ಸಂವಿಧಾನಬಾಹಿರ ಕ್ರಮ

7

ಸಂವಿಧಾನಬಾಹಿರ ಕ್ರಮ

Published:
Updated:

ಇದು `ಸ್ವೇಚ್ಛೆಯಿಂದ ಕೂಡಿದ ಸಂವಿಧಾನಬಾಹಿರ ಕ್ರಮ~ ಎಂದು ಸುಪ್ರೀಂ ಕೋರ್ಟ್ ಪೀಠ ಬಣ್ಣಿಸಿದ 2ಜಿ ತರಂಗಾಂತರ ಹಂಚಿಕೆ ಹಗರಣ ಯುಪಿಎ  ಸರ್ಕಾರದ ಸಾಮೂಹಿಕ ಹೊಣೆಗಾರಿಕೆಯ ವೈಫಲ್ಯಕ್ಕೆ ಸಾಕ್ಷಿ. ಅಷ್ಟರಮಟ್ಟಿಗೆ ನ್ಯಾ.ಜಿ.ಎಸ್.ಸಿಂಘ್ವಿ ಮತ್ತು ನ್ಯಾ. ಎ.ಕೆ.ಗಂಗೂಲಿ ಅವರಿದ್ದ ನ್ಯಾಯಪೀಠ ನೀಡಿದ ತೀರ್ಪು ಐತಿಹಾಸಿಕ. ಈ ಹಗರಣಕ್ಕೆ ಈಗ ಜೈಲಿನಲ್ಲಿರುವ ಮಾಜಿ ಸಚಿವ ಎ. ರಾಜಾ ಅವರಷ್ಟೇ ಕಾರಣರಲ್ಲ; ಸರ್ಕಾರದಲ್ಲಿದ್ದ ಮಿತ್ರಪಕ್ಷಗಳು ನಿರಂಕುಶಾಧಿಕಾರ ನಡೆಸುವುದಕ್ಕೆ ಸಮ್ಮಿಶ್ರ ಸರ್ಕಾರದ ಮೈತ್ರಿಧರ್ಮದ ಹೆಸರಿನಲ್ಲಿ ಆಸ್ಪದ ಕೊಟ್ಟ ಪ್ರಧಾನಿ ಅವರೂ ನೈತಿಕವಾಗಿ ಹೊಣೆಗಾರರು.ಮಹಾಲೇಖಪಾಲರು ಮತ್ತು ಕೇಂದ್ರೀಯ ಜಾಗೃತ ಆಯೋಗದ ಆಯುಕ್ತರು ಎಚ್ಚರಿಕೆ ನೀಡಿದ ನಂತರವೂ 2ಜಿ ತರಂಗಾಂತರ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಗಮನವನ್ನೇ ಹರಿಸದ ಹೊಣೆಗೇಡಿತನವನ್ನು ಯುಪಿಎ ಸಚಿವ ಸಂಪುಟ ಪ್ರದರ್ಶಿಸಿರುವುದು ಈ ತೀರ್ಪಿನಿಂದ ಸ್ಪಷ್ಟವಾಗಿದೆ. ಈ ಪ್ರಕರಣದಲ್ಲಿ ಆಗಿನ ಹಣಕಾಸು ಸಚಿವರ ಪಾತ್ರವನ್ನು ತನಿಖೆ ಮಾಡುವ ಬಗ್ಗೆ ವಿಚಾರಣಾ ನ್ಯಾಯಾಲಯ ತೀರ್ಮಾನಿಸಬೇಕೆಂದು ಪೀಠ ವ್ಯಕ್ತಪಡಿಸಿದ ಅಭಿಪ್ರಾಯದಿಂದ ಸದ್ಯಕ್ಕೆ ಆಗ ಹಣಕಾಸು ಸಚಿವರಾಗಿದ್ದ ಈಗಿನ ಗೃಹಸಚಿವ ಪಿ.ಚಿದಂಬರಂ ನಿರಾಳವಾಗಿದ್ದಾರೆ. ಆದರೆ, ಇದು ಸಮಸ್ಯೆಯನ್ನು ಮುಂದಕ್ಕೆ ಹಾಕಿದಂತಾಗಿದೆಯೇ ವಿನಾ ಅವರನ್ನು ಹಗರಣದಿಂದ ಬಿಡುಗಡೆ ಮಾಡಿದಂತಾಗಿಲ್ಲ.ಅಕ್ರಮವಾಗಿ ಹಂಚಿಕೆಯಾದ 122 ಲೈಸನ್ಸ್‌ಗಳನ್ನು ಪೀಠ ರದ್ದುಪಡಿಸಿದೆ. ಅಲ್ಲದೆ, ಲೈಸನ್ಸ್‌ಗಳನ್ನು ಮಾರಿಕೊಂಡ ಮೂರು ಸಂಸ್ಥೆಗಳಿಗೆ ದಂಡವನ್ನೂ ವಿಧಿಸಿದೆ. ಇದು ಅನುಚಿತ ರೀತಿಯಲ್ಲಿ ಸರ್ಕಾರದೊಂದಿಗೆ ವ್ಯವಹಾರ ಕುದುರಿಸಿದ ಈ ಕಾರ್ಪೊರೇಟ್ ಸಂಸ್ಥೆಗಳಿಗೆ ತಕ್ಕ ಪಾಠ. ರದ್ದು ಮಾಡಿದ 2 ಜಿ ತರಂಗಾಂತರಗಳನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಲಹೆಯಂತೆ ಹರಾಜಿನಲ್ಲಿಯೇ ವಿತರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ತರಂಗಾಂತರ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿರುವುದು, ಅದರಿಂದ ಸರ್ಕಾರದ ಬೊಕ್ಕಸ ಸೇರಬೇಕಿದ್ದ ಕೋಟ್ಯಂತರ ರೂಪಾಯಿ ಲೂಟಿಯಾಗಿರುವುದು ಈ ತೀರ್ಪಿನಿಂದ ಸ್ಪಷ್ಟವಾಗಿದೆ. ಅಕ್ರಮ ಲೈಸನ್ಸ್‌ಗಳನ್ನು ಹೀಗೆ ರದ್ದುಪಡಿಸಿದ್ದು ಒಂದು ಹಂತ. ಮುಂದಿನ ಹಂತ `ಸ್ವೇಚ್ಛೆಯಿಂದ~ ಲೈಸನ್ಸ್ ನೀಡಿದ್ದರಿಂದ ಆದ ಅವ್ಯವಹಾರದ ಪತ್ತೆ. ಇದಕ್ಕೆ ಸರ್ಕಾರ ಸಿಬಿಐಗೆ ಮುಕ್ತ ಅವಕಾಶ ನೀಡಬೇಕು. ಸಿಬಿಐ ಸೂಕ್ತ ತನಿಖೆ ನಡೆಸಿ ಲೂಟಿಕೋರರಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಭ್ರಷ್ಟರಿಗೆ, ಲೂಟಿಕೋರರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಸಮ್ಮಿಶ್ರ ಸರ್ಕಾರ ಮೈತ್ರಿ ಧರ್ಮ ಪಾಲನೆಯಷ್ಟೇ ಮುಖ್ಯ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸಾರ್ವಜನಿಕ ಸೇವೆಗಳ ಖಾಸಗೀಕರಣದಿಂದ ಸಾರ್ವಜನಿಕರಿಗೆ ಅನುಕೂಲ ಮತ್ತು ಸರ್ಕಾರಕ್ಕೆ ಆರ್ಥಿಕವಾಗಿ ಲಾಭವಾದರೆ ತಪ್ಪೇನಿಲ್ಲ. ಆದರೆ ಖಾಸಗೀಕರಣವನ್ನು ಸ್ವಂತಕ್ಕೆ ದುಡ್ಡು ಮಾಡುವ ದಂಧೆಯಾಗಿ ಮಾಡಿಕೊಳ್ಳುವುದು ಜನದ್ರೋಹ. ಇಂತಹ ದುರ್ಬಳಕೆ ತಪ್ಪಬೇಕಾದರೆ ಖಾಸಗೀಕರಣದ ವಿಷಯದಲ್ಲಿ ಸರ್ಕಾರ ಸ್ಪಷ್ಟ ನೀತಿಯನ್ನು ರೂಪಿಸಿಕೊಳ್ಳುವ ಅಗತ್ಯ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry