ಮಂಗಳವಾರ, ಮೇ 18, 2021
23 °C

ಸಂವಿಧಾನದ 348ನೇ ಪರಿಚ್ಛೇದಕ್ಕೆ ತಿದ್ದುಪಡಿ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ವಾದ ಮಂಡನೆ ಹಾಗೂ ತೀರ್ಪು ನೀಡುವುದಕ್ಕೆ ಸಂಬಂಧಪಟ್ಟಂತೆ ಸಂವಿಧಾನದ 348ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಲಿದೆ~ ಎಂದು ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರನ್ನು ಅಭಿನಂದಿಸಿ  ಅವರು ಮಾತನಾಡಿದರು.`ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ ಎಂಬ ಆದೇಶವಿದೆ. ಅಲ್ಲದೇ ಜನರ ಸೇವೆಗೆಂದೇ ಸ್ಥಾಪನೆಯಾದ ಸಾರ್ವಜನಿಕ ಕಚೇರಿಗಳಲ್ಲಿ ಕನ್ನಡದಲ್ಲಿ ವ್ಯವಹಾರ ನಡೆದಾಗ ಮಾತ್ರ ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ~ ಎಂದರು.`ಆ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಎಲ್ಲ ವ್ಯವಹಾರ ಕನ್ನಡದಲ್ಲೇ ನಡೆಯುವಂತೆ ಮಾಡುವ ಸಂಬಂಧದ ಪ್ರಸ್ತಾವಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ನಂತರ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಕಳುಹಿಸಲು ಸರ್ಕಾರ ಬದ್ಧವಾಗಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಅನುಪಸ್ಥಿತಿಯಲ್ಲಿ ಅವರ ಭಾಷಣವನ್ನು ಸಚಿವರು ವಾಚಿಸಿ ಹೇಳಿದರು.`ಹೈಕೋರ್ಟ್‌ನಲ್ಲಿ ಕನ್ನಡದಲ್ಲೇ ತೀರ್ಪು ನೀಡುವ ಸಂಬಂಧ ಕಾನೂನು ತಜ್ಞರ ಸೇವೆ ಬಳಸಿಕೊಳ್ಳಲಾಗುವುದು. ಒಟ್ಟಿನಲ್ಲಿ ಸಾಮಾನ್ಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಹೈಕೋರ್ಟ್‌ನಲ್ಲೂ ಕನ್ನಡದಲ್ಲೇ ವ್ಯವಹಾರ ನಡೆಯುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು~ ಎಂದು ಹೇಳಿದರು.ಸಚಿವ ಗೋವಿಂದ ಕಾರಜೋಳ, `2000 ವರ್ಷಗಳ ಇತಿಹಾಸವಿರುವ ಕನ್ನಡ ಅಳಿವಿನಂಚಿನಲ್ಲಿದೆ ಎಂಬ ಆತಂಕ ಬೇಡ. ಈ ನಾಡಿನ ಜನತೆ ಅಪ್ಪಟ ಕನ್ನಡಿಗರು. ಹಾಗಾಗಿ ಕನ್ನಡಕ್ಕೆ ಯಾವುದೇ ಅಪಾಯವಿಲ್ಲ~ ಎಂದರು.

`ಜಾಗತೀಕರಣ ಯುಗದಲ್ಲಿ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿದೆ.ಆದರೆ ಕನ್ನಡಿಗರು ಕನ್ನಡಿಗರಾಗಿಯೇ ಉಳಿಯಬೇಕು. ತಮ್ಮ ಮಕ್ಕಳಿಗೆ ಕನ್ನಡ ಕಲಿಸಬೇಕು. ಹಾಗೆಯೇ ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಇನ್ನಷ್ಟು ಸಾಹಿತ್ಯ ರಚನೆಯಾಗಬೇಕಿದೆ. ಕನ್ನಡದ ಅಭಿವೃದ್ಧಿಗೆ ಸರ್ಕಾರ ಅಗತ್ಯ ನೆರವು ಹಾಗೂ ಸಹಕಾರ ನೀಡಲಿದೆ~ ಎಂದು ಹೇಳಿದರು.ಹೈಕೋರ್ಟ್ ನ್ಯಾಯಮೂರ್ತಿ ವಿ.ಜಿ. ಸಭಾಹಿತ್, `ಹೈಕೋರ್ಟ್ ಹೊರತುಪಡಿಸಿ ಉಳಿದ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ತೀರ್ಪು ನೀಡುವಂತೆ ಈಗಾಗಲೇ ಆದೇಶ ಹೊರಬಿದ್ದಿದೆ. ಕನ್ನಡದಲ್ಲಿ ತೀರ್ಪು ನೀಡುವುದು ನ್ಯಾಯಾಧೀಶರ ಕರ್ತವ್ಯ, ಹಾಗೆಯೇ ಅನಿವಾರ್ಯವೂ ಹೌದು.ಆದರೆ ಹೈಕೋರ್ಟ್‌ನಲ್ಲಿ ಅನ್ಯ ಭಾಷೆಯ ನ್ಯಾಯಮೂರ್ತಿಗಳಿದ್ದಾಗ ಕನ್ನಡದಲ್ಲಿ ವಾದ ಮಂಡಿಸುವುದರಿಂದ ಪ್ರಯೋಜನವಾಗುವುದಿಲ್ಲ~ ಎಂದು ಹೇಳಿದರು.ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ, `ಹೈಕೋರ್ಟ್‌ನಲ್ಲಿ ಕನ್ನಡ ಬಲ್ಲ ನ್ಯಾಯಮೂರ್ತಿಗಳು ಕನ್ನಡದಲ್ಲೇ ವ್ಯವಹರಿಸುತ್ತಾರೆ. ಅಲ್ಲದೇ ಕನ್ನಡದಲ್ಲೇ ವಾದ ಮಂಡಿಸಲು ಅವಕಾಶ ನೀಡುತ್ತಾರೆ~ ಎಂದರು. ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ ಚಂದ್ರು~, `ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದರೂ ಇಚ್ಛಾಶಕ್ತಿಯ ಕೊರತೆಯಿಂದ ಇದು ಸಂಪೂರ್ಣ ಜಾರಿಯಾಗಿಲ್ಲ.ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ರಾಜಸ್ತಾನದ ಹೈಕೋರ್ಟ್‌ಗಳಲ್ಲಿ ಪ್ರಾದೇಶಿಕ ಭಾಷೆಯಲ್ಲೇ ವ್ಯವಹಾರ ನಡೆಯುತ್ತದೆ. ಇದೇ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತರಲು ಮುಂದಾಗಬೇಕು. ಹೈಕೋರ್ಟ್‌ನಲ್ಲಿ ಕನ್ನಡದಲ್ಲೇ ವ್ಯವಹಾರ ನಡೆಯುವಂತೆ ಮಾಡುವ ನಿಟ್ಟಿನಲ್ಲಿ ವಿಧಾನಮಂಡಲದ ಉಭಯ ಸದನಗಳ ಒಪ್ಪಿಗೆ ಪಡೆದು, ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಕಳುಹಿಸಲು ಸರ್ಕಾರ ಮುಂದಾಗಬೇಕು~ ಎಂದು ಒತ್ತಾಯಿಸಿದರು.ಅಭಿನಂದಿತರ ಪರವಾಗಿ ಮಾತನಾಡಿದ ರವೀಂದ್ರ ಎಂ. ವೈದ್ಯ, `ನ್ಯಾಯಾಲಯದಲ್ಲಿ ಕನ್ನಡದಲ್ಲಿ ವ್ಯವಹರಿಸುವುದು ಕಷ್ಟದ ಕೆಲಸವಲ್ಲ. ಇದಕ್ಕೆ ಕೆಲವು ಅಡೆತಡೆಗಳಿದ್ದರೆ ಅವುಗಳನ್ನು ನಿವಾರಿಸಿಕೊಂಡು ಕನ್ನಡದಲ್ಲೇ ತೀರ್ಪು ನೀಡಬಹುದು. ಹಾಗೆಯೇ ಆಯಾ ಪ್ರಾಂತ್ಯದ ಆಡು ಭಾಷೆಯನ್ನು ಅರಿತರೆ ವ್ಯವಹರಿಸುವುದು ಸುಲಭ~ ಎಂದರು.ಎಂ. ಕೋಮಲತಾ, ಎಂ.ಮಹದೇವಯ್ಯ ಅವರು ಮಾತನಾಡಿದರು. ಕನ್ನಡದಲ್ಲೇ ತೀರ್ಪು ನೀಡಿದ 67 ನ್ಯಾಯಾಧೀಶರನ್ನು ಸನ್ಮಾನಿಸಲಾಯಿತು. ರೂ 10,000  ನಗದು, ಸ್ಮರಣ ಫಲಕ, ಪ್ರಶಸ್ತಿ ಪತ್ರ, ಪುಸ್ತಕಗಳನ್ನು ನೀಡಿ ಅಭಿನಂದಿಸಲಾಯಿತು.ಬೆಳಗಾವಿ ಪಾಲಿಕೆಯ ಪ್ರಥಮ ಕನ್ನಡಿಗ ಮೇಯರ್ ಆಗಿ ಆಯ್ಕೆಯಾಗಿದ್ದ ಸಿದ್ದನಗೌಡ ಪಾಟೀಲ, ಪ್ರಾಧಿಕಾರದ ಕಾರ್ಯದರ್ಶಿ ಎಸ್.ಎಂ. ಶಾಂತರಾಜು ಇತರರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.