ಸಂಶಯಾಸ್ಪದ ರಿಯಲ್ ಎಸ್ಟೇಟ್ ವಹಿವಾಟು

7

ಸಂಶಯಾಸ್ಪದ ರಿಯಲ್ ಎಸ್ಟೇಟ್ ವಹಿವಾಟು

Published:
Updated:
ಸಂಶಯಾಸ್ಪದ ರಿಯಲ್ ಎಸ್ಟೇಟ್ ವಹಿವಾಟು

 ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಮತ್ತು ದೇಶದ ದೈತ್ಯ ಗೃಹ ನಿರ್ಮಾಣ ಸಂಸ್ಥೆ  ಡಿಎಲ್‌ಎಫ್ ಮಧ್ಯೆ ನಡೆದಿರುವ (ಅ)ವ್ಯವಹಾರ ಸಾಕಷ್ಟು ಸುದ್ದಿ ಮಾಡುತ್ತಿದೆ. ಡಿಎಲ್‌ಎಫ್ ಸಂಸ್ಥೆಯು, ವಾದ್ರಾಗೆ ಭದ್ರತೆ ಇಲ್ಲದ ಸಾಲ ನೀಡಿರುವುದು ಮತ್ತು ಹರಿಯಾಣದ ಗುಡಗಾಂವ್‌ನಲ್ಲಿ ಹಲವಾರು ಆಸ್ತಿಗಳನ್ನು  ಮಾರುಕಟ್ಟೆ ಬೆಲೆಗಿಂತ ತೀರ ಕಡಿಮೆ ದರಕ್ಕೆ ಮಾರಾಟ ಮಾಡಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮತ್ತು  ಭ್ರಷ್ಟಾಚಾರ ವಿರೋಧಿ ಆಂದೋಲನದ ಕಾರ್ಯಕರ್ತ ಮ್ಯಾಗ್ಸೆಸೆ ಪ್ರಶಸ್ತಿ ಪುರಷ್ಕೃತ ಅರವಿಂದ ಕೇಜ್ರಿವಾಲ್   ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.ವಾದ್ರಾ ಅವರ ಉದ್ದಿಮೆ ವಹಿವಾಟಿನ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು ಎಂದು ಬಿಜೆಪಿ ಒತ್ತಾಯಿಸಿರುವುದನ್ನು ಬಿಟ್ಟರೆ, ಬಹುತೇಕ ರಾಜಕಾರಣಿಗಳು ಈ ಬಗ್ಗೆ ಜಾಣ ಮರೆವಿಗೆ ಮೊರೆ ಹೋಗಿದ್ದಾರೆ.  ರಿಯಲ್ ಎಸ್ಟೇಟ್ ಉದ್ದಿಮೆಗೂ ರಾಜಕಾರಣಿಗಳಿಗೂ ಗಳಸ್ಯ - ಕಂಠಸ್ಯ ಸ್ನೇಹ ಇರುವುದೇ ರಾಜಕೀಯ ಪಕ್ಷಗಳು ಮೌನವಹಿಸಲು ಮುಖ್ಯ ಕಾರಣ.ಕೇಜ್ರಿವಾಲ್ ಮಾಡಿರುವ ಆರೋಪಗಳು ಒಂದು ವೇಳೆ ಕೋರ್ಟ್ ಕಟಕಟೆ ಹತ್ತಿದರೆ ಮಾತ್ರ, ಅದು ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷದ ವರ್ಚಸ್ಸಿನ ಮೇಲೆ ಕರಿ ನೆರಳು ಬೀಳಲು ಕಾರಣವಾಗಲಿದೆ.ರಾಜಕಾರಣದಲ್ಲಿ ವಾಸ್ತವಕ್ಕಿಂತ ಜನರು ವಿಷಯಗಳನ್ನು ಗ್ರಹಿಸುವ ಪರಿಯೇ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಇದಕ್ಕೆ ರಾಜೀವ್ ಗಾಂಧಿ ಅವರ ಉದಾಹರಣೆ ಉತ್ತಮ ನಿದರ್ಶನ.  ಸೇನೆಯ ಬಳಕೆಗೆ ಸ್ವೀಡನ್ನಿನ  ಬೊಫೋರ್ಸ್ ಸಂಸ್ಥೆಯಿಂದ ಹೋವಿಟ್ಜರ್ ಫಿರಂಗಿ ಖರೀದಿ ಹಗರಣದಲ್ಲಿ ರಾಜೀವ್ ಗಾಂಧಿ ವಿರುದ್ಧ ಲಂಚದ ಆರೋಪ ಕೇಳಿ ಬಂದಿತ್ತು.  ಈ ಆರೋಪ ಸಾಬೀತಾಗದಿದ್ದರೂ, ರಾಜೀವ್ 1989ರಲ್ಲಿ ಅಧಿಕಾರಕ್ಕೆ ಎರವಾಗಬೇಕಾಯಿತು.ಅರವಿಂದ ಕೇಜ್ರಿವಾಲ್

ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಪದವೀಧರನಾಗಿರುವ ಅರವಿಂದ ಕೇಜ್ರಿವಾಲ್ (44), ಭಾರತೀಯ ಕಂದಾಯ ಸೇವೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಸಾಮಾಜಿಕ ಕಾಳಜಿಗಾಗಿ ಆನಂತರ ನೌಕರಿ ತೊರೆದಿದ್ದರು.ಮಾಹಿತಿ ಹಕ್ಕಿನ ಬಗ್ಗೆ ನಡೆಸಿದ ಪ್ರಚಾರ ಆಂದೋಲನವು ಅವರಿಗೆ ಏಷ್ಯಾದ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿಸುವ `ಮ್ಯಾಗ್ಸೆಸೆ ಪ್ರಶಸ್ತಿ~ ತಂದು ಕೊಟ್ಟಿತ್ತು. ಲೋಕಪಾಲ್ ಮಸೂದೆ ಜಾರಿ ಬಗ್ಗೆ ಅಣ್ಣಾ ಹಜಾರೆ ಆರಂಭಿಸಿದ್ದ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಅರವಿಂದ, ಈಗ ಅವರಿಂದ ಬೇರೆಯಾಗಿ ಹೊಸ ಪಕ್ಷ ಕಟ್ಟುವ ತರಾತುರಿಯಲ್ಲಿದ್ದಾರೆ.ಸಣ್ಣ ಉದ್ಯಮಿ ವಾದ್ರಾ

ಹಿತ್ತಾಳೆ ಮತ್ತು ಮರದ ಕರಕುಶಲ ವಸ್ತುಗಳನ್ನು ಮಾರುವ  ಸಣ್ಣ ಉದ್ಯಮಿಯಾಗಿದ್ದ ವಾದ್ರಾ (43),  ಔತಣಕೂಟವೊಂದರಲ್ಲಿ ಮೊದಲ ಬಾರಿಗೆ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗುತ್ತಾರೆ. ಆನಂತರ ಅವರಿಬ್ಬರ ಮಧ್ಯೆ ಪ್ರೇಮ ಅಂಕುರಿಸುತ್ತದೆ.ಸೋನಿಯಾ ಅಳಿಯನಾದ ನಂತರದ ಅತ್ಯಲ್ಪ ಅವಧಿಯಲ್ಲಿ ಉದ್ಯಮ ವಲಯದಲ್ಲಿ ಇವರು ಕ್ಷಿಪ್ರವಾಗಿ ಏಳಿಗೆ ಕಂಡಿದ್ದಾರೆ. ಇವರ ದೊಡ್ಡ ಪ್ರಮಾಣದ ಭೂ ಖರೀದಿ ವ್ಯವಹಾರಗಳು ದೆಹಲಿ ಸಾಮಾಜಿಕ ವಲಯದಲ್ಲಿ ಚರ್ಚಾ ವಸ್ತುವಾಗಿದ್ದರೂ, ವಹಿವಾಟಿನ ಸ್ವರೂಪದ ಬಗ್ಗೆ ಸಂಶಯವೇನೂ ವ್ಯಕ್ತವಾಗಿರಲಿಲ್ಲ.ದೈತ್ಯ ಸಂಸ್ಥೆ ಡಿಎಲ್‌ಎಫ್

ಆರು ದಶಕಗಳಿಂದ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ತೊಡಗಿಕೊಂಡಿರುವ ದೆಹಲಿ ಮೂಲದ ಡಿಎಲ್‌ಎಫ್, ಈ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿ ದೈತ್ಯ ಸಂಸ್ಥೆಯಾಗಿ ಬೆಳೆದಿದೆ. ಡಾ. ಕುಶಾಲ್ ಪಾಲ್ ಸಿಂಗ್ (81) ಇದರ ಮುಖ್ಯಸ್ಥರಾಗಿದ್ದಾರೆ. ಸೂಪರ್ ಲಕ್ಸುರಿ, ಲಕ್ಸುರಿ ಮತ್ತು ಪ್ರೀಮಿಯಂ ಹೆಸರಿನ ಮನೆಗಳನ್ನು ನಿರ್ಮಿಸುವ ಹೆಗ್ಗಳಿಕೆಯ ಡಿಎಲ್‌ಎಫ್, ಅತ್ಯಾಧುನಿಕ ವಾಣಿಜ್ಯ ಸಂಕಿರ್ಣಗಳ ನಿರ್ಮಾಣಕ್ಕೂ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕೆ ಹಲವಾರು ಖ್ಯಾತ ಉದ್ದಿಮೆಗಳ ಅಚ್ಚುಮೆಚ್ಚಿನ ಸಂಸ್ಥೆಯಾಗಿದೆ.ಬೆಂಬಲಕ್ಕೆ ನಿಂತ ಕಾಂಗ್ರೆಸ್

ತಮ್ಮ ಮೇಲಿನ ಆರೋಪಗಳಿಗೆ ಫೇಸ್‌ಬುಕ್‌ನಲ್ಲಿ ಲಘುವಾಗಿ ಪ್ರತಿಕ್ರಿಯಿಸಿರುವುದನ್ನು ಬಿಟ್ಟರೆ ವಾದ್ರಾ ಈಗ  ಮೌನಕ್ಕೆ ಶರಣಾಗಿದ್ದಾರೆ. ಕಾಂಗ್ರೆಸ್ ಮುಖಂಡರು, ವಾದ್ರಾ ಮೇಲಿನ ಆರೋಪಗಳು ಕಾಂಗ್ರೆಸ್ ಪಕ್ಷವನ್ನೇ ಗುರಿಯಾಗಿರಿಸಿಕೊಂಡಿವೆ ಎಂದು ಪ್ರತ್ಯಾರೋಪ ಮಾಡುತ್ತ ಅವರ ಪರವಾಗಿ ಸಮರ್ಥನೆ ನಡೆಸುತ್ತಿದ್ದಾರೆ.ಹೀಗಾಗಿ ಅವರು ಸ್ವತಃ ಬಾಯಿ ಬಿಡುವ ಅಗತ್ಯವೇ ಕಂಡು ಬಂದಿಲ್ಲ. ಡಿಎಲ್‌ಎಫ್ ಜತೆಗಿನ ವಹಿವಾಟಿನ ಬಗ್ಗೆ ಇನ್ನಷ್ಟು ವಿವರಗಳು ಬಯಲಿಗೆ ಬಂದರೆ ಮಾತ್ರ ಅನಿರೀಕ್ಷಿತ ಪರಿಣಾಮಗಳು ಕಂಡು ಬರಬಹುದು.ವಾದ್ರಾ ಜತೆಗಿನ ವಹಿವಾಟಿನಲ್ಲಿ ಯಾವುದೇ ತಪ್ಪು ಎಸಗಿಲ್ಲ ಎಂದು ಡಿಎಲ್‌ಎಫ್ ಪ್ರತಿಪಾದಿಸುತ್ತಿದೆ. ಖಾಸಗಿ ವ್ಯವಹಾರವಾಗಿರುವುದರಿಂದ ತನಿಖೆ ಅಗತ್ಯ ಇಲ್ಲ ಎಂದೂ ಸರ್ಕಾರ ಹೇಳುತ್ತಿದೆ. ಇನ್ನೊಂದೆಡೆ ಕೇಜ್ರಿವಾಲ್, ತಾವು ಮಾಡಿರುವ ಆರೋಪಗಳನ್ನು ಕೈಬಿಡದಿರುವುದರಿಂದ ಈ ವಿವಾದ ಶೀಘ್ರದಲ್ಲಿ ಕೊನೆಗೊಳ್ಳುವಂತೆ ಕಾಣುತ್ತಿಲ್ಲ.ಭ್ರಷ್ಟಾಚಾರದ ಚಿಲುಮೆ

ರಿಯಲ್ ಎಸ್ಟೇಟ್ ವಹಿವಾಟು, ಭ್ರಷ್ಟಾಚಾರಕ್ಕೆ ಉತ್ತೇಜನ ನೀಡುವ ಚಿಲುಮೆಯಂತಿದೆ. ಭೂ ಖರೀದಿ ವಹಿವಾಟಿಗೆ ಸಂಬಂಧಿಸಿದಂತೆ ಕಟ್ಟಡ ನಿರ್ಮಾಣಗಾರರು ಮತ್ತು ರಾಜಕಾರಣಿಗಳ ಮಧ್ಯೆ ಇರುವ `ಪರಸ್ಪರ ನೆರವಾಗುವ~ ಸಂಬಂಧ ಎಲ್ಲರಿಗೂ ಗೊತ್ತಿರುವಂತಹದ್ದೆ.ವಸತಿ ಸೌಲಭ್ಯ ಸೇರಿದಂತೆ ಹಲವಾರು ಉದ್ದೇಶಕ್ಕೆ ಭೂಮಿ ಅಭಿವೃದ್ಧಿಪಡಿಸುವ ರಿಯಲ್ ಎಸ್ಟೇಟ್ ವಹಿವಾಟು, ಲಂಚ ಮತ್ತು ಕಪ್ಪು ಹಣಕ್ಕೆ ಇನ್ನೊಂದು ಹೆಸರಾಗಿದೆ.ಇಲ್ಲದ ನಿಯಂತ್ರಣ ವ್ಯವಸ್ಥೆ

ನಾಗರಿಕ ವಿಮಾನ ಯಾನ, ದೂರಸಂಪರ್ಕ, ಷೇರುಪೇಟೆ, ತೈಲ, ನೈಸರ್ಗಿಕ ಅನಿಲ ವಲಯಗಳಲ್ಲಿ ಇರುವ ನಿಯಂತ್ರಣ ವ್ಯವಸ್ಥೆ ಈ ವಹಿವಾಟಿನಲ್ಲಿ ಇಲ್ಲದ ಕಾರಣಕ್ಕೆ ಮೋಸ, ವಂಚನೆ ಎಗ್ಗಿಲ್ಲದೇ ನಡೆಯುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry