ಗುರುವಾರ , ಮೇ 19, 2022
21 °C

ಸಂವಾದ: ನಾನೆ ಸ್ವದೇಶಿನೀನೆ ಪರದೇಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹರಕೆ-ಹರಾಜು ಯಾವುದು ಸಹಜ? ಯಾವುದು ಅವಮಾನ?’ ಅಕ್ಷರ ಅವರ ಬರಹದ ಶೀರ್ಷಿಕೆ ಪ್ರಶ್ನೆಯ ರೂಪದಲ್ಲಿದ್ದರೂ, ಅವರಿಗೆ ಆ ಕುರಿತು ಸಂದೇಹವೇನಿಲ್ಲ. ದೇವಸ್ಥಾನದ ಸಂತರ್ಪಣೆಯಲ್ಲಿ ಮೊದಲ ಪಂಕ್ತಿಯ ಎಂಜಲೆಲೆಗಳ ಮೇಲೆ ಉರುಳುವ ಮಡೆಸ್ನಾನದ ಹರಕೆ ಸಹಜವೆಂದೂ, ಕ್ರಿಕೆಟ್ಟಿಗರ ಐ.ಪಿ.ಎಲ್. ಹರಾಜು ಅವಮಾನವೆಂದೂ ಅವರು ಮೊದಲೇ ತೀರ್ಮಾನಿಸಿಯಾಗಿದೆ. ಐ.ಪಿ.ಎಲ್. ಹರಾಜು ಅವಮಾನ ಎಂಬ ಅಕ್ಷರ ಅವರ ಅಭಿಪ್ರಾಯದ ಬಗ್ಗೆ ನನ್ನದೇನೂ ತಕರಾರಿಲ್ಲ.ಅವಮಾನವಷ್ಟೇ ಅಲ್ಲ, ಅದೊಂದು ರಾಷ್ಟ್ರೀಯ ಅವಮಾನ ಎಂದರೂ ಸರಿಯೇ. ಯಾಕೆಂದರೆ ಆಧುನಿಕ ಯುಗದ ಎಲ್ಲ ಬಗೆಯ ರಾಷ್ಟ್ರಪ್ರಭುತ್ವಗಳು, ಉದಾ: ನಾಝಿ ಜರ್ಮನಿ, ಬಂಡವಾಳಶಾಹಿ ಅಮೇರಿಕ, ಸಮಾಜವಾದಿ ರಷ್ಯ ಮತ್ತು ಚೀನಗಳಂತೆ ಭಾರತವೂ ತನ್ನ ಸಂಸ್ಕೃತಿ, ಸೈನ್ಯ, ಅಣುಬಾಂಬು, ಯುದ್ಧವಿಮಾನ ಇತ್ಯಾದಿಗಳ ಜೊತೆ ಕ್ರೀಡಾ ತಂಡಗಳನ್ನು ಸಹ ತನ್ನ ಪ್ರತಿನಿಧಿ ಎಂಬಂತೆ ‘ಶೋಕೇಸ್’ ಮಾಡುತ್ತದೆ. ಹಾಗಾಗಿ ಕ್ರಿಕೆಟ್ಟಿಗರ ಹರಾಜನ್ನು ಸಹಿಸಲಾಗದು ಎಂಬ ಅಕ್ಷರ ಅವರ ಮಾತಿಗೆ ನಾನೂ ದನಿಗೂಡಿಸುತ್ತೇನೆ. ಆದರೆ ಅಕ್ಷರ ವಾದಿಸುವ ಹಾಗೆ ಮಡೆಸ್ನಾನದ ಆಚರಣೆ ಸಹಜವೂ ಅಲ್ಲ; ಸಾರ್ವತ್ರಿಕವೂ ಅಲ್ಲ. ನಾಗ-ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಮಾತ್ರ ಈ ಆಚರಣೆ ಹೆಚ್ಚಾಗಿ ಕಂಡುಬರುತ್ತದೆ.ಈ ಕ್ಷೇತ್ರಗಳಲ್ಲಿ ಮಡಿ-ಮೈಲಿಗೆಯ ಕಟ್ಟುನಿಟ್ಟು ಕೂಡ ಜಾಸ್ತಿ. ಕರಾವಳಿಯ ನಾಗ-ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರರು, ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪೂಜೆ ಪುನಸ್ಕಾರ ನಡೆಸಿದರೂ ಸಂತರ್ಪಣೆಯಲ್ಲಿ ಮಾತ್ರ ಅವರ ಸರದಿ ಕಡ್ಡಾಯವಾಗಿ ಬ್ರಾಹ್ಮಣರ ಪಂಕ್ತಿ ಎದ್ದ ನಂತರವೇ. ಮಡೆಸ್ನಾನದ ಆಚರಣೆಯನ್ನು ಈ ಪಂಕ್ತಿಭೇದದಿಂದ ಬೇರ್ಪಡಿಸಿ ನೋಡಲು ಬರುವುದಿಲ್ಲ.ಸಂತರ್ಪಣೆಯಲ್ಲಿ ಮೊದಲು ಉಣ್ಣುವ ಬ್ರಾಹ್ಮಣರಿಗೆ ಅದು ಅವಮಾನವೆನ್ನಿಸುವುದಿಲ್ಲ; ನಂತರ ಉಣ್ಣುವ ಇತರೆ ಜಾತಿಯವರಿಗೆ ಅದರಿಂದ ಅವಮಾನವಾಗುವುದಿಲ್ಲ; ಮಡೆಸ್ನಾನದಲ್ಲಿಯಂತೂ ಅವಮಾನವಾಗುವ ಮಾತೇ ಇಲ್ಲ. ಹಾಗಿರುತ್ತ ಈ ಆಚರಣೆಯ ಬಗ್ಗೆ ನಿಮಗೆ ಏನು ಸಮಸ್ಯೆ? ಇದು ಅಕ್ಷರ ಅವರ ಸವಾಲು.ಮಡೆಸ್ನಾನ ಆಚರಿಸುವುದು ಮತ್ತು ಅದನ್ನು ನೋಡುವುದು ನಿರ್ವಾತದಲ್ಲಿ ಸಂಭವಿಸುವ ತಟಸ್ಥ ಕ್ರಿಯೆಗಳು ಎಂಬಂತೆ ಅಕ್ಷರ ವಾದಿಸುತ್ತಾರೆ. ಹರಕೆಯನ್ನು ನೋಡುವವನಿಗೆ ಆ ಆಚರಣೆ ಅವಮಾನಕರ ಎನಿಸಬಹುದು ಎಂಬ ಸಾಧ್ಯತೆಯನ್ನು ಅಕ್ಷರ ಅಲ್ಲಗಳೆಯುವುದಿಲ್ಲ.ಆದರೆ ಹರಕೆಯನ್ನು ಆಚರಿಸುವವ ಮತ್ತು ಅದಕ್ಕೆ ಸಾಕ್ಷಿಯಾಗಿರುವ ನೋಡುಗ- ಇಬ್ಬರೂ ಹಂಚಿಕೊಂಡಿರುವ ಮನುಷ್ಯತ್ವವನ್ನು ಮಾತ್ರ ಅಕ್ಷರ ನಿರಾಕರಿಸುತ್ತಾರೆ. ಅವಮಾನಾದ ಅರಿವು ಹರಕೆ ಆಚರಿಸುವವನ ಒಳಗಿನಿಂದಲೇ ಸ್ವಯಂಭೂವಿನಂತೆ ತನ್ನೊಳಗಿನಿಂದ ಹುಟ್ಟಿದರೆ ಮಾತ್ರ ಅಕ್ಷರ ಅದನ್ನು ಅವಮಾನವೆಂದು ಪರಿಗಣಿಸುವವರು. ಅಂದರೆ ಅವರ ಪ್ರಕಾರ ಹರಕೆ ಆಚರಿಸುವವರು ಮತ್ತು ಅದಕ್ಕೆ ಸಾಕ್ಷೀಭೂತರಾಗಿ ಪ್ರತಿಭಟಿಸುವ ವಿಚಾರವಂತರು ಬಿಡಿಬಿಡಿ ವ್ಯಕ್ತಿಗಳೇ ಹೊರತು  ಒಟ್ಟಾಗಿ ಒಂದು ಸಮುದಾಯವಲ್ಲ.ಅಕ್ಷರ ಅವರ ಮಟ್ಟಿಗೆ ಪ್ರಜ್ಞೆ ಮತ್ತು ಪರಿಸರದ ನಡುವೆ ಯಾವ ಸಂಬಂಧವೂ ಇಲ್ಲ. ಅದು ಹಾಗಿರುವುದೇ ಹೌದಾದರೆ ಸ್ವಾತಂತ್ರ್ಯಪೂರ್ವದಲ್ಲೇ ಶಿವರಾಮ ಕಾರಂತರ ‘ಚೋಮನದುಡಿ’, ಶ್ರೀರಂಗರ ‘ಹರಿಜನ್ವಾರ’ ಮತ್ತು ಕುವೆಂಪು ಅವರ ‘ಶೂದ್ರತಪಸ್ವಿ’ ಮುಂತಾದ ಕೃತಿಗಳು ಹೊರಬರುತ್ತಿರಲಿಲ್ಲ. ಗುಜರಾತ್ 2002ರ ಹಿಂಸೆಗೆ ನಾನು ಕೇವಲ ನೋಡುಗನಲ್ಲ; ಹಿಂಸೆಗೆ ಹಿಂಸೆಗೆ ಬಲಿಯಾದವರ ಜೊತೆ ಆ ಹಿಂಸೆಗೆ ಕಾರಣರಾದವರ ಜೊತೆಗೂ ನಾನು ಮನುಷ್ಯತ್ವವನ್ನು ಹಂಚಿಕೊಂಡವ ಎಂಬ ಅರಿವಿನಲ್ಲಿ ಸುಬಣ್ಣ ತನ್ನ ‘ಗುಜರಾತ್ ಸ್ವಗತ’ವನ್ನು ಬರೆಯುತ್ತಿರಲಿಲ್ಲ.ಮಡೆಸ್ನಾನವನ್ನು ಆಚರಿಸುವವರು ಹಾಗೂ ಅದನ್ನು ಪ್ರತಿಭಟಿಸುವವರು ಪರಸ್ಪರ ಹಂಚಿಕೊಂಡಿರುವ ಮನುಷ್ಯತ್ವವೇ ಅಕ್ಷರ ಅವರ ವಿಶ್ಲೇಷಣೆಯಲ್ಲಿ ನಾಪತ್ತೆಯಾಗಿದೆ. ಲೌಕಿಕ ಬದುಕಿನ ಸಮಸ್ಯೆಗಳಿಗೆ ಪರಿಹಾರ ಅರಸಿ ಹರಕೆ ಹೊರುವ ಬಡಪಾಯಿಗಳ ಬಗ್ಗೆ ಸಹಾನುಭೂತಿ ತೋರುವುದು ಮತ್ತು ಹರಕೆಯ ಆಚರಣೆ ಸಹಜ ಎಂದು ಭಾವಿಸುವುದು- ಇವೆರಡರ ನಡುವೆ ವ್ಯತ್ಯಾಸವಿದೆ. ಸಹಬಾಳ್ವೆಯಲ್ಲಿ ಮಾತ್ರ ಸಹಾನುಭೂತಿ ಇರಲು ಸಾಧ್ಯ. ಹರಕೆ ಕುರಿತ ಅಕ್ಷರ ಅವರ ವಿಶ್ಲೇಷಣೆಯಲ್ಲಿ ಸಹಬಾಳ್ವೆ ಮತ್ತು ಸಮುದಾಯಗಳಿಗೆ ಸ್ಥಾನವಿಲ್ಲ. ಅವರದ್ದು ಸನ್ನಿವೇಶಕ್ಕೆ ಹೊರಗಿನವನಾಗಿ ನಿಂತು ನೋಡುವವನ ನಿರ್ಲಿಪ್ತನೋಟ.ಬೌದ್ಧಿಕ ಶೋಧನೆಯ ಒಂದು ವಿಧಾನವಾಗಿ ಈ ಬಗೆಯ ದೃಷ್ಟಿಕೋನದ ವಿರುದ್ಧ ವಾದಿಸುವುದು ಕಷ್ಟ. ಅದೂ ಅಲ್ಲದೆ, ಆಳುವ ವ್ಯವಸ್ಥೆಯ ಘೋಷಣೆ ಮತ್ತು ಭರವಸೆಗಳ ಹುಸಿಯನ್ನು ಮನಗಾಣಲು ಇಂತಹ ದೃಷ್ಟಿಕೋನವೇ ಬೇಕು. ಆದರೆ ನಮ್ಮನ್ನು ನಿಜಕ್ಕೂ ಆಳುತ್ತಿರುವ ಶಕ್ತಿಗಳು ಯಾವುವು ಎಂಬುದರ ಬಗ್ಗೆ ಅಕ್ಷರ ಅವರ ತೀರ್ಮಾನಗಳು ನನಗೆ ಸಮ್ಮತವಲ್ಲ. ಅವರ ಲೇಖನದಲ್ಲಿ ಹರಕೆ ಮತ್ತು ಹರಾಜುಗಳ ಮೇಲೆ ಅವರು ಹೊರಿಸಿರುವ ಲಗ್ಗೇಜು ದೊಡ್ಡದಾಗಿದೆ; ಅಷ್ಟೇ ಪ್ರಶ್ನಾರ್ಹವೂ ಆಗಿದೆ.ಹರಕೆಯನ್ನು ಆಧುನಿಕಪೂರ್ವ, ಗ್ರಾಮೀಣ, ಪರಂಪರಾಗತ, ಬಹುಜನರ ಭಾರತದ ಜೊತೆ ಮತ್ತು ಐ.ಪಿ.ಎಲ್. ಹರಾಜನ್ನು ಆಧುನಿಕ, ನಗರ ಪ್ರಧಾನ, ಸುಶಿಕ್ಷಿತ, ಆಂಗ್ಲೀಕೃತ ‘ಇಂಡಿಯಾ’ದ ಜೊತೆ ಅಕ್ಷರ ಸಮೀಕರಿಸುತ್ತಾರೆ. ಹರಕೆಯ ಭಾರತ ಮತ್ತು ಹರಾಜಿನ ಇಂಡಿಯಾ- ಇವೆರಡೂ, ಸಂಕರ, ಮುಖಾಮುಖಿ, ಸಹಬಾಳ್ವೆ, ಕೊಡುಕೊಳ್ಳುವಿಕೆ, ಒಳಗೊಳ್ಳುವಿಕೆ ಇತ್ಯಾದಿ ಅನುಸಂಧಾನವೇ ಇಲ್ಲದ ಎರಡು ಪ್ರತ್ಯೇಕ ಲೋಕಗಳು ಎಂಬಂತೆ ಅಕ್ಷರ ಬರೆಯುತ್ತಾರೆ. ಹಾಗಾಗಿ ಹರಕೆ ಅವರಿಗೆ ‘ಸ್ವದೇಶಿ’ಯಂತೆ ಕಂಡರೆ ಅದನ್ನು ಪ್ರತಿಭಟಿಸುವ ‘ವಿಚಾರವಂತರು’ ‘ಪರದೇಶಿ’ಗಳ ಹಾಗೆ ಕಾಣಿಸುತ್ತಾರೆ.ಈ ವಿಚಾರವಂತರಿಗೆ ನಮ್ಮ ಜನರ ಭಾಷೆ ಗೊತ್ತಿಲ್ಲ; ನಮ್ಮ  ನಂಬಿಕೆ, ನಡಾವಳಿ, ಜ್ಞಾನಪರಂಪರೆಗಳ ಬಗ್ಗೆ ಗೌರವವಿಲ್ಲ. ಇವರು ಗಿಳಿಪಾಠ ಒಪ್ಪಿಸುವುದು ಪಶ್ಚಿಮದಿಂದ ಎರವಲು ಪಡೆದ ವಿಶ್ವಾತ್ಮಕ ಸುಭಾಷಿತಗಳನ್ನು. ವ್ಯವಸ್ಥೆಗೆ ಒಪ್ಪಿತವಾಗುವ ಪೊಲಿಟಿಕಲಿ ಕರೆಕ್ಟ್ ನಿಲುವುಗಳಲ್ಲದೆ ಬೇರೆ ಏನನ್ನು ಇಂತಹವರಿಂದ ನಿರೀಕ್ಷಿಸಲು ಸಾಧ್ಯ ಎಂಬುದು ಅಕ್ಷರ ಅವರ ಉದ್ಗಾರ.ಹಾಗಾಗಿ ಅವರ ದುರಾಗ್ರಹಕ್ಕೆ ಆಧುನಿಕ ವಿಚಾರವಂತರು ಮತ್ತು ಮಾಧ್ಯಮಗಳ ಜೊತೆ ಮಡೆಸ್ನಾನವನ್ನು ಪ್ರತಿಭಟಿಸಿದ ಬೆರಳೆಣಿಕೆಯಷ್ಟು ಚಳವಳಿಕಾರರೂ ಸೇರಿದ್ದಾರೆ. ಇಂತಹ ಚಳವಳಿಗಳನ್ನು ಸ್ವಂತಿಕೆ ಇಲ್ಲದ ರಟ್ಟಿನ ಆಕೃತಿಗಳ ಒಣ ಹಾರಾಟವೆಂಬಂತೆ ಚಿತ್ರಿಸುವ ಒಂದು ಪರಂಪರೆ ಕನ್ನಡದಲ್ಲಿದ್ದು ಅಕ್ಷರ ಅವರ ಬರಹ ಅದನ್ನು ಮುಂದುವರಿಸಿದೆ. ನನಗೆ ಅದರ ಜೊತೆ ಸಹಮತವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.