ಭಾನುವಾರ, ಡಿಸೆಂಬರ್ 15, 2019
18 °C

ಸಂವಿಧಾನದ ಪುನರ್‌ವ್ಯಾಖ್ಯಾನ ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂವಿಧಾನದ ಪುನರ್‌ವ್ಯಾಖ್ಯಾನ ಬೇಕು

ಬೆಂಗಳೂರು: `ಧಾರ್ಮಿಕ ಅಲ್ಪಸಂಖ್ಯಾತರ ಸಮಸ್ಯೆಗಳ ಪರಿಹಾರಕ್ಕೆ ಸಂವಿಧಾನದ ಪುನರ್ ವ್ಯಾಖ್ಯಾನದ ಅಗತ್ಯವಿದೆ~ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿದರು.ನಗರದ ಯುನೈಟೆಡ್ ಥಿಯೊಲಾಜಿಕಲ್ ಕಾಲೇಜಿನಲ್ಲಿ ಬುಧವಾರ ಬಾಹ್ಯ ಹಾಗೂ ಆಂತರಿಕ ಸಾಮಾಜಿಕ ಅಧ್ಯಯನ ಕೇಂದ್ರ ಮತ್ತು ಭಾರತೀಯ ಕಾನೂನು ಶಾಲಾ ರಾಷ್ಟ್ರೀಯ ವಿಶ್ವವಿದ್ಯಾಲಯ ಜಂಟಿಯಾಗಿ ಆಯೋಜಿಸಿದ್ದ `ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸಮಸ್ಯೆ ಮತ್ತು ಸವಾಲುಗಳು~ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.`ಭಾರತೀಯ ಸಂವಿಧಾನದಲ್ಲಿ ಎಲ್ಲಾ ಸಾಮಾಜಿಕ ಸಮಸ್ಯೆಗಳಿಗೂ ಪರಿಹಾರವಿದೆ. ಆದರೆ ಅದರ ವ್ಯಾಖ್ಯಾನದಲ್ಲಿ ನಾವು ಸೋಲುತ್ತಿದ್ದೇವೆ. ಧರ್ಮಾತೀತ ಹಾಗೂ ಜಾತ್ಯತೀತ ಆಶಯಗಳನ್ನು ಜಾರಿಗೊಳಿಸಲು ಉಳಿದಿರುವ ಒಂದೇ ಒಂದು ಭರವಸೆ ಎಂದರೆ ಸಂವಿಧಾನ ಮಾತ್ರ~ ಎಂದು ಅವರು ಅಭಿಪ್ರಾಯಪಟ್ಟರು.`ಧಾರ್ಮಿಕ ಅಲ್ಪಸಂಖ್ಯಾತರ ಸಮಸ್ಯೆಗಳು ಇತರೆ ಸಮಸ್ಯೆಗಳಿಗಿಂತ ಭಿನ್ನವಾದಂಥವು. ಶಿಕ್ಷಣ ಹಾಗೂ ಸಮಾನತೆಯ ಹಕ್ಕು ಅಲ್ಪಸಂಖ್ಯಾತರಿಗೆ ಸಂಪೂರ್ಣವಾಗಿ ಸಿಗಬೇಕು. ಆಗ ಮಾತ್ರ ಅಲ್ಪಸಂಖ್ಯಾತರ ಉದ್ಧಾರ ಸಾಧ್ಯ. ದೇಶದಲ್ಲಿ ಹಲವಾರು ಧರ್ಮ, ಭಾಷೆ, ಸಮುದಾಯಗಳ ಆಧಾರದಲ್ಲಿ ನಿರಂತರ ಸಂಘರ್ಷಗಳು ನಡೆಯುತ್ತಲೇ ಇವೆ.

 

ಇವುಗಳ ಪರಿಹಾರಕ್ಕೆ ನಾವು ಅಂತಿಮವಾಗಿ ಸಂವಿಧಾನವನ್ನೇ ಅವಲಂಬಿಸಬೇಕಾಗಿದೆ. ದೇಶದಲ್ಲಿ ಎಲ್ಲಾ ಸಮುದಾಯಗಳ ಜನರೂ ಪರಸ್ಪರ ಸಾಮರಸ್ಯದ ಮೂಲಕ ಒಂದಾಗಿ ಬಾಳುವ ಅಗತ್ಯವಿದೆ. ಸಂವಿಧಾನದ ಮೂಲ ಉದ್ದೇಶವೂ ಜಾತ್ಯತೀತ ರಾಷ್ಟ್ರದ ನಿರ್ಮಾಣವೇ ಆಗಿದೆ~ ಎಂದು ಅವರು ನುಡಿದರು.ರಾಜ್ಯಸಭಾ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಮಾತನಾಡಿ, `ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಸಾಮಾಜಿಕ ಹಾಗೂ ರಾಜಕೀಯ ಅವಕಾಶಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಧಾರ್ಮಿಕ ಅಲ್ಪಸಂಖ್ಯಾತರ ಸಮಾನತೆಗಾಗಿ ಸಂವಿಧಾನದಲ್ಲಿ ಅವಕಾಶಗಳಿದ್ದರೂ ಅವುಗಳ ಜಾರಿಗೆ ಪ್ರತ್ಯೇಕ ಕಾನೂನುಗಳಿಲ್ಲ.

 

ಇರುವ ಕಾನೂನುಗಳಲ್ಲಿನ ಲೋಪಗಳನ್ನು ಸರಿಪಡಿಸಬೇಕಾದ ಅಗತ್ಯವಿದೆ. ಸಂವಿಧಾನದ ಆಶಯಗಳನ್ನು ಜಾರಿಗೆ ತರುವ ಮೂಲಕ ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಸಾಧ್ಯವಿದೆ~ ಎಂದರು.`ಕೋಮು ಗಲಭೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಇವೆ. ಆದರೆ ಕೋಮು ಸಾಮರಸ್ಯಕ್ಕೆ ಭಂಗ ತರುವವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಲು ರೂಪಿಸಿರುವ ಕಾನೂನುಗಳಲ್ಲೇ ತೊಡಕಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸಾಮಾಜಿಕ ರಕ್ಷಣೆ ಸರ್ಕಾರಗಳ ಕರ್ತವ್ಯವಾಗಿದೆ~ ಎಂದು ಅವರು ತಿಳಿಸಿದರು.ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ರಾಜಕೀಯ ಮತ್ತು ಸಾಮಾಜಿಕ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ.ವೆಲೇರಿಯನ್ ರೋರ್ಡಿಗಸ್ ಮಾತನಾಡಿ, `ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದಾರೆ. ಅವರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನಗಳಾಗಬೇಕು. ಮುಸ್ಲಿಮರಷ್ಟೇ ಅಲ್ಲದೆ, ಕ್ರೈಸ್ತರು, ಸಿಖ್ಖರು, ಬೌದ್ಧರು, ಜೈನರು ಹಾಗೂ ಪಾರ್ಸಿಗಳಿಗೂ ಸಮಾನ ಅವಕಾಶ ಹಾಗೂ ಸಾಮಾಜಿಕ  ರಕ್ಷಣೆ ಸಿಗಬೇಕು~ ಎಂದರು.ವಿಚಾರ ಸಂಕಿರಣದಲ್ಲಿ ಭಾರತೀಯ ಕಾನೂನು ಶಾಲಾ ರಾಷ್ಟ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್.ವೆಂಕಟರಾವ್, ಬಾಹ್ಯ ಹಾಗೂ ಆಂತರಿಕ ಸಾಮಾಜಿಕ ಅಧ್ಯಯನ ಕೇಂದ್ರದ ಬೆಂಗಳೂರು ವಿಭಾಗದ ನಿರ್ದೇಶಕ ಡಾ.ಎಸ್.ಜಾಫೆಟ್, ಬ್ಲಾಸಮ್ ಫರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.`ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಹಿತಿ ಇಲ್ಲ~

ವಿಚಾರ ಸಂಕಿರಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಸ್ಕರ್ ಫರ್ನಾಂಡಿಸ್, `ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದಲ್ಲಿ ಎಲ್ಲರನ್ನೂ ಒಟ್ಟಾಗಿ ದುಡಿಯಬೇಕಾದದ್ದು ಕಾಂಗ್ರೆಸ್‌ನ ಆಶಯ. ಸಮುದಾಯ ಹಾಗೂ ಜಾತಿಗಳ ಆಧಾರದಲ್ಲಿ ಕಾಂಗ್ರೆಸ್ ಯಾರಿಗೂ ಯಾವುದೇ ಸ್ಥಾನಗಳನ್ನು ನೀಡುವುದಿಲ್ಲ~ ಎಂದರು.`ಬಿಜೆಪಿಯ ಆಂತರಿಕ ಜಗಳಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ರಾಜ್ಯದಲ್ಲಿ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಿದೆ. ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ಜಿಲ್ಲೆಗಳ ಸಮೀಕ್ಷೆ ನಡೆಸಲಾಗಿದೆ~ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)