ಬುಧವಾರ, ಮೇ 12, 2021
18 °C

ಸಂಶೋಧಕನಾಗಿ ನಾನೊಬ್ಬ ಪಥಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಶೋಧಕನಾಗಿ ನಾನೊಬ್ಬ ಪಥಿಕ

`ಕನ್ನಡ ಭಾಷೆ ಸಾಹಿತ್ಯಗಳ ಅಧ್ಯಯನದ ಕ್ಷೇತ್ರದಲ್ಲಿ (ಗತ ಶತಮಾನದ) ಐವತ್ತರ ದಶಕದಿಂದ ಮೊದಲುಗೊಂಡು ಈವರೆಗೆ ನನ್ನ ಅಲ್ಪಶಕ್ತಿಗೆ ಅನುಗುಣವಾಗಿ ನಾನು ಕೃಷಿ ಮಾಡುತ್ತ ಬಂದಿದ್ದೇನೆ. ನನ್ನ ಪಾಲಿಗೆ ಇದು ಒಂದು ನಿತ್ಯವಿಧಿ; ಸಾಧನೆ, ಸಾಹಸ; ಭಾಷೆಯ, ಸಮಾಜದ ಋಣವನ್ನು ಸಲ್ಲಿಸಲು ನಿರಂತರವಾಗಿ ನಾನು ಅನುಭವಿಸುತ್ತಿರುವ ತಳಮಳ, ವಹಿಸುತ್ತಿರುವ ಶ್ರಮ... ನನ್ನ ಈ ಭಾಷಾ ಸಾಹಿತ್ಯಗಳ ಸಂಬಂಧವಾದ ಸಾಧನೆ ಸಾಹಸಗಳು, ತಳಮಳ ಶ್ರಮಗಳು ನನ್ನ ಬದುಕನ್ನು ಒಂದು ಹದಕ್ಕೆ ತಂದಿವೆ; ನಾನು ಒಬ್ಬ ಮನುಷ್ಯ ಎಂದು ನನ್ನ ಮಟ್ಟಿಗೆ ಹೇಳಿಕೊಳ್ಳುವಂತೆ ಮಾಡಿದೆ. ಇದರಿಂದ ಲೆಕ್ಕಕ್ಕೆ ಅಲ್ಲವಾದರೂ ಆಟಕ್ಕೆ ಉಂಟು ಎಂದು ಸಾಹಿತ್ಯಲೋಕ ನನ್ನನ್ನು ಒಪ್ಪಿಕೊಳ್ಳುವುದು ಸಾಧ್ಯವಾಗಿದೆ...'



`ಶಾಸ್ತ್ರೀಯ' ಕೃತಿಶ್ರೇಣಿಯ ಅರಿಕೆಯ ಆರಂಭದಲ್ಲಿ ನಾನು ಬರೆದುಕೊಂಡಿರುವ ಈ ಮಾತೇ ಇಂದಿಗೂ ನನ್ನ ನಿಜಸ್ಥಿತಿ. ಆದರೆ ತ್ರಾಣ ತಾಳ್ಮೆ ಎರಡೂ ನನ್ನೊಂದಿಗೆ ಮೊದಲಿನಂತೆ ಸಹಕರಿಸುತ್ತಿಲ್ಲ.



ಈ ವರ್ಷದ ಆಗಸ್ಟ್ 26 ರಂದು ನಾನು ನನ್ನ 80 ನೆಯ ವಯಸ್ಸಿಗೆ ಕಾಲಿಡುತ್ತೇನೆ. ಒಂದು ಶಿಸ್ತಿನಲ್ಲಿ ನಾನು ಬರವಣಿಗೆಗೆ ತೊಡಗಿ, ಇಂದಿಗೆ ಸುಮಾರು 60 ವರ್ಷಗಳಾದುವು (1953-2013). ಬಿ.ಎ. ಆನರ್ಸ್ ತರಗತಿಯಲ್ಲಿ ಅಧ್ಯಾಪಕ ಎಸ್.ವಿ. ಪರಮೇಶ್ವರ ಭಟ್ಟರು ಪಠ್ಯದ ಭಾಗವಾಗಿ ನಾನು ಬರೆದ `ರತ್ನಾಕರ ಕವಿಯ ವರ್ಣನಾ ನೈಪುಣ್ಯ' ಎಂಬ ಪ್ರಬಂಧವನ್ನು ಮೆಚ್ಚಿ, ತರಗತಿಯಲ್ಲೇ ಸಹಪಾಠಿಗಳ ಎದುರಿನಲ್ಲಿ ಓದಿ, ತಾವೇ ಪತ್ರಿಕೆಯೊಂದಕ್ಕೆ ಪ್ರಕಟಣೆಗೆ ಕಳಿಸಿದಾಗ, ಅದು ನನ್ನಲ್ಲಿ ಒಬ್ಬ ಬರಹಗಾರನಿದ್ದಾನೆ ಎಂದು ಗುರುತಿಸಿಕೊಂಡ ಶುಭೋದಯದ ಸಂದರ್ಭ.



ನನ್ನ ಆ ಕಾಲದ ಯುವ ಬರಹಗಾರರಂತೆ ನಾನು ಕೂಡ ಕವಿತೆ-ಖಂಡಕಾವ್ಯಗಳ ರಚನೆ, ಇಂಗ್ಲಿಷ್ ಕವಿತೆ-ನಾಟಕಗಳ ಭಾಷಾಂತರ, ಸಣ್ಣಕತೆ-ಪತ್ತೇದಾರಿ ಕಾದಂಬರಿಗಳ ಬರವಣಿಗೆ ಎಂಬ ಸಂಭ್ರಮದ ಸುಳಿಗಳಲ್ಲಿ ಸುತ್ತಾಡಿದೆ. ಇದು ಅಚ್ಚಿನ ಆಕರ್ಷಣೆ ಭರವಸೆಗಳಿಂದೇನೂ ಅಲ್ಲ, ಏನಾದರೂ ಬರೆಯಲೇಬೇಕು ಎಂಬ ಭಾವನೆಯ ತೃಪ್ತಿಗಾಗಿ.



ಇಂಟರ್ ತರಗತಿಯಲ್ಲಿ ಆರ್ಟ್ಸ್ ವಿದ್ಯಾರ್ಥಿಗಳಿಗೆ ಪಠ್ಯವಾಗಿದ್ದ `ಪಂಪ ರಾಮಾಯಣ ಸಂಗ್ರಹ' ಪಾಠವಾಗುವಾಗ ಗಂಭೀರ ನಾದಲಯಗಳ ಹಳಗನ್ನಡ ನನ್ನನ್ನು ಮರುಳು ಮಾಡಿತು. ಆನರ್ಸ್ ಎಂ.ಎ. ತರಗತಿಗಳಲ್ಲಿ ಪಠ್ಯಗಳಾಗಿದ್ದ `ಅಂತಿಗೊನೆ' `ಅಶ್ವತ್ಥಾಮನ್' ನಾಟಕಗಳು ಆ `ಮರುಳ್ಗೆ ಧೂಪಂ ದೋರು'ವಲ್ಲಿ ಯಶಸ್ವಿಯಾದುವು. ಆಗಲೇ ಶೃಂಗಾರಭಾವದ ಕೆಲವು ವಚನಗಳನ್ನೂ ಒಂದು ಗ್ರೀಕ್ ನಾಟಕದ ಅನುವಾದವನ್ನೂ ಹಳಗನ್ನಡದಲ್ಲಿಯೇ ಬರೆದೆ. `ಪ್ರಬುದ್ಧ ಕರ್ಣಾಟಕ'ದಲ್ಲಿ ಅಚ್ಚಾದ `ಚಂದ್ರಿಕಾ' ಎಂಬ ವಚನವನ್ನು ಪ್ರಾಧ್ಯಾಪಕ ಕುವೆಂಪು ಅವರು ಓದಿ, `ಶ್ರೀ ರಾಮಾಯಣ ದರ್ಶನ'ದ ಒಂದು ಸಾಲನ್ನು ಅಲ್ಲಿ ಗುರುತಿಸಿ, `ಈ ಪಂಕ್ತಿ ಎಲ್ಲಿಯದು?' ಎಂದು ತರಗತಿಯಲ್ಲೇ ಕೇಳಿದ್ದು ನೆನಪಿದೆ. ಆ ಕಾವ್ಯವನ್ನು, ಅದು ಪ್ರಕಟವಾದಾಗಲೇ ಪಟ್ಟಾಗಿ ಕುಳಿತು ಓದಿ ನನ್ನ ಮೈಯಲ್ಲಿ ಮಿಂಚಿನ ಹೊಳೆ ಹರಿದಂತಾದುದರ ಫಲವದು.



ಏನಾದರೂ ಬರೆಯಬೇಕೆಂಬ ಒತ್ತಡದಲ್ಲಿದ್ದ ಹರೆಯವದು. ಇಂಗ್ಲಿಷ್ ತೆಲುಗು ಭಾಷೆಗಳ ಪತ್ರಿಕೆಗಳ ಬರಹಗಳನ್ನು ಕನ್ನಡಿಸುತ್ತ, ಕನ್ನಡ ಕಾವ್ಯಸಾಹಿತ್ಯದ ಕಥಾಸಾರವನ್ನು ಸಂಗ್ರಹಿಸುತ್ತ ಅಂದಿನ ದಿನಪತ್ರಿಕೆ `ಪ್ರಜಾವಾಣಿ'ಯಿಂದ ತ್ರೈಮಾಸಿಕ `ಪ್ರಬುದ್ಧ ಕರ್ಣಾಟಕ'ದವರೆಗೆ ಹಲವು ಲೇಖನಗಳನ್ನು ಪ್ರಕಟಿಸಿದೆ.



ಇಲ್ಲಿಯೂ ಶಿಕ್ಷಣ ಸಂಸ್ಕೃತಿ ಸಾಹಿತ್ಯ ಇವೇ ಸ್ಫೂರ್ತಿಯ ಸ್ರೋತಗಳು. ಎಂ. ಹಿರಿಯಣ್ಣನವರು, ಆರ್. ಶಾಮಶಾಸ್ತ್ರಿ, ಎಸ್.ಜಿ.ನ.- ಎಂ.ಎ.ಆರ್. ಇಂಥ ಗಣ್ಯರು ಹೀಗೆಯೇ ವಿದ್ಯಾದಾಯಿನಿಯಂಥ ಶಾಲಾ ಪತ್ರಿಕೆಗೆ ಮೊದ ಮೊದಲು ಬರೆದು ಬೆಳೆದ ಸೋಜಿಗದೊಂದಿಗೆ ಇದು ಹೋಲುತ್ತದೆ ಎಂದು ಒಮ್ಮೆ ಮನಸ್ಸಿಗೆ ಬಂತು. ಸ್ವಾರಸ್ಯದ ಸಂಗತಿಯೆಂದರೆ, ಇಂಥ ಬರಹಗಳ ಬಲದಿಂದಲೇ ನಾನು ಉಸ್ಮಾನಿಯ ವಿಶ್ವವಿದ್ಯಾನಿಲಯದ ಅಧ್ಯಾಪಕನಾದೆನೆಂಬುದು. ಯಾವ ಪ್ರಯತ್ನವೂ ಹಾಗೆ ನೋಡಿದರೆ ವ್ಯರ್ಥ ಸಾಹಸವಲ್ಲವೇನೋ! ಸಂದರ್ಶನದ ವೇಳೆಯಲ್ಲೇ ನನ್ನ ಆಯ್ಕೆಯನ್ನು ತಿಳಿಸಿದ ಎರಡನೆಯ ನಿದರ್ಶನವದು!



ಮೈಸೂರಿನ ವ್ಯಾಸಂಗದ ದಿನಗಳಲ್ಲಿ ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿಯೂ ಮನೆಗೆ ಹತ್ತಿರವಿದ್ದ ನಗರದ ಕೇಂದ್ರ ಗ್ರಂಥಾಲಯದಲ್ಲಿಯೂ ಕೈಗೆ ಸಿಕ್ಕ ಪುಸ್ತಕಗಳನ್ನು ಓದುವುದು ಅಭ್ಯಾಸವಾಗಿತ್ತು. ಇಂಟರ್ ವ್ಯಾಸಂಗದ ಕಾಲದಲ್ಲಿ ಓರಿಯಂಟಲ್ ಲೈಬ್ರರಿ ನನ್ನ ಭಾವದ ಹಸಿವು ತೀರಿಸಲು ಕಥೆ ಕಾದಂಬರಿಗಳನ್ನೂ, ಈಗ ಇವು ಪಾಠಕ್ಕಾಗಿ ಶಾಸ್ತ್ರ ವಿಷಯಗಳ ಗ್ರಂಥಗಳನ್ನೂ ನನ್ನ ತಲೆಗೆ ತುಂಬಿದುವು. ಅರ್ಥವಾಗಲಿ ಬಿಡಲಿ, ಭಾರತೀಯ ವಿದ್ಯಾವಿಶಾರದರಾದ ಎ.ಬಿ. ಕೀಥ್‌ಭಂಡಾರ್ಕರ್ ಇಂಥ ಹಲವರ ಪುಸ್ತಕಗಳನ್ನು ತಂದು ಓದುವಾಗ ಅದೊಂದು ವಿಸ್ಮಯದ ಲೋಕದಲ್ಲಿ ಸಂಚಾರ ಮಾಡುತ್ತಿದ್ದೇನೆ ಎನ್ನಿಸುತ್ತಿತ್ತು. ಹೀಗೆ ಬರೆಯಬೇಕು, ಬೆಳೆಯಬೇಕು ಎನ್ನಿಸುತ್ತಿತ್ತು.



ಆಗ್ಗೆ ನನ್ನ ಕಣ್ಣೆದುರು ಎರಡು ರಾಜಮಾರ್ಗಗಳು ತೆರೆದಿದ್ದುವು. ಒಂದು: ಕುವೆಂಪು ಅವರ ಕಾವ್ಯ-ಕಾವ್ಯತತ್ತ್ವ ವಿಚಾರಗಳದು; ಇನ್ನೊಂದು: ಡಿ.ಎಲ್.ಎನ್. ಅವರ ಶಾಸ್ತ್ರ ಸಾಹಿತ್ಯದ ಸಾಹಿತ್ಯೇತಿಹಾಸ ಶೋಧನೆಯದು. ನನ್ನ ವಿದ್ವತ್ ಪಕ್ಷಪಾತದ ವ್ಯಾಸಂಗದ ಹಿನ್ನೆಲೆಯೂ ಡಿ.ಎಲ್.ಎನ್. ಅವರ ವ್ಯಕ್ತಿತ್ವ, ಬೋಧನೆಯ ವೈಖರಿಗಳೂ ಎರಡನೆಯ ಮಾರ್ಗದಲ್ಲಿ ಸಾಗುವಂತೆ ಮಾಡಿದುವು.



ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ, ಕಾವ್ಯ ಮತ್ತು ಶಾಸ್ತ್ರ ಪಾಠಗಳ ಬೋಧನೆ ನನ್ನ ಭಾಗಕ್ಕೆ ಬಂದಾಗ, ಮಹಾಕಾವ್ಯ ಲಕ್ಷಣ ಕುರಿತು ಸಂಸ್ಕೃತ-ಕನ್ನಡ ಅಲಂಕಾರ ಶಾಸ್ತ್ರ ಗ್ರಂಥಗಳನ್ನೆಲ್ಲ ತಿರುವಿಹಾಕಿದಾಗ ನನ್ನ ಮುಂದಿನ ನಿಚ್ಚಳವಾದ ನಡೆ ಏನು ಎಂಬುದು ನನಗೆ ತಿಳಿಯಿತು. ಆ ವೇಳೆಗಾಗಲೇ (1959-68) ಅಲ್ಲಿ ತಮ್ಮ ಸಂಶೋಧನೆಗಳಿಂದ ಖ್ಯಾತನಾಮರಾಗಿದ್ದ ಸಂಸ್ಕೃತ ಮತ್ತು ತೆಲುಗು ವಿಭಾಗಗಳ ಅಧ್ಯಾಪಕರ ಸಮೀಪದ ಒಡನಾಟ ನನಗೆ ದೊರೆತದ್ದು ಕೂಡ ಒಂದು ದೊಡ್ಡ ಲಾಭವೇ ಆಯಿತು.



ಖಂಡವಲ್ಲಿ ಲಕ್ಷ್ಮೀರಂಜನಂ, ದಿವಾಕರ್ಲ ವೆಂಕಟಾವಧಾನಿ, ಪಾಟಿ ಬಂಡ ಮಾಧವ ಶರ್ಮ, ನಿಡದವೋಲು ವೆಂಕಟರಾವು, ನಾಯನಿ ಕೃಷ್ಣಕುಮಾರಿ, ಬಿ.ಆರ್. ಶಾಸ್ತ್ರಿ, ಪುಲ್ಲೆಲ ರಾಮಚಂದ್ರುಡು, ಸಂಸ್ಕೃತ ಅಕಾಡೆಮಿಯ ಪಾಧ್ಯೆ ಇವರೊಂದಿಗೆ ನನಗೆ ಚರ್ಚೆಗೆ ಅವಕಾಶವಿತ್ತು. ನನ್ನ ಸಹೋದ್ಯೋಗಿ ಮಿತ್ರ ಬಿ. ರಾಮಚಂದ್ರರಾವ್ `ಪಂಪಭಾರತ'ದ ವರ್ಣನಾತ್ಮಕ ವ್ಯಾಕರಣವನ್ನು ಪಿಎಚ್.ಡಿ. ಪದವಿಗೆಂದು ಸಿದ್ಧಪಡಿಸುವ ವೇಳೆ ದಿನವೂ ಇಬ್ಬರೂ ಚರ್ಚಿಸುತ್ತಿದ್ದೆವು; ಜೊತೆಗೆ ಜಿ.ಎಸ್. ಶಿವರುದ್ರಪ್ಪನವರು ಅಲ್ಲಿ ಕನ್ನಡ ವಿಭಾಗದ ಮುಖ್ಯರಾಗಿದ್ದ ದಿನಗಳಲ್ಲಿ, ನಾವು ಅಧ್ಯಾಪಕರೆಲ್ಲ ಸೇರಿ, ಪ್ರತಿ ಭಾನುವಾರ ಒಟ್ಟಿಗೆ `ಪಂಪಭಾರತ'ವನ್ನು ಓದಿ ವ್ಯಾಖ್ಯಾನಿಸಿ ಅಭ್ಯಾಸ ಮಾಡುತ್ತಿದ್ದೆವು.



ಓದಿ ಅರ್ಥ ಹೇಳುವ ಮುಖ್ಯ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತಿದ್ದುದರಿಂದ, ಮೊದಲೇ ಅದಕ್ಕೆ ತಕ್ಕ ಸಿದ್ಧತೆಯನ್ನು ನಾನು ಮಾಡಿಕೊಳ್ಳುತ್ತಿದ್ದೆ. ನಾನು ಹಳಗನ್ನಡಕ್ಕೆ ಮತ್ತಷ್ಟು ಹತ್ತಿರವಾಗುತ್ತ ಹೋದೆ. ದೊಡ್ಡಸಂಸಾರದ ನಿರ್ವಹಣೆ, ತಂಗಿಯರ ಮದುವೆಗಳು, ಮಕ್ಕಳ ತೀವ್ರ ಅನಾರೋಗ್ಯ, ಸಾವು ನೋವುಗಳು, ಸಾಲ ಸೋಲಗಳು ಇವುಗಳ ನಡುವೆಯೇ ಕನ್ನಡ `ನೇಮಿನಾಥ ಪುರಾಣ'ಗಳ ತುಲನಾತ್ಮಕ ಅಧ್ಯಯನದ ಸಂಶೋಧನೆಯನ್ನು ವರ್ಷಗಟ್ಟಲೆ ನಡೆಸಿದೆ; ಅನೇಕ ಸುಂದರ ಸಂಜೆಗಳನ್ನು ನುಂಗಿ ಹಾಕಿದ `ಶ್ರೀವತ್ಸ ನಿಘಂಟು' ಸಿದ್ಧವಾದುದೂ ಹಾಗೆಯೇ. ಆ ದಿನಗಳ ನನ್ನ ಕ್ಲೇಶಗಳನ್ನು `ಸ್ತ್ರೀ ಮುಖ'ದ (1997) `ನೆನಪಿನ ಸುರಳಿ'ಯಲ್ಲಿ ಸ್ವಲ್ಪ ಹೇಳಿದ್ದೇನೆ. ಅದನ್ನು ನೆನೆದಾಗ, ನನ್ನೊಳಗೆ ಬೆಂಕಿಯಂತೆ ಉರಿದ ಆ ಮಹತ್ತ್ವಾಕಾಂಕ್ಷೆಗೆ ಈಗಲೂ ನನಗೆ ಜುಗುಪ್ಸೆಯಾಗುತ್ತದೆ.



ಮೈಸೂರು ವಿಶ್ವವಿದ್ಯಾಲಯವು ಕನ್ನಡ ಅಧ್ಯಯನ ಸಂಸ್ಥೆ ಏರ್ಪಡಿಸಿದ ವಿಚಾರ ಸಂಕಿರಣಕ್ಕೆಂದು ಬರೆದ ಪ್ರಬಂಧವೊಂದರಿಂದ ನನ್ನೊಳಗಿನ ಪಂಡಿತನನ್ನು ಗುರುತಿಸಿ ತನ್ನ ಸೇವೆಗೆ ಬರ ಮಾಡಿಕೊಂಡಿತು. ಇದು ನನ್ನ ಸೌಭಾಗ್ಯ. ಕನ್ನಡ ಅಧ್ಯಯನ ಸಂಸ್ಥೆ ಆ ಕಾಲಕ್ಕೆ (1968) ಹಲವು ಅಧ್ಯಯನಗಳ, ಯೋಜನೆಗಳ, ಗ್ರಂಥಕರ್ತರ, ಸಂಶೋಧಕರ ಕಾರ್ಯಕ್ಷೇತ್ರವಾಗಿತ್ತು. ನನ್ನ ಅಧ್ಯಾಪಕರಾಗಿದ್ದ ದೇಜಗೌ, ಅದರ ನಿರ್ದೇಶಕರಾಗಿದ್ದರು. ಅವರಿಗೆ ನನ್ನಲ್ಲಿ ಭರವಸೆ. ನಾನು ಕಾಲಕ್ರಮದಲ್ಲಿ ವ್ಯಾಕರಣ ಛಂದಸ್ಸು ಭಾಷಾಶಾಸ್ತ್ರ ಗ್ರಂಥಸಂಪಾದನೆ ಸಾಂಸ್ಕೃತಿಕ ಚರಿತ್ರೆ, ಶಾಸನಾಧ್ಯಯನ, ಪ್ರಾಚೀನ ಕಾವ್ಯಗಳು ಇವನ್ನೆಲ್ಲ ಕನ್ನಡದ ಪ್ರೌಢ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾಗಿ ಬಂದು ನನ್ನ ದುಡಿಮೆ ಹೆಚ್ಚಿತು. ವ್ಯಾಸಂಗವೂ ಹೆಚ್ಚಿತು. ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ ಮೊದಲಾದ ಯೋಜನೆಗಳಲ್ಲಿ ನನ್ನನ್ನು ನಿಯೋಜಿಸಲಾಯಿತು. ಹಾ. ಮಾ. ನಾಯಕರು ನಿರ್ದೇಶಕರಾದ ಮೇಲೆಯೂ ಇದು ಬೆಳೆಯಿತು. ಈಗಂತೂ ಸಂಶೋಧನಾತ್ಮಕ ಲೇಖನಗಳ, ಪುಸ್ತಕಗಳ ಸಿದ್ಧತೆಗೆ ಒಳಹೊರಗಿನ ಒತ್ತಡಗಳನ್ನು ತಾಳಿಕೊಳ್ಳುವ ಶಕ್ತಿ ನನಗೆ ತನ್ನಿಂದ ತಾನೇ ಮೈಗೂಡಿತ್ತು.



ಸಂಸ್ಥೆಯ ಸಾಹಿತ್ಯ ಚರಿತ್ರೆಯ ಯೋಜನೆಯಲ್ಲಿ ಉಳಿದ ಸಂಗತಿಗಳು ಹೇಗೇ ಇರಲಿ, ಕವಿ - ಕೃತಿಗಳ ಇತಿವೃತ್ತಭಾಗದ ಪ್ರಾಮಾಣ್ಯಕ್ಕಾಗಿ ನಾನೇ ಶೋಧನೆಗೆ ತೊಡಗಿದ್ದು, ತಿದ್ದಿ ಹೊಸದಾಗಿ ಬರೆಸಿದ್ದು ಮತ್ತೆ ನಾನೇ ಬರೆದದ್ದು, ಏಕರೂಪತೆಯ ಸಲುವಾಗಿ ಭಾಷೆ ಶೈಲಿಗಳನ್ನು ಒಂದು ಹದಕ್ಕೆ ತಂದದ್ದು ಎಲ್ಲಾ ನಡೆದುವು. ವಿಶ್ವವಿದ್ಯಾಲಯದ ಪ್ರಕಟನೆಯೆಂಬ ಒಂದು ದರ್ಜೆಯಲ್ಲಿ ಅದು ಇರಬೇಕಾದ ಆತಂಕ ನನ್ನನ್ನು ಸದಾ ಕಾಡುತ್ತಿತ್ತು. `ಶ್ರೀ ಸಾಹಿತ್ಯ' ಕೂಡ ಹೀಗೆಯೇ ಇರಬೇಕೆಂದು ಇಷ್ಟಪಟ್ಟು ಜವಾಬ್ದಾರಿಯನ್ನು ನಾನೇ ವಹಿಸಿಕೊಂಡೆ. ಪರಿಷತ್ತಿನ ಕನ್ನಡ `ರತ್ನಕೋಶ'ದ ಸಿದ್ಧತೆಯಲ್ಲಿ ಕೂಡ ಹೀಗೆಯೇ ನಡೆಯಿತು.



ನನ್ನನ್ನು ಗಟ್ಟಿ ಮಾಡಿದ ಹಿರಿಯರು ನನ್ನನ್ನು ಗುರುತಿಸುವಂತೆ ಮಾಡಿದ ಇನ್ನೊಂದು ಯೋಜನೆಯೆಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಯೋಜನೆ. ಸುಮಾರು 20 ವರ್ಷ ಕಾಲ ಸಂಪಾದಕ ಸಮಿತಿಯ ಸದಸ್ಯನಾಗಿ (1976-95), ಪರಿಷ್ಕರಣದ ಎರಡನೆಯ ಘಟ್ಟದಲ್ಲಿ ಪ್ರಧಾನ ಸಂಪಾದಕನಾಗಿ (1998) ನಾನು ಸಕ್ರಿಯವಾಗಿ ಭಾಗವಹಿಸಿದೆ. ಈಚಿನದು ಎಂದರೆ, ಕನ್ನಡ ಗಣಕ ಪರಿಷತ್ತು - ತುಮಕೂರು ವಿಶ್ವವಿದ್ಯಾಲಯಗಳ ಕುಮಾರವ್ಯಾಸ ಭಾರತದ ಯೋಜನೆ (2007 ರಿಂದ).

ಇಂಥ ಯೋಜನೆಗಳಲ್ಲಿ ಕೆಲಸ ಮಾಡುವವರ  ವ್ಯಕ್ತಿಗಳ ಸೇವೆ ಸಾಮರ್ಥ್ಯಗಳು ಎದ್ದು ತೋರುವುದಿಲ್ಲ.



ಕೊಡುಗೆಗಳು ದಾಖಲಾಗುವುದಿಲ್ಲ. ಅವುಗಳ ನಿರೀಕ್ಷೆಯೂ ಸರಿಯಲ್ಲವೇನೋ. ಅರ್ಹತೆಯಿಂದ ದುಡಿಯುವ ಸಂಪಾದಕನ ಹೆಸರಿಗಿಂತ ಅಧಿಕಾರ ನಿಮಿತ್ತ ನಿಯೋಜಿತನಾದ ಪ್ರಧಾನ ಸಂಪಾದಕನ ಹೆಸರೇ ವಿಜೃಂಭಿಸುವುದು ಈಗಂತೂ ಸಾಮಾನ್ಯ. ನನ್ನ ವಿಚಾರ ಹೇಗೆ? ನನ್ನ ಸ್ವಂತ ಕೃಷಿಯ ಕೈತೋಟದಲ್ಲಿ ನಾನೇ ಕಷ್ಟ ಪಟ್ಟು ಬೆಳೆಸಿದ ಚಲುವಿನ ಹೂಗಿಡಗಳನ್ನು ಕಾಣುತ್ತ ಈಗ್ಲ್ಲಲಿ ನಾನು ಸಂತೋಷ ಪಡುತ್ತೇನೆ. `ಹೊಟ್ಟೆಯ ಮಕ್ಕಳು' ಎಂದು ಹೇಳಬಹುದಾದ ಕೆಲವು ರಚನೆಗಳು ನನ್ನ ಹೆಸರು ನಿಲ್ಲಿಸುತ್ತವೆ ಎನ್ನುವ ವಿಶ್ವಾಸ ನನಗಿದೆ.



ಸಂಶೋಧನ ಲೋಕದ ಪಥಿಕನಾಗಿ ದಾರಿ ಸಾಗುತ್ತ ಈ 60 ವರ್ಷಗಳುದ್ದಕ್ಕೆ ಕನ್ನಡ ಛಂದಸ್ಸಿನ ಸಾಮಾನ್ಯ ನಿರೂಪಣೆಯಿಂದ ಛಂದೋಮೀಮಾಂಸೆಯವರೆಗೆ, ಕೇಶಿರಾಜನ ರಸಿಕತೆಯಿಂದ ಅವನ ವ್ಯಾಕರಣದ ವಸ್ತುವಿಮರ್ಶೆಯವರೆಗೆ, ಮದನತಿಲಕದ ಬಂಧಗಳ ವ್ಯಾಸಂಗದಿಂದ ಕನ್ನಡ ಚಿತ್ರ ಕಾವ್ಯದ ವಿಸ್ಮಯ ಪ್ರಪಂಚದವರೆಗೆ, ಪದ್ಯ ಸಂಚಯದಿಂದ ಗದ್ಯ ಪದ್ಯಗಳ ಗ್ರಂಥಸಂಪಾದನೆಯವರೆಗೆ. ಹೀಗೆಯೇ ಏನೇನೋ ಬೆಡಗಿನ ಬೆರಗಿನ ಲೋಕಗಳನ್ನು ಕಾಣುತ್ತ ಕಾಣಿಸುತ್ತ, ಸವಿಯುತ್ತ ನಲಿಸುತ್ತ ದಣಿದಿದ್ದೇನೆ. ತಣಿದಿದ್ದೇನೆ. ಪೂರ್ವ ಸೂರಿಗಳ ಜೀವನ ಸಾಧನೆಗಳ ಎತ್ತರ ಬಿತ್ತರಗಳನ್ನು ಕಾಣುವ ನನ್ನ ಕುತೂಹಲಕ್ಕೆ ಕಡೆ ಮೊದಲಿಲ್ಲ. ಅವರ ಅನುಭವದ್ರವ್ಯದಿಂದ ನಾನು ಸಿರಿವಂತನಾಗಿದ್ದೇನೆಂದು ಹಿಗ್ಗಿದ್ದೇನೆ. ಋಷಿ ಋಣವನ್ನು ಆದಷ್ಟುಮಟ್ಟಿಗೆ ತೀರಿಸುತ್ತಿದ್ದೇನೆ.



ದೇಶ ವಿದೇಶಗಳ ಶ್ರೇಷ್ಠ ವಿದ್ವಾಂಸರು ತಮ್ಮ ಸಮಸ್ಯೆಗಳಿಗೆ ನನ್ನ ವಿವರಣೆಯಿಂದ ಪರಿಹಾರ ದೊರೆಯಿತೆಂದು ತಿಳಿಸಿದಾಗ, ನನ್ನ ಬರಹಗಳಿಂದ ತಮ್ಮ ಬರಹಗಳ ಪೋಷಣೆ ಸಮರ್ಥನೆಗಳಿಗೆ, ನಿಲುವು ನಿರ್ಣಯಗಳಿಗೆ ಕೆಲವಾದರೂ ಉದ್ಧೃತಿಗಳನ್ನು ದಾಖಲಿಸಿದಾಗ, ನನ್ನ ಜೊತೆಗೆ ಕುಳಿತು ಮಾಡಿದ ಕಾವ್ಯಾಭ್ಯಾಸದಿಂದಲೂ ಚರ್ಚೆಗಳಿಂದಲೂ ತಮಗೆ ತುಂಬ ಪ್ರಯೋಜನವಾಯಿತೆಂದು ಮೆಚ್ಚು ಮಾತು ಹೇಳಿದಾಗ ನನ್ನ ಕಲಿಕೆ ದೃಢವಾಗಿದೆಯೆಂದು ತಿಳಿಯಲು ಪ್ರಮಾಣ ದೊರೆಯಿತೆಂದು ಸಂತೋಷಿಸಿದ್ದೇನೆ.

ಸಂಶೋಧನೆಯ ಸ್ವರೂಪವೇನು, ಸಂಶೋಧಕನ ಮನೋಧರ್ಮ ಹೇಗಿರಬೇಕು, ವಿಷಯ ವೈವಿಧ್ಯ ಹೇಗೆ, ಪಾಂಡಿತ್ಯಕ್ಕೆ ಸಮರ್ಥನೆ ಏಕೆ ಇತ್ಯಾದಿ ವಿಷಯಗಳನ್ನು ಕುರಿತು ನಾನು ಮಾಡಿರುವ ವಿಚಾರಗಳು ಬರಹ ಭಾಷಣಗಳ ರೂಪದಲ್ಲಿದ್ದು ಇವು ನನ್ನ ಶಾಸ್ತ್ರೀಯ ಕೃತಿ ಶ್ರೇಣಿಯ ಬೇರೆ ಬೇರೆ ಸಂಪುಟಗಳಲ್ಲಿ ಸೇರಿವೆ. `ಕನ್ನಡ ಅಭಿಜಾತ ಸಾಹಿತ್ಯ, ಅಧ್ಯಯನದ ಅವಕಾಶಗಳು, ಆಹ್ವಾನಗಳು' ಎಂಬ ಪುಸ್ತಕದಲ್ಲಿಯೂ ಇವೆ. ಕನ್ನಡವನ್ನು ಪ್ರೌಢ ವ್ಯಾಸಂಗಕ್ಕೆ ಎತ್ತಿ ಕೊಂಡವರು ಇವುಗಳಿಂದ ಪ್ರಯೋಜನ ಪಡೆಯಲೆಂಬುದು ನನ್ನ ಅಪೇಕ್ಷೆ.



ಈಗ `ಕಾವ್ಯಕ್ಕೆ ಸಮರ್ಥನೆ' ಎನ್ನುವ ಅನಿವಾರ‌್ಯವೇನೂ ಇಲ್ಲ; ಹೆಚ್ಚು ಪ್ರಸ್ತುತವಾದ್ದು, `ಪಾಂಡಿತ್ಯಕ್ಕೆ ಸಮರ್ಥನೆ' ಎನ್ನುವುದು. ಪ್ರಾಚೀನ ಕಾವ್ಯ ಶಾಸ್ತ್ರಗಳ , ಹಳಗನ್ನಡ ಭಾಷೆಯ, ಕಾವ್ಯ ಲಕ್ಷಣ ಶಾಖೆಯ ವಿವಿಧ ಗ್ರಂಥಗಳ ಅಧ್ಯಯನದಿಂದ ಪ್ರಯೋಜನವಿದೆಯೆಂಬುದನ್ನು ನಾವು ಮನಗಾಣಬೇಕಾಗಿದೆ. ಶಾಸ್ತ್ರೀಯ ಭಾಷೆ ಎಂಬ ಮನ್ನಣೆ ಕನ್ನಡಕ್ಕೆ ದೊರೆತಿರುವುದನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕಾಗಿದೆ. ಪಾಂಡಿತ್ಯದ ಕೃಷಿ ಅಶಿಸ್ತಿನ ವಿಜೃಂಭಣೆಯಾಗಿದೆ. ಪಾಂಡಿತ್ಯ ಎನ್ನುವುದು ಆವೇಶ - ಆರ್ಭಟಗಳ ಆರೋಪ - ಪ್ರತ್ಯಾರೋಪಗಳ ರಣಭೂಮಿಯ ಪ್ರದರ್ಶನವಾಗದೆ ವಸ್ತುನಿಷ್ಠೆಯಿಂದ ಬೆಳೆಯುವುದಕ್ಕೆ ಯುವವಿದ್ವಾಂಸರು ಕೃತಸಂಕಲ್ಪರಾಗಬೇಕು. ಅದಕ್ಕೆ ವಿಶ್ವವಿದ್ಯಾಲಯಗಳೂ ಅಕಾಡೆಮಿಗಳೂ, ಪರಿಷತ್ತಿನಂತಹ ಸಂಘ ಸಂಸ್ಥೆಗಳೂ ತರಬೇತಿಯ ಶಿಬಿರಗಳನ್ನು ವ್ಯವಸ್ಥೆಗೊಳಿಸುವುದು ಅಗತ್ಯವಾಗಿದೆ. ಕಲಿಕೆಗೆ ಅಗತ್ಯವಾದ್ದು ಶ್ರದ್ಧೆಯ ದುಡಿಮೆ, ತಾದಾತ್ಮ್ಯ ಮತ್ತು ಪ್ರಾಮಾಣಿಕತೆ. ಈ ನಂಬಿಕೆಯಲ್ಲಿ, ನನಗೆ ಆದರ್ಶವಾದ ಪೂರ್ವಸೂರಿಗಳು ನಟ್ಟ ಜ್ಞಾನದ ದೀಪಸ್ತಂಭಗಳ ಬೆಳಕಿನಲ್ಲಿ  ನಾನೊಬ್ಬ ಸಾಮಾನ್ಯ ಪಥಿಕನಾಗಿ ನಡೆಯುತ್ತಾ ಸಾಗಿದ್ದೇನೆ; ಬದುಕಿನ ಸಾರ್ಥಕ್ಯವನ್ನು ಕಂಡುಕೊಂಡಿದ್ದೇನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.