ಸಂವಿಧಾನ ವಿರೋಧಿ ಆಯ್ಕೆ

7

ಸಂವಿಧಾನ ವಿರೋಧಿ ಆಯ್ಕೆ

Published:
Updated:

ದೇಶವನ್ನು ಆಳಲು ಆಯಾ ಪ್ರದೇಶದ ಜನತೆ ಆರಿಸಿ ಕಳುಹಿಸುವ ಲೋಕಸಭೆ ಎಂಬ ವ್ಯವಸ್ಥೆಯ ಜತೆಗೆ, ರಾಜ್ಯಸಭೆ ಎಂಬ ಮೇಲ್ಮನೆಯ ಅಗತ್ಯ ಕಂಡುಬಂದದ್ದು, ದೇಶದ ವ್ಯವಸ್ಥೆ ಕಟ್ಟುವಾಗ ಎಲ್ಲಾ ರಾಜ್ಯಗಳೂ ನೇರವಾಗಿ ಪಾಲ್ಗೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ.ವಿಧಾನ ಸಭೆಯಲ್ಲಿ ಪ್ರಾಬಲ್ಯ ಹೊಂದಿದ್ದರೂ ಲೋಕಸಭೆಯಲ್ಲಿ ಪ್ರಾತಿನಿಧ್ಯವಿಲ್ಲದವರು ರಾಜ್ಯಸಭೆಯ ಮೂಲಕ ಸಂಸತ್ತನ್ನು ಪ್ರತಿನಿಧಿಸಿ ತಮ್ಮ ರಾಜ್ಯದ ಜನಹಿತ ಕಾಪಾಡಲು ಕಟ್ಟಿರುವ ಒಂದು ವ್ಯವಸ್ಥೆ. ಲೋಕಸಭೆಯಷ್ಟೆ ಮಹತ್ವವಿರುವ ರಾಜ್ಯಸಭೆಗೆ ಆಯಾ ರಾಜ್ಯದ ಜನತೆಯ ಇಷ್ಟ-ಕಷ್ಟವನ್ನು ಚೆನ್ನಾಗಿ ಬಲ್ಲವರನ್ನು ಮಾತ್ರ, ಅಲ್ಲಿನ ಜನಪ್ರತಿನಿಧಿಗಳು ಆರಿಸಿ ಕಳುಹಿಸಬೇಕಾದುದು ಅವರ ದೊಡ್ಡ ಜವಾಬ್ದಾರಿಗಳಲ್ಲೊಂದು. ತಮಗೆ ಮತ ನೀಡಿ ಗೆಲ್ಲಿಸಿದ ಮತದಾರರಿಗೆ ಆ ಮೂಲಕ ಅವರು ತೋರುವ ಒಂದು ಗೌರವ ಸಹ ಇದಾಗಿದೆ.ಕನ್ನಡಿಗರನ್ನು ಪ್ರತಿನಿಧಿಸುವ ಕರ್ನಾಟಕದ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಮಾತ್ರ ಇದಕ್ಕೆ ತದ್ವಿರುದ್ದವಾಗಿರುವುದು ವಿಪರ್ಯಾಸ. ಪದೇ ಪದೇ ಕರ್ನಾಟಕದಿಂದ ರಾಜ್ಯಸಭೆ ಪ್ರತಿನಿಧಿಸುತ್ತಿದ್ದರೂ ಕನ್ನಡ ಮಾತಾಡಲು ಕಲಿಯಬೇಕು ಅನ್ನಿಸಿರದೇ, ಇಂದಿಗೂ ಕನ್ನಡ ಕಲಿಯದೇ ಇರುವವರು. ಅಧಿವೇಶನಗಳಲ್ಲಿ  ಸರಿಯಾಗಿ ಭಾಗವಹಿಸಿ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಶ್ನೆ ಎತ್ತದವರು, ರಾಜಕೀಯದ ಮೂಲಕ ತಮ್ಮ ಉದ್ದಿಮೆಯ ಹಿತರಕ್ಷಣೆಗೆ ಹಣ ಚೆಲ್ಲಿ ಸದಸ್ಯತ್ವ ಗಳಿಸುತ್ತಿರುವವರು, ನಾನು ರಾಷ್ಟ್ರೀಯ ನಾಯಕ- ಲೋಕಲ್ ವಿಷಯಕ್ಕೂ ನನಗೂ ಸಂಬಂಧವಿಲ್ಲಾ ಎನ್ನುವವರನ್ನು ನಾವು ನಮ್ಮ ರಾಜ್ಯಸಭೆ ಸದಸ್ಯರನ್ನಾಗಿ ಕಂಡಿರುವುದು ದುರದೃಷ್ಟಕರ.ಈಗ ಬಿಜೆಪಿ ಹೇಮಮಾಲಿನಿಗೆ ಮಣೆ ಹಾಕಿದೆ. ಅವರು ಭಾರತೀಯರಲ್ಲವೇ ಎಂದು ಅವರ ನಾಯಕರೊಬ್ಬರು ಸಮರ್ಥಿಸಿದ್ದಾರೆ ಬೇರೆ! ಹೇಮಮಾಲಿನಿ ಆಯ್ಕೆಯ ಮೂಲಕ ಬಿಜೆಪಿ ಬಯಸುತ್ತಿರುವುದು ಕನ್ನಡ-ಕನ್ನಡಿಗ-ಕರ್ನಾಟಕದ ಹಿತವಲ್ಲ ಬದಲಿಗೆ ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಮುಂಬರುವ ಚುನಾವಣೆ ಪ್ರಚಾರಕ್ಕೆ ಬಳಸುವ ಸಾಧನವಾಗಿ.ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷವು ಕರ್ನಾಟಕದಲ್ಲಿ ಶಾಸಕರನ್ನೂ, ಸಂಸದರನ್ನೂ,  ಕಾರ್ಯಕರ್ತರನ್ನೂ ಹೊಂದಿದ್ದೂ ಕನ್ನಡಿಗನೊಬ್ಬ ರಾಜ್ಯಸಭೆ ಪ್ರವೇಶಿಸಲು ಅರ್ಹನಾಗಿಲ್ಲ ಎಂದು ಹೇಮಮಾಲಿನಿ ಆಯ್ಕೆಯ ಮೂಲಕ ಸಾಬೀತು ಮಾಡಿದೆ. ನಮ್ಮ ಪ್ರಜಾಪ್ರಭುತ್ವ, ಸಂವಿಧಾನ, ಅದರ ಆಶಯಗಳು, ಆ ಆಶಯಗಳನ್ನು ಪೂರೈಸಲೆಂದೇ ರೂಪಿತವಾಗಿರುವ ರಾಜ್ಯಸಭೆ ಮೂಲಕ ಕರ್ನಾಟಕದ ಹಿತ ಕಾಪಾಡುವುದನ್ನು ಅವರು ಮರೆತಿರುವುದು ವಿಷಾದಕರ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry