದಿರುವ ಇ-ಮೇಲ್‌ನಲ್ಲಿ ಹೇಳಿಕೊಂಡಿದ್ದಾರೆ. ಸುಮಾರು 200 ನೌಕರರು ಅವರ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಟಾಟಾ ಶ್ಲಾಘನೆ: `ನೀರಾ ಅವರ ವೈಯಕ್ತಿಕ ಅನಿಸಿಕೆಗಳನ್ನು ಟಾಟಾ ಸಮೂಹ ಕಂಪೆನಿ ಗೌರವಿಸುತ್ತದೆ~ ಎಂದು ತಿಳಿಸಿರುವ ರತನ್ ಟಾಟಾ, `ವೈಷ್ಣವಿ ಕಂಪೆನಿಯನ್ನು ದೊಡ್ಡದಾಗಿ ಬೆಳೆಸುವಲ್ಲಿ ನೀರಾ ಅಪಾರ ಶ್ರಮ ವಹಿಸಿದ್ದಾರೆ~ ಎಂದು ತಿಳಿಸಿದ್ದಾರೆ.`2001ರಿಂದಲೂ ವೈಷ್ಣವಿ ಕಂಪೆನಿಯು ನಮ್ಮ ಕಂಪೆನಿಯ ಸಾರ್ವಜನಿಕ ಸಂಪರ್ಕ ಮತ್ತು ಪ್ರಚಾರ ಕಾರ್ಯಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಾ, ಕಂಪೆನಿಯ ಉತ್ಪನ್ನಗಳಿಗೆ ಒಳ್ಳೆಯ ಹೆಸರು ತರುವಲ್ಲಿ ಶ್ರಮಿಸಿದೆ~ ಎಂದು ರತನ್ ಟಾಟಾ ಶ್ಲಾಘಿಸಿದ್ದಾರೆ.`ನೀರಾ ಅವರು ಪ್ರಚಾರ ಮತ್ತು ಸಾರ್ವಜನಿಕ ಸಂಪರ್ಕ ಸೇವಾ ರಂಗವನ್ನು ತೊರೆಯುತ್ತಿರುವುದು ವಿಷಾದದ ಸಂಗತಿ. ಕಳೆದ ಮೂರು ವರ್ಷಗಳಿಂದ ನಮ್ಮ ಕಂಪೆನಿಗೆ ನೀರಾ ಮತ್ತು ಅವರ ಸಹೋದ್ಯೋಗಿಗಳು ವೃತ್ತಿಪರ ಸೇವೆ ಒದಗಿಸಿದ್ದಾರೆ~ ಎಂದು ರಿಲಯನ್ಸ್ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.ವೈಷ್ಣವಿ ಕಂಪೆನಿ ಮತ್ತು ಅದರ ಅಂಗ ಸಂಸ್ಥೆಗಳ ಕೆಲ ನೌಕರರು ಈಗಾಗಲೇ ಆರ್‌ಐಎಲ್ ಮತ್ತು ಟಾಟಾ ಗ್ರೂಪ್ ಸೇರಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry