ಸಂವಿಧಾನ ನಿಷ್ಠೆಗೆ ಬದ್ಧತೆ...

7
ಕವಾಯತು ಮೈದಾನದಲ್ಲಿ ತರಬೇತಿ ಪೊಲೀಸರ ಪ್ರತಿಜ್ಞೆ

ಸಂವಿಧಾನ ನಿಷ್ಠೆಗೆ ಬದ್ಧತೆ...

Published:
Updated:

ಗುಲ್ಬರ್ಗ:...ಸಂವಿಧಾನಕ್ಕೆ ನಿಷ್ಠೆಯಿಂದ ಇರುತ್ತಾ ಆರಕ್ಷಕನಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ಯಾವುದೇ ರೀತಿಯ ಭಯ ಅಥವಾ ದಾಕ್ಷಿಣ್ಯ, ದ್ವೇಷ ಅಥವಾ ದುರಾಲೋಚನೆ, ಮತೀಯ, ರಾಜಕೀಯ ಅಥವಾ ಇತರ ಪ್ರಭಾವಗಳಿಗೆ ಒಳಗಾಗದೇ ಇರುವವನಾಗಿ, ಸಾರ್ವಜನಿಕರು ಹಾಗೂ ಆಸ್ತಿಪಾಸ್ತಿಗಳ ರಕ್ಷಣೆ ಮಾಡುತ್ತೇನೆ...-ಎಂಬ ಪ್ರತಿಜ್ಞೆ ಸ್ವೀಕರಿಸಿದ ಗುಲ್ಬರ್ಗ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 13ನೇ ತಂಡದ 115 ನಾಗರಿಕ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಶುಕ್ರವಾರ ಸೇವೆಯತ್ತ ಹೆಜ್ಜೆ ಹಾಕಿದರು. ಸುಂದರವಾಗಿ ಅಲಂಕೃತಗೊಂಡ ಗುಲ್ಬರ್ಗ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ನಿರ್ಗಮನ ಪಥಸಂಚಲನದಲ್ಲಿ ತರಬೇತಿ ಕೇಂದ್ರದ ಪ್ರಾಂಶುಪಾಲ, ಹೆಚ್ಚುವರಿ ಎಸ್ಪಿ ಕಾಶೀನಾಥ ತಳಕೇರಿ ಪ್ರತಿಜ್ಞಾ ವಿಧಿ ಬೋಧಿಸಿದರು.`1994ರಲ್ಲಿ ಗುಲ್ಬರ್ಗದಲ್ಲಿ ಆರಂಭಗೊಂಡ ತಾತ್ಕಾಲಿಕ ತರಬೇತಿ ಕೇಂದ್ರದಲ್ಲಿ 7 ನಾಗರಿಕ, 4 ಸಶಸ್ತ್ರ, 1 ಮಹಿಳಾ ಸೇರಿದಂತೆ 12 ತಂಡಗಳಲ್ಲಿ ಈ ತನಕ  1,533 ಮಂದಿ ತರಬೇತಿ ಪಡೆದು ಸೇವೆಗೆ ತೆರಳಿದ್ದಾರೆ. 13ನೇ ತಂಡದಲ್ಲಿ 115 ಮಂದಿ ಫೆ.24ರಿಂದ ಈ ತನಕ ತರಬೇತಿ ಪಡೆದು ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಲು ಸನ್ನದ್ಧರಾಗಿದ್ದಾರೆ. ಈ ಪೈಕಿ ಸ್ನಾತಕೋತ್ತರ, ಪದವೀಧರರು ಹಾಗೂ 27 ಮಾಜಿ ಸೈನಿಕರು ಇದ್ದಾರೆ' ಎಂದು ಕಾಶೀನಾಥ ತಳಕೇರಿ ವರದಿ ನೀಡಿದರು.ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಪೊಲೀಸ್ ಮಹಾನಿರೀಕ್ಷಕ (ತರಬೇತಿ) ಡಾ. ಎಸ್. ಪರಶಿವಮೂರ್ತಿ, `ಜೀವನದಲ್ಲಿ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಪ್ರತಿ ನಾಗರಿಕರೂ ಇಂತಹ ತರಬೇತಿ ಪಡೆದರೆ ಉತ್ತಮ. ನಿಮಗೆ ಉಷ್ಣ ಹವಾಮಾನ ಮತ್ತು ನೇರ-ದಿಟ್ಟ ನಡತೆಯ ಜನರ ಗುಲ್ಬರ್ಗದಲ್ಲಿ ತರಬೇತಿ ಸಿಕ್ಕಿದೆ. ಆರಂಭಿಕ ತರಬೇತಿಯನ್ನು ಮೂರೂವರೆ ದಶಕಗಳ ಸೇವೆಯಲ್ಲಿ ಕಾಯ್ದುಕೊಳ್ಳಿ' ಎಂದರು.  `ಪೊಲೀಸ್ ಎಂದರೆ ಅದ್ವಿತೀಯ ಅಲ್ಲ. ಕಾನೂನು ಚೌಕಟ್ಟಿನೊಳಗೆ ಕರ್ತವ್ಯ ನಿರ್ವಹಿಸಬೇಕು. ನಾವೂ ಸಾರ್ವಜನಿಕರೇ ಎಂಬಂತೆ ನಡೆದುಕೊಳ್ಳಬೇಕು' ಎಂದು ಈಶಾನ್ಯ ವಲಯ ಪೊಲೀಸ್ ಮಹಾ ನಿರೀಕ್ಷಕ ವಜೀರ್ ಅಹ್ಮದ್ ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ಎನ್. ಸ್ವಾಗತಿಸಿದರು. ಡಿವೈಎಸ್ಪಿ ಎ.ಡಿ.ಬಸಣ್ಣವರ್ ವಂದಿಸಿದರು.ತರಬೇತಿಯಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಒಳಾಂಗಣದಲ್ಲಿ ಪ್ರದೀಪ್ ಕುಮಾರ್ (ಪ್ರಥಮ) ಮತ್ತು ತಿಪ್ಪರಪ್ಪ ಎಸ್.ವಾಣಿ (ದ್ವಿತೀಯ), ಹೊರಾಂಗಣದಲ್ಲಿ ಪ್ರಕಾಶ್ ಎಸ್.ಎಲ್ (ಪ್ರ) ಹಾಗೂ ಮಂಜುನಾಥ (ದ್ವಿ) ಹಾಗೂ ರೈಫಲ್ ಶೂಟಿಂಗ್‌ನಲ್ಲಿ ಜಯಣ್ಣ ಬಿ.ಜಿ. (ಪ್ರ) ಮತ್ತು ಬಸಣ್ಣ ಹಿಪ್ಪರಗಿ (ದ್ವಿ) ಬಹುಮಾನ ಪಡೆದರು. ತರಬೇತಿ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಗೌರವವನ್ನು ಬಾಗಲಕೋಟೆಯ ಪ್ರಕಶ್ ಎಸ್.ಎಲ್ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry